ADVERTISEMENT

ಮುರುಘಾಮಠದ ಸರ್ವಾಂಗೀಣ ಅಭಿವೃದ್ಧಿಗೆ ಬದ್ಧ: ಶಿವಮೂರ್ತಿ ಶರಣರು

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2021, 12:37 IST
Last Updated 18 ಸೆಪ್ಟೆಂಬರ್ 2021, 12:37 IST
ಶಿವಮೂರ್ತಿ ಮುರುಘಾ ಶರಣರು
ಶಿವಮೂರ್ತಿ ಮುರುಘಾ ಶರಣರು   

ಚಿತ್ರದುರ್ಗ: ಪ್ರಸಕ್ತ ಸಾಲಿನ ಶರಣ ಸಂಸ್ಕೃತಿ ಉತ್ಸವವನ್ನು ಅದ್ದೂರಿಯಾಗಿ ಆಚರಿಸಲು ಮುರುಘಾಮಠದಲ್ಲಿ ಶನಿವಾರ ನಡೆದ ಸಭೆಯಲ್ಲಿ ಒಮ್ಮತದ ತೀರ್ಮಾನ ಕೈಗೊಳ್ಳಲಾಯಿತು.

ಅಧ್ಯಕ್ಷತೆ ವಹಿಸಿದ್ದ ಶಿವಮೂರ್ತಿ ಮುರುಘಾ ಶರಣರು, ‘ಈ ಬಾರಿ ಉತ್ಸವವನ್ನು ವಿನೂತನ ರೀತಿಯಲ್ಲಿ ಆಚರಿಸುವ ಉದ್ದೇಶ ಹೊಂದಿದ್ದೇವೆ. ಹೆಚ್ಚು ಹಣ ಖರ್ಚಾಗುವ ಸಾಧ್ಯತೆ ಇದ್ದು, ಯಾವುದಕ್ಕೂ ಕೊರತೆ ಆಗದಂತೆ ಹಿಂದಿನ ವರ್ಷಗಳಂತೆ ಯಶಸ್ವಿಯಾಗುವ ವಿಶ್ವಾಸವಿದೆ’ ಎಂದರು.

‘ವಿದ್ಯುತ್‌ ದೀಪಾಲಂಕಾರ ಸೇರಿ ಮಠ ಅತ್ಯಂತ ಮನಮೋಹಕವಾಗಿ ಕಾಣುವ ನಿಟ್ಟಿನಲ್ಲಿ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗುವುದು. ಮಠದ ಭಕ್ತರ ಸಹಕಾರದಿಂದ ವರ್ಷದಿಂದ ವರ್ಷಕ್ಕೆ ಉತ್ಸವ ಹೆಚ್ಚು ಮೆರುಗು ಪಡೆಯುತ್ತಿದೆ. ಶ್ರೀಮಠದ ಸಂಸ್ಥೆಯ ಎಲ್ಲ ಶಾಲಾ–ಕಾಲೇಜುಗಳ ಮುಖ್ಯಸ್ಥರು ಮುತುವರ್ಜಿಯಿಂದ ಕೆಲಸ ಕಾರ್ಯನಿರ್ವಹಿಸಲು ಸಿದ್ಧರಾಗಬೇಕು’ ಎಂದು ಸೂಚನೆ ನೀಡಿದರು.

ADVERTISEMENT

‘ಮಠದಲ್ಲಿ 25 ವರ್ಷಗಳ ಸವಿನೆನಪಿಗಾಗಿ ಅನುಭವ ಮಂಟಪ, ವಸ್ತು ಸಂಗ್ರಹಾಲಯ ಸ್ಥಾಪಿಸಲಾಯಿತು. ಅದೇ ರೀತಿ ತೃತೀಯ ದಶಮಾನೋತ್ಸವದ ಅಂಗವಾಗಿ ಸುವರ್ಣ ಸೌಧ ಮತ್ತು ಬೃಹತ್ ಶಿಲಾಮಂಟಪ ನಿರ್ಮಿಸಲಾಗುತ್ತಿದೆ. ಇಲ್ಲಿನ ಪ್ರತಿ ಸ್ಥಳ ತುಂಬ ಸುಂದರವಾಗಿ ಕಾಣುವ ನಿಟ್ಟಿನಲ್ಲಿ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗುತ್ತಿದೆ. ಮಠದ ಸರ್ವಾಂಗೀಣ ಅಭಿವೃದ್ಧಿ ನಮ್ಮ ಮುಖ್ಯ ಧ್ಯೇಯವಾಗಿದೆ’ ಎಂದು ತಿಳಿಸಿದರು.

