ADVERTISEMENT

ಚಿತ್ರದುರ್ಗದಲ್ಲಿ ಶರಣ ಸಂಸ್ಕೃತಿ ಉತ್ಸವ ಇಂದಿನಿಂದ

ಆರೋಗ್ಯ ಮೇಳದ ಮೂಲಕ ಮಧ್ಯ ಕರ್ನಾಟಕದ ಉತ್ಸವಕ್ಕೆ ಚಾಲನೆ: ಶಿವಮೂರ್ತಿ ಶರಣರು

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2021, 4:04 IST
Last Updated 23 ಸೆಪ್ಟೆಂಬರ್ 2021, 4:04 IST
ಚಿತ್ರದುರ್ಗದ ಮುರುಘಾಮಠದಲ್ಲಿ ಬುಧವಾರ ಶರಣ ಸಂಸ್ಕೃತಿ ಉತ್ಸವ 2021ರ ಕರಪತ್ರವನ್ನು ಶಿವಮೂರ್ತಿ ಮುರುಘಾ ಶರಣರು, ನಾಡಿನ ವಿವಿಧ ಮಠಾಧೀಶರು, ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಬಿಡುಗಡೆ ಮಾಡಿದರು.
ಚಿತ್ರದುರ್ಗದ ಮುರುಘಾಮಠದಲ್ಲಿ ಬುಧವಾರ ಶರಣ ಸಂಸ್ಕೃತಿ ಉತ್ಸವ 2021ರ ಕರಪತ್ರವನ್ನು ಶಿವಮೂರ್ತಿ ಮುರುಘಾ ಶರಣರು, ನಾಡಿನ ವಿವಿಧ ಮಠಾಧೀಶರು, ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಬಿಡುಗಡೆ ಮಾಡಿದರು.   

ಚಿತ್ರದುರ್ಗ: ಇಲ್ಲಿಯ ಮುರುಘಾಮಠದಲ್ಲಿ ಸೆ. 23ರಿಂದ ಅ. 18ರವರೆಗೂ ‘ಶರಣ ಸಂಸ್ಕೃತಿ ಉತ್ಸವ’ ನಡೆಯಲಿದೆ. ಹಿಂದಿಗಿಂತಲೂ ಈ ಬಾರಿ ಇನ್ನಷ್ಟು ವಿಶೇಷವಾಗಿ ಆಚರಿಸಲು ಮಠದ ಆವರಣದಲ್ಲಿ ಸಿದ್ಧತೆಗಳು ಭರದಿಂದ ಸಾಗಿವೆ.

‘ಮಠದ ಅನುಭವ ಮಂಟಪದಲ್ಲಿ 23ರಿಂದ 25ರವರೆಗೆ ಆರೋಗ್ಯಮೇಳ ನಡೆಯಲಿದೆ. ಯುವಜನ ಮೇಳ, ಮಕ್ಕಳ ಮೇಳ, ಕೃಷಿ ಮತ್ತು ಕೈಗಾರಿಕಾ ಮೇಳ, ರಾಜ್ಯಮಟ್ಟದ ಭಜನೆ, ವೀರಗಾಸೆ, ಕೋಲಾಟ, ಜಾನಪದ ಕಲೆಗಳ ಸ್ಪರ್ಧೆ, ಹಾಲು ಕರೆಯುವ ಸ್ಪರ್ಧೆ, ಜೋಡೆತ್ತು ಮತ್ತು ಶ್ವಾನ ಪ್ರದರ್ಶನ, ರಾಷ್ಟ್ರೀಯ ವನ್ಯಜೀವಿ ಛಾಯಾಚಿತ್ರ ಪ್ರದರ್ಶನ, ಸ್ವಾತಂತ್ರ್ಯ ಅಮೃತ ಮಹೋತ್ಸವ ಹೀಗೆ.. ನಿತ್ಯ ಒಂದೊಂದು ಕಾರ್ಯಕ್ರಮ ಆಯೋಜಿಸಲಾಗಿದೆ’ ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಶಿವಮೂರ್ತಿ ಮುರುಘಾ ಶರಣರು ಮಾಹಿತಿ ನೀಡಿದರು.

‘ಈ ಬಾರಿ ಮುರುಘಾಶ್ರೀ, ಭರಮಣ್ಣನಾಯಕ ಶೌರ್ಯ ಪ್ರಶಸ್ತಿ ಹಾಗೂ ಬಸವಶ್ರೀ ಪ್ರಶಸ್ತಿಯನ್ನು ಯಾರಿಗೆ ನೀಡಬೇಕು ಎಂಬುದರ ಕುರಿತು ಚರ್ಚಿಸಲಾಗುತ್ತಿದೆ. ಮಹಿಳಾ ಗೋಷ್ಠಿ, ಶೂನ್ಯಪೀಠಾರೋಹಣ ಸೇರಿ ಹಲವು ಕಾರ್ಯಕ್ರಮಗಳು ನಡೆಯಲಿವೆ’ ಎಂದರು.

