ADVERTISEMENT

ಶಿವಕುಮಾರ ಸ್ವಾಮೀಜಿ ಸ್ಮರಿಸಿದ ಭಕ್ತರು

ಶಿವಕುಮಾರಶ್ರೀ ಭಾವಚಿತ್ರಕ್ಕೆ ಪುಷ್ಪನಮನ, ಜ. 21 ದಾಸೋಹ ದಿನವನ್ನಾಗಿ ಘೋಷಿಸುವಂತೆ ಮನವಿ

​ಪ್ರಜಾವಾಣಿ ವಾರ್ತೆ
Published 21 ಜನವರಿ 2021, 14:15 IST
Last Updated 21 ಜನವರಿ 2021, 14:15 IST
ತ್ರಿವಿಧ ದಾಸೋಹಿ ತುಮಕೂರಿನ ಸಿದ್ಧಗಂಗಾ ಮಠದ ಶಿವಕುಮಾರ ಶ್ರೀ ಅವರ ಪುಣ್ಯಸ್ಮರಣೆಯನ್ನು ಗುರುವಾರ ಚಿತ್ರದುರ್ಗದ ಕೋಟೆ ಮುಂಭಾಗ ಭಕ್ತರು ಶ್ರದ್ಧಾಭಕ್ತಿಯಿಂದ ಆಚರಿಸಿದರು. ಶಿವಲಿಂಗಾನಂದ ಸ್ವಾಮೀಜಿ ಶ್ರೀಗಳ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. 
ತ್ರಿವಿಧ ದಾಸೋಹಿ ತುಮಕೂರಿನ ಸಿದ್ಧಗಂಗಾ ಮಠದ ಶಿವಕುಮಾರ ಶ್ರೀ ಅವರ ಪುಣ್ಯಸ್ಮರಣೆಯನ್ನು ಗುರುವಾರ ಚಿತ್ರದುರ್ಗದ ಕೋಟೆ ಮುಂಭಾಗ ಭಕ್ತರು ಶ್ರದ್ಧಾಭಕ್ತಿಯಿಂದ ಆಚರಿಸಿದರು. ಶಿವಲಿಂಗಾನಂದ ಸ್ವಾಮೀಜಿ ಶ್ರೀಗಳ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.    

ಚಿತ್ರದುರ್ಗ: ಅಸಂಖ್ಯಾತ ಭಕ್ತರ ಪಾಲಿನ ನಡೆದಾಡುವ ದೈವ, ತ್ರಿವಿಧ ದಾಸೋಹಿ ತುಮಕೂರಿನ ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿ ಅವರ ಪುಣ್ಯ ಸ್ಮರಣೆಯನ್ನು ಗುರುವಾರ ಜಿಲ್ಲೆಯ ವಿವಿಧೆಡೆ ಭಕ್ತರು ಶ್ರದ್ಧಾಭಕ್ತಿಯಿಂದ ಆಚರಿಸಿದರು.

ಕೋಟೆ ಆಟೊ ನಿಲ್ದಾಣ ಸಂಘಟನೆಯ ಪದಾಧಿಕಾರಿಗಳು ಕೋಟೆ ಮುಂಭಾಗ ಶಿವಕುಮಾರ ಶ್ರೀ ಸ್ಮರಣೋತ್ಸವ ಆಯೋಜಿಸಿದ್ದರು. ಶ್ರೀಗಳ ಭಾವಚಿತ್ರವನ್ನು ವಿವಿಧ ಪುಷ್ಪಗಳಿಂದ ಅಲಂಕರಿಸಿದ್ದರು.ಕಬೀರಾನಂದಾಶ್ರಮದ ಶಿವಲಿಂಗಾನಂದ ಸ್ವಾಮೀಜಿ ಶ್ರೀಗಳ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.

ಮಾಧ್ಯಮದೊಂದಿಗೆ ಮಾತನಾಡಿದ ಅವರು, ‘ರಚನಾತ್ಮಕ ಬದುಕನ್ನು ಶಿವಕುಮಾರ ಸ್ವಾಮೀಜಿ ಸಾಗಿಸಿದ್ದಾರೆ. ಮಠಾಧೀಶರಾಗಿದ್ದರೂ ಸಾತ್ವಿಕತೆ, ಸೌಜನ್ಯ, ಸರಳತೆ ಅವರಲ್ಲಿತ್ತು. ಜತೆಯಲ್ಲಿ ಸೇವಾ ಮನೋಭಾವ ತುಂಬಿತ್ತು. ಈ ಕಾರಣಗಳಿಂದಾಗಿ ಶ್ರೀಗಳದು ಸಾರ್ಥಕ ಮತ್ತು ಧನ್ಯತೆಯ ಬದುಕು’ ಎಂದು ಬಣ್ಣಿಸಿದರು.

