ADVERTISEMENT

‘ಸಿಂಧು ಗೋರ್ ಬಂಜಾರ’ ಸಂಶೋಧನಾ ಗ್ರಂಥ ಬಿಡುಗಡೆ

ಸಂಶೋಧಕರ ಧೈರ್ಯ, ಸ್ಥೈರ್ಯ ಮೆಚ್ಚುವಂಥದ್ದು: ಶಿವಮೂರ್ತಿ ಮುರುಘಾ ಶರಣರು

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2021, 2:31 IST
Last Updated 7 ಮಾರ್ಚ್ 2021, 2:31 IST
ಚಿತ್ರದುರ್ಗದಲ್ಲಿ ಶನಿವಾರ ಸಾಹಿತಿ ಕೆ. ಮಂಜುನಾಥ್‌ ನಾಯ್ಕ್ ಸಂಶೋಧಿತ ‘ಸಿಂಧು ಗೋರ್ ಬಂಜಾರ’ ಸಂಶೋಧನಾ ಗ್ರಂಥವನ್ನು ಶಿವಮೂರ್ತಿ ಮುರುಘಾ ಶರಣರು ಬಿಡುಗಡೆಗೊಳಿಸಿದರು. ಇತಿಹಾಸ ಸಂಶೋಧಕ ಡಾ.ಬಿ. ರಾಜಶೇಖರಪ್ಪ ಇದ್ದರು.
ಚಿತ್ರದುರ್ಗದಲ್ಲಿ ಶನಿವಾರ ಸಾಹಿತಿ ಕೆ. ಮಂಜುನಾಥ್‌ ನಾಯ್ಕ್ ಸಂಶೋಧಿತ ‘ಸಿಂಧು ಗೋರ್ ಬಂಜಾರ’ ಸಂಶೋಧನಾ ಗ್ರಂಥವನ್ನು ಶಿವಮೂರ್ತಿ ಮುರುಘಾ ಶರಣರು ಬಿಡುಗಡೆಗೊಳಿಸಿದರು. ಇತಿಹಾಸ ಸಂಶೋಧಕ ಡಾ.ಬಿ. ರಾಜಶೇಖರಪ್ಪ ಇದ್ದರು.   

ಚಿತ್ರದುರ್ಗ: ‘ಸಂಶೋಧನೆ ಕಷ್ಟದ ಕೆಲಸವಾಗಿದೆ. ಏನೇ ಎದುರಾದರೂ ಧೈರ್ಯ, ಸ್ಥೈರ್ಯದಿಂದ ಸಾಗುವ ಸಂಶೋಧಕರ ಕಾರ್ಯ ಮೆಚ್ಚಿಕೊಳ್ಳುವಂಥದ್ದು’ ಎಂದು ಶಿವಮೂರ್ತಿ ಮುರುಘಾ ಶರಣರು ಹೇಳಿದರು.

ಪತ್ರಿಕಾ ಭವನದಲ್ಲಿ ಶನಿವಾರ ಸಾಹಿತಿ ಕೆ. ಮಂಜುನಾಥ್‌ ನಾಯ್ಕ್ ಅವರ ಸಂಶೋಧಿತ ‘ಸಿಂಧು ಗೋರ್ ಬಂಜಾರ’ ಸಂಶೋಧನಾ ಗ್ರಂಥ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

‘ಈವರೆಗೂ ಅನೇಕ ಪುಸ್ತಕಗಳು ಬಿಡುಗಡೆಯಾಗಿವೆ. ಆದರೆ, ಸಂಶೋಧನಾ ಕೃತಿ ಸುಲಭದ ಮಾತಲ್ಲ. ಮಂಜುನಾಥ್ ಬಂಜಾರ ಸಮುದಾಯದ ಮಾಹಿತಿಗಾಗಿ ಅಜ್ಞಾತ
ವಾಸಿಗಳಂತೆ ಸಾವಿರಾರು ಕಿ.ಮೀ ಪ್ರಯಾಣ ಕೈಗೊಂಡು ವಿವಿಧ ರಾಜ್ಯಗಳನ್ನು ಸುತ್ತಾಡಿ, ಮಾಹಿತಿ ಸಂಗ್ರಹಿಸುವ ಕಾರ್ಯ ಮಾಡಿದ್ದಾರೆ. ನಿಜಕ್ಕೂ ಇದು ಶ್ಲಾಘನೀಯ ಕೆಲಸ’ ಎಂದರು.

