ADVERTISEMENT

ಸಿರಿಗೆರೆ: ನವೆಂಬರ್‌ನಲ್ಲಿ ರಾಜ್ಯಮಟ್ಟದ ನುಡಿಹಬ್ಬ

ತರಳಬಾಳು ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಸಮ್ಮತಿ: ಕಸಾಪ ಅಧ್ಯಕ್ಷರ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 8 ಜುಲೈ 2025, 5:50 IST
Last Updated 8 ಜುಲೈ 2025, 5:50 IST
ಚಿತ್ರದುರ್ಗ, ದಾವಣಗೆರೆ ಮತ್ತು ಚಿಕ್ಕಮಗಳೂರು ಜಿಲ್ಲಾ ಸಾಹಿತ್ಯ ಪರಿಷತ್‌ ಅಧ್ಯಕ್ಷರು ಸೋಮವಾರ ಸಿರಿಗೆರೆಯ ನ್ಯಾಯಪೀಠದಲ್ಲಿ ತರಳಬಾಳು ಪೀಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅವರನ್ನು ಭೇಟಿ ಮಾಡಿ ನುಡಿಹಬ್ಬದ ಬಗ್ಗೆ ಚರ್ಚಿಸಿದರು 
ಚಿತ್ರದುರ್ಗ, ದಾವಣಗೆರೆ ಮತ್ತು ಚಿಕ್ಕಮಗಳೂರು ಜಿಲ್ಲಾ ಸಾಹಿತ್ಯ ಪರಿಷತ್‌ ಅಧ್ಯಕ್ಷರು ಸೋಮವಾರ ಸಿರಿಗೆರೆಯ ನ್ಯಾಯಪೀಠದಲ್ಲಿ ತರಳಬಾಳು ಪೀಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅವರನ್ನು ಭೇಟಿ ಮಾಡಿ ನುಡಿಹಬ್ಬದ ಬಗ್ಗೆ ಚರ್ಚಿಸಿದರು    

ಸಿರಿಗೆರೆ: ‘ಕನ್ನಡ ಸಾಹಿತ್ಯ ಪರಿಷತ್‌ ವತಿಯಿಂದ ತರಳಬಾಳು ಮಠದ ಆಶ್ರಯದಲ್ಲಿ ನವೆಂಬರ್‌ನಲ್ಲಿ ರಾಜ್ಯಮಟ್ಟದ ನುಡಿಹಬ್ಬ ಆಚರಿಸಲು ನಿರ್ಧರಿಸಲಾಗಿದೆ. ಈ ನುಡಿಹಬ್ಬಕ್ಕೆ ತರಳಬಾಳು ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಒಪ್ಪಿಗೆ ಸೂಚಿಸಿದ್ದಾರೆ’ ಎಂದು ಕನ್ನಡ ಸಾಹಿತ್ಯ ಪರಿಷತ್‌ನ ಚಿತ್ರದುರ್ಗ, ದಾವಣಗೆರೆ ಮತ್ತು ಚಿಕ್ಕಮಗಳೂರು ಜಿಲ್ಲಾ ಘಟಕದ ಅಧ್ಯಕ್ಷರಾದ ಕೆ.ಎಂ. ಶಿವಸ್ವಾಮಿ, ಬಿ.ವಾಮದೇವಪ್ಪ ಮತ್ತು ಸೂರಿ ಶ್ರೀನಿವಾಸ್‌ ತಿಳಿಸಿದರು.

ರಾಜ್ಯಮಟ್ಟದ ನುಡಿಹಬ್ಬ ಆಚರಣೆ ಸಂಬಂಧ ಸೋಮವಾರ ಸದ್ಧರ್ಮ ನ್ಯಾಯಪೀಠದಲ್ಲಿ ಶ್ರೀಗಳನ್ನು ಭೇಟಿ ಮಾಡಿ ಚರ್ಚಿಸಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

‘ಹಲವು ವರ್ಷಗಳಿಂದ ಮಠ ಮತ್ತು ಕನ್ನಡ ಸಾಹಿತ್ಯ ಪರಿಷತ್‌ ಸಂಯುಕ್ತಾಶ್ರಯದಲ್ಲಿ ತರಳಬಾಳು ನುಡಿಹಬ್ಬವನ್ನು ಆಚರಿಸಲಾಗುತ್ತಿದೆ. ಈ ಬಾರಿ ಮಧ್ಯ ಕರ್ನಾಟಕದಲ್ಲಿ ನುಡಿಹಬ್ಬ ಆಚರಿಸಲು ಶ್ರೀಗಳಲ್ಲಿ ಮನವಿ ಮಾಡಿದ್ದೆವು. ಅದಕ್ಕೆ ಅವರು ನುಡಿಹಬ್ಬ ರಾಜ್ಯಮಟ್ಟದ್ದಾಗಿರಲಿ ಎಂದು ಹೇಳಿದ್ದರಿಂದ ಸಿರಿಗೆರೆಯಲ್ಲಿ ನುಡಿಹಬ್ಬ ಆಯೋಜಿಸಲಾಗುವುದು. ಈ ಕಾರ್ಯಕ್ರಮ ಹಿಂದಿನ ಎಲ್ಲ ಕಾರ್ಯಕ್ರಮಗಳಿಗಿಂತ ಭಿನ್ನವಾಗಿರಲಿದೆ’ ಎಂದರು.

ADVERTISEMENT

‘ಮಧ್ಯಕರ್ನಾಟಕದ ಜಿಲ್ಲೆಗಳಾದ ಚಿತ್ರದುರ್ಗ, ದಾವಣಗೆರೆ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ಸಾಹಿತಿಗಳು, ಕವಿಗಳನ್ನು ಈ ನುಡಿಹಬ್ಬದಲ್ಲಿ ವಿಶೇಷವಾಗಿ ಆಹ್ವಾನಿಸಲಾಗುವುದು’ ಎಂದು ಅವರು ಹೇಳಿದರು.

‘ಸಿರಿಗೆರೆ ಮಠದ ವತಿಯಿಂದ ತರಳಬಾಳು ನುಡಿಹಬ್ಬವನ್ನು ಪ್ರತಿವರ್ಷ ವಿಶಿಷ್ಟವಾಗಿ ಆಚರಿಸಲಾಗುತ್ತಿದೆ. ಈ ಬಾರಿ ಮೂರು ಜಿಲ್ಲೆಗಳ ವತಿಯಿಂದ ಜುಲೈ 27ರಂದು ಅಂತರ ಜಿಲ್ಲಾ ಕವಿಗೋಷ್ಠಿ ಏರ್ಪಡಿಸಲಾಗುವುದು’ ಎಂದರು.

‘ನುಡಿಹಬ್ಬದಲ್ಲಿ ಅರ್ಥಪೂರ್ಣ ಚರ್ಚೆಗಳು ನಡೆಯಬೇಕು. ನಾಡಿನ ಹಿರಿಯ ಕವಿಗಳನ್ನು ಆಹ್ವಾನಿಸಿ ಕವಿಗೋಷ್ಠಿ  ಆಯೋಜಿಸಬೇಕೆಂದು ಶ್ರೀಗಳು ಸೂಚನೆ ನೀಡಿದ್ದಾರೆ’ ಎಂದರು. ಪರಿಷತ್‌ನ ಚಿತ್ರದುರ್ಗ ಜಿಲ್ಲಾ ಘಟಕದ ಕಾರ್ಯದರ್ಶಿ ಮಳಲಿ ಶ್ರೀನಿವಾಸ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.