ಚಿತ್ರದುರ್ಗ: ವಿಶ್ವ ಹಿಂದೂ ಪರಿಷತ್, ಭಜರಂಗದಳದ ವತಿಯಿಂದ ಪ್ರತಿಷ್ಠಾಪಿಸಲಾಗಿದ್ದ ಗಣಪತಿ ಮೂರ್ತಿ ವಿಸರ್ಜನೆ ಅಂಗವಾಗಿ ಶನಿವಾರ ನಡೆದ ಶೋಭಾಯಾತ್ರೆಯಲ್ಲಿ ಐತಿಹಾಸಿಕ ಕೋಟೆ ನಗರಿ ಕೇಸರಿ ಬಣ್ಣದಲ್ಲಿ ಮಿಂದೆದ್ದಿತು. ಅಪಾರ ಜನರು ಕೇಸರಿ ಟವೆಲ್ ಧರಿಸಿ ಮೆರವಣಿಗೆಯಲ್ಲಿ ಸಾಗಿದರು, ಡಿ.ಜೆ ಸದ್ದಿಗೆ ಕುಣಿದು ಕುಪ್ಪಳಿಸಿದರು.
ಗೌರಿ– ಗಣೇಶ ಹಬ್ಬದ ಅಂಗವಾಗಿ ಬಿ.ಡಿ ರಸ್ತೆಯ ಜೈನಧಾಮದ ಮೈದಾನದಲ್ಲಿ ಸೆ.7ರಂದು ಗಣಪತಿ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗಿತ್ತು. ಪ್ರತಿನಿತ್ಯ ವಿವಿಧ ಧಾರ್ಮಿಕ ಚಟುವಟಿಕೆ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. 20 ದಿನಗಳ ಆರಾಧನೆಯ ನಂತರ ನಗರದ ಹೊರವಲಯದಲ್ಲಿರುವ ಐತಿಹಾಸಿಕ ಚಂದ್ರವಳ್ಳಿ ಕೆರೆಯಲ್ಲಿ ತಡರಾತ್ರಿ ಮೂರ್ತಿ ವಿಸರ್ಜನೆ ಮಾಡಲಾಯಿತು.
ಬೆಳಿಗ್ಗೆ 11 ಗಂಟೆಗೆ ಶೋಭಾಯಾತ್ರೆ ಆರಂಭವಾಯಿತು. ಮೂರುತಿ ಹೊತ್ತ ವಾಹನ ರಸ್ತೆಗೆ ಇಳಿಯುವ ಮೊದಲೇ ಭಕ್ತಸಾಗರ ಬಿ.ಡಿ ರಸ್ತೆಯಲ್ಲಿ ಬಂದು ಸೇರಿತ್ತು. ಎಲ್ಲೆಲ್ಲೂ ಕೇಸರಿ ಬಾವುಟಗಳೇ ರಾರಾಜಿಸುತ್ತಿದ್ದವು. ಮಹಿಳೆಯರು, ಮಕ್ಕಳು, ಹಿರಿಯ ನಾಗರಿಕರು ಶೋಭಾಯಾತ್ರೆಯಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು. ಡಿ.ಜೆ ಸದ್ದಿಗೆ ನೃತ್ಯ ಮಾಡುತ್ತಿದ್ದ ಯುವಜನರ ಸಂಭ್ರಮ ಮುಗಿಲುಮುಟ್ಟಿತ್ತು.
ಮೆರವಣಿಗೆ ಸಾಗಿದ ನಾಲ್ಕೂವರೆ ಕಿ.ಮೀ. ಮಾರ್ಗವನ್ನು ಸುಂದರವಾಗಿ ಅಲಂಕಾರ ಮಾಡಲಾಗಿತ್ತು. ಬಂಟಿಂಗ್ಸ್, ಕೇಸರಿ ಧ್ವಜ ಹಾಗೂ ರಾಜಕಾರಣಿಗಳ ಕಟೌಟ್‌ಗಳು ಎಲ್ಲೆಡೆ ರಾರಾಜಿಸುತ್ತಿದ್ದವು. ಶೋಭಾಯಾತ್ರೆಗೆ ಶುಕ್ರವಾರ ರಾತ್ರಿಯಿಂದಲೇ ಸಿದ್ಧತೆಗಳು ನಡೆದಿದ್ದವು. ಜನಜಂಗುಳಿ ತಪ್ಪಿಸಲು ಹಾಗೂ ವಾಹನ ಸಂಚಾರ ನಿರ್ಬಂಧಿಸಲು ಪೊಲೀಸರು ಬ್ಯಾರಿಕೇಡ್ ವ್ಯವಸ್ಥೆ ಮಾಡಿದ್ದರು. ಶನಿವಾರ ಬೆಳಿಗ್ಗೆ ಗಣಪತಿಗೆ ವಿಶೇಷ ಪೂಜೆ ಸಲ್ಲಿಸಿ ಮಂಟಪದಿಂದ ಹೊರಗೆ ತರಲಾಯಿತು.
