ADVERTISEMENT

ಸಿಂಥೆಟಿಕ್‌ ಟ್ರಾಕ್‌ ನಿರ್ಮಾಣಕ್ಕೆ ಭರವಸೆ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2025, 5:25 IST
Last Updated 26 ನವೆಂಬರ್ 2025, 5:25 IST
ಟೇಬಲ್‌ ಟೆನ್ನಿಸ್‌ ಆಡುವ ಮೂಲಕ ಶಾಸಕ ಎಂ. ಚಂದ್ರಪ್ಪ ಸಿರಿಗೆರೆಯ ಶಾಲಾ ವಿದ್ಯಾರ್ಥಿಗಳ ಬಳಕೆಗೆ ₹ 10 ಲಕ್ಷ ಮೌಲ್ಯದ ಕ್ರೀಡಾ ಸಾಮಗ್ರಿಗಳನ್ನು ವಿತರಿಸಿದರು
ಟೇಬಲ್‌ ಟೆನ್ನಿಸ್‌ ಆಡುವ ಮೂಲಕ ಶಾಸಕ ಎಂ. ಚಂದ್ರಪ್ಪ ಸಿರಿಗೆರೆಯ ಶಾಲಾ ವಿದ್ಯಾರ್ಥಿಗಳ ಬಳಕೆಗೆ ₹ 10 ಲಕ್ಷ ಮೌಲ್ಯದ ಕ್ರೀಡಾ ಸಾಮಗ್ರಿಗಳನ್ನು ವಿತರಿಸಿದರು   

ಸಿರಿಗೆರೆ: ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯ ಆಶ್ರಯದಲ್ಲಿ ಆರಂಭವಾಗಿರುವ ತರಳಬಾಳು ಕ್ರೀಡಾ ಅಕಾಡೆಮಿಯಲ್ಲಿ ತರಬೇತಿ ಪಡೆಯುವ ಮಕ್ಕಳ ಅನುಕೂಲಕ್ಕಾಗಿ ಸಿಂಥೆಟಿಕ್‌ ಟ್ರಾಕ್‌ ನಿರ್ಮಾಣ ಮಾಡಿಕೊಡುವುದಾಗಿ ಶಾಸಕ ಎಂ. ಚಂದ್ರಪ್ಪ ಭರವಸೆ ನೀಡಿದರು.

ಶಾಸಕರ ಅನುದಾನದಲ್ಲಿ ಸ್ಥಳೀಯ ಶಾಲೆಗಳಿಗೆ ₹ 10 ಲಕ್ಷ ಮೌಲ್ಯದ ಕ್ರೀಡಾ ಸಾಮಗ್ರಿಗಳ ಕೊಡುಗೆ ನೀಡಲು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

ಹಿಂದೆ ಒಲಿಂಪಿಕ್ಸ್‌ ಕ್ರೀಡೆಗಳು ನಡೆದಾಗ ಚೀನಾ ಮತ್ತು ಜಪಾನ್‌ ಅತ್ಯಧಿಕ ಪದಕಗಳನ್ನು ಗಳಿಸುತ್ತಿದ್ದವು. ಆದರೆ, ಕೇಂದ್ರ ಸರ್ಕಾರ ಕ್ರೀಡೆಗೆ ನೀಡುತ್ತಿರುವ ನೆರವಿನಿಂದ ನಮ್ಮ ದೇಶದ ಕ್ರೀಡಾಪಟುಗಳು ಸಹ ಉನ್ನತ ಸಾಧನೆಯನ್ನು ಮಾಡುತ್ತಿದ್ದಾರೆ ಎಂದರು.

ADVERTISEMENT

ಜಗತ್ತಿನಲ್ಲಿ ಕ್ರೀಡಾಪಟುಗಳಿಗೆ ಗೌರವದ ಸ್ಥಾನವಿದೆ. ಈಗಿನ ವಿದ್ಯಾರ್ಥಿಗಳು ತಮ್ಮ ಪಠ್ಯದ ಜೊತೆಗೆ ಕ್ರೀಡೆಗೂ ಗಮನ ನೀಡಬೇಕು. ಅದರಿಂದ ಬೌದ್ಧಿಕ, ದೈಹಿಕ ಶಕ್ತಿಯೂ ಬೆಳೆಯುತ್ತದೆ ಎಂದು ತಿಳಿಸಿದರು.

