ADVERTISEMENT

ನೆರೆ ಪರಿಹಾರ ಕಾಮಗಾರಿಗಾಗಿ ಅಭಿವೃದ್ಧಿ ಯೋಜನೆಗಳ ರದ್ದು ಸಾಧ್ಯತೆ: ಯಡಿಯೂರಪ್ಪ

ಸಿರಿಗೆರೆ ತರಳಬಾಳು ಮಠದಲ್ಲಿ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಅವರ 27ನೇ ಶ್ರದ್ಧಾಂಜಲಿ ಸಮಾರಂಭ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2019, 1:44 IST
Last Updated 25 ಸೆಪ್ಟೆಂಬರ್ 2019, 1:44 IST
ಸಿರಿಗೆರೆಯ ತರಳಬಾಳು ಮಠದಲ್ಲಿ ಮಂಗಳವಾರ ಏರ್ಪಡಿಸಿದ್ದ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಅವರ 27ನೇ ಶ್ರದ್ಧಾಂಜಲಿ ಸಮಾರಂಭದಲ್ಲಿ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದರು. ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ಇದ್ದಾರೆ
ಸಿರಿಗೆರೆಯ ತರಳಬಾಳು ಮಠದಲ್ಲಿ ಮಂಗಳವಾರ ಏರ್ಪಡಿಸಿದ್ದ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಅವರ 27ನೇ ಶ್ರದ್ಧಾಂಜಲಿ ಸಮಾರಂಭದಲ್ಲಿ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದರು. ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ಇದ್ದಾರೆ   

ಚಿತ್ರದುರ್ಗ: ‘ನೆರೆ ಪರಿಹಾರ ಕಾಮಗಾರಿಯನ್ನು ಕೈಗೆತ್ತಿಕೊಳ್ಳುವ ಉದ್ದೇಶದಿಂದ ಕೆಲ ಅಭಿವೃದ್ಧಿ ಯೋಜನೆಗಳನ್ನು ರದ್ದುಪಡಿಸಲು ಸರ್ಕಾರ ಆಲೋಚಿಸುತ್ತಿದೆ. ಆದರೆ, ಯಾವುದೇ ತೀರ್ಮಾನಕ್ಕೆ ಬಂದಿಲ್ಲ’ ಎಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ತಿಳಿಸಿದರು.

ಚಿತ್ರದುರ್ಗ ತಾಲ್ಲೂಕಿನ ಸಿರಿಗೆರೆ ತರಳಬಾಳು ಮಠದಲ್ಲಿ ಮಂಗಳವಾರ ನಡೆದ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಅವರ 27ನೇ ಶ್ರದ್ಧಾಂಜಲಿ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಅತಿವೃಷ್ಟಿ ಹಾಗೂ ಅನಾವೃಷ್ಟಿಯಿಂದ ರಾಜ್ಯ ತತ್ತರಿಸಿ ಹೋಗಿದೆ. ಕಂಡರಿಯದ ನೆರೆಗೆ ಮನೆ, ರಸ್ತೆ, ಸೇತುವೆ ಕೊಚ್ಚಿಹೋಗಿವೆ. ನೆರೆ ಪರಿಹಾರವಾಗಿ ₹ 2,500 ಕೋಟಿ ಬಿಡುಗಡೆ ಮಾಡಲಾಗಿದೆ. ರಾಜ್ಯದ ಬೊಕ್ಕಸದಲ್ಲಿರುವ ಹಣ ನೆರೆ ಪರಿಹಾರಕ್ಕೆ ಸಾಕಾಗುತ್ತಿಲ್ಲ. ಕೇಂದ್ರ ಸರ್ಕಾರ ಶೀಘ್ರ ಪರಿಹಾರ ಬಿಡುಗಡೆ ಮಾಡಲಿದೆ’ ಎಂದರು.

ADVERTISEMENT

‘ರೈತರ ಸಾಲಮನ್ನಾಕ್ಕೆ ಸಂಬಂಧಿಸಿದಂತೆ ಹಿಂದಿನ ಸರ್ಕಾರದ ನಿಲುವನ್ನು ಮುಂದುವರಿಸುತ್ತೇನೆ. ಹಂತ ಹಂತವಾಗಿ ಹಣ ಬಿಡುಗಡೆ ಮಾಡುತ್ತೇನೆ. ದೇವರ ಕೃಪೆ ಹಾಗೂ ರಾಜ್ಯದ ಜನರ ಆಶೀರ್ವಾದ ಇದ್ದರೆ ಮುಂದಿನ ಮೂರು ವರ್ಷಗಳಲ್ಲಿ ಕರ್ನಾಟಕವನ್ನು ಮಾದರಿ ರಾಜ್ಯವಾಗಿ ರೂಪಿಸುತ್ತೇನೆ’ ಎಂದು ಆಶ್ವಾಸನೆ ನೀಡಿದರು.

ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಗೃಹಸಚಿವ ಬಸವರಾಜ ಬೊಮ್ಮಾಯಿ, ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ, ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಇದ್ದರು.

‘ಕೈ’ ಸುಟ್ಟ ವೀರಶೈವ
‘ವೀರಶೈವ ಸಮಾಜವನ್ನು ಒಡೆಯಲು ಪ್ರಯತ್ನಿಸಿ ‘ಕೈ’ ಸುಟ್ಟುಕೊಂಡವರು ಸುಮ್ಮನಾಗಿದ್ದಾರೆ’ ಎಂದು ಶಾಸಕ ಶಾಮನೂರು ಶಿವಶಂಕರಪ್ಪ ಪರೋಕ್ಷವಾಗಿ ಕಾಂಗ್ರೆಸ್‌ ನಾಯಕರ ಕಾಲೆಳೆದರು.

‘ವೀರಶೈವ ಮಹಾಸಭಾ ಅಧ್ಯಕ್ಷ ಸ್ಥಾನಕ್ಕೆ ಏರಿದ ಸಂದರ್ಭದಲ್ಲಿಯೇ ಸಮಾಜ ಒಡೆಯುವ ಹುನ್ನಾರ ನಡೆಯಿತು. ಕೆಲವೇ ದಿನಗಳಲ್ಲಿ ಅದು ಅವರ ‘ಕೈ’ ಸುಟ್ಟಿತು. ಒಳಪಂಗಡಗಳು ಒಗ್ಗೂಡಿದರೆ ವೀರಶೈವರನ್ನು ಮಣಿಸಲು ಯಾರಿಗೂ ಸಾಧ್ಯವಿಲ್ಲ. ಒಗ್ಗೂಡಿಸುವ ಪ್ರಯತ್ನವನ್ನು ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ನೇತೃತ್ವದಲ್ಲಿ ನಡೆಯಲಿ’ ಎಂದು ಮನವಿ ಮಾಡಿದರು.

‘ಬಿಎಸ್‌ವೈ ಸಿ.ಎಂ ಆದಾಗ ನೆರೆ’
‘ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿ ಗದ್ದುಗೆ ಏರಿದರೆ ರಾಜ್ಯದಲ್ಲಿ ನೆರೆ ಬರುತ್ತದೆ. ಉಳಿದವರು ಮುಖ್ಯಮಂತ್ರಿ ಹುದ್ದೆಗೆ ಬಂದರೆ ಬರ ಆವರಿಸುತ್ತದೆ’ ಎಂದು ಶಾಸಕ ಸ್ಥಾನದಿಂದ ಅನರ್ಹಗೊಂಡಿರುವ ಬಿ.ಸಿ. ಪಾಟೀಲ ಹೇಳಿದರು.

‘ಯಡಿಯೂರಪ್ಪ ಅವರ ಕಾಲ್ಗುಣ ಅಂಥದು. ನೆರೆ ಬಂದರೆ ಕಷ್ಟವಾಗುತ್ತದೆ ಎಂಬುದು ಗೊತ್ತು. ಆದರೆ, ಒಮ್ಮೆ ಮಳೆ ಸುರಿದು ಕೆರೆ ತುಂಬಿದರೆ ಐದು ವರ್ಷ ಸಮೃದ್ಧಿ ಇರುತ್ತದೆ’ ಎಂದು ಹೇಳಿದರು.

‘ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಮಾಡುವ ಉದ್ದೇಶದಿಂದ 17 ಶಾಸಕರು ರಾಜೀನಾಮೆ ನೀಡಿದ್ದೇವೆ. ಹಾಲಿ ಶಾಸಕ ಮಾಜಿ ಆಗಿದ್ದೇನೆ, ಮಾಜಿ ಮುಖ್ಯಮಂತ್ರಿ ಆಗಿದ್ದ ಯಡಿಯೂರಪ್ಪ ಹಾಲಿ ಆಗಿದ್ದಾರೆ. ನಮ್ಮ ತ್ಯಾಗ ವ್ಯರ್ಥವಾಗಿಲ್ಲ’ ಎಂದರು.

**

ನೆರೆ ಬಂದಾಗ ನೂರಾರು ಟಿಎಂಸಿ ಅಡಿ ನೀರು ಸಮುದ್ರಕ್ಕೆ ಹರಿಯುತ್ತದೆ. ಹೀಗೆ ನೀರು ವ್ಯರ್ಥವಾಗುವುದನ್ನು ತಡೆದು ಬರ ‍ಪರಿಸ್ಥಿತಿ ಎದುರಿಸುವ ಜಿಲ್ಲೆಗೆ ಒದಗಿಸಲು ಪ್ರಯತ್ನಿಸಿ.
–ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ,ತರಳಬಾಳು ಮಠ, ಸಿರಿಗೆರೆ

**

ಪ್ರವಾಸೋದ್ಯಮ ಉತ್ತೇಜಿಸುವ ‘ಸುವರ್ಣ ರಥ’ ರೈಲು ಮೂಲೆ ಸೇರಿದೆ. ಸಾಧ್ಯವಾದರೆ ಇದಕ್ಕೆ ಮರುಚಾಲನೆ ನೀಡಿ. ಇಲ್ಲವಾದರೆ ಕೇಂದ್ರ ಸರ್ಕಾರದ ಸುಪರ್ದಿಗೆ ಒಪ್ಪಿಸಿ.
–ಸುರೇಶ್‌ ಅಂಗಡಿ,ರೈಲ್ವೆ ಖಾತೆ ರಾಜ್ಯ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.