ADVERTISEMENT

ಸಿರಿಗೆರೆ | ಜಾತಿ ಸಮೀಕ್ಷೆಯಲ್ಲಿ ಮಾದಿಗ ಎಂದೇ ಬರೆಸಿ: ಬಿ.ಪಿ.ಪ್ರಕಾಶ ಮೂರ್ತಿ

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2025, 13:01 IST
Last Updated 7 ಏಪ್ರಿಲ್ 2025, 13:01 IST
ಒಳಮೀಸಲಾತಿ ಕುರಿತು ಚಿಂತನೆ ನಡೆಸಲು ಭರಮಸಾಗರಲ್ಲಿ ನಡೆದ ಸಭೆಯಲ್ಲಿ ಪ್ರಕಾಶ್‌ ಮೂರ್ತಿ ಒಳಮೀಸಲಾತಿಯ ವಿವರಗಳನ್ನು ವಿವರಿಸಿದರು 
ಒಳಮೀಸಲಾತಿ ಕುರಿತು ಚಿಂತನೆ ನಡೆಸಲು ಭರಮಸಾಗರಲ್ಲಿ ನಡೆದ ಸಭೆಯಲ್ಲಿ ಪ್ರಕಾಶ್‌ ಮೂರ್ತಿ ಒಳಮೀಸಲಾತಿಯ ವಿವರಗಳನ್ನು ವಿವರಿಸಿದರು    

ಸಿರಿಗೆರೆ: ‘ಒಳ ಮೀಸಲಾತಿಯ ನಿಖರ ಅಂಕಿ– ಅಂಶಗಳಿಗಾಗಿ ರಾಜ್ಯ ಸರ್ಕಾರವು ದತ್ತಾಂಶ ಸಂಗ್ರಹಿಸಲು ಜಾತಿ ಸಮೀಕ್ಷೆ ನಡೆಸುತ್ತಿದೆ. ಅದರಲ್ಲಿ ಆದಿ ಕರ್ನಾಟಕ, ಆದಿ ದ್ರಾವಿಡ ಎನ್ನುವ ಭಿನ್ನತೆ ಬಿಟ್ಟು ಸಮುದಾಯದ ಎಲ್ಲರೂ ಮಾದಿಗ ಎಂದೇ ಬರೆಯಿಸಬೇಕು’ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಿ.ಪಿ.ಪ್ರಕಾಶ ಮೂರ್ತಿ ಹೇಳಿದರು.

ಭರಮಸಾಗರದಲ್ಲಿ ಭಾನುವಾರ ನಡೆದ ಒಳಮೀಸಲಾತಿ ಹೋರಾಟದ ಸಮಾನ ಮನಸ್ಕರ ಸಮಾಲೋಚನಾ ಸಭೆಯಲ್ಲಿ ಅವರು ‌ಮಾತನಾಡಿದರು.

‘ನಿರಂತರ 35 ವರ್ಷಗಳ ಒಳಮೀಸಲಾತಿ ಹೋರಾಟವು ಈಗ ತಾರ್ಕಿಕ ಅಂತ್ಯಕ್ಕೆ ಬಂದಿದ್ದು, ಸರ್ಕಾರ ನಡೆಸುತ್ತಿರುವ ಜಾತಿ ಸಮೀಕ್ಷೆಯಲ್ಲಿ ಸಮುದಾಯದವರು ತುಂಬಾ ಜಾಗೃತಿಯಿಂದ ಮಾಹಿತಿ ದಾಖಲಿಸಬೇಕಿದೆ’ ಎಂದು ಹೇಳಿದರು.

ADVERTISEMENT

ಬ್ಲಾಕ್ ಕಾಂಗ್ರೆಸ್ ತಾಲ್ಲೂಕು ಘಟಕದ ಮಾಜಿ ಅಧ್ಯಕ್ಷ ದುರ್ಗೇಶ್ ಪೂಜಾರ್ ಮಾತನಾಡಿ, ‘ಸರ್ಕಾರ ರಾಜ್ಯದಲ್ಲಿ ಒಳಮೀಸಲಾತಿ ಜಾರಿಗೊಳಿಸುವ ಸಂಬಂಧ ಜಾತಿ ಗಣತಿ ನಡೆಸುತ್ತಿದ್ದು, ಈ ಗಣತಿಯಲ್ಲಿ ಮಾದಿಗ ಎಂಬುದಾಗಿ ಬರೆಯಿಸಲು ಪ್ರತಿ ಹಳ್ಳಿಗಳಲ್ಲಿ ಇರುವಂತಹ ವಿದ್ಯಾವಂತರು, ಪ್ರಜ್ಞಾವಂತರು ಹಟ್ಟಿ ಮತ್ತು ಕೇರಿಗಳಲ್ಲಿ ಸಂಚರಿಸಿ ಅರಿವು ಮೂಡಿಸುವ ಕೆಲಸ ಮಾಡಬೇಕಿದೆ’ ಎಂದು ಸಲಹೆ ನೀಡಿದರು.

ಮಾದಿಗ ಒಳಮೀಸಲಾತಿ ಹೋರಾಟ ಸಮಿತಿ ಚಿತ್ರದುರ್ಗ ಜಿಲ್ಲಾ ಘಟಕದ ಅಧ್ಯಕ್ಷ ಕುಮಾರಸ್ವಾಮಿ, ನಿವೃತ್ತ ಶಿಕ್ಷಕ ಕರಿಯಪ್ಪ, ನಿವೃತ್ತ ಪಶು ಅಧಿಕಾರಿ ನಿಂಗಹನುಮಂತಪ್ಪ, ಕೃಷ್ಣಮೂರ್ತಿ, ಶಿವಣ್ಣ ಗೊಲ್ಲರಹಳ್ಳಿ, ರುದ್ರೇಶ್ ಕೆ, ವೀರಬಸಪ್ಪ, ರಾಜು ಸೀಗೇಹಳ್ಳಿ, ಕೋಟೆಪ್ಪ ಉಪಸ್ಥಿತರಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.