ಚಿತ್ರದುರ್ಗದಲ್ಲಿ ಬಂಧಿತಳಾದ ಆರೋಪಿ ಸುಚನಾ ಸೇಠ್ ಹಾಜರುಪಡಿಸಲು ಉತ್ತರ ಗೋವಾದ ಮಾಪುಸಾ ನ್ಯಾಯಾಲಯಕ್ಕೆ ಮಂಗಳವಾರ ಕರೆತಂದ ಪೊಲೀಸರು
– ಪಿಟಿಐ ಚಿತ್ರ
ಚಿತ್ರದುರ್ಗ: ನಾಲ್ಕು ವರ್ಷ ವಯಸ್ಸಿನ ಪುತ್ರನನ್ನೇ ಕೊಲೆಗೈದು ಮೃತದೇಹವನ್ನು ಸೂಟ್‌ಕೇಸ್‌ಗೆ ತುಂಬಿ ಕಾರಿನಲ್ಲಿ ಗೋವಾದಿಂದ ಬೆಂಗಳೂರಿನತ್ತ ಸಾಗಿಸುತ್ತಿದ್ದ ‘ಮೈಂಡ್‌ಫುಲ್ ಎ.ಐ ಲ್ಯಾಬ್’ ಹೆಸರಿನ ನವೋದ್ಯಮ ಕಂಪನಿಯ ಮಹಿಳಾ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ಸುಚನಾ ಸೇಠ್ (39) ಎಂಬವರನ್ನು ಐಮಂಗಲ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಗೋವಾ ಪೊಲೀಸರ ಸೂಚನೆಯ ಮೇರೆಗೆ ಕಾರಿನ ಚಾಲಕ ಆರೋಪಿಯನ್ನು ಕರ್ನಾಟಕ ಪೊಲೀಸರಿಗೆ ಹಿಡಿದುಕೊಟ್ಟಿದ್ದಾರೆ. ಆರೋಪಿಯನ್ನು ವಶಕ್ಕೆ ಪಡೆದ ಪೊಲೀಸರು ಹೆಚ್ಚಿನ ವಿಚಾರಣೆಗೆ ಗೋವಾಕ್ಕೆ ಕರೆದೊಯ್ದಿದ್ದಾರೆ. ಆರೋಪಿಯ ಮಗನ ಚಿನ್ಮಯ್ (4) ಮೃತದೇಹವನ್ನು ಹಿರಿಯೂರು ಸಾರ್ವಜನಿಕ ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಲಾಗಿದೆ.
ಕೃತಕ ಬುದ್ದಿಮತ್ತೆಗೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿರುವ ‘ಮೈಂಡ್‌ಫುಲ್ ಎ.ಐ ಲ್ಯಾಬ್’ನ ಸಹಸಂಸ್ಥಾಪಕಿ ಸುಚನಾ ಸೇಠ್ ವಾರಾಂತ್ಯದಲ್ಲಿ ಗೋವಾಕ್ಕೆ ತೆರಳಿದ್ದರು. ಉತ್ತರ ಗೋವಾದ ಹೋಟೆಲ್‌ವೊಂದರ ಕೊಠಡಿಯನ್ನು ಜ. 6ರಂದು ಬಾಡಿಗೆ ಪಡೆದು ಪುತ್ರನೊಂದಿಗೆ ತಂಗಿದ್ದರು. ಜ.8ರಂದು ಕೊಠಡಿ ತೆರವುಗೊಳಿಸಿದ ಸುಚನಾ, ಬೆಂಗಳೂರಿಗೆ ಮರಳಲು ಟ್ಯಾಕ್ಸಿ ಒದಗಿಸುವಂತೆ ಹೋಟೆಲ್ ಸಿಬ್ಬಂದಿಗೆ ಸೂಚಿಸಿದ್ದರು. ಕ್ಯಾಬ್ ಬದಲು ವಿಮಾನ ಸೂಕ್ತ ಆಯ್ಕೆ ಎಂಬ ಸಲಹೆಯನ್ನು ನಿರಾಕರಿಸಿದ ಆರೋಪಿ, ಬಾಡಿಗೆ ಕಾರ್‌ನಲ್ಲಿ ಸೋಮವಾರ ನಸುಕಿನಲ್ಲಿ ಪ್ರಯಾಣ ಬೆಳೆಸಿದ್ದರು.