ಉತ್ಸವ ಸಮಿತಿ ಗೌರವಾಧ್ಯಕ್ಷ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ‘ಮಧ್ಯ ಕರ್ನಾಟಕ ಭಾಗದಲ್ಲಿ ಶರಣ ಸಂಸ್ಕೃತಿ ಉತ್ಸವಕ್ಕೆ ತನ್ನದೇ ಆದ ವಿಶಿಷ್ಟತೆ ಇದೆ. ಹೀಗಾಗಿ ಸಾವಿರಾರು ಭಕ್ತರನ್ನು ಆಕರ್ಷಿಸುತ್ತ ಬಂದಿದೆ. ಉತ್ಸವ ಮುಗಿಯುವವರೆಗೂ ನಾಡಿನ ವಿವಿಧೆಡೆ ಇರುವ ಶ್ರೀಮಠದ ಭಕ್ತರು ಸಹಕರಿಸುವ ವಿಶ್ವಾಸವಿದೆ’ ಎಂದರು.

‘ಸಾಹಸಕ್ರೀಡೆ, ವನ್ಯಜೀವಿ ಛಾಯಾಚಿತ್ರ ಪ್ರದರ್ಶನ, ನೂರು ವಿಧದ ಆಹಾರ ಮೇಳ ಹಾಗೂ ರಾಷ್ಟ್ರಮಟ್ಟದ ವಾಲಿಬಾಲ್ ಕ್ರೀಡಾಕೂಟ ಸೇರಿ ಅನೇಕ ಕಾರ್ಯಕ್ರಮ ನಡೆಯಲಿದೆ’ ಎಂದು ಮಾಹಿತಿ ನೀಡಿದರು.

ಎಸ್‌ಜೆಎಂ ವಿದ್ಯಾಪೀಠದ ಕಾರ್ಯದರ್ಶಿ ಎ.ಜೆ. ಪರಮಶಿವಯ್ಯ, ಸೆ. 23ರಿಂದ ಅ. 18ರವರೆಗೆ ನಿತ್ಯವೂ ಒಂದೊಂದು ರೀತಿಯ ಕಾರ್ಯಕ್ರಮ ಈ ಬಾರಿ ಆಯೋಜಿಸುತ್ತಿದ್ದೇವೆ. ಶರಣ ಸಂಸ್ಕೃತಿ ಉತ್ಸವ ಅರ್ಥಪೂರ್ಣವಾಗಿ ನಡೆಯಲಿದೆ ಎಂದು ತಿಳಿಸಿದರು.

ಉತ್ಸವ ಸಮಿತಿ ಕಾರ್ಯಾಧ್ಯಕ್ಷ ಕೆ.ಎಸ್. ನವೀನ್, ಸಂತೋಷ ಗುಡಿಮಠ, ಶಿಕ್ಷಣಾಧಿಕಾರಿ ಬಿ. ಸಿದ್ದಪ್ಪ ಇದ್ದರು.

***

ಆರೋಗ್ಯ ಮೇಳ ಈ ಬಾರಿ ಪ್ರಮುಖ ಆಕರ್ಷಣೆ. ಮೇಳದಲ್ಲಿ ಹೃದಯಾಘಾತ ಆದಾಗ ನೀಡಬಹುದಾದ ಚಿಕಿತ್ಸೆ (ಸಿಪಿಆರ್) ತರಬೇತಿಯನ್ನು 3ಲಕ್ಷಕ್ಕಿಂತ ಹೆಚ್ಚು ಜನರಿಗೆ ತಲುಪಿಸಿ, ವಿಶ್ವದಾಖಲೆ ನಿರ್ಮಿಸುವ ಗುರಿ ಹೊಂದಲಾಗಿದೆ.

ಡಾ. ಶಾಲಿನಿ, ವೈದ್ಯೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.