ADVERTISEMENT

‘ಶೂನ್ಯ ಪರಂಪರೆ, ಆರೂಢ ಪರಂಪರೆ ಹೀಗೆ ಯಾವ ಪರಂಪರೆಯ ಭೇದವಿಲ್ಲದೆಯೇ ಶಿವಮೂರ್ತಿ ಮುರುಘಾ ಶರಣರ ಪೀಠಾರೋಹಣದ ತೃತೀಯ ದಶಮಾನೋತ್ಸವ ಅರ್ಥಪೂರ್ಣವಾಗಿ ಆಚರಿಸಲಾಗುವುದು’ ಎಂದು ಚನ್ನಭದ್ರ ಶ್ರೀ, ಚನ್ನಬಸವ ಸ್ವಾಮೀಜಿ ತಿಳಿಸಿದರು.

ತಿಪಟೂರು ರುದ್ರಮುನಿ ಸ್ವಾಮೀಜಿ, ‘ಮುರುಘಾಮಠಕ್ಕೆ ಐತಿಹಾಸಿಕ ಪರಂಪರೆ ಇದೆ. ಇಲ್ಲಿನ ಶರಣರು ಸಾಂಸ್ಕೃತಿಕ ರಾಯಭಾರಿಯಾಗಿ ಶ್ರಮಿಸುತ್ತಿದ್ದಾರೆ. ಕ್ರೀಯಾಶೀಲರಾಗಿ ಜನಪರ ಕಾರ್ಯಕ್ರಮ ಮಾಡುತ್ತ ಬಂದಿದ್ದಾರೆ’ ಎಂದರು.

ಮಹಾಂತ ರುದ್ರೇಶ್ವರ ಸ್ವಾಮೀಜಿ, ಚಕ್ರಭಾವಿ ಸ್ವಾಮೀಜಿ, ಚನ್ನರುದ್ರಮುನಿ ಶಿವಾಚಾರ್ಯ ಸ್ವಾಮೀಜಿ, ಬಸವಕುಮಾರ ಸ್ವಾಮೀಜಿ, ಕಲ್ಯಾಣ ಸ್ವಾಮೀಜಿ, ಶಿವಬಸವ ಸ್ವಾಮೀಜಿ, ಬಸವಪ್ರಭು ಸ್ವಾಮೀಜಿ, ಬಸವಶಾಂತಲಿಂಗ ಸ್ವಾಮೀಜಿ, ಮಲ್ಲಿಕಾರ್ಜುನ ಸ್ವಾಮೀಜಿ, ಚನ್ನಮಲ್ಲಿಕಾರ್ಜುನ ಸ್ವಾಮೀಜಿ, ಚನ್ನಮಲ್ಲಪ್ಪ ಸ್ವಾಮೀಜಿ, ಮರಿರಾ ಚೋಟಿ ಸ್ವಾಮೀಜಿ, ಚನ್ನಬಸವ ಸ್ವಾಮೀಜಿ, ವೇಮನಾನಂದ ಸ್ವಾಮೀಜಿ, ಬಸವ ಮಾಚಿದೇವ ಸ್ವಾಮೀಜಿ, ಬಸವಭೂಷಣ ಸ್ವಾಮೀಜಿ, ತಿಪ್ಪಾಯಿಕೊಪ್ಪದ ಮಹಾಂತ
ಸ್ವಾಮೀಜಿ, ಸಂಕುಮಾರ ಸ್ವಾಮೀಜಿ, ಸಿದ್ಧಲಿಂಗ ದೇವರು, ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ, ಎಸ್‌ಜೆಎಂ ವಿದ್ಯಾಪೀಠದ ಕಾರ್ಯದರ್ಶಿ ಎ.ಜೆ.ಪರಮಶಿವಯ್ಯ
ಇದ್ದರು.

...

ಹೊರಗಿನಿಂದ ಬರುವವರಿಗೆ ಕೋವಿಡ್ ಪರೀಕ್ಷಾ ವರದಿ ಕಡ್ಡಾಯ. ಜಿಲ್ಲಾ ಆಸ್ಪತ್ರೆ, ಬಸವೇಶ್ವರ ಆಸ್ಪತ್ರೆಯಲ್ಲಿ ಕೋವಿಡ್ ಲಸಿಕಾ ಅಭಿಯಾನ ನಡೆಯಲಿದೆ. ಕೋವಿಡ್ ಸ್ಥಿತಿಗತಿ ನೋಡಿ ಜನಪದ ಕಲಾಮೇಳ ಆಯೋಜನೆ ಮಾಡಲಾಗುವುದು.

ಶಿವಮೂರ್ತಿ ಮುರುಘಾ ಶರಣರು, ಮುರುಘಾಮಠ

..

ಸಾವಿರಕ್ಕೂ ಹೆಚ್ಚು ಮಠಾಧೀಶರು ಅ.18ರಂದು ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ವಿಶೇಷ ಸಂದೇಶ ನೀಡಿ ಹಲವು ಸಮಸ್ಯೆಗಳಿಗೆ ಉತ್ತರವಾಗಿ ನಿಲ್ಲಲಿದ್ದಾರೆ. ಇದೊಂದು ಐತಿಹಾಸಿಕ ಕ್ಷಣವಾಗಲಿದೆ.

- ದಿಂಗಾಲೇಶ್ವರ ಸ್ವಾಮೀಜಿ, ಬಾಲೇಹೊಸೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.