ಕೊಠಡಿ ಸ್ವಚ್ಛತೆಗೆ ತೆರಳಿದ್ದ ಹೋಟೆಲ್ ಸಿಬ್ಬಂದಿಗೆ ರಕ್ತದ ಕಲೆಗಳಿರುವುದು ಗಮನಕ್ಕೆ ಬಂದಿತ್ತು. ಅನುಮಾನಗೊಂಡ ಅವರು ತಕ್ಷಣ ಕಲಂಗೂಟ್ ಠಾಣೆಯ ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಧಾವಿಸಿದ ಪೊಲೀಸರು ಕೊಠಡಿ, ಸಿ.ಸಿ. ಟಿವಿ ಪರಿಶೀಲಿಸಿದಾಗ ಬಾಲಕ ಕೊಲೆಯಾಗಿರುವ ಸುಳಿವು ಲಭ್ಯವಾಗಿತ್ತು. ಸುಚನಾ ಬಾಡಿಗೆಗೆ ಪಡೆದಿದ್ದ ಕಾರಿನ ಚಾಲಕನಿಗೆ ದೂರವಾಣಿ ಕರೆ ಮಾಡಿದ ಪೊಲೀಸರು ಘಟನೆ ಹಾಗೂ ಮಹಿಳೆಯ ಅನುಮಾನಾಸ್ಪದ ವರ್ತನೆಯ ಬಗ್ಗೆ ಕೊಂಕಣಿಯಲ್ಲಿ ವಿವರಿಸಿದ್ದರು. ಸಮೀಪದ ಠಾಣೆಯ ಪೊಲೀಸರಿಗೆ ಮಹಿಳೆಯನ್ನು ಒಪ್ಪಿಸುವಂತೆ ಸೂಚನೆ ನೀಡಿದ್ದರು.
ಕ್ಯಾಬ್ ಚಾಲಕನಿಗೆ ಈ ಸೂಚನೆ ದೊರೆತಾಗ ಅವರ ಕಾರ್ ರಾಷ್ಟ್ರೀಯ ಹೆದ್ದಾರಿ– 48ರ ಚಿತ್ರದುರ್ಗ – ಹಿರಿಯೂರು ಮಧ್ಯೆ ಸಾಗುತ್ತಿತ್ತು. ಹಿರಿಯೂರು ತಾಲ್ಲೂಕಿನ ಐಮಂಗಲ ಟೋಲ್ ಸಮೀಪದ ಹೆದ್ದಾರಿ ಬದಿಯಲ್ಲಿದ್ದ ಠಾಣೆಗೆ ನೇರವಾಗಿ ಕಾರು ಕೊಂಡೊಯ್ದ ಚಾಲಕ, ಪೊಲೀಸರ ಸಮ್ಮುಖದಲ್ಲಿ ಡಿಕ್ಕಿ ಪರಿಶೀಲಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ ಎಂದು ಮೂಲಗಳು ಮಾಹಿತಿ ನೀಡಿವೆ.
‘ಗೋವಾ ಪೊಲೀಸರ ಮಾಹಿತಿ ಮೇರೆಗೆ ಐಮಂಗಲ ಠಾಣೆಯ ಪೊಲೀಸರು ಸೋಮವಾರ ಕಾರೊಂದನ್ನು ತಪಾಸಣೆ ನಡೆಸಿದ್ದರು. ಕಾರಿನ ಲಗೇಜ್ ಬ್ಯಾಗಿನಲ್ಲಿ ನಾಲ್ಕು ವರ್ಷದ ಬಾಲಕನ ಮೃತದೇಹ ಪತ್ತೆಯಾಗಿತ್ತು. ತಕ್ಷಣ ಮಹಿಳೆಯನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಲಾಯಿತು. ಬಾಲಕನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ಸಾಗಿಸಿದ್ದು, ಆರೋಪಿಯನ್ನು ಗೋವಾ ಪೊಲೀಸರಿಗೆ ಹಸ್ತಾಂತರಿಸಲಾಗಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದ್ರ ಕುಮಾರ್ ಮೀನಾ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.
