
ಹೊಳಲ್ಕೆರೆ: ಜ.14 ಮತ್ತು 15 ರಂದು ಪಟ್ಟಣದಲ್ಲಿ ನಡೆಯುವ ಗುರು ಸಿದ್ದರಾಮೇಶ್ವರರ 835ನೇ ಜಯಂತಿಗೆ ರಾಜ್ಯದ ನಾನಾ ಭಾಗಗಳಿಂದ ಅಂದಾಜು 5 ಲಕ್ಷ ಜನ ಭಾಗವಹಿಸಲಿದ್ದಾರೆ ಎಂದು ಪುಪ್ಪಗಿರಿ ಮಾಹಾ ಸಂಸ್ಥಾನದ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.
ಪಟ್ಟಣದ ಶಿವಮೊಗ್ಗ ರಸ್ತೆಯ ವಾಲ್ಮಿಕಿ ಭವನದ ಪಕ್ಕದ ಮೈದಾನದಲ್ಲಿ ಬುಧವಾರ ಸಭಾಮಂಟಪ ಹಾಗೂ ಪೆಂಡಾಲ್ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರೆವೇರಿಸಿ ಮಾತನಾಡಿದರು.
ಪಟ್ಟಣದಲ್ಲಿ ಗುರು ಸಿದ್ದರಾಮೇಶ್ವರರ ರಾಜ್ಯಮಟ್ಟದ ಜಯಂತಿ ನಡೆಯಲಿದ್ದು, ಧರ್ಮ ಜಾಗೃತಿ ಮೂಡಿಸಲಾಗುವುದು. ಸಮುದಾಯದ ಸಾಮಾಜಿಕ, ಅರ್ಥಿಕ, ಶೈಕ್ಷಣಿಕ ಸ್ಥಿತಿಗತಿ, ಕೃಷಿ ಕ್ಷೇತ್ರದಲ್ಲಿ ಸುಧಾರಣೆ ಕುರಿತು ಚಿಂತನ–ಮಂಥನ ಕಾರ್ಯಕ್ರಮ ನಡೆಸಲಾಗುವುದು.
ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಚಿವರು, ಸಂಸದರು, ಶಾಸಕರು, ಮಾಠಾಧೀಶರು, ಗಣ್ಯರು ಪಾಲ್ಗೊಳ್ಳಲಿದ್ದಾರೆ. ಈ ಬಾರಿ ಉತ್ತರ ಕರ್ನಾಟಕ ಭಾಗದ ಹೆಚ್ಚು ಜನ ಆಗಮಿಸಲಿದ್ದಾರೆ. ಹೊರಗಿನಿಂದ ಬರುವ ಜನರಿಗೆ ಊಟ, ವಸತಿ, ಕುಡಿಯುವ ನೀರು ಮತ್ತಿತರ ಸೌಲಭ್ಯ ಕಲ್ಪಿಸಬೇಕು. ಪಟ್ಟಣದ ಸಮುದಾಯ ಭವನ, ಶಾಲೆ, ಕಾಲೇಜು, ಹಾಸ್ಟೆಲ್ ಬಳಸಿಕೊಳ್ಳಬೇಕು. ಸಮಿತಿಗಳ ಸದಸ್ಯರು ಜವಾಬ್ದಾರಿಯಿಂದ ಕೆಲಸ ಮಾಡಬೇಕು ಎಂದರು.
‘ಗುರು ಸಿದ್ದರಾಮೇಶ್ವರರ ಜಯಂತಿ ನೊಳಂಬ ಸಮುದಾಯದ ಕಾರ್ಯಕ್ರಮವಾದರೂ, ಎಲ್ಲಾ ಸಮುದಾಯದವರು ಕೈ ಜೋಡಿಸುತ್ತಾರೆ. ಸಿದ್ದರಾಮೇಶ್ವರರ ಸಂದೇಶಗಳನ್ನು ಪಸರಿಸುವುದು, ಜನಜಾಗೃತಿ ಮೂಡಿಸುವುದು, ಸಮುದಾಯದ ಇತಿಹಾಸ, ಪರಂಪರೆಯನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವ ಕಾರ್ಯವನ್ನು ಜಯಂತಿ ಮೂಲಕ ಮಾಡಲಾಗುತ್ತಿದೆ’ ಎಂದು ಮಾಜಿ ಸಚಿವ ಮಾಧುಸ್ವಾಮಿ ತಿಳಿಸಿದರು.
