ADVERTISEMENT

ಚಿತ್ರದುರ್ಗ | ಕ್ರಿಯಾಶೀಲವಾಗಲಿ ಸಮೂಹ ಒಗ್ಗೂಡಿಸುವ ಪ್ರಕ್ರಿಯೆ: ರವಿಕಾಂತೇಗೌಡ

‘ಕಾಡು ಕಾಯುವ ಮರ’ ಕಥಾ ಸಂಕಲನ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2025, 6:36 IST
Last Updated 4 ಆಗಸ್ಟ್ 2025, 6:36 IST
ಚಿತ್ರದುರ್ಗದ ಪತ್ರಕರ್ತರ ಭವನದಲ್ಲಿ ಭಾನುವಾರ ಸಾಹಿತಿ ಜಡೇಕುಂಟೆ ಮಂಜುನಾಥ್‌ ಅವರ ‘ಕಾಡು ಕಾಯುವ ಮರ’ ಕಥಾ ಸಂಕಲನವನ್ನು ಲೇಖಕ ಜಿ.ಎನ್‌.ಮೋಹನ್‌ ಬಿಡುಗಡೆಗೊಳಿಸಿದರು
ಚಿತ್ರದುರ್ಗದ ಪತ್ರಕರ್ತರ ಭವನದಲ್ಲಿ ಭಾನುವಾರ ಸಾಹಿತಿ ಜಡೇಕುಂಟೆ ಮಂಜುನಾಥ್‌ ಅವರ ‘ಕಾಡು ಕಾಯುವ ಮರ’ ಕಥಾ ಸಂಕಲನವನ್ನು ಲೇಖಕ ಜಿ.ಎನ್‌.ಮೋಹನ್‌ ಬಿಡುಗಡೆಗೊಳಿಸಿದರು   

ಚಿತ್ರದುರ್ಗ: ‘ಸಮೂಹ ವಿವೇಕವನ್ನು ನಿರಾಕರಿಸುವ ಕಾಲಘಟ್ಟದಲ್ಲಿ ನಾವುಗಳಿದ್ದೇವೆ. ಇಂತಹ ಸ್ಥಿತಿಯಲ್ಲಿ ಸಮೂಹಗಳನ್ನು ಒಗ್ಗೂಡಿಸುವ ಕ್ರಿಯಾಶೀಲತೆ ನಮಗೆ ಬಹಳ ಮುಖ್ಯ’ ಎಂದು ಪೂರ್ವ ವಲಯದ ಐಜಿಪಿ ಬಿ.ಆರ್‌.ರವಿಕಾಂತೇಗೌಡ ಅಭಿಪ್ರಾಯ ವ್ಯಕ್ತಪಡಿಸಿದರು.

ನಗರದ ಪತ್ರಕರ್ತರ ಭವನದಲ್ಲಿ ಭಾನುವಾರ ಲಂಕೇಶ್‌ ವಿಚಾರ ವೇದಿಕೆಯಿಂದ ಆಯೋಜಿಸಿದ್ದ ಸಾಹಿತಿ ಜಡೇಕುಂಟೆ ಮಂಜುನಾಥ್‌ ಅವರ ‘ಕಾಡು ಕಾಯುವ ಮರ’ ಕಥಾ ಸಂಕಲನದ ಬಿಡುಗಡೆ ಸಮಾರಂಭ ಉದ್ಘಾಟಿಸಿದ ಅವರು, ‘ಪ್ರಜಾಪ್ರಭುತ್ವವನ್ನು ಪ್ರೀತಿಸುವ, ಗೌರವಿಸುವ ಮನಸ್ಸುಗಳು ಹೆಚ್ಚಾಗಬೇಕು. ಅಂತಹ ವಾತಾವರಣವನ್ನು ಸೃಷ್ಟಿಸುವ ಹೊಣೆ ನಮ್ಮ ಮೇಲಿದೆ’ ಎಂದರು.