ಕತ್ತು ಹಿಸುಕಿ ಕೊಲೆ ಸಾಧ್ಯತೆ:
ಹೋಟೆಲ್ ಕೊಠಡಿಯಲ್ಲಿ ಕತ್ತು ಹಿಸುಕಿ ಪುತ್ರನನ್ನು ಕೊಲೆ ಮಾಡಿರುವ ಸುಚನಾ, ನಂತರ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಕೈ ಕೊಯ್ದುಕೊಳ್ಳಲು ಪ್ರಯತ್ನಿಸಿದಾಗ ರಕ್ತ ಕೊಠಡಿಯಲ್ಲಿ ಬಿದ್ದಿದೆ. ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ಬದಲಿಸಿದ ಆರೋಪಿ, ಬಾಲಕನ ಮೃತದೇಹವನ್ನು ಸೂಟ್‌ಕೇಸ್‌ಗೆ ತುಂಬಿದ್ದಾಳೆ.
‘ಬಾಲಕನ ಮೃತದೇಹದಲ್ಲಿ ರಕ್ತದ ಕಲೆ ಪತ್ತೆಯಾಗಿಲ್ಲ. ಎದೆಯ ಭಾಗ ಕಪ್ಪಾಗಿದ್ದು, ಕತ್ತು ಹಿಸುಕಿ ಕೊಲೆ ಮಾಡಿದ ಸಾಧ್ಯತೆ ಇದೆ ಎಂಬುದಾಗಿ ವೈದ್ಯರು ಪ್ರಾಥಮಿಕ ಮಾಹಿತಿ ನೀಡಿದ್ದಾರೆ. ಮಹಿಳೆಯ ಕೈಯಲ್ಲಿದ್ದ ಆಳವಾದ ಗಾಯದ ಕುರಿತು ಪ್ರಶ್ನಿಸಿದಾಗ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿದ್ದಾಗಿ ಮಾಹಿತಿ ನೀಡಿದ್ದಾಳೆ. ಗೋವಾ ಪೊಲೀಸರು ತನಿಖೆ ಮುಂದುವರಿಸಿದ್ದಾರೆ’ ಎಂದು ಐಮಂಗಲ ಠಾಣೆಯ ಪೊಲೀಸರು ಹೇಳಿದ್ದಾರೆ.
ದಾಂಪತ್ಯದಲ್ಲಿ ಬಿರುಕು:
ಭೌತ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವೀಧರೆಯಾಗಿರುವ ಕೋಲ್ಕತ್ತಾ ಮೂಲದವರು ಎನ್ನಲಾದ ಸುಚನಾ ಸೇಠ್, 2008ರಲ್ಲಿ ಬೆಂಗಳೂರಿನ ಖಾಸಗಿ ಕಂಪೆನಿಯಲ್ಲಿ ಉದ್ಯೋಗಕ್ಕೆ ಸೇರಿದ್ದರು. 2010ರಲ್ಲಿ ವೆಂಕಟರಮಣ್ ಎಂಬವರನ್ನು ವಿವಾಹವಾಗಿದ್ದರು. ದಂಪತಿಗೆ 2019ರಲ್ಲಿ ಪುತ್ರ ಚಿನ್ಮಯ್ ಜನಿಸಿದ್ದ. ಅದಾಗಲೇ ದಾಂಪತ್ಯದಲ್ಲಿ ಬಿರುಕು ಮೂಡಿದ್ದರಿಂದ 2020ರಲ್ಲಿ ವಿಚ್ಛೇದನಕ್ಕೆ ನ್ಯಾಯಾಲಯದ ಮೆಟ್ಟಿಲೇರಿದ್ದರು. ಪ್ರತಿ ಭಾನುವಾರ ಪುತ್ರನೊಂದಿಗೆ ಮಾತನಾಡಲು ಪತಿಗೆ ನ್ಯಾಯಾಲಯ ಅವಕಾಶ ಕಲ್ಪಿಸಿತ್ತು. ಇದು ಸುಚನಾಗೆ ಇಷ್ಟವಿರಲಿಲ್ಲ ಎಂದು ಮೂಲಗಳು ಮಾಹಿತಿ ನೀಡಿವೆ.
