ADVERTISEMENT

ನಾಯಕನಹಟ್ಟಿಯಲ್ಲಿ ನಾಯಿಗಳ ಹಾವಳಿ: ದಿನೇದಿನೇ ಹೆಚ್ಚುತ್ತಿರುವ ಗಾಯಾಳುಗಳ ಸಂಖ್ಯೆ

ವಿ.ಧನಂಜಯ
Published 9 ಜನವರಿ 2026, 7:05 IST
Last Updated 9 ಜನವರಿ 2026, 7:05 IST
ನಾಯಕನಹಟ್ಟಿ ಪಟ್ಟಣದಲ್ಲಿ ಹಾದುಹೋಗಿರುವ ರಾಜ್ಯಹೆದ್ದಾರಿ– 45ರಲ್ಲಿ ಬೀದಿನಾಯಿಗಳ ಹಾವಳಿ ಹೆಚ್ಚಾಗಿರುವುದು 
ನಾಯಕನಹಟ್ಟಿ ಪಟ್ಟಣದಲ್ಲಿ ಹಾದುಹೋಗಿರುವ ರಾಜ್ಯಹೆದ್ದಾರಿ– 45ರಲ್ಲಿ ಬೀದಿನಾಯಿಗಳ ಹಾವಳಿ ಹೆಚ್ಚಾಗಿರುವುದು    

ನಾಯಕನಹಟ್ಟಿ: ಹೋಬಳಿಯಾದ್ಯಂತ ದಿನೇದಿನೇ ಬೀದಿ