ADVERTISEMENT

ರಾಜ್ಯ ಬಜೆಟ್‌ಗೆ ಗರಿಗೆದರಿದ ನಿರೀಕ್ಷೆ

ಈರುಳ್ಳಿ ಶೈತ್ಯಾಗಾರ, ಸರ್ಕಾರಿ ವೈದ್ಯಕೀಯ ಕಾಲೇಜಿಗೆ ಕೋರಿಕೆ

​ಪ್ರಜಾವಾಣಿ ವಾರ್ತೆ
Published 3 ಜುಲೈ 2018, 17:32 IST
Last Updated 3 ಜುಲೈ 2018, 17:32 IST
ಚಿತ್ರದುರ್ಗ ತಾಲ್ಲೂಕಿನ ಹೊಸಕಲ್ಲಳ್ಳಿಯಲ್ಲಿ ಬೆಳೆದಿರುವ ಈರುಳ್ಳಿ
ಚಿತ್ರದುರ್ಗ ತಾಲ್ಲೂಕಿನ ಹೊಸಕಲ್ಲಳ್ಳಿಯಲ್ಲಿ ಬೆಳೆದಿರುವ ಈರುಳ್ಳಿ   

ಚಿತ್ರದುರ್ಗ: ಜೆಡಿಎಸ್‌–ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರದ ಮೊದಲ ಬಜೆಟ್‌ ಜುಲೈ 5ರಂದು ಮಂಡನೆಯಾಗಲಿದ್ದು, ಜಿಲ್ಲೆಯಲ್ಲಿ ನಿರೀಕ್ಷೆಗಳು ಗರಿಗೆದರಿವೆ. ಹಲವು ಕೋರಿಕೆಗಳನ್ನು ಸಲ್ಲಿಸಿದ ಕೋಟೆ ನಾಡಿನ ಜನರು ವಿಧಾನಮಂಡಲದ ಬಜೆಟ್‌ ಅಧಿವೇಶನವನ್ನು ಕಾತುರದಿಂದ ಎದುರು ನೋಡುತ್ತಿದ್ದಾರೆ.

ಕಾಂಗ್ರೆಸ್‌ ಸರ್ಕಾರದ ಅವಧಿಯ ಕೊನೆಯ ಬಜೆಟ್‌ನಲ್ಲಿ ಜಿಲ್ಲೆಗೆ ಸಿಕ್ಕ ಕೊಡುಗೆ ಕೈತಪ್ಪಲಿವೆಯೇ ಎಂಬ ಆತಂಕವೂ ಅನೇಕರನ್ನು ಕಾಡುತ್ತಿದೆ. ಶೇಂಗಾ ಬೆಳೆಗಾರರನ್ನು ಸಂಕಷ್ಟದಿಂದ ಪಾರು ಮಾಡಲು ಹಿಂದಿನ ಸರ್ಕಾರ ಮೀಸಲಿಟ್ಟಿದ್ದ ₹ 50 ಕೋಟಿ ಅನುದಾನದ ಬಗ್ಗೆಯೂ ಅನುಮಾನಗಳು ವ್ಯಕ್ತವಾಗುತ್ತಿವೆ.

ಈರುಳ್ಳಿ, ಹಣ್ಣು ಮತ್ತು ತರಕಾರಿ ಶೈತ್ಯಾಗಾರ ನಿರ್ಮಿಸುವಂತೆ ಜಿಲ್ಲೆಯ ರೈತರು ಹಲವು ವರ್ಷಗಳಿಂದ ಸರ್ಕಾರಕ್ಕೆ ಬೇಡಿಕೆ ಸಲ್ಲಿಸುತ್ತಿದ್ದಾರೆ. ಪ್ರಸಕ್ತ ವರ್ಷ 15 ಸಾವಿರ ಹೆಕ್ಟೇರ್‌ಗೂ ಹೆಚ್ಚು ಪ್ರದೇಶದಲ್ಲಿ ಈರುಳ್ಳಿ ಬಿತ್ತನೆಯಾಗಿದೆ. ಈರುಳ್ಳಿಯನ್ನು ಸಂಸ್ಕರಿಸಿ ಇಡುವ ವ್ಯವಸ್ಥೆ ರೂಪುಗೊಳ್ಳಬಹುದೇ ಎಂದು ಬೆಳೆಗಾರರು ಕಾಯುತ್ತಿದ್ದಾರೆ.

ADVERTISEMENT

ಸೌರವಿದ್ಯುತ್‌ ಸ್ಥಾವರಗಳ ಸ್ಥಾಪನೆಗೆ ಅಗತ್ಯವಿರುವ ಉಪಕರಣಗಳ ತಯಾರಿಕಾ ಘಟಕವನ್ನು ಜಿಲ್ಲೆಯಲ್ಲಿ ಸ್ಥಾಪಿಸುವುದಾಗಿ ಚುನಾವಣೆಯ ಸಂದರ್ಭದಲ್ಲಿ ಎಚ್‌.ಡಿ. ಕುಮಾರಸ್ವಾಮಿ ಆಶ್ವಾಸನೆ ನೀಡಿದ್ದರು. ಜಿಲ್ಲೆಯ ಯುವಜನತೆ ಕೆಲಸ ಅರಸಿ ಬೆಂಗಳೂರಿಗೆ ವಲಸೆ ಹೋಗುವುದನ್ನು ತಡೆಯಲು ಇದು ಸಹಕಾರಿಯಾಗುತ್ತದೆ. ನೀಡಿದ ಭರವಸೆಯನ್ನು ಮುಖ್ಯಮಂತ್ರಿ ಈಡೇರಿಸುವರೇ ಎಂಬ ಪ್ರಶ್ನೆ ಜನರನ್ನು ಕಾಡುತ್ತಿದೆ.

ಚಿತ್ರದುರ್ಗಕ್ಕೆ ಸರ್ಕಾರಿ ವೈದ್ಯಕೀಯ ಕಾಲೇಜು ತರುವ ಪ್ರಯತ್ನ ಹಲವು ವರ್ಷಗಳಿಂದ ನಡೆಯುತ್ತಿದೆ. ವಿಧಾನಸಭೆಗೆ ಈಚೆಗೆ ನಡೆದ ಚುನಾವಣೆಯ ಸಂದರ್ಭದಲ್ಲಿಯೂ ಈ ವಿಷಯ ಮುನ್ನೆಲೆಗೆ ಬಂದಿತ್ತು. ವೈದ್ಯಕೀಯ ಕಾಲೇಜು ಮಂಜೂರು ಮಾಡುವಂತೆ ಸರ್ಕಾರಿ ವೈದ್ಯಕೀಯ ಕಾಲೇಜು ಹೋರಾಟ ಸಮಿತಿ ಜೂನ್‌ 25ರಂದು ಅಹವಾಲು ಸಲ್ಲಿಸಿದೆ. ‘ವೈದ್ಯಕೀಯ ಕಾಲೇಜು ತರುವುದಕ್ಕೆ ಆದ್ಯತೆ ನೀಡುತ್ತೇನೆ’ ಎಂದು ಚುನಾವಣೆಯ ಸಂದರ್ಭದಲ್ಲಿ ಜಿ.ಎಚ್‌. ತಿಪ್ಪಾರೆಡ್ಡಿ ಕೂಡ ಆಶ್ವಾಸನೆ ನೀಡಿದ್ದರು.

ದಾವಣಗೆರೆ- ಚಿತ್ರದುರ್ಗ-ತುಮಕೂರು ನೇರ ರೈಲು ಮಾರ್ಗ ಯೋಜನೆಗೆ ಸಮೀಕ್ಷೆ ನಡೆಸಲಾಗಿದ್ದು, ಭೂಸ್ವಾಧೀನ ಪ್ರಕ್ರಿಯೆ ಮಾತ್ರ ಬಾಕಿ ಇದೆ. ಭೂಸ್ವಾಧೀನಕ್ಕೆ ಅಗತ್ಯವಿರುವ ಅನುದಾನವನ್ನು ಬಜೆಟ್‌ನಲ್ಲಿ ಮೀಸಲಿಡುವಂತೆ ಕೋರಿಕೊಳ್ಳಲಾಗಿದೆ. ನೇರ ರೈಲು ಮಾರ್ಗ ಹೋರಾಟ ಸಮಿತಿಯು ಅನೇಕ ಬಾರಿ ಕೋರಿಕೆ ಸಲ್ಲಿಸಿತ್ತು. ಹೊಸ ಸರ್ಕಾರದಲ್ಲಿ ಈ ಅನುದಾನ ಲಭ್ಯವಾಗುವ ಸಾಧ್ಯತೆ ಇದೆ.

ಐತಿಹಾಸಿಕ ಕಲ್ಲಿನ ಕೋಟೆಯನ್ನು ಹೊಂದಿರುವ ಚಿತ್ರದುರ್ಗದಲ್ಲಿ ಪ್ರವಾಸೋದ್ಯಮಕ್ಕೆ ಸಾಕಷ್ಟು ಅವಕಾಶಗಳಿವೆ. ಕಲ್ಲಿನ ಕೋಟೆಯನ್ನು ಕಣ್ತುಂಬಿಕೊಳ್ಳಲು ಬರುವ ಪ್ರವಾಸಿಗರ ಸಂಖ್ಯೆ ವರ್ಷ ಕಳೆದಂತೆ ಹೆಚ್ಚಾಗುತ್ತಿದೆ. ಕೋಟೆಯ ಸಮೀಪದಲ್ಲಿರುವ ಚಂದ್ರವಳ್ಳಿ ಕೆರೆ, ನಗರಕ್ಕೆ ಹೊಂದಿಕೊಂಡಿರುವ ಆಡುಮಲ್ಲೇಶ್ವರ ಕಿರು ಮೃಗಾಲಯ ಪ್ರವಾಸಿಗರನ್ನು ಆಕರ್ಷಿಸುತ್ತಿವೆ. ಇದಕ್ಕೆ ಅಗತ್ಯವಿರುವ ಅನುದಾನವನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ನೀಡುವರೇ ಎಂಬುದು ಶುಕ್ರವಾರ ಗೊತ್ತಾಗಲಿದೆ.

ಏಷ್ಯಾದಲ್ಲಿಯೇ ಅತಿ ಹೆಚ್ಚು ಗಾಳಿ ಬೀಸುವ ಎರಡನೇ ತಾಣ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಜೋಗಿಮಟ್ಟಿ ಚಾರಣಿಗರನ್ನು ಸೆಳೆಯಲಿದೆ. ಇಲ್ಲಿ ಮೂಲಸೌಲಭ್ಯ ಒದಗಿಸಿದರೆ ಪ್ರವಾಸೋದ್ಯಮ ಕೂಡ ಗರಿಬಿಚ್ಚಲಿದೆ.

₹ 3,265 ಕೋಟಿ ಕೃಷಿ ಸಾಲ

ಸಹಕಾರಿ ಹಾಗೂ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ರೈತರು ಪಡೆದಿರುವ ಸಾಲದಲ್ಲಿ ಸುಮಾರು ₹ 3,265 ಕೋಟಿ ಬಾಕಿ ಉಳಿದಿದೆ. ಸಾಲ ಮನ್ನಾ ನಿರೀಕ್ಷೆಯಲ್ಲಿರುವ ರೈತರು ಋಣಮುಕ್ತರಾಗಲು ಕಾತುರರಾಗಿದ್ದಾರೆ. ಜಿಲ್ಲೆಯ 223 ಬ್ಯಾಂಕ್‌ ಶಾಖೆಗಳಿಂದ ಹಂಚಿಕೆಯಾದ ಸಾಲದಲ್ಲಿ ₹ 3 ಸಾವಿರ ಕೋಟಿಗೂ ಹೆಚ್ಚು ಹಣವನ್ನು ರೈತರು ಪಾವತಿ ಮಾಡಿಲ್ಲ. 2017–18ರಲ್ಲಿ ₹ 1,692 ಕೋಟಿ ಬೆಳೆಸಾಲ ಹಾಗೂ ₹ 408 ಕೋಟಿ ಕೃಷಿ ಸಾಲ ಹಂಚಿಕೆ ಮಾಡಲಾಗಿದೆ. ಸಾಲಮನ್ನಾ ನಿರೀಕ್ಷೆಯಲ್ಲಿರುವ ರೈತರು ಮರುಪಾವತಿಸಲು ಹಿಂದೇಟು ಹಾಕುತ್ತಿದ್ದಾರೆ ಎಂದು ಮಾರ್ಗಸೂಚಿ ಬ್ಯಾಂಕ್‌ ಮೂಲಗಳು ಮಾಹಿತಿ ನೀಡಿವೆ.

ಸತತ ಏಳು ವರ್ಷಗಳಿಂದ ಜಿಲ್ಲೆಯಲ್ಲಿ ಬರ ಪರಿಸ್ಥಿತಿ ತಲೆದೋರಿದೆ. ರೈತರ ಸಾಲ ಮನ್ನಾ ಮಾಡಬೇಕು. ಬರ ಪರಿಸ್ಥಿತಿ ಎದುರಿಸಲು ಕೆರೆಗೆ ನೀರು ತುಂಬಿಸುವ ಯೋಜನೆ ರೂಪಿಸಬೇಕು
- ನುಲೇನೂರು ಶಂಕರಪ್ಪ, ಜಿಲ್ಲಾ ಘಟಕದ ಅಧ್ಯಕ್ಷ, ರಾಜ್ಯ ರೈತ ಸಂಘ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.