ADVERTISEMENT

ಗಣೇಶ ಪ್ರತಿಷ್ಠಾಪನೆ: ಮಾರ್ಗಸೂಚಿ ಪಾಲನೆ

ಶಾಂತಿ ಸಭೆಯಲ್ಲಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಕೆ.ಅರುಣ್‌ ಸೂಚನೆ

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2019, 20:00 IST
Last Updated 26 ಆಗಸ್ಟ್ 2019, 20:00 IST
ಚಿತ್ರದುರ್ಗದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿಯಲ್ಲಿ ಎಸ್‌ಪಿ ಡಾ.ಕೆ.ಅರುಣ್‌ ಅಧ್ಯಕ್ಷತೆಯಲ್ಲಿ ಸೋಮವಾರ ಶಾಂತಿ ಸಭೆ ನಡೆಯಿತು.
ಚಿತ್ರದುರ್ಗದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿಯಲ್ಲಿ ಎಸ್‌ಪಿ ಡಾ.ಕೆ.ಅರುಣ್‌ ಅಧ್ಯಕ್ಷತೆಯಲ್ಲಿ ಸೋಮವಾರ ಶಾಂತಿ ಸಭೆ ನಡೆಯಿತು.   

ಚಿತ್ರದುರ್ಗ: ಗಣೇಶ ಹಬ್ಬದ ಅಂಗವಾಗಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿಯಲ್ಲಿ ಸೋಮವಾರ ಶಾಂತಿ ಸಭೆ ನಡೆಯಿತು. ಸಾರ್ವಜನಿಕವಾಗಿ ಗಣೇಶಮೂರ್ತಿ ಪ್ರತಿಷ್ಠಾಪನೆ ಮಾಡುವವರು ಪಾಲನೆ ಮಾಡಬೇಕಾದ ನಿಯಮಗಳ ಬಗ್ಗೆ ಅಧಿಕಾರಿಗಳು ಸೂಚನೆ ನೀಡಿದರು.

ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್‌ ಸೇರಿ ಹಲವು ಧರ್ಮದ ಮುಖಂಡರು ಸಭೆಯಲ್ಲಿ ಪಾಲ್ಗೊಂಡಿದ್ದರು. ಮೊಹರಂ ಹಾಗೂ ಗಣೇಶ ಹಬ್ಬವನ್ನು ಒಟ್ಟಿಗೆ ಆಚರಿಸಲು ಪರಸ್ಪರ ಸಹಕಾರ ನೀಡುವುದಾಗಿ ಎರಡೂ ಸಮುದಾಯದ ಮುಖಂಡರು ಆಶ್ವಾಸನೆ ನೀಡಿದರು.

ಗಣೇಶಮೂರ್ತಿ ಪ್ರತಿಷ್ಠಾಪನೆಗೆ ಇರುವ ನಿಯಮಗಳ ಬಗ್ಗೆ ಡಿವೈಎಸ್‌ಪಿ ವಿಜಯಕುಮಾರ್‌ ಸಂತೋಷ್‌ ಸಭೆಗೆ ಮಾಹಿತಿ ನೀಡಿದರು. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಕೆ.ಅರುಣ್‌ ಹಲವು ಸೂಚನೆಗಳು ನೀಡಿದರು.

ADVERTISEMENT

‘ಹಿಂದೂ ಮಹಾಗಣಪತಿ ವಿಸರ್ಜನೆ ಮೆರವಣಿಗೆಗೆ ಕಾರ್ಯಕರ್ತರನ್ನು ನೇಮಕ ಮಾಡಬೇಕು. ಉದ್ರಿಕ್ತ, ಅಸಭ್ಯ ವರ್ತನೆ ತೋರುವವರನ್ನು ಗುರುತಿಸಿ ಅವರೇ ನಿಯಂತ್ರಿಸಬೇಕು. ಸ್ವಯಂಸೇವಕರ ಪಟ್ಟಿಯನ್ನು ಕಚೇರಿಗೆ ತಲುಪಿಸಿ, ಸಮವಸ್ತ್ರ ವ್ಯವಸ್ಥೆ ಮಾಡಿಕೊಂಡರೆ ಅನುಕೂಲ. ಸುಪ್ರೀಂ ಕೋರ್ಟ್‌ ನಿರ್ದೇಶನದ ಪ್ರಕಾರ ಡಿ.ಜೆ.ಗೆ ಅನುಮತಿ ನೀಡಲಾಗುವುದು’ ಎಂದು ಅರುಣ್‌ ತಿಳಿಸಿದರು.

ಅಗ್ನಿಶಾಮಕ ಠಾಣಾಧಿಕಾರಿ ಮಹಾಲಿಂಗಪ್ಪ, ‘ಸಾರ್ವಜನಿಕ ಸ್ಥಳದಲ್ಲಿ ಗಣೇಶಮೂರ್ತಿಗೆ ನಿರ್ಮಿಸಿದ ಮಂಟಪಕ್ಕೆ ಅಗ್ನಿ ಅವಘಡ ಸಂಭವಿಸುವ ಸಾಧ್ಯತೆ ಹೆಚ್ಚು. ವಿದ್ಯುತ್‌ ಸಂಪರ್ಕ ಹಾಗೂ ದೇವರಿಗೆ ಹಚ್ಚುವ ದೀಪದಿಂದ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಳ್ಳುವ ಸಾಧ್ಯತೆ ಹೆಚ್ಚು. ಹೀಗಾಗಿ, ಆಯೋಜಕರು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು. ಮಂಟಪದ ಸಮೀಪ ಡ್ರಮ್‌ಗಳನ್ನು ಇಟ್ಟು ನೀರು ತುಂಬಿಸಬೇಕು. ಮಣ್ಣು ಹಾಗೂ ಮರಳು ಸುಲಭವಾಗಿ ಸಿಗುವಂತೆ ಇಟ್ಟುಕೊಳ್ಳಬೇಕು’ ಎಂದರು.

ಹಿಂದೂ ಮಹಾಗಣಪತಿ ಸಮಿತಿಯ ಅಧ್ಯಕ್ಷ ಬದ್ರಿನಾಥ್‌, ‘ಕುಡಾ’ ಮಾಜಿ ಅಧ್ಯಕ್ಷ ತಿಪ್ಪೇಸ್ವಾಮಿ, ಕೆ.ತಾಜ್‌ಪೀರ್‌, ಮೊಹಮ್ಮದ್‌ ಅಹಮ್ಮದ್‌ ಪಾಷಾ ಮಾತನಾಡಿದರು. ಡಿವೈಎಸ್‌ಪಿ ತಿಪ್ಪೇಸ್ವಾಮಿ, ತಹಶೀಲ್ದಾರ್‌ ಜೆ.ಸಿ.ವೆಂಕಟೇಶ್‌, ಬೆಸ್ಕಾಂ ಎಇಇ ಅನಿಲ್‌ ಕುಮಾರ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.