ವಿಸರ್ಜನಾ ಮಹೋತ್ಸವದ ಮೆರವಣಿಗೆ ಸಾಗುವ ಬಿ.ಡಿ.ರಸ್ತೆ ಹಾಗೂ ಹೊಳಲ್ಕೆರೆ ಮಾರ್ಗವನ್ನು ಕೇಸರಿ ಬಂಟಿಂಗ್ಸ್ ಹಾಗೂ ಬಾವುಟಗಳಿಂದ ಸಿಂಗರಿಸಲಾಗಿತ್ತು. ‘ಓಂ’, ‘ಆಂಜನೇಯಸ್ವಾಮಿ’ ಭಾವಚಿತ್ರದ ಬೃಹತ್ ಧ್ವಜಗಳನ್ನು ಕಟ್ಟಲಾಗಿತ್ತು. ಮದಕರಿನಾಯಕ ಪ್ರತಿಮೆಯ ಬಳಿ ಕೈಲಾಸ ಮಂಟಪ ಕಲಾಕೃತಿಯನ್ನು ನಿರ್ಮಾಣ ಮಾಡಲಾಗಿತ್ತು. ಗಾಂಧಿ ವೃತ್ತ, ಅಂಬೇಡ್ಕರ್ ಪ್ರತಿಮೆ, ಒನಕೆ ಓಬವ್ವ ಪ್ರತಿಮೆ ಹಾಗೂ ಸಂಗೊಳ್ಳಿ ರಾಯಣ್ಣ ಪ್ರತಿಮೆಗಳನ್ನು ಸಿಂಗರಿಸಲಾಗಿತ್ತು.
ಮರಾಠ ಸಮಾಜದ ಶಿವಾಜಿ ಹಾಗೂ ಶ್ರೀರಾಮ, ಆಂಜನೇಯನ ಸ್ತಬ್ಧಚಿತ್ರಗಳು ಮೆರವಣಿಗೆಯಲ್ಲಿ ಸಾಗಿದವು. ಸ್ತಬ್ಧಚಿತ್ರ ಹಾಗೂ ಗಣಪತಿ ಮೂರ್ತಿಗೆ ಭಕ್ತಿ ಸಮರ್ಪಿಸಿದ ಜನರು ಪುನೀತರಾಗುತ್ತಿದ್ದರು. ‘ಜೈ ಶ್ರೀರಾಮ್’, ‘ಗಣಪತಿ ಬಪ್ಪ ಮೋರಯಾ’ ಘೋಷಣೆಗಳು ರಾತ್ರಿಯವರೆಗೂ ಮೊಳಗಿದವು. ಕೇಸರಿ ಬಾವುಟ ಹಿಡಿದು ಜನರು ಮೆರವಣಿಗೆಯಲ್ಲಿ ಸಾಗಿದರು.
ಶೋಭಾಯಾತ್ರೆಯಲ್ಲಿ ಡಿ.ಜೆ ಸಂಗೀತ ಪ್ರಮುಖ ಆಕರ್ಷಣೆಯಾಗಿತ್ತು. ಪೊಲೀಸರು ಷರತ್ತುಬದ್ಧವಾಗಿ ಡಿ.ಜೆಗಳಿಗೆ ಅನುಮತಿ ನೀಡಿದ್ದರು. ಅಬ್ಬರಿಸುವ ಸಂಗೀತದಲ್ಲಿ ಯುವಪಡೆ ಮಿಂದೆದ್ದಿತು. ಯುವಕರೊಂದಿಗೆ ಯುವತಿಯರೂ ಹೆಜ್ಜೆ ಹಾಕಿ ಸಂಭ್ರಮಿಸಿದರು. ಸುಡು ಬಿಸಿಲಿನಲ್ಲಿಯೂ ಯುವಪಡೆಯ ಹುಮ್ಮಸ್ಸು ಕುಂದಲಿಲ್ಲ.
