ADVERTISEMENT

ಧರ್ಮಪುರ | ಜಾತ್ರಾ ಮಹೋತ್ಸವ: ಭಕ್ತರಿಗೆ ವೇಣುಗೋಪಾಲಸ್ವಾಮಿ, ಚೌಡೇಶ್ವರಿ ಅಭಯ

ವೇಣುಕಲ್ಲುಗುಡ್ಡ: ದೇವಾಲಯ ಲೋಕಾರ್ಪಣೆ

ಪ್ರಜಾವಾಣಿ ವಿಶೇಷ
Published 8 ಮೇ 2025, 5:06 IST
Last Updated 8 ಮೇ 2025, 5:06 IST
ಲೋಕಾರ್ಪಣೆಗೊಳ್ಳಲಿರುವ ಗ್ರಾಮದೇವರು ಶ್ರೀವೇಣುಗೋಪಾಸ್ವಾಮಿ (ಬೆಟ್ಟದ ಶಕುನದ ರಂಗಪ್ಪ) ದೇವಸ್ಥಾನ
ಲೋಕಾರ್ಪಣೆಗೊಳ್ಳಲಿರುವ ಗ್ರಾಮದೇವರು ಶ್ರೀವೇಣುಗೋಪಾಸ್ವಾಮಿ (ಬೆಟ್ಟದ ಶಕುನದ ರಂಗಪ್ಪ) ದೇವಸ್ಥಾನ   

ಧರ್ಮಪುರ: ಸಮೀಪದ ವೇಣುಕಲ್ಲುಗುಡ್ಡದ (ವೇಣು ಶಿಲಾಧ್ರಿಪುರ) ಮೇಲೆ ಕಂಗೊಳಿಸುತ್ತಿರುವ ರಮಣೀಯ ಪರಿಸರದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಗ್ರಾಮದೇವರು ಶ್ರೀ ವೇಣುಗೋಪಾಲಸ್ವಾಮಿ, ಶ್ರೀಚೌಡೇಶ್ವರಿ ದೇವಸ್ಥಾನದ ಲೋಕಾರ್ಪಣೆ ಮತ್ತು ಜಾತ್ರಾ ಮಹೋತ್ಸವದ ಸಡಗರ ಪ್ರಾರಂಭವಾಗಿದೆ.

ನಾಡಿನ ಸಾಂಸ್ಕೃತಿಕ ದ್ಯೋತಕವಾಗಿ ಪೂರ್ವಜರು ಸಾಮಾಜಿಕ ಶಾಂತಿ ನೆಮ್ಮದಿಯನ್ನು ಕಂಡುಕೊಳ್ಳಲು ನಿರ್ಮಿಸಿದಂತಹ ಹಲವಾರು ಕುರುಹುಗಳಾದ ಕಲ್ಯಾಣಿ, ಕಲೆ ಮತ್ತು ವಾಸ್ತುಶಿಲ್ಪ, ಕೋಟೆ, ಶಿಲ್ಪಕಲೆ, ಶಾಸನ, ಚಿತ್ರಕಲೆ, ದೇವಾಲಯಗಳು, ಬಸದಿಗಳು ಇಂದಿಗೂ ಜೀವಂತ ಸಾಕ್ಷಿಯಾಗಿ ಉಳಿದಿವೆ. ಆದರೆ, ಪ್ರವಾಸೋದ್ಯಮ ಮತ್ತು ಪುರಾತತ್ವ ಇಲಾಖೆಯವರ ಸಹಕಾರ ದೊರೆತರೆ ಇವು ಪ್ರವಾಸಿ ತಾಣಗಳ ರೂಪ ಪಡೆಯುತ್ತವೆ.

ಚಿತ್ರದುರ್ಗ ಜಿಲ್ಲೆ ಐತಿಹಾಸಿಕವಾಗಿ ಅತ್ಯಂತ ಮಹತ್ವವನ್ನು ಪಡೆದುಕೊಂಡಿದೆ. ಅದರಲ್ಲಿ ಧರ್ಮಪುರ ಹೋಬಳಿ ಐತಿಹಾಸಿಕವಾಗಿ ನೊಳಂಬರು, ಚೋಳರು, ನಿಡಗಲ್ಲು ಪಾಳೆಗಾರರು, ಸಂಡೂರಿನ ರಾಜರು, ಹರತಿ ನಾಯಕರು, ವೇಣುಕಲ್ಲುಗುಡ್ಡದ ಪಾಳೆಗಾರರು ಮತ್ತು ವಿಜಯನಗರದ ಆಳ್ವಿಕೆಯ ಕಾಲದ ಐತಿಹ್ಯವನ್ನು ಸಾರುವ ಅನೇಕ ಕುರುಹುಗಳನ್ನು ತನ್ನ ಒಡಲಿನಲ್ಲಿ ಹೊಂದಿರುವುದು ಪ್ರಮುಖವಾಗಿದೆ.

ADVERTISEMENT

ವೇಣು ಶಿಲಾದ್ರಿಪುರ (ವೇಣುಕಲ್ಲುಗುಡ್ಡ) ಸ್ವತಂತ್ರ ಪಾಳೆ ಪಟ್ಟಾಗಿದ್ದು, 12ನೇ ಶತಮಾನದ ಅವಧಿಯಲ್ಲಿ ಕಸ್ತೂರಿ ರಂಗಪ್ಪನಾಯಕ ಆಳ್ವಿಕೆ ಮಾಡಿದ್ದ. ಇಲ್ಲಿನ ಬೆಟ್ಟದ ಮೇಲೆ ಏಳು ಸುತ್ತಿನ ಕೋಟೆ ನಿರ್ಮಿಸಿ ರಾಜ್ಯಭಾರ ಮಾಡಿದ್ದು, ಇಂದಿಗೂ ಐತಿಹಾಸಿಕ ಕುರುಹುಗಳನ್ನು ಕಾಣಬಹುದು. ವೇಣುಕಲ್ಲುಗುಡ್ಡ ಬೆಟ್ಟ ಸುಮಾರು 108 ಎಕರೆ ವಿಸ್ತೀರ್ಣದಲ್ಲಿದ್ದು ಗಿಡ, ಮರ ಹಾಗೂ ಹಸಿರಿನಿಂದ ಕಂಗೊಳಿಸುತ್ತಿದೆ.

ಕೋಟೆ, ಬತೇರಿ, ಬುರುಜು, ತುಪ್ಪದಕೊಳ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ. ಬೆಟ್ಟದ ಮೇಲಿರುವ ಸುರಂಗ ಮಾರ್ಗ ಚಿತ್ರದುರ್ಗ ಮತ್ತು ನಿಡಗಲ್ ಸಂಸ್ಥಾನದವರೆಗೆ ಸಂಪರ್ಕ ಹೊಂದಿದೆ ಎಂಬ ಪ್ರತೀತಿಯುಂಟು. ವೇಣುಕಲ್ಲುಗುಡ್ಡ ಕೋಟೆ 7 ದ್ವಾರ ಬಾಗಿಲುಗಳನ್ನು ಒಳಗೊಂಡಿದ್ದು, ಬಸವನಗುಡಿ, ಆಂಜನೇಯ ದೇವಸ್ಥಾನ, ತಿಮ್ಮಪ್ಪ ದೇವಸ್ಥಾನ, ಮೇಗಳ ಮಠ, ಗಾರೆ ಬಾವಿ, ರಂಗಪ್ಪನ ದೇವಸ್ಥಾನ ಮತ್ತು ಚೌಡಮ್ಮ ಆಕರ್ಷಕವಾಗಿವೆ. ಪಂಚ ಮಠಗಳಾದ ಎತ್ತಪ್ಪ, ಬಸಪ್ಪ, ಸಿದ್ದಪ್ಪ, ಹಾಲಪ್ಪಯ್ಯ, ಈರನಾಗಮ್ಮ ದೇವಸ್ಥಾನಗಳ ಪುಣ್ಯಭೂಮಿಯಾಗಿದ್ದು, ಮುನಿವರ್ಯರು ಸಂಚರಿಸಿದ ಪ್ರದೇಶವಾಗಿದೆ ಎಂಬುದು ನಂಬಿಕೆಯಿದೆ.

ಬೆಟ್ಟದ ಮೇಲೆ ಮದ್ದು ಅರೆಯುವ ಕಲ್ಲುಗಳು, ಕುದುರೆ ಲಾಯ ಕಾಣಬಹುದು. ಬೆಟ್ಟದ ಮೇಲಿರುವ ಕೋಟೆಯಲ್ಲಿ ಜನರು ವಾಸಿಸುತ್ತಿದ್ದರು ಎಂಬುದಕ್ಕೆ ಕುರುಹುಗಳಿವೆ. ಜತೆಗೆ ಬೆಟ್ಟ ಅನೇಕ ಗಿಡಮೂಲಿಕೆಗಳಾದ ಮಯೂರ ಶಕೆ, ರಕ್ತಭೂತಾಳಿ, ಹಾಲು ಭೂತಾಳಿ, ಕಲ್ಲುಹೂವು ಮತ್ತು ನವರಸ ಸೊಪ್ಪು ಒಳಗೊಂಡಿದೆ.

ಪಾಳೆಗಾರ ಕಸ್ತೂರಿ ರಂಗಪ್ಪನ ಕಾಲದಲ್ಲಿ ನಿರ್ಮಿಸಿರುವ ಕಲ್ಯಾಣಿ ಕೆರೆಯ ಹಿಂಬದಿಯಲ್ಲಿದ್ದು, ಅದರಲ್ಲಿ ಗಣಪತಿ ವಿಗ್ರಹ ಮತ್ತು ನಾರುಣ್ಣೆ ಕಲ್ಲು ಇದೆ. ವಿವಿಧ ಚರ್ಮದ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳು ಈ ಕಲ್ಯಾಣಿಯ ನೀರನ್ನು ಕುಡಿದರೆ ಕಾಯಿಲೆ ವಾಸಿಯಾಗುತ್ತದೆ ಎಂಬ ವಾಡಿಕೆ ಇದೆ. ಆದರೆ ಶಿಥಿಲಗೊಂಡಿರುವ ಕಲ್ಯಾಣಿ ಕಾಯಕಲ್ಪಕ್ಕೆ ಕಾದಿದೆ.

ಪಾಳೆಗಾರರ ಧಾರ್ಮಿಕ ಗುರುಗಳಾದ ಹಾಲಪ್ಪಯ್ಯಸ್ವಾಮಿ ಜೀವೈಕ್ಯವಾಗಿರುವ ಮಠ ಕೂಡ ಇದ್ದು, ವೇಣುಕಲ್ಲುಗುಡ್ಡ ಪಾಳೆಗಾರರ ಇತಿಹಾಸವನ್ನು ಸಾರುತ್ತದೆ. ಮಠದ ವಂಶದವರು ಆ ಕಾಲದ ತಾಳೆಗರಿ ಮತ್ತು ಬಖೈರುಗಳನ್ನು ಸಂರಕ್ಷಿಸಿದ್ದು, ಅದರ ಸಾರವನ್ನು ತಿಳಿದುಕೊಳ್ಳುವ ಪ್ರಯತ್ನ ನಡೆದಿಲ್ಲ. ತಾಳೆಗರಿ ಮತ್ತು ಬಖೈರುಗಳನ್ನು ಓದಿಸಿ ದಾಖಲು ಮಾಡಿದರೆ ಮತ್ತಷ್ಟು ಮಾಹಿತಿ ಲಭ್ಯವಾಗಲಿದೆ ಎಂಬುದು ಇತಿಹಾಸ ಸಂಶೋಧಕರ ಒತ್ತಾಸೆಯಾಗಿದೆ.

ಗ್ರಾಮದೇವರಾದ ವೇಣುಗೋಪಾಸ್ವಾಮಿ ದೇವಸ್ಥಾನವನ್ನು ಬೆಟ್ಟದ ಮೇಲೆ ಸುಮಾರು ₹ 2.5 ಕೋಟಿ ಖರ್ಚು ಮಾಡಿ ನೂತನವಾಗಿ ನಿರ್ಮಿಸಲಾಗಿದೆ. ದೇವಸ್ಥಾನಕ್ಕೆ ಹೋಗಲು ರಸ್ತೆ ಅಭಿವೃದ್ಧಿ, ಕುಡಿಯುವ ನೀರಿನ ಸೌಕರ್ಯ, ಭಕ್ತಾದಿಗಳು ತಂಗಲು ಮೂಲ ಸೌಲಭ್ಯ ಒಳಗೊಂಡಂತೆ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಶ್ರೀವೇಣುಗೋಪಾಸ್ವಾಮಿ ದೇವಸ್ಥಾನ ಜೀರ್ಣೋದ್ಧಾರ ಸಮಿತಿ ಕೈಗೊಂಡಿದೆ.

ಈ ದೇವಾಲಯವನ್ನು ಬೆಟ್ಟದ ಶಕುನದ ರಂಗಪ್ಪ ಎಂದು ಹಿಂದೆ ಕರೆಯಲಾಗುತ್ತಿತ್ತು. ಇಲ್ಲಿನ ಪಾಳೆಗಾರ ದಂಡೆತ್ತಿ ಯುದ್ದಕ್ಕೆ ಹೊರಟಾಗ ದೇವರ ಶಕುನವನ್ನು ಕೇಳುತ್ತಿದ್ದುದ್ದರಿಂದ ಈ ಹೆಸರು ಬಂದಿದೆ ಎಂಬ ಪ್ರತೀತಿ ಇದೆ.

ಜಾತ್ರಾ ಮಹೋತ್ಸವ 

ಮೇ 10ರಿಂದ ಬೆಟ್ಟದ ಮೇಲೆ ನೂತನವಾಗಿ ನಿರ್ಮಾಣಗೊಂಡಿರುವ ವೇಣುಗೋಪಾಸ್ವಾಮಿ ಮತ್ತು ಶ್ರೀಚೌಡೇಶ್ವರಿ ದೇವಸ್ಥಾನದ ಲೋಕಾರ್ಪಣೆ ಮತ್ತು ಜಾತ್ರಾ ಮಹೋತ್ಸವ ಕಾರ್ಯಕ್ರಮ ಮೇ 10ರಂದು ನಡೆಯಲಿದೆ. ಮೇ 11ರಂದು ವೇದ ಪಾರಾಯಣ ಕಳಸ ಪ್ರತಿಷ್ಠಾಪನೆ ಗಣಹೋಮ ನೂತನ ವಿಗ್ರಹಗಳಿಗೆ ಕ್ಷೀರಾದಿವಾಸ ಮೇ 12ರಂದು ಪ್ರಾಣ ಪ್ರತಿಷ್ಠಾಪನೆ ಮೃತ್ಯುಂಜಯ ಹೋಮ ದೀಕ್ಷಾ ಹೋಮ ವೇಣುಗೋಪಾಲಸ್ವಾಮಿ ಕುಂಭಾಭೀಷೇಕ ದಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಬರುವ ಭಕ್ತಾಧಿಗಳಿಗೆ ವಸತಿ ಮತ್ತು ಊಟದ ವ್ಯವಸ್ಥೆಯನ್ನು ಉಚಿತವಾಗಿ ನೀಡಲಾಗುವುದು. ಇಲ್ಲಿ ಮೇ 11ರಂದು ಸರ್ಪ ಸಂಸ್ಕಾರ ಆಶ್ಲೇಷ ಬಲಿಪೂಜೆ ನಡೆಯಲಿದ್ದು ಪೂಜೆ ಮಾಡಿಸಲು ಹರಕೆ ಹೊತ್ತವರು ಪೂಜಾ ಕೈಂಕರ್ಯ ಕೈಗೊಳ್ಳಬಹುದು ಎಂದು ದೇವಸ್ಥಾನ ಸಮಿತಿ ತಿಳಿಸಿದೆ.

ಮಾಹಿತಿಗೆ ಮೊ: 94487– 47572 ಸಂಪರ್ಕಿಸಬಹುದು ಎಂದು ಶ್ರೀವೇಣುಗೋಪಾಸ್ವಾಮಿ ದೇವಸ್ಥಾನ ಜೀರ್ಣೋದ್ಧಾರ ಸಮಿತಿಯ ಪ್ರಕಟಣೆ ತಿಳಿಸಿದೆ.

ವೇಣುಕಲ್ಲುಗುಡ್ಡ ಬೆಟ್ಟ
ಕೋಟೆಯ ಮೇಲಿರುವ ಬುರುಜು
ಬೆಟ್ಟದ ಶಕುನದ ರಂಗಪ್ಪನ ಮೂಲ ದೇವರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.