ಮೊಳಕಾಲ್ಮುರು: ದಕ್ಷಿಣ ಕಾಶಿ ಪ್ರಸಿದ್ಧಿಯ ತಾಲ್ಲೂಕಿನ ನುಂಕಿಮಲೆ ಬೆಟ್ಟದಲ್ಲಿನ ಸಿದ್ದೇಶ್ವರಸ್ವಾಮಿ ರಥೋತ್ಸವ ಗುರುವಾರ ಅಪಾರ ಭಕ್ತರ ಸಮ್ಮುಖದಲ್ಲಿ ಸಂಭ್ರಮದಿಂದ ಜರುಗಿತು.
ಪ್ರತಿವರ್ಷ ವೈಶಾಖ ಮಾಸದಲ್ಲಿ ಇಲ್ಲಿ ವಾರ್ಷಿಕ ರಥೋತ್ಸವ ನಡೆಸುವುದು ವಾಡಿಕೆ. 33 ಗ್ರಾಮಗಳ ಜನರಿಗೆ ಸಿದ್ದೇಶ್ವರಸ್ವಾಮಿ ಮನೆ ದೇವರು.
ರಥೋತ್ಸವದ ಅಂಗವಾಗಿ ದೇವಸ್ಥಾನದಲ್ಲಿ ಮೇ 2ರಂದು ದೇವರಿಗೆ ಕಂಕಣ ಕಟ್ಟುವ ಮೂಲಕ ಜಾತ್ರೆಗೆ ಚಾಲನೆ ನೀಡಲಾಗಿತ್ತು. ಗುರುವಾರ ಬೆಳಿಗ್ಗೆ ದೇವಸ್ಥಾನದಲ್ಲಿ ಅಭಿಷೇಕ, ಪ್ರಸಾದ ವಿನಿಯೋಗ, ವಿಶೇಷ ಪೂಜೆ, ರಥಕ್ಕೆ ಬಲಿ ಅನ್ನ ಹಾಕುವುದು, ರಥಕ್ಕೆ ಹೂವಿನ ಅಲಂಕಾರ ನಂತರ ಸಂಜೆ ಹೂವಿನ ಹಾರಗಳ ಹರಾಜು ಪ್ರಕ್ರಿಯೆಗಳು ನಡೆದವು.
ಪಾದಗಟ್ಟೆವರೆಗೆ ರಥ ಎಳೆದ ಭಕ್ತರು ಮತ್ತೆ ದೇವಸ್ಥಾನದ ಬಳಿ ತಂದರು. ಬಾಳೆಹಣ್ಣು, ಚೂರು ಬೆಲ್ಲ, ತೆಂಗಿನಕಾಯಿಯನ್ನು ಭಕ್ತರು ಅರ್ಪಿಸಿದರು.
ಚಿತ್ರದುರ್ಗ ಜಿಲ್ಲೆ ಸೇರಿದಂತೆ ದಾವಣಗೆರೆ, ಬಳ್ಳಾರಿ, ವಿಜಯನಗರ, ಹಾಗೂ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಗಳಿಂದ ಸಹಸ್ರಾರು ಭಕ್ತರು ಭಾಗವಹಿಸಿದ್ದರು.
ಶುಕ್ರವಾರ ಸಂಜೆ ತುಪ್ಪದಮ್ಮನ ಸಿಡಿ ನಡೆಯಲಿದೆ. ಶನಿವಾರ ಸಿದ್ದುಬುಕ್ತಿ ಮೂಲಕ ರಥೋತ್ಸವಕ್ಕೆ ತೆರೆ ಬೀಳಲಿದೆ ಎಂದು ದೇವಾಲಯದ ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.