
ಚಿತ್ರದುರ್ಗ: ನಗರದ ಎಸ್‌ಜೆಎಂ ಎಂಜಿನಿಯರಿಂಗ್ ಕಾಲೇಜು ಮುಂಭಾಗದ ಹಳೇ ರಾಷ್ಟ್ರೀಯ ಹೆದ್ದಾರಿ ದಾಟಲು ಪರದಾಡುತ್ತಿದ್ದ ವಿದ್ಯಾರ್ಥಿಗಳ ಸಂಕಷ್ಟಕ್ಕೆ ಈಗ ತೆರೆಬಿದ್ದಿದೆ. ಕಾಲೇಜಿನ ಮುಂದೆ ಹೊಸದಾಗಿ ಸ್ಕೈವಾಕ್ ತಲೆ ಎತ್ತಿದ್ದು ವಿದ್ಯಾರ್ಥಿಗಳ ಕಾಂಪೌಂಡ್ ದಾಟುವ ಸಾಹಸ ಅಂತ್ಯಗೊಳ್ಳಲಿದೆ.
ನಗರ, ಗ್ರಾಮೀಣ ಭಾಗದಿಂದ ಬರುವ ವಿದ್ಯಾರ್ಥಿಗಳು ಎಸ್‌ಜೆಎಂ ಸರ್ಕಲ್‌ನಿಂದ ಕಾಲೇಜಿಗೆ ತೆರಳಲು ಹೆದ್ದಾರಿಯಲ್ಲಿ ಬಂದು ಕಾಂಪೌಂಡ್ ದಾಟುತ್ತಿದ್ದರು. ಇದರಿಂದ ಅವರ ಪ್ರಾಣ ಅಪಾಯದಲ್ಲಿತ್ತು. ವಿದ್ಯಾರ್ಥಿನಿಯರು ಕೂಡ ಕಾಂಪೌಂಡ್ ದಾಟುವ ದೃಶ್ಯಗಳು ಸಾಮಾನ್ಯವಾಗಿದ್ದರು. ಈ ಕುರಿತು ‘ಪ್ರಜಾವಾಣಿ’ ಪತ್ರಿಕೆ ಈಚೆಗೆ ‘ಇಲ್ಲದ ಸ್ಕೈವಾಕ್; ಹೆದ್ದಾರಿ ದಾಟುವವರಿಗೆ ಅಪಾಯ’ ಶೀರ್ಷಿಕೆ ಅಡಿ ವಿಸ್ತ್ರುತ ವರದಿ ಪ್ರಕಟಿಸಿತ್ತು.
ವರದಿ ಪ್ರಕಟವಾದ ಎರಡೇ ದಿನದಲ್ಲಿ ಲೋಕೋಪಯೋಗಿ ಇಲಾಖೆ ಸ್ಕೈವಾಕ್ ಕಾಮಗಾರಿ ಆರಂಭಿಸಿತ್ತು. ಇದೀಗ ಕಾಮಗಾರಿ ಪೂರ್ಣಗೊಂಡಿದ್ದು ವಿದ್ಯಾರ್ಥಿಗಳಿಗೆ ಇದರಿಂದ ಅನುಕೂಲವಾಗಲಿದೆ. ಇನ್ನು ಮುಂದೆ ಸ್ಕೈವಾಕ್ ಹತ್ತಿ ಕೆಲವೇ ನಿಮಿಷಗಳಲ್ಲಿ ಕಾಲೇಜು ಸೇರಲಿದ್ದಾರೆ. ಮೊದಲು ಹೆದ್ದಾರಿಯ ಸರ್ವೀಸ್ ರಸ್ತೆಯ ಮೂಲಕ ಕಾಲೇಜಿಗೆ ಬರಲು 1 ಕಿ.ಮೀ.ಯಷ್ಟು ಸುತ್ತಾಟವಾಗುತ್ತಿತ್ತು.
ಹೆದ್ದಾರಿಯಲ್ಲಿ ಹಾಕಲಾಗಿದ್ದ ಬೇಲಿ ದಾಟುವ ಪ್ರಯತ್ನದಲ್ಲಿ ವಿದ್ಯಾರ್ಥಿಗಳು ಬಟ್ಟೆ ಹರಿದುಕೊಳ್ಳುತ್ತಿದ್ದರು. ಜೊತೆಗೆ ಹೆದ್ದಾರಿಯಲ್ಲಿ ವೇಗವಾಗಿ ವಾಹನ ಓಡಾಡುವ ಕಾರಣ ಅವರ ಪ್ರಾಣಕ್ಕೂ ಸಂಚಾಕಾರ ಎದುರಾಗಿತ್ತು.
‘ಪ್ರಜಾವಾಣಿ ಪತ್ರಿಕೆಗೆ ನಾವು ಧನ್ಯವಾದ ಹೇಳಲೇಬೇಕು. ವಿದ್ಯಾರ್ಥಿಗಳ ಸಂಕಷ್ಟ ಕುರಿತು ಹಲವು ಬಾರಿ ಪತ್ರಿಕೆಯಲ್ಲಿ ವರದಿ ಪ್ರಕಟಿಸಿದ್ದರು. ಬೆನ್ನುಹತ್ತಿ ಮತ್ತೆ ಮತ್ತೆ ವರದಿ ಬರೆದ ಕಾರಣಕ್ಕೆ ಕಾಮಗಾರಿಯಾಗಿದೆ. ಅಧಿಕಾರಿಗಳು ಕಡೆಗೂ ಎಚ್ಚೆತ್ತುಕೊಂಡು ಬಲುಬೇಗಕೆ ಕೆಲಸ ಮುಗಿಸಿದ್ದಾರೆ’ ಎಂದು ಎಸ್‌ಜೆಎಂಐಟಿ ಸಿಬ್ಬಂದಿ ವಿ.ಎಸ್. ರವಿಪ್ರಸಾದ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.