ADVERTISEMENT

ವೀರನಾಗಜ್ಜ ಸ್ವಾಮಿಗೆ ಅಕ್ಕಿ ಉಂಡೆ ಅರ್ಪಣೆ

ಕಾಡುಗೊಲ್ಲರ ಬುಡಕಟ್ಟು ಸಂಸ್ಕೃತಿಯ ಆರಾಧ್ಯ ದೈವಕ್ಕೆ ವಿಶೇಷ ಪೂಜೆ

​ಪ್ರಜಾವಾಣಿ ವಾರ್ತೆ
Published 13 ಜನವರಿ 2021, 3:07 IST
Last Updated 13 ಜನವರಿ 2021, 3:07 IST
ಹೊಳಲ್ಕೆರೆ ಹೊರವಲಯದ ಗುಂಡೇರಿ ರಸ್ತೆಯಲ್ಲಿರುವ ವೀರನಾಗಜ್ಜನ ಗದ್ದುಗೆಯನ್ನು ಹೂವಿನಿಂದ ಅಲಂಕಾರ ಮಾಡಿರುವ ದೃಶ್ಯ
ಹೊಳಲ್ಕೆರೆ ಹೊರವಲಯದ ಗುಂಡೇರಿ ರಸ್ತೆಯಲ್ಲಿರುವ ವೀರನಾಗಜ್ಜನ ಗದ್ದುಗೆಯನ್ನು ಹೂವಿನಿಂದ ಅಲಂಕಾರ ಮಾಡಿರುವ ದೃಶ್ಯ   

ಹೊಳಲ್ಕೆರೆ: ತಾಲ್ಲೂಕಿನ ಆವಿನಹಟ್ಟಿಯ ಭಕ್ತರು ಸೋಮವಾರ ಸಂಜೆ ಪಟ್ಟಣದ ಹೊರವಲಯದ ಗುಂಡೇರಿ ರಸ್ತೆಯ ಹೋರಿ ಕಾವಲ್‌ನಲ್ಲಿರುವ ವೀರನಾಗಜ್ಜ ಸ್ವಾಮಿಯ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಿದರು.

ಇಲ್ಲಿನ ಪೌಳಿಯಲ್ಲಿರುವ ವೀರನಾಗಜ್ಜ ಸ್ವಾಮಿಯ ಗದ್ದುಗೆ ಕಾಡುಗೊಲ್ಲರ ಆರಾಧ್ಯ ದೈವವಾಗಿದ್ದು, ಪ್ರತಿ ವರ್ಷ ಆವಿನಹಟ್ಟಿಯ ಯಾದವ ಜನಾಂಗದ ಭಕ್ತರು ಇಲ್ಲಿಗೆ ಬಂದು ಪೂಜೆ ಸಲ್ಲಿಸುತ್ತಾರೆ. ಭಕ್ತರು ದೇವರಿಗೆ ಮೀಸಲಿಟ್ಟ ಅಕ್ಕಿಯ ತಂಬಿಟ್ಟು, ಮೊಸರು, ಹಾಲು, ತುಪ್ಪವನ್ನು ಹೊತ್ತು ತರುತ್ತಾರೆ. ಗದ್ದುಗೆಯು ಆವಿನಹಟ್ಟಿ ಗ್ರಾಮದಿಂದ ಸುಮಾರು 11 ಕಿ.ಮೀ. ದೂರದಲ್ಲಿದ್ದು, ಭಕ್ತರು ಎತ್ತಿನಗಾಡಿ, ಲಗೇಜ್ ಆಟೊ, ಟಾಟಾ ಏಸ್, ಟ್ರ್ಯಾಕ್ಟರ್, ಬೈಕ್‌ಗಳಲ್ಲಿ ಇಲ್ಲಿಗೆ ಬರುತ್ತಾರೆ. ಹರಕೆ ಹೊತ್ತವರು ಕಾಲ್ನಡಿಗೆಯಲ್ಲೂ ಬಂದು ದೇವರಿಗೆ ಪೂಜೆ ಸಲ್ಲಿಸುತ್ತಾರೆ. ವೀರನಾಗಜ್ಜನ ಗದ್ದುಗೆಯನ್ನು ಹೂಗಳಿಂದ ಅಲಂಕರಿಸಲಾಗುತ್ತದೆ.