ಯಳನಾಡು ಸಂಸ್ಥಾನದ ಜ್ಞಾನಪ್ರಭು ಸಿದ್ದರಾಮ ದೇಶಿಕೇಂದ್ರ ಸ್ವಾಮೀಜಿ, ಸಿದ್ದಲಿಂಗ ಮಹಾಸಂಸ್ಥಾನ ಗೊಲ್ಲರಹಳ್ಳಿ ಮಠದ ವಿದ್ಯಾವಿಭವ ಶಂಕರ ದೇಶಿಕೇಂದ್ರ ಸ್ವಾಮೀಜಿ, ವಿಧಾನ ಪರಿಷತ್ ಸದಸ್ಯ ಕೆ.ಎಸ್. ನವೀನ್, ನೊಳಂಬ ಸಂಘದ ರಾಜ್ಯ ಘಟಕದ ಅಧ್ಯಕ್ಷ ಬಿ.ಕೆ. ಚಂದ್ರಶೇಖರ್, ನಿವೃತ್ತ ಎಡಿಜಿಪಿ ಸಿದ್ರಾಮಪ್ಪ, ತರಿಕೆರೆ ಮಾಜಿ ಶಾಸಕ ಎಸ್.ಎಂ. ನಾಗರಾಜ್, ಸ್ವಾಗತಿ ಸಮಿತಿ ಅಧ್ಯಕ್ಷ ಶಶಿಧರ, ಹೊಸದುರ್ಗ ನೊಳಂಬ ಸಂಘದ ಅಧ್ಯಕ್ಷ ಮರಿದಿಮ್ಮಪ್ಪ, ಉಪಾಧ್ಯಕ್ಷ ಲೋಕೇಶ್ವರಪ್ಪ, ಕಾರ್ಯದರ್ಶಿ ಧರಣಪ್ಪ, ವೀರಶೈವ ಸಮಾಜದ ಮುಖಂಡರಾದ ಕೆ.ಎಂ. ಶಿವಕುಮಾರ್, ಶಿವಗಂಗ ಎಸ್.ಆರ್. ಗಿರೀಶ್, ಪಿ.ಆರ್.ಶಿವಕುಮಾರ್, ವಡೇರಹಳ್ಳಿ ರಮೇಶ್, ಕೃಷಿಕ ಸಮಾಜದ ಅಧ್ಯಕ್ಷ ಮಹೇಶ್ವರಪ್ಪ, ಕೆ.ಸಿ. ರಮೇಶ್, ಪಾಲೇಗೌಡ, ವಕೀಲ ಡಿ.ಜಯಣ್ಣ, ಎಸ್. ವೇದಮೂರ್ತಿ, ಪಾಲಾಕ್ಷ, ಶಿವಪುರ ಅಜ್ಜಯ್ಯ, ಗೋಪಾಲ ನಾಯ್ಕ ಇದ್ದರು.
ಅದ್ದೂರಿ ಕಾರ್ಯಕ್ರಮಕ್ಕೆ ಸಿದ್ದತೆ
ಪಟ್ಟಣದಲ್ಲಿ ಇದೇ ಮೊದಲ ಬಾರಿಗೆ ನಡೆಯುವ ರಾಜ್ಯಮಟ್ಟದ ಗುರು ಸಿದ್ದರಾಮೇಶ್ವರ ಜಯಂತಿ ಕಾರ್ಯಕ್ರಮವನ್ನು ಅದ್ದೂರಿಯಾಗಿ ನಡೆಸಲಾಗುವುದು. ಸಭಾ ವೇದಿಕೆಯಲ್ಲಿ ಅಂದಾಜು 100 ಗಣ್ಯರು ಕುಳಿತುಕೊಳ್ಳಲು ವ್ಯವಸ್ಥೆ ಮಾಡಲಾಗುವುದು. 30 ಎಕರೆ ಪ್ರದೇಶದಲ್ಲಿ ವೇದಿಕೆ ನಿರ್ಮಿಸಲಿದ್ದು 20 ಸಾವಿರ ಜನರಿಗೆ ಆಸನ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಆಚರಣ ಸಮಿತಿ ಅಧ್ಯಕ್ಷ ಶಶಿಧರ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.