ADVERTISEMENT

ಶುದ್ಧ ಮನಸ್ಸಿಗೆ ಅಧ್ಯಾತ್ಮವೇ ಸ್ಯಾನಿಟೈಸರ್‌

ಶ್ರಾವಣ ದರ್ಶನ ಫೇಸ್‌ಬುಕ್‌ ಲೈವ್‌ನಲ್ಲಿ ಶಿವಮೂರ್ತಿ ಮುರುಘಾ ಶರಣರು

​ಪ್ರಜಾವಾಣಿ ವಾರ್ತೆ
Published 21 ಜುಲೈ 2020, 16:15 IST
Last Updated 21 ಜುಲೈ 2020, 16:15 IST
ಶಿವಮೂರ್ತಿ ಮುರುಘಾ ಶರಣರು
ಶಿವಮೂರ್ತಿ ಮುರುಘಾ ಶರಣರು   

ಚಿತ್ರದುರ್ಗ: ‘ಅಧ್ಯಾತ್ಮ ಎಂಬ ಸ್ಯಾನಿಟೈಸರ್ ಮೂಲಕ ಅಂತರಂಗ ಶುದ್ಧೀಕರಣ ಮಾಡಿಕೊಂಡಾಗ ಮಾತ್ರ ಸರ್ವರಿಗೂ ಒಳಿತನ್ನು ಬಯಸುವ ಶುದ್ಧ ಮನಸುಳ್ಳವರಾಗಲು ಸಾಧ್ಯ’ ಎಂದು ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು ಅಭಿಪ್ರಾಯಪಟ್ಟರು.

ಪ್ರತಿ ವರ್ಷ ಮುರುಘಾಮಠದಿಂದ ನಡೆಯುತ್ತಿದ್ದ ‘ಶ್ರಾವಣ ಮಾಸದ ಕಲ್ಯಾಣ ದರ್ಶನ’ ಕಾರ್ಯಕ್ರಮ ಕೋವಿಡ್‌-19 ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ರದ್ದಾಗಿದೆ. ಆದರೆ, ಫೇಸ್‌ಬುಕ್‌ ಲೈವ್‌ನಲ್ಲಿ ಶರಣರು ಚಿಂತನೆಗಳನ್ನು ನಿತ್ಯ ಹಂಚಿಕೊಳ್ಳಲಿದ್ದಾರೆ.

‘ಅಧ್ಯಾತ್ಮ ಎಂದರೆ ಚಿಂತನೆಯ ಹಾದಿ. ಶುದ್ಧ, ಪರಿಪಕ್ವ, ಪರಮಜ್ಞಾನ ನೀಡುವಂಥ ಉತ್ತಮ ಮಾರ್ಗವೂ ಹೌದು. ಜತೆಗೆ ಸಮಾಜಕ್ಕೆ ಒಳಿತು ಬಯಸುವವರು ಸತ್ಯಾನ್ವೇಷಣೆಗೆ ಆದ್ಯತೆ ನೀಡುತ್ತಾರೆ. ಸತ್ಯ ಸಾಧಕರಾಗಲು ಮುಂದಾಗುತ್ತಾರೆ’ ಎಂದು ಹೇಳಿದರು.

ADVERTISEMENT

‘ರಾಜ್ಯದಲ್ಲಿ ವಿಧಾನಸೌಧ, ಶಾಲಾ-ಕಾಲೇಜು, ಆಸ್ಪತ್ರೆ, ಮಠ, ಮಂದಿರ ಕೊನೆಗೆ ಅತ್ಯಂತ ಶಕ್ತಿಯುತ ಎಂಬುದಾಗಿ ಕರೆಸಿಕೊಳ್ಳುವ ದೇವರಿಗೂ ಸ್ಯಾನಿಟೈಸ್ ಮಾಡುವಂಥ ಕಾಲ ಬಂದೊದಗಿದೆ. ವಿಶ್ವಕ್ಕೆ ಕೊರೊನಾ ಬಹುದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ’ ಎಂದು ವಿಷಾದಿಸಿದರು.

‘ಸಂಕುಚಿತ ವ್ಯಕ್ತಿಗಳಲ್ಲಿ ಉತ್ತಮ ಭವಿಷ್ಯ ಕಟ್ಟಿಕೊಳ್ಳಲು ಶಕ್ತಿ ಇರುವುದಿಲ್ಲ. ಹೆಚ್ಚಿನ ಶಿಕ್ಷಣ ಪಡೆದ ಅನೇಕರಲ್ಲೂ ವಿಶಾಲವಾದ ಹೃದಯ ಇರುವುದಿಲ್ಲ. ಅಧ್ಯಯನ ಹಾಗೂ ಅನುಭವ ಎರಡನ್ನೂ ಅಳವಡಿಸಿಕೊಂಡು ಸನ್ಮಾರ್ಗದಲ್ಲಿ ನಡೆದರೆ ಮಾತ್ರ ಜೀವನ ಉಜ್ವಲವಾಗಲು ಸಾಧ್ಯ’ ಎಂದರು.

‘ವಿವೇಕ ಎಂಬ ಸೂರ್ಯ, ಸುಜ್ಞಾನ ಎನ್ನುವ ಚಂದಿರ ಮಾನವರೊಳಗೆ ಇವೆ. ಸರಿದಾರಿಯಲ್ಲಿ ನಡೆದರೆ ಪರಮಾರ್ಥ ಪ್ರವೇಶವಾಗಿ ಬದುಕು ಹೊಳೆಯುವ ಪ್ರಕಾಶದಂತೆ ರೂಪುಗೊಳ್ಳುತ್ತದೆ. ಇಲ್ಲದಿದ್ದರೆ, ಜ್ವಾಲೆಯೊಳಗೆ ನೊಂದು, ಬೆಂದು ಸುಡುವುದರ ಜತೆಗೆ ನಾಶಕ್ಕೆ ನಾಂದಿಯಾಗುತ್ತದೆ. ಬಸವಾದಿ ಶರಣರ, ಮಹಾನುಭಾವರ ತತ್ವಾದರ್ಶ ಪಾಲಿಸಬೇಕಿದೆ’ ಎಂದು ಸಲಹೆ ನೀಡಿದರು.

‘ಶರಣ ಜ್ಞಾನ, ವಚನ ಜ್ಞಾನ, ತತ್ವ ಜ್ಞಾನ ಒಂದು ರೀತಿ ವಿಜ್ಞಾನ ಇದ್ದಂತೆ. ಇವೆಲ್ಲವೂ ಬೆಳವಣಿಗೆಯ ಮಾರ್ಗಗಳು. ಬಸವಣ್ಣನ ಅನುಯಾಯಿಗಳು ಉತ್ತಮ ಸಮಾಜ ನಿರ್ಮಾಣಕ್ಕಾಗಿ ಸದಾ ಚಿಂತಕರಾಗಲು ಬಯಸುತ್ತಾರೆಯೇ ಹೊರತು ಸ್ವಾರ್ಥಿಗಳಾಗುವುದಿಲ್ಲ. ಆದ್ದರಿಂದ ಶುದ್ಧಿ ಕಡೆಗೆ ಗಮನಹರಿಸಬೇಕು’ ಎಂದರು.

ಫೇಸ್‌ಬುಕ್‌ ಲೈವ್‌ ಮಧ್ಯೆ ವಚನಗಾಯನ ಕಾರ್ಯಕ್ರಮ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.