‘ಕುರಿ, ಮೇಕೆ, ಹಸು, ಎತ್ತು, ಎಮ್ಮೆಗಳನ್ನು ಸಾಕುವುದು ಗೊಲ್ಲ ಜನಾಂಗದ ಪ್ರಮುಖ ವೃತ್ತಿಯಾಗಿದೆ. ಸದಾ ಬರಗಾಲಕ್ಕೆ ತುತ್ತಾಗುತ್ತಿದ್ದ ಮೂಡಲ ಸೀಮೆಯ ಶಿರಾ, ಹಿರಿಯೂರು ಭಾಗದ ಗೊಲ್ಲರು ಹಿಂದಿನ ಕಾಲದಲ್ಲಿ ದನ, ಕುರಿ ಮೇಯಿಸಲು ಈ ಪ್ರದೇಶಕ್ಕೆ ಬರುತ್ತಿದ್ದರು. ಮೂಡಲ ಸೀಮೆಯಿಂದ ಪಡುವಲ ಸೀಮೆಗೆ ವಲಸೆ ಬಂದಿದ್ದ ಗೊಲ್ಲರ ತಂಡದಲ್ಲಿದ್ದ ಹಿರಿಯ ವ್ಯಕ್ತಿ ‘ವೀರನಾಗಜ್ಜ’ ದನ ಕಾಯುತ್ತಿರುವಾಗ ಇದ್ದಕ್ಕಿದ್ದಂತೆ ಇಲ್ಲಿಯೇ ಸಾವನ್ನಪ್ಪುತ್ತಾರೆ. ಆಗ ದನಗಳ ಹಿಂಡಿನಲ್ಲಿದ್ದ ಒಂದು ‘ಬಸವ’ (ಹೋರಿ) ವೀರನಾಗಜ್ಜನ ಮುತ್ತಿನ ಉಂಗುರವನ್ನು ಮೂಗಿನಲ್ಲಿ ಹಿಡಿದುಕೊಂಡು ಅವರ ಸ್ವಂತ ಊರಿನಲ್ಲಿದ್ದ ಮನೆಗೆ ಹೋಗಿ ತೋರಿಸುವ ಮೂಲಕ ವೀರನಾಗಜ್ಜನ ಸಾವಿನ ಸಂದೇಶ ನೀಡುತ್ತದೆ’.

ADVERTISEMENT

‘ತಕ್ಷಣವೇ ಅಲ್ಲಿನ ಜನ ಈ ಪ್ರದೇಶಕ್ಕೆ ಬಂದು ನೋಡಿದಾಗ ‘ವೀರನಾಗಜ್ಜ’ ಸಾವನ್ನಪ್ಪಿರುವುದು ತಿಳಿಯುತ್ತದೆ. ಅಜ್ಜನನ್ನು ಅದೇ ಜಾಗದಲ್ಲಿ ಸಮಾಧಿ ಮಾಡಿ, ಪೌಳಿ ನಿರ್ಮಿಸುತ್ತಾರೆ. ಆಗಿನಿಂದಲೂ ಸುತ್ತಲಿನ ಗ್ರಾಮಗಳ ಗೊಲ್ಲ ಜನಾಂಗದ ಭಕ್ತರು ವರ್ಷಕ್ಕೊಮ್ಮೆ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸುತ್ತಾರೆ’ ಎನ್ನುತ್ತಾರೆ ಆವಿನಹಟ್ಟಿ ಗ್ರಾಮದ ಹಿರಿಯರಾದ ಎ.ವಿ.ನಾಗೇಂದ್ರಪ್ಪ ಹಾಗೂ ಗುಂಡೇರಿ ನಾಗಪ್ಪ.

ಹಸಿ ಅಕ್ಕಿ ಉಂಡೆ ನೈವೇದ್ಯ!
ಕಾಡುಗೊಲ್ಲ ಸಂಪ್ರದಾಯದಂತೆ ಇಲ್ಲಿ ಬೇಯಿಸಿದ ಆಹಾರ ಪದಾರ್ಥಗಳನ್ನು ದೇವರಿಗೆ ನೈವೇದ್ಯ ಮಾಡುವುದಿಲ್ಲ. ಬೆಲ್ಲ ಸೇರಿಸಿದ ಅಕ್ಕಿ ಹಿಟ್ಟಿನಿಂದ ತಂಬಿಟ್ಟಿನ ಉಂಡೆ ಕಟ್ಟುತ್ತಾರೆ. ದೇವರಿಗೆ ನೈವೇದ್ಯ ಮಾಡಿದ ನಂತರ ಭಕ್ತರಿಗೆ ಅಕ್ಕಿ ಉಂಡೆ ಬಡಿಸಲಾಗುತ್ತದೆ. ಉಂಡೆಗೆ ಬಾಳೆಹಣ್ಣು, ಮೊಸರು ಹಾಕಿ ಕಲೆಸಿಕೊಂಡು ತಿನ್ನುತ್ತಾರೆ.

ಗ್ರಾಮದ ಭಕ್ತರ ಮನೆಗಳಲ್ಲಿ ಬೆಳಿಗ್ಗೆ ಹಸು, ಎಮ್ಮೆಗಳಿಂದ ಹಾಲು ಕರೆದು, ಹಾಲಿನ ಗಡಿಗೆಗೆ ಹೆಪ್ಪು ಹಾಕುತ್ತಾರೆ. ಹಾಲು, ಮೊಸರನ್ನು ಬಳಸದೆ ಮೀಸಲು ರೂಪದಲ್ಲಿ ತರಲಾಗುತ್ತದೆ. ಈ ವರ್ಷ 1.5 ಕ್ವಿಂಟಲ್ ಅಕ್ಕಿ, 1.5 ಕ್ವಿಂಟಲ್ ಬೆಲ್ಲದ ಉಂಡೆಗಳನ್ನು ತಯಾರಿಸಲಾಗಿತ್ತು. ಇದಕ್ಕೆ 200 ಲೀಟರ್ ಮೊಸರು, 3.5 ಕ್ವಿಂಟಲ್ ಬಾಳೆಹಣ್ಣು ಬಳಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.