‘ಸಮೂಹಗಳನ್ನು ಒಗ್ಗೂಡಿಸುವ ಪ್ರಕ್ರಿಯೆಯನ್ನು ಅತ್ಯಂತ ಸೂಕ್ಷ್ಮವಾಗಿ ಸಾಹಿತಿ ಜಡೇಕುಂಟೆ ಮಂಜುನಾಥ್‌ ತಮ್ಮ ಕಥಾ ಸಂಕಲನದ ಮೂಲಕ ತೋರಿದ್ದಾರೆ. ಅದಕ್ಕೆ ಅಪ್ಪನ ತಪ್ಪಡಿ, ದೇಗುಲದ ಗಂಟೆ ಮೊಳಗಲಿಲ್ಲ ಈ ಕತೆಗಳೇ ಸಾಕ್ಷಿಯಾಗಿವೆ. ಜಾತಿ ವ್ಯವಸ್ಥೆಯ ಬಗ್ಗೆ ಪ್ರತಿರೋಧ, ಜಿಗುಪ್ಸೆಯ ಮನೋಭಾವ ಅಭಿವ್ಯಕ್ತಗೊಂಡಿದೆ. ಅಷ್ಟೇ ಅಲ್ಲದೇ ತಾರತಮ್ಯ ಭಾವದ ಬಗ್ಗೆ ಸಿಟ್ಟು, ಇದು ನಾಶ ಆಗಬೇಕು ಎನ್ನುವ ಇಚ್ಛೆ ಸ್ಪಷ್ಟವಾಗಿ ವ್ಯಕ್ತವಾಗಿದೆ’ ಎಂದು ತಿಳಿಸಿದರು.

ADVERTISEMENT

‘ಎಲ್ಲ ಸಾಹಿತ್ಯ ಚಳವಳಿಗಳಲ್ಲೂ ಬಹಳ ಪ್ರಸಿದ್ಧವಾದ ಪ್ರಕಾರ ಇದ್ದರೆ ಅದು ಕಥಾ ಪರಂಪರೆ. ಮಾಸ್ತಿಯವರ ‘ವೆಂಕಟಿಗ ಹೆಂಡತಿ’ ಮರೆಯಲಾಗದ ಕತೆ. ಇದರ ಕಥಾ ಹೂರಣ, ಕತೆಯ ನಿರೂಪಣೆ, ಕತೆಯಲ್ಲಿ ಮಾಡುವ ಪ್ರಯೋಗ ಗಮನಿಸಿದಾಗ ಮಾಸ್ತಿ ಎಂತಹ ಮಾಸ್ಟರ್‌ ರೈಟರ್ ಎಂಬುದು ಅರಿವಿಗೆ ಬರುತ್ತದೆ. ಲಂಕೇಶರ ಉಮಾಪತಿಯ ‘ಸ್ಕಾಲರ್‌ಶಿಪ್ ಯಾತ್ರೆ’ ಮನಸ್ಸಿನಲ್ಲಿ ಅನೇಕ ತಲ್ಲಣಗಳನ್ನು ಉಂಟು ಮಾಡುತ್ತದೆ. ಅನಂತಮೂರ್ತಿಯವರ ‘ಕಾರ್ತೀಕ’, ದೇವನೂರು ಮಹಾದೇವ ಅವರ ‘ಅಮಾಸ’, ಬೆಸರಗಹಳ್ಳಿ ರಾಮಣ್ಣ ಅವರ ‘ಗಾಂಧಿಯಂತ ಕತೆಗಳು’ ನಮ್ಮ ಮನಸ್ಸಿನ ಧಾರಣಾಶಕ್ತಿಯನ್ನು ಹೆಚ್ಚಿಸುತ್ತವೆ’ ಎಂದರು.

‘ಜಡೇಕುಂಟೆ ಮಂಜುನಾಥ್‌ ತಮ್ಮ ಕತೆಗಳಲ್ಲಿ ಕಟ್ಟಿಕೊಡುವ ಸಾಮಾಜಿಕ ಪರಿಸರ, ಭಾಷೆ, ರೂಪಕಗಳು ಅನನ್ಯವಾದವು. ಇಲ್ಲಿನ ಕತೆಗಳು ಸ್ಥಿತ್ಯಂತರವನ್ನು ಬಯಸುತ್ತವೆ. ಬಯಲುಸೀಮೆಯ ಪ್ರಾದೇಶಿಕ ಸೊಗಡನ್ನು ಕತೆಗಳಲ್ಲಿ ಸಮರ್ಥವಾಗಿ ಹಿಡಿದಿಟ್ಟಿದ್ದಾರೆ’ ಎಂದು ಉಪನ್ಯಾಸಕಿ ಪಿ.ಭಾರತೀದೇವಿ ವಿಶ್ಲೇಷಿಸಿದರು.

