ರಿಪ್ಪನ್‌ಪೇಟೆ: ಯಾವುದೇ ಜಾತಿ, ಧರ್ಮಗಳ ಬೇಧವಿಲ್ಲದೆ ಅನ್ನ, ಅಕ್ಷರ, ಮತ್ತು ಆಶ್ರಯದಂತ ತ್ರಿವಿಧ ದಾಸೋಹವನ್ನು ನಿರಂತರವಾಗಿ ಪ್ರತಿ ವರ್ಗಕ್ಕೂ ಧಾರೆಯೆರೆದ ಮಹಾನ್ ಸಂತ ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿ. ಅವರ ಆದರ್ಶ ವ್ಯಕ್ತಿತ್ವ ಸರ್ವಕಾಲಕ್ಕೂ ಪ್ರಸ್ತುತ ಎಂದು ಸಾಗರ ನಗರಸಭೆಯ ನಿವೃತ್ತ ಸಮುದಾಯ ಸಂಘಟನಾಧಿಕಾರಿ ಎಂ.ಜೆ. ಹಬೀಬ್ ಅಭಿಪ್ರಾಯಪಟ್ಟರು.
ಪಟ್ಟಣದ ಗ್ರಾಮ ಪಂಚಾಯಿತಿ ಸಭಾ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಸಿದ್ಧಗಂಗಾ ಶ್ರೀಗಳ 118ನೇ ಜನ್ಮದಿನೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
12ನೇ ಶತಮನಾನದ ಬಸವೇಶ್ವರರ ತತ್ವಗಳ ನಿಜವಾದ ಪ್ರತಿಪಾದಕರಾಗಿದ್ದ ಸಿದ್ಧಗಂಗಾ ಶ್ರೀಗಳು, ಜನ ಸಾಮಾನ್ಯರಿಗೆ ಹತ್ತಿರವಾಗಿದ್ದರು ಎಂದರು.
‘ಕಾವಿಯನ್ನು ಬಂಡವಾಳ ಮಾಡಿಕೊಂಡು, ಸ್ವಜಾತಿ ನಿಲುವಿಗೆ ಸೀಮಿತವಾಗಿರುವ ಸ್ವಾಮೀಜಿಗಳ ನಡುವೆ, ಪೀಠದ ಗೌರವ ಹೆಚ್ಚಿಸಿದ ಸಂತ ಸಿದ್ದಗಂಗಾ ಶ್ರೀಗಳು ಭಿನ್ನವಾಗಿ ನಿಲ್ಲುತ್ತಾರೆ’ ಎಂದು ಕರ್ನಾಟಕ ನಾಟಕ ಅಕಾಡೆಮಿ ಜಿಲ್ಲಾ ಸಂಚಾಲಕ ಹಾಗೂ ರಂಗನಿರ್ದೇಶಕ ಗಣೇಶ್ ಆರ್. ಕೆಂಚನಾಲ ಹೇಳಿದರು.
ಸಿದ್ದಗಂಗಾ ಶ್ರೀಗಳ ಭಕ್ತ ವೃಂದ ಸಮಿತಿಯ ಅಧ್ಯಕ್ಷ ಕಗ್ಗಲಿ ಲಿಂಗಪ್ಪ ಅಧ್ಯಕ್ಷತೆ ವಹಿಸಿದ್ದರು. ಗ್ರಾಮ ಪಂಚಾಯತಿ ಅಧ್ಯಕ್ಷೆ ಧನಲಕ್ಷ್ಮಿ ಗಂಗಾಧರ್, ಸಮಿತಿ ಸಂಚಾಲಕ ಸತೀಶ್ ಹೆಗಡೆ, ಸೋಮಶೇಖರ್ ದೂನ, ಆರ್. ರಾಘವೇಂದ್ರ, ಜೆ.ಎಸ್. ಚಂದ್ರಪ್ಪ, ಆರ್.ಡಿ. ಶೀಲಾ, ಚಿಗುರು ಶ್ರೀಧರ್ ಮತ್ತು ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.