ಸಿರಿಗೆರೆ: ಜಲಜೀವನ್ ಮಿಷನ್ ಹಾಗೂ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ ಹಾಕಲಾಗಿರುವ ಪೈಪ್‌ಗಳಿಗೆ ನಲ್ಲಿಗಳನ್ನು ಅಳವಡಿಸಿ ಆ ಮೂಲಕವೇ ನೀರು ಸರಬರಾಜು ಮಾಡಬೇಕು ಎಂದು ಚಿತ್ರದುರ್ಗ ಜಿಲ್ಲಾ ಪಂಚಾಯಿತಿ ಸಿಇಒ ಎಸ್.ಜೆ. ಸೋಮಶೇಖರ್ ತಿಳಿಸಿದರು.
ಬುಧವಾರ ಹುಲ್ಲೂರು, ಕಡ್ಲೇಗುದ್ದು, ಬೊಮ್ಮೇನಹಳ್ಳಿ, ಕೊಳಹಾಳ್ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಆಗಿರುವ ಜಲಜೀವನ್ ಮಿಷನ್ ಕಾಮಗಾರಿಯನ್ನು ಪರಿಶೀಲಿಸಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಹುಲ್ಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುಲ್ಲೂರು ಗ್ರಾಮದಲ್ಲಿ ಜಲಜೀವನ್ ಮಿಷನ್ ಕಾಮಗಾರಿ ಪರಿವೀಕ್ಷಣೆ ನಡೆಸಿ, ಜಲ ಸಂಗ್ರಹಾಗಾರದ ಸುತ್ತಲೂ ತಂತಿಬೇಲಿ ಅಳವಡಿಸಲು ಕಾರ್ಯನಿರ್ವಾಹಕ ಎಂಜಿನಿಯರ್ ಹಾಗೂ ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್‌ಗೆ ಸೂಚನೆ ನೀಡಿದರು. ಗ್ರಾಮದ ಶಾಲೆ ಮತ್ತು ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿ ಕುಡಿಯುವ ನೀರಿನ ಹಾಗೂ ಮಕ್ಕಳ ಹಾಜರಾತಿ, ಮಧ್ಯಾಹ್ನದ ಬಿಸಿ ಊಟದ ಗುಣಮಟ್ಟ ಪರಿಶೀಲಿಸಿದರು.
ಬೊಮ್ಮೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಡ್ಲೇಗುದ್ದು ಗ್ರಾಮದ ಬಳಿ ಇರುವ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಸಮತೋಲನ ಜಲ ಸಂಗ್ರಹಗಾರದ ವೀಕ್ಷಣೆ ನಡೆಸಿದರು. ಅಪೂರ್ಣಗೊಂಡಿರುವ ಕಾಮಗಾರಿಯನ್ನು ಕೂಡಲೇ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚಿಸಿದರು.
‘ಗ್ರಾಮದ ಬಹುತೇಕ ಮನೆಗಳು, ಶಾಲೆ ಹಾಗೂ ಅಂಗನವಾಡಿಗಳಲ್ಲಿ ಜಲಜೀವನ್ ಮಿಷನ್ ಯೋಜನೆಯ ಕಾಮಗಾರಿಯು ಉತ್ತಮವಾಗಿರುವುದನ್ನು ಕಂಡು ಮೆಚ್ಚುಗೆ ಸೂಚಿಸಿದರು. ಕಡ್ಲೇಗುದ್ದು ಗ್ರಾಮದಲ್ಲಿ ದಿನದ 24 ಗಂಟೆಯೂ ಸಾರ್ವಜನಿಕರಿಗೆ ಕುಡಿಯುವ ನೀರು ಸಿಗುವಂತೆ ಕೆಲಸ ಕಾರ್ಯಗಳು ಪೂರ್ಣಗೊಂಡಿದ್ದು, ಶಾಸಕರು ಉದ್ಘಾಟನೆ ನೆರವೇರಿಸುವರು’ ಎಂದು ತಿಳಿಸಿದರು.
ಭರಮಸಾಗರದ ಸಮೀಪ ಇರುವ ಕೊಳಹಾಳ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಸವನಹಳ್ಳಿ ಗ್ರಾಮದಲ್ಲಿ ಜಲ ಜೀವನ್ ಮಿಷನ್ ಯೋಜನೆ ಕಾಮಗಾರಿ ಪರಿವೀಕ್ಷಣೆ ಮಾಡಿ, ಗ್ರಾಮದ ಎಲ್ಲ ಕಾಲೊನಿಗಳಿಗೆ ಭೇಟಿ ನೀಡಿ ಕಾಲೊನಿಯಲ್ಲಿ ನಿರ್ವಹಿಸಿರುವ ನಳ ಸಂಪರ್ಕ ಕಾಮಗಾರಿಯ ಗುಣಮಟ್ಟ ಶ್ಲಾಘಿಸಿದರು. ಸಿ.ಸಿ.ರಸ್ತೆ ಕಾಮಗಾರಿಯನ್ನು ವೀಕ್ಷಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.