‘ಇಂಡೊನೇಷ್ಯದ ಜಕಾರ್ತಾದಲ್ಲಿರುವ ಪತಿ ವೆಂಕಟರಮಣ್ ಅವರಿಗೆ ಗೋವಾ ಪೊಲೀಸರು ಘಟನೆ ಕುರಿತು ಮಾಹಿತಿ ನೀಡಿದ್ದಾರೆ. ಅವರು ಹಿರಿಯೂರಿಗೆ ಬಂದ ಬಳಿಕ ಬಾಲಕನ ಮರಣೋತ್ತರ ಪರೀಕ್ಷೆ ನಡೆಯಲಿದೆ’ ಎಂದು ಚಿತ್ರದುರ್ಗ ಪೊಲೀಸರು ತಿಳಿಸಿದ್ದಾರೆ.
ಸುಳ್ಳು ಮಾಹಿತಿ ನೀಡಿದ್ದ ಆರೋಪಿ:
ಹೋಟೆಲ್ ಕೊಠಡಿಯಲ್ಲಿ ರಕ್ತದ ಕಲೆಗಳನ್ನು ಪರಿಶೀಲಿಸಿದ ಗೋವಾ ಪೊಲೀಸರು, ಸಿಸಿಟಿವಿ ಕ್ಯಾಮೆರಾ ದೃಶ್ಯಗಳನ್ನು ಪರಿಶೀಲಿಸಿದ್ದರು. ಪುತ್ರನೊಂದಿಗೆ ಹೋಟೆಲ್‌ಗೆ ಬಂದಿದ್ದ ಮಹಿಳೆ ತೆರಳುವಾಗ ಏಕಾಂಗಿಯಾಗಿ ಇದ್ದದ್ದು ಗಮನಕ್ಕೆ ಬಂದಿತ್ತು. ಜೊತೆಗೆ ದೊಡ್ಡ ಟ್ರಾಲಿ ಸೂಟ್‌ಕೇಸ್ ಬ್ಯಾಗ್ ಅನುಮಾನ ಮೂಡಿಸಿತ್ತು. ಮಹಿಳೆಯನ್ನು ದೂರವಾಣಿ ಮೂಲಕ ಸಂಪರ್ಕಿಸಿದ ಪೊಲೀಸರು ಬಾಲಕನ ಬಗ್ಗೆ ವಿಚಾರಿಸಿದ್ದರು.
ಮಡಗಾಂವ್‌ನ ಸ್ನೇಹಿತರ ಮನೆಯಲ್ಲಿ ಪುತ್ರನನ್ನು ಬಿಟ್ಟು ಬಂದಿದ್ದಾಗಿ ಮಹಿಳೆ ವಿಳಾಸ ನೀಡಿದ್ದರು. ಕಾರ್ಯಪ್ರವೃತ್ತರಾದ ಪೊಲೀಸರು ಪರಿಶೀಲಿಸಿದಾಗ ಸುಳ್ಳು ವಿಳಾಸ ನೀಡಿದ್ದು ಖಚಿತವಾಗಿತ್ತು. ಕಾರು ಚಾಲಕನ ಮೊಬೈಲ್ ಫೋನ್‌ಗೆ ಕರೆ ಮಾಡಿದ ಗೋವಾ ಪೊಲೀಸರು ಮಹಿಳೆಯನ್ನು ಪೊಲೀಸರಿಗೆ ಒಪ್ಪಿಸುವಂತೆ ಸೂಚಿಸಿದ್ದರು ಎಂದು ಮೂಲಗಳು ವಿವರಿಸಿವೆ.
ಪ್ರತಿಭಾವಂತ ಮಹಿಳೆಯರ ಪಟ್ಟಿಯಲ್ಲಿ ಹೆಸರು:
ಕೃತಕ ಬುದ್ದಿಮತ್ತೆಗೆ ಸಂಬಂಧಿಸಿದಂತೆ ವಿಶ್ವದ 100 ಪ್ರತಿಭಾವಂತ ಮಹಿಳೆಯರ ಪಟ್ಟಿಯಲ್ಲಿ ತನಗೂ ಸ್ಥಾನ ಸಿಕ್ಕಿದೆ ಎಂಬುದಾಗಿ ಸುಚನಾ, ಲಿಂಕ್ಡ್ ಇನ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. 2021ರಲ್ಲಿ ಪ್ರಕಟವಾದ ಪಟ್ಟಿಯನ್ನು ಹಂಚಿಕೊಂಡ ಸುಚನಾ, ವಿದೇಶದಲ್ಲಿ ಕೆಲಸ ಮಾಡಿದ ಅನುಭವ ಹೊಂದಿರುವುದಾಗಿ ಉಲ್ಲೇಖಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.