ADVERTISEMENT

‘ಈ ಕೃತಿಯು ಎರಡು ಭಾಗಗಳನ್ನು ಒಳಗೊಂಡಿದೆ. ಮೊದಲ ಭಾಗದಲ್ಲಿ ಬಂಜಾರರ ಸಂಸ್ಕೃತಿ, ಬೆಳೆದು ಬಂದ ಹಾದಿ ಕುರಿತ ಅಂಶಗಳು ಅಡಕವಾಗಿವೆ. ಬಂಜಾರರ ಮೂಲ ಸಿಂಧು ನದಿಯ ಕಣಿವೆಯಲ್ಲಿದೆ ಎಂಬುದನ್ನು ದಾಖಲಿಸಿದ್ದಾರೆ. ಈ ಸಮುದಾಯದವರು ಯಾಂತ್ರಿಕ ಜೀವನ ಸಾಗಿಸುವವರು ಮಾತ್ರವಲ್ಲ. ಸಂಸ್ಕೃತಿಯ ಜತೆಗೆ ಸಾಗುವ ಜನಾಂಗವಾಗಿದೆ ಎಂಬುದನ್ನು ಸವಿಸ್ತಾರವಾಗಿ ತಿಳಿಸುವ ಪ್ರಯತ್ನ ಮಾಡಿದ್ದಾರೆ’ ಎಂದು ಹೇಳಿದರು.

ಇತಿಹಾಸ ಸಂಶೋಧಕ ಡಾ.ಬಿ. ರಾಜಶೇಖರಪ್ಪ, ‘ಓದುಗರನ್ನು ಉತ್ತಮ ರೀತಿಯಲ್ಲಿ ಓದಿಸಿಕೊಂಡು ಹೋಗುವಲ್ಲಿ ಕೃತಿ ರಚನೆಯಾಗಿದೆ. ಪ್ರಾಚೀನ ಸಾಂಸ್ಕೃತಿಕ ಹಿನ್ನೆಲೆ ಹೊಂದಿರುವ ಬಂಜಾರ ಸಮುದಾಯವನ್ನು ಚಿತ್ರಣ
ದಂತೆ ವಿಶೇಷವಾಗಿ ಕಟ್ಟಿಕೊಡುವಲ್ಲಿ ಕೃತಿಕಾರರು ಸಫಲರಾಗಿದ್ದಾರೆ’ ಎಂದು ಹೇಳಿದರು.

‘ಬಂಜಾರರ ದೇವರ ಆರಾಧನೆ
ಯೂ ವಿಶಿಷ್ಟವಾಗಿದೆ. ಸೇವಾಲಾಲ್ ಸಮುದಾಯದ ಸಾಂಸ್ಕೃತಿಕ ನಾಯಕರಾಗಿದ್ದಾರೆ. ಉತ್ತರ ಮತ್ತು ದಕ್ಷಿಣ ಭಾರತದಲ್ಲಿ ಗೋ ಸಂರಕ್ಷಣೆ ಮಾಡುತ್ತಲೇ ಕಷ್ಟಪಟ್ಟು ಜೀವನ ಸಾಗಿಸುವ ಕುರಿತು ಕೃತಿಯಲ್ಲಿ ದಾಖಲಿಸಿದ್ದಾರೆ. ನಿಜಕ್ಕೂ ವಿಶೇಷ ಸಂಶೋಧನಾ ಕೃತಿ’ ಎಂದು ಬಣ್ಣಿಸಿದರು.

ಕೃತಿಕಾರ ಕೆ. ಮಂಜುನಾಥ್‌ ನಾಯ್ಕ್, ಬಂಜಾರ ಜನಾಂಗದ ಸ್ಥಿತಿಗತಿ, ಸಂಸ್ಕಾರ, ಸಂಸ್ಕೃತಿ ಹಾಗೂ ಅವರ ವಿಭಿನ್ನ ನೆಲೆಯನ್ನು ಕುರಿತು ಹಿರಿಯರಿಂದ ಮಾಹಿತಿ ಪಡೆದು ಬಹಳಷ್ಟು ಶ್ರಮವಹಿಸಿ ಸಂಶೋಧನಾ ಗ್ರಂಥ ಹೊರತರಲಾಗಿದೆ ಎಂದು ಹೇಳಿದರು. ಚಳ್ಳಕೆರೆಯ ಮಕ್ಕಳತಜ್ಞ ಡಾ.ಚಂದ್ರನಾಯ್ಕ್, ಕುರುಡಿಹಳ್ಳಿ ಶಿವಸಾಧು ಮಹಾರಾಜ್, ಬಂಜಾರ ಗುರುಪೀಠದ ನಂದಾಮಸಂದ್ ಸೇವಾಲಾಲ್ ಸ್ವಾಮೀಜಿ, ಕಾರ್ಯಾಧ್ಯಕ್ಷ ಬಿ. ರಾಜಾನಾಯ್ಕ್, ಇಂಗಳದಾಳ್ ಗ್ರಾಮ ಪಂಚಾಯಿತಿ ಅಧ್ಯಕ್ಷ ಯು.ವೆಂಕಟೇಶ್‍ ನಾಯ್ಕ್
ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.