ಕ್ರೀಡೆ ಶಿಕ್ಷಣದ ಅವಿಭಾಜ್ಯ ಅಂಗ. ಜನಸಂಖ್ಯೆಯಲ್ಲಿ ಭಾರತ ಮೊದಲ ಸ್ಥಾನದಲ್ಲಿದ್ದರೂ ಕ್ರೀಡಾ ಕ್ಷೇತ್ರದ ಸಾಧನೆ ನಿರಾಶಾದಾಯಕವಾಗಿದೆ. ಶಾಸಕ ಎಂ. ಚಂದ್ರಪ್ಪ ಪ್ರಗತಿಪರ ಕಾರ್ಯಗಳಿಗೆ ಹೆಚ್ಚು ಗಮನ ನೀಡುತ್ತಿದ್ದು, ಅದರ ಭಾಗವಾಗಿ ₹ 10 ಲಕ್ಷವನ್ನು ಕ್ರೀಡೆಗಾಗಿ ನೀಡುತ್ತಿದ್ದಾರೆ ಎಂದು ಪ್ರಾದೇಶಿಕ ಅಧಿಕಾರಿ ಕೆ.ಇ. ಬಸವರಾಜಪ್ಪ ಪ್ರಶಂಸಿಸಿದರು.

ಅಧ್ಯಕ್ಷತೆ ವಹಿಸಿದ್ದ ಆಡಳಿತಾಧಿಕಾರಿ ಎಚ್.ವಿ. ವಾಮದೇವಪ್ಪ, ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಯೇ ಶಿಕ್ಷಣದ ಗುರಿ. ದೈಹಿಕ, ಶೈಕ್ಷಣಿಕ, ಭಾವನಾತ್ಮಕ ಮತ್ತು ವೈಜ್ಞಾನಿಕ ವಿಚಾರಗಳನ್ನು ಶಿಕ್ಷಣ ಮೂಡಿಸುತ್ತದೆ. ಕ್ರೀಡೆ, ಶಿಕ್ಷಣ, ಸಾಹಿತ್ಯ, ಸಂಗೀತ, ವಿಜ್ಞಾನ ಹೀಗೆ ತಮ್ಮ ಆಸಕ್ತಿ ಇರುವ ವಿಭಾಗದಲ್ಲಿ ವಿದ್ಯಾರ್ಥಿಗಳು ಸಾಧನೆ ಮಾಡುವಂತಾಗಲಿ ಎಂದು ಹಾರೈಸಿದರು.

ರಾಷ್ಟ್ರಮಟ್ಟದ ಅತ್ಲೆಟಿಕ್‌ ಚಾಂಪಿಯನ್‌ಷಿಪ್‌ನಲ್ಲಿ ಭಾಗವಹಿಸಿರುವ ಬಿ.ಎಲ್.ಆರ್.‌ ಪ್ರೌಢಶಾಲೆಯ ವಿದ್ಯಾರ್ಥಿ ಅಭಿಗೆ ಶಾಸಕರು ₹ 5000 ನಗದು ಬಹುಮಾನ ನೀಡಿದರು. 

ಶಾಲಾ ಮುಖ್ಯಸ್ಥರಾದ ಸಂತೋಷ್‌ ಕುಮಾರ್‌, ಸೋಮಶೇಖರ್‌, ಎಸ್.‌ ದಿಲೀಪ್‌, ಎಂ.ಎನ್.‌ ಶಾಂತಾ, ಬಿಜೆಪಿಯ ಕೆ.ಬಿ. ಮೋಹನ್‌, ಎಸ್.‌ಎಲ್.‌ ಪಂಚಾಕ್ಷರಿ, ಹಳವುದರದ ತಿಪ್ಪೇಸ್ವಾಮಿ ಉಪಸ್ಥಿತರಿದ್ದರು.

ದೈಹಿಕ ಶಿಕ್ಷಕ ಎಚ್.ವಿ. ನವೀನ್‌ ಕುಮಾರ್‌ ಸ್ವಾಗತಿಸಿದರು. ಶಿಕ್ಷಕ ಯು. ಚಂದ್ರಪ್ಪ ವಂದಿಸಿದರು.

ಸಾಂಕೇತಿಕವಾಗಿ ಕ್ರೀಡಾ ಸಾಮಗ್ರಿಗಳನ್ನು ಪಡೆದುಕೊಂಡ ಶಾಲಾ ವಿದ್ಯಾರ್ಥಿನಿಯರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.