ADVERTISEMENT

ಚಿತ್ರದುರ್ಗ ಜಿಲ್ಲೆಯ 89,862 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ

​ಪ್ರಜಾವಾಣಿ ವಾರ್ತೆ
Published 8 ಜುಲೈ 2020, 14:21 IST
Last Updated 8 ಜುಲೈ 2020, 14:21 IST

ಚಿತ್ರದುರ್ಗ: ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ 3,58,340 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ನಿಗದಿಯಾಗಿದೆ. ಅದರಲ್ಲಿ ಜುಲೈ 3ರ ವರೆಗೆ ಒಟ್ಟು 89,862 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದೆ.

ಕಳೆದ ವರ್ಷ ಇದೇ ಅವಧಿಯಲ್ಲಿ ಶೇ 8.1ರಷ್ಟು ಪ್ರಗತಿ ಸಾಧಿಸಲಾಗಿತ್ತು. ಈ ಬಾರಿ ಉತ್ತಮ ಮಳೆಯಾಗಿದ್ದು, ಹಿಂದಿನ ಸಾಲಿಗಿಂತ ಹೆಚ್ಚು ಬಿತ್ತನೆಯಾಗಿದೆ. ಗುರಿಯಲ್ಲಿ ಶೇ 25.1 ರಷ್ಟು ಪ್ರಗತಿ ಸಾಧಿಸಲಾಗಿದೆ.

ಜಿಲ್ಲೆಯ ಹಿರಿಯೂರು ತಾಲ್ಲೂಕಿನಲ್ಲಿ 9,064 ಹೆಕ್ಟೇರ್, ಹೊಸದುರ್ಗ-99,600 ಹೆಕ್ಟೇರ್, ಮೊಳಕಾಲ್ಮುರು-1,538 ಹೆಕ್ಟೇರ್, ಚಳ್ಳಕೆರೆ-15,095 ಹೆಕ್ಟೇರ್, ಚಿತ್ರದುರ್ಗ-26,954 ಹೆಕ್ಟೇರ್, ಹೊಳಲ್ಕೆರೆ-27,245 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ.

ADVERTISEMENT

ಏಕದಳ ಬೆಳೆಗಳಾದ ಜೋಳ, ರಾಗಿ, ಮೆಕ್ಕೆಜೋಳ, ಭತ್ತ, ಸಜ್ಜೆ ಮತ್ತು ಸಿರಿಧಾನ್ಯಗಳ ಬಿತ್ತನೆಗಾಗಿ ಒಟ್ಟು 1,54,145 ಹೆಕ್ಟೇರ್ ಗುರಿ ಇದ್ದು, ಈವರೆಗೆ 54,365 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಕಾರ್ಯವಾಗಿದೆ.

ದ್ವಿದಳ ಬೆಳೆಗಳಾದ ಹುರುಳಿ, ಉದ್ದು, ಹೆಸರು, ತೊಗರಿ, ಅಲಸಂದೆ, ಅವರೆ ಬೆಳೆಗಳಿಗಾಗಿ 34,460 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲು ಗುರಿ ನಿಗದಿಯಾಗಿದ್ದು, ಇಲ್ಲಿಯವರೆಗೆ 6,229 ಹೆಕ್ಟೇರ್ ಬಿತ್ತನೆ ಕಾರ್ಯ ಪೂರ್ಣಗೊಂಡಿದೆ.

ಎಣ್ಣೆಕಾಳು ಬೆಳೆಗಳಾದ ಸೂರ್ಯಕಾಂತಿ, ಎಳ್ಳು, ಹರಳು, ಶೇಂಗಾ, ಹುಚ್ಚೆಳ್ಳು, ಸಾಸಿವೆ, ಸೊಯಾಬಿನ್ ಬೆಳೆಗಳಿಗೆ 1,55,565 ಹೆಕ್ಟೇರ್ ಗುರಿ ಇದ್ದು, 23,786 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದೆ.

ವಾಣಿಜ್ಯ ಬೆಳೆಗಳಾದ ಹತ್ತಿ, ಕಬ್ಬು, ತಂಬಾಕು ಬೆಳೆಗಳ ಬಿತ್ತನೆಗಾಗಿ ಒಟ್ಟು 14,170 ಹೆಕ್ಟೇರ್ ಗುರಿ ನಿಗದಿಯಾಗಿದ್ದು, ಈವರೆಗೆ 5,482 ಹೆಕ್ಟೇರ್ ಭೂ ಪ್ರದೇಶದಲ್ಲಿ ವಾಣಿಜ್ಯ ಬೆಳೆಗಳ ಬಿತ್ತನೆ ಕಾರ್ಯವಾಗಿದೆ.

ಜಿಲ್ಲೆಯಲ್ಲಿ ವಾಡಿಕೆಗಿಂತ ಅಧಿಕ ಮಳೆ: ಜಿಲ್ಲೆಯಲ್ಲಿ ಈ ವರ್ಷ 188 ಮಿ.ಮೀ ನಷ್ಟು ಸರಾಸರಿ ಮಳೆಯಾಗಿದೆ. ವಾಡಿಕೆಗಿಂತ ಅಧಿಕ ಮಳೆಯಾಗಿದ್ದು, ರೈತರ ಬಿತ್ತನೆ ಕಾರ್ಯ ಬಿರುಸಿನಿಂದ ಸಾಗಿದೆ.

ಚಳ್ಳಕೆರೆ-157 ಮಿ.ಮೀ, ಚಿತ್ರದುರ್ಗ-214, ಹಿರಿಯೂರು-164, ಹೊಳಲ್ಕೆರೆ-201, ಹೊಸದುರ್ಗ-208 ಹಾಗೂ ಮೊಳಕಾಲ್ಮುರು-205 ಮಿ.ಮೀ ಮಳೆಯಾಗಿದೆ. ಹಿರಿಯೂರು ಹಾಗೂ ಹೊಳಲ್ಕೆರೆ ತಾಲ್ಲೂಕಿನಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿದೆ ಎಂದು ಕೃಷಿ ಇಲಾಖೆ ಮಾಹಿತಿ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.