ಶೋಭಾಯಾತ್ರೆಯಲ್ಲಿ ಪಾಲ್ಗೊಂಡಿದ್ದ ಜನರಿಗೆ ಮೆರವಣಿಗೆಯ ಮಾರ್ಗ ಮಧ್ಯೆ ಭಕ್ತರು ಊಟ ಮತ್ತು ಉಪಹಾರದ ವ್ಯವಸ್ಥೆ ಕಲ್ಪಿಸಿದ್ದರು. ಕುಡಿಯುವ ನೀರು, ಹಣ್ಣು, ಮಜ್ಜಿಗೆಯನ್ನು ಉಚಿತವಾಗಿ ವಿತರಿಸಿ ಧನ್ಯತೆ ಮೆರೆದರು. ಬಿ.ಡಿ.ರಸ್ತೆಯ ಎರಡೂ ಬದಿಯಲ್ಲಿ ಶಾಮಿಯಾನ ಹಾಕಿ ಪ್ರಸಾದದ ವ್ಯವಸ್ಥೆ ಕಲ್ಪಿಸಲಾಗಿತ್ತು. ತರಾಸು ರಂಗಮಂದಿರದ ಸಮೀಪ ಉಪಹಾರದ ವ್ಯವಸ್ಥೆ ಕಲ್ಪಿಸಿದ್ದರು.
ಸಾವಿರಾರು ಜನರು ಸಾಲಾಗಿ ಬಂದು ಉಪಹಾರ ಸ್ವೀಕರಿಸಿದರು. ಜಿಲ್ಲಾ ವಕೀಲರ ಬಳಗ, ಕೋಟೆ ಗೆಳೆಯರ ಬಳಗ, ಆರ್ಯ ವೈಶ್ಯ ಸಂಘದ ವತಿಯಿಂದಲೂ ಉಪಾಹಾರ ವಿತರಿಸಲಾಯಿತು. ರೈಸ್ ಬಾತ್, ಟೊಮೆಟೊ ಬಾತ್, ವಾಂಗಿ ಬಾತ್, ಲಾಡು ಹಾಗೂ ಸಿಹಿತಿನಿಸು ನೀಡಲಾಯಿತು.
ಗಣಪತಿಮೂರ್ತಿ ಹಾಗೂ ಮೆರವಣಿಗೆಯನ್ನು ಕಣ್ತುಂಬಿಕೊಳ್ಳಲು ಗ್ರಾಮೀಣ ಪ್ರದೇಶದ ಜನರೂ ಧಾವಿಸಿದ್ದರು. ದಾವಣಗೆರೆ, ಶಿವಮೊಗ್ಗ, ತುಮಕೂರು, ಬಳ್ಳಾರಿ ಸೇರಿ ರಾಜ್ಯದ ವಿವಿಧೆಡೆಯಿಂದಲೂ ಭಕ್ತ ಸಮೂಹ ಹರಿದು ಬಂದಿತ್ತು. ರಸ್ತೆಯಲ್ಲಿ ಸ್ಥಳಾವಕಾಶದ ಕೊರತೆ ಇದ್ದುದರಿಂದ ಅನೇಕರು ಕಟ್ಟಡ, ಮರಗಳನ್ನು ಏರಿ ಶೋಭಾಯಾತ್ರೆ ವೀಕ್ಷಣೆ ಮಾಡಿದರು. ಕಟ್ಟಡ ಏರದಂತೆ ಪೊಲೀಸರು ಮೊದಲೇ ಸೂಚನೆ ನೀಡಿದ್ದರು. ಆದರೂ ಬಿ.ಡಿ. ರಸ್ತೆಯಲ್ಲಿ ಸ್ಥಳದ ಕೊರತೆಯುಂಟಾಗಿ ಜನರು ಕಟ್ಟಡಗಳ ಮೇಲೇರಿ ವೀಕ್ಷಣೆ ಮಾಡಿದರು.
ನಗರದಾದ್ಯಂತ ಪೊಲೀಸ್ ಕಟ್ಟೆಚ್ಚರ
ಶೋಭಾಯಾತ್ರೆ ಅಂಗವಾಗಿ ನಗರದಾದ್ಯಂತ ಪೊಲೀಸ್ ಕಟ್ಟೆಚ್ಚರ ವಹಿಸಲಾಗಿತ್ತು. ರಾಜ್ಯದ ವಿವಿಧೆಡೆಯಿಂದ 3500 ಪೊಲೀಸ್ ಗೃಹರಕ್ಷಕ ದಳದ ಸಿಬ್ಬಂದಿ ಬಿಗಿ ಬಂದೋಬಸ್ತ್ ಕೈಗೊಂಡಿದ್ದರು. ಶೋಭಾಯಾತ್ರೆ ವೇಳೆ ಎಲ್ಲ ಚಟುವಟಿಕೆಗಳ ಮೇಲೆ ನಿಗಾ ವಹಿಸಲಾಗಿತ್ತು. 150 ಕಡೆಗಳಲ್ಲಿ ಸಿ.ಸಿ. ಟಿವಿ ಕ್ಯಾಮೆರಾ ಅಳವಡಿಸಲಾಗಿತ್ತು. ನಗರದ ಹೊರವಲಯದಲ್ಲಿ 9 ಕಡೆ ಚೆಕ್‌ಪೋಸ್ಟ್ ತೆರೆಯಲಾಗಿದ್ದು ಒಳಬರುವ ಹಾಗೂ ಹೊರ ಹೋಗುವ ಎಲ್ಲ ವಾಹನಗಳನ್ನು ತಪಾಸಣೆ ಮಾಡಲಾಯಿತು. ವಿವಿಧೆಡೆ ಎಲ್‌ಇಡಿ ಪರದೆ ಅಳವಡಿಸಲಾಗಿತ್ತು. ಪ್ರತಿ ಚಟುವಟಿಕೆಯನ್ನು ವಿಡಿಯೊ ಮಾಡಲಾಯಿತು. ಶೋಭಾಯಾತ್ರೆ ಸಾಗುವಾಗ 4 ಆಂಬುಲೆನ್ಸ್ ವೈದ್ಯರ ತಂಡಗಳೂ ಹಿಂದೆ ಸಾಗಿದವು. ಮಾರ್ಗದಲ್ಲಿನ ಎಲ್ಲ ಅಂಗಡಿ ಮುಂಗಟ್ಟುಗಳು ಮುಚ್ಚಿದ್ದವು. ಶಾಲಾ ಕಾಲೇಜುಗಳಿಗೆ ಸ್ಥಳೀಯವಾಗಿ ರಜೆ ಘೋಷಣೆ ಮಾಡಲಾಗಿತ್ತು. ಸೆ.27ರಂದು ಬೆಳಿಗ್ಗೆ 6 ಗಂಟೆಯಿಂದ ಶನಿವಾರ ಮಧ್ಯರಾತ್ರಿ 12 ಗಂಟೆವರೆಗೂ ನಗರದಲ್ಲಿ ಮದ್ಯ ಮಾರಾಟ ನಿಷೇಧಿಸಲಾಗಿತ್ತು.
- ಮುಕ್ತಿಬಾವುಟ; ₹ 2.5 ಲಕ್ಷಕ್ಕೆ ಹರಾಜು
ಶೋಭಾಯಾತ್ರೆ ಆರಂಭವಾಗುವುದಕ್ಕೂ ಮೊದಲು ಗಣಪತಿ ಪೂಜೆಗೆ ಬಳಸಿದ್ದ ವಸ್ತುಗಳ ಹರಾಜು ಪ್ರಕ್ರಿಯೆ ನಡೆಯಿತು. ಮುಕ್ತಿಬಾವುಟಗಳನ್ನು ಎನ್.ಜೆ.ಹಳ್ಳಿ ಮಂಜುನಾಥ್ ಅವರು ₹ 2.50 ಲಕ್ಷಕ್ಕೆ ಪಡೆದರು. ತೊರೆಕೋಲಮ್ಮನಹಳ್ಳಿ ತಿಪ್ಪೇಸ್ವಾಮಿ ಅವರು ₹ 1.60 ಲಕ್ಷಕ್ಕೆ ಹೂವಿನ ಹಾರ ಪಡೆದರು. ನೋಟಿನ ಹಾರಗಳನ್ನು ಕೆ.ಜಿ.ಟಿ. ಗುರುಮೂರ್ತಿ ಅವರು ₹ 2.50 ಲಕ್ಷಕ್ಕೆ ಪಡೆದರು. ಕೆ.ಸಿ.ನಾಗರಾಜ್ ಅವರು ಪುರಿ ಜಗನ್ನಾಥ ಮಂದಿರ ಪ್ರತಿಕೃತಿಯನ್ನು ₹ 2.25 ಲಕ್ಷಕ್ಕೆ ಪಡೆದರು. ಸಂಸದ ಗೋವಿಂದ ಕಾರಜೋಳ ಪುತ್ರ ಉಮೇಶ್ ಕಾರಜೋಳ ಅವರು ₹ 61000 ಕ್ಕೆ ಫಲಾಹಾರ ಪಡೆದರು. ಪ್ರಸಾದವನ್ನು ₹ 70000ಕ್ಕೆ ಶಾಮಿಯಾನ ಮೋಹನ್ ಗಣಪತಿ ಭಾವಚಿತ್ರಗಳನ್ನು ₹ 60000ಕ್ಕೆ ಮಂಜಣ್ಣ ಮೆಕ್ಕೆಜೋಳ ಹಾರವನ್ನು ₹ 40000ಕ್ಕೆ ವಿಶ್ವಬಂಧು ಕಲ್ಲೇಶ್ ಪಡೆದರು.
ದರ್ಶನ್ ಭಾವಚಿತ್ರ ತೆರವು
ಶೋಭಾಯಾತ್ರೆ ಮಾರ್ಗದಲ್ಲಿ ಶುಕ್ರವಾರ ವಿವಿಧೆಡೆ ನಟ ದರ್ಶನ್ ಭಾವಚಿತ್ರಗಳನ್ನು ಅಳವಡಿಸುವ ಪ್ರಕ್ರಿಯೆ ಕಂಡುಬಂದಿತ್ತು. ಇದನ್ನು ವಿರೋಧಿಸಿ ಗಣಪತಿ ಸಮಿತಿಯ ಸಂಘಟಕರು ತಮ್ಮ ಫೇಸ್‌ಬುಕ್ ಪೇಜ್‌ನಲ್ಲಿ ‘ಶೋಭಾಯಾತ್ರೆ ಮಾರ್ಗದಲ್ಲಿ ಚಿತ್ರನಟರ ಭಾವಚಿತ್ರಗಳನ್ನು ಅಳವಡಿಸಬಾರದು’ ಎಂದು ಮನವಿ ಮಾಡಿದ್ದರು. ಆದರೂ ಶೋಭಾಯಾತ್ರೆ ವೇಳೆ ವಿವಿಧೆಡೆ ದರ್ಶನ್ ಭಾವಚಿತ್ರಗಳು ಕಂಡುಬಂದವು ಕೆಲವರು ದರ್ಶನ್ ಪರ ಘೋಷಣೆ ಕೂಗಿದರು. ಹಿಂದೂ ಸಂಘಟನೆಗಳ ಕಾರ್ಯಕರ್ತರು ಇದರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ದರ್ಶನ ಅಭಿಮಾನಿಗಳು ಹಾಗೂ ಸಂಘಟಕರ ನಡುವೆ ಕೆಲ ಕಾಲ ಮಾತಿನ ಚಕಮಕಿಯೂ ನಡೆಯಿತು. ನಂತರ ಮಧ್ಯಪ್ರವೇಶಿಸಿದ ಪೊಲೀಸರು ಪರಿಸ್ಥಿತಿಯನ್ನು ತಿಳಿಗೊಳಿಸಿದರು. ನಂತರ ದರ್ಶನ್ ಭಾವಚಿತ್ರಗಳನ್ನು ಪೊಲೀಸರು ತೆರವುಗೊಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.