‘ಬರೆಯುವ ಪ್ರಕ್ರಿಯೆ ಬದಲಾಗಬೇಕು. ಪತ್ರಕರ್ತರು ಕತೆಗಾರರಾದಾಗ ಕತೆಗಳ ಸ್ವರೂಪ, ಸಾಮಾಜಿಕತೆ ಮತ್ತು ಪರಿಭಾಷೆ ಹೆಚ್ಚು ತೀವ್ರವಾಗುತ್ತದೆ. ಜಡೇಕುಂಟೆ ಮಂಜುನಾಥ್‌ರವರ ಕಥಾಲೋಕ ತುಂಬಾ ವಿಶಿಷ್ಟವಾದದ್ದು. ಆರಂಭದಿಂದಲೂ ಅವರ ಬರಹಗಳನ್ನು ಗಮನಿಸಿದ್ದೇನೆ. ಅವರಿಂದ ಕನ್ನಡದ ಬರಹ ಪರಂಪರೆಗೆ ಇನ್ನಷ್ಟು ಮೌಲಿಕ ಕೊಡುಗೆ ನಿರೀಕ್ಷಿಸಬಹುದು’ ಎಂದು ಲೇಖಕ ಜಿ.ಎನ್‌.ಮೋಹನ್‌ ತಿಳಿಸಿದರು.

‘ಬಯಲುಸೀಮೆ ಚಳ್ಳಕೆರೆಯಲ್ಲಿ ತುಂಬಾ ಜನ ಬರಹಗಾರರು ಇದ್ದಾರೆ. ಗ್ರಾಮೀಣ ಹಿನ್ನಲೆಯ ಅನುಭವವನ್ನು ಈ ಕಥಾ ಸಂಕಲನದಲ್ಲಿ ದಾಖಲಿಸಿದ್ದಾರೆ. ಪತ್ರಕರ್ತರಾಗಿ ದೀರ್ಘಕಾಲದ ಒಡನಾಟ ಇದೆ. ಅವರು ಹೀಗೆ ಸಾಮಾಜಿಕ ಕಳಕಳಿಯಿಂದ ತಮ್ಮ ಬರಹಗಳನ್ನು ಮುಂದುವರಿಸಲಿ’ ಎಂದು ಶಾಸಕ ಟಿ.ರಘುಮೂರ್ತಿ ಹಾರೈಸಿದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರಂಜಿತ್‌ ಕುಮಾರ್‌ ಬಂಡಾರು, ಮಾಧ್ಯಮ ಅಕಾಡೆಮಿ ಸದಸ್ಯ ಎಂ.ಎನ್‌.ಅಹೋಬಳಪತಿ, ಸಹಾಯಕ ಪ್ರಾಧ್ಯಾಪಕ ಆರ್‌.ಮಂಜುನಾಥ್‌, ಪತ್ರಕರ್ತರ ಸಂಘದ ಅಧ್ಯಕ್ಷ ದಿನೇಶ್‌ ಗೌಡಗೆರೆ, ವ್ಯಂಗ್ಯಚಿತ್ರಕಾರ ಬಿ.ಜಿ.ಗುಜ್ಜಾರ್‌ ಇದ್ದರು.

ಸಂವಿಧಾನವನ್ನು ಗೌರವಿಸುವವರಿಗೆ ಜಾತಿಯತೆ ಹೋಗಬೇಕು ಎನ್ನುವ ಮೂಲ ಬಯಕೆ ಇರಬೇಕು. ಇಂತಹವರು ಮಾತ್ರ ಎಲ್ಲರ ಮನಸ್ಸು ತಟ್ಟುವ ಬರಹಗಳನ್ನು ನೀಡಬಲ್ಲರು. ಜತೆಗೆ ಸಮೂಹವನ್ನು ಸ್ಪರ್ಶಿಸಬಲ್ಲರು.
ಬಿ.ಆರ್‌.ರವಿಕಾಂತೇಗೌಡ ಪೂರ್ವ ವಲಯ ಪೊಲೀಸ್‌ ಮಹಾ ನಿರ್ದೇಶಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.