ADVERTISEMENT

‘ಶ್ರೀಗಳ ಅನ್ನ ಮತ್ತು ಜ್ಞಾನ ದಾಸೋಹ ಪ್ರಚಲಿತ. ಜತೆಗೆ ಕಾಯಕ ದಾಸೋಹವನ್ನು ಉಣಬಡಿಸಿದರು. ಸಿದ್ಧಗಂಗಾ ಮಠ ಸೇರಿ ರಾಜ್ಯದ ಪ್ರತಿಷ್ಠಿತ ಮಠಗಳು ಜನರ ಬದುಕನ್ನು ಕಟ್ಟಿಕೊಡುವ ನಿಟ್ಟಿನಲ್ಲಿ ಶೈಕ್ಷಣಿಕ ಸಂಸ್ಥೆಗಳನ್ನು ನಿರ್ಮಿಸಿವೆ. ಲಕ್ಷಾಂತರ ಮಕ್ಕಳಿಗೆ ಶಿಕ್ಷಣ ಕೊಟ್ಟಂತಾದರೆ, ಮತ್ತೊಂದೆಡೆ ಬೋಧಕ-ಬೋಧಕೇತರ ವರ್ಗದ ಸಾವಿರಾರು ಸಿಬ್ಬಂದಿಗೆ ಕಾಯಕ ನೀಡಿವೆ. ಮಠಗಳು ಉತ್ತಮ ಸಮಾಜಕ್ಕಾಗಿ ಮಾಡಬೇಕಾದ ಕರ್ತವ್ಯವಿದು’ ಎಂದರು.

ನಗರಸಭೆ ಉಪಾಧ್ಯಕ್ಷೆ ಶ್ವೇತಾ ವೀರೇಶ್, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ವೀರೇಶ್, ಮುಖಂಡರಾದ ವೆಂಕಟೇಶ್, ತಿಪ್ಪಣ್ಣ ಇದ್ದರು.

ಪಂಚಾಕ್ಷರಿ ಮಂತ್ರ ಜಪ:ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಘಟಕದಿಂದ ಇಲ್ಲಿನ ನೀಲಕಂಠೇಶ್ವರಸ್ವಾಮಿ ದೇಗುಲದಲ್ಲಿ ಪಂಚಾಕ್ಷರಿ ಮಂತ್ರ ಜಪಿಸುವ ಮೂಲಕ ಶಿವಕುಮಾರ ಶ್ರೀಗಳ ಸ್ಮರಣೋತ್ಸವ ಆಚರಿಸಲಾಯಿತು.

ಇದೇ ವೇಳೆ ವೀರಶೈವ, ಲಿಂಗಾಯತ ಸೇರಿ ಒಳಪಂಗಡಗಳ ಸಮುದಾಯದ ಪದಾಧಿಕಾರಿಗಳು ಜ.21 ದಾಸೋಹ ದಿನವನ್ನಾಗಿ ಸರ್ಕಾರ ಘೋಷಿಸಬೇಕು. ಈ ಮೂಲಕ ಶ್ರೀಗಳಿಗೆ ಗೌರವ ಸಮರ್ಪಿಸಬೇಕು. ಇದನ್ನು ತ್ವರಿತವಾಗಿ ಕಾರ್ಯಗತಗೊಳಿಸಬೇಕು ಎಂದು ಒತ್ತಾಯಿಸಿದರು.

ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಕೆ.ಎಸ್.ವಿಜಯ, ಮಹಿಳಾ ಅಧ್ಯಕ್ಷೆ ಎಂ.ವಿ.ವೀಣಾ, ವೀರಶೈವ ಸಮಾಜದ ಅಧ್ಯಕ್ಷ ಜಯಣ್ಣ, ಪ್ರಧಾನ ಕಾರ್ಯದರ್ಶಿ ಪಟೇಲ್ ಶಿವಕುಮಾರ್, ಕೆಇಬಿ ಷಣ್ಮುಖಪ್ಪ, ಶಿವಸಿಂಪಿ ಸಮುದಾಯದ ಅಧ್ಯಕ್ಷ ಕೊಟ್ರೇಶ್ ಇದ್ದರು.

ವಾಟ್ಸ್ಆ್ಯಪ್‌, ಫೇಸ್‌ಬುಕ್, ಇನ್‌ಸ್ಟಗ್ರಾಮ್ ಸೇರಿ ಸಾಮಾಜಿಕ ಜಾಲತಾಣಗಳಲ್ಲೂ ಸಾವಿರಾರು ಜನರು ಉತ್ತಮ ಸಂದೇಶ ಒಳಗೊಂಡ ಶಿವಕುಮಾರ ಶ್ರೀಗಳ ಭಾವಚಿತ್ರವನ್ನು ಹಂಚಿಕೊಳ್ಳುವ ಮೂಲಕ ಸ್ವಾಮೀಜಿ ಅವರನ್ನು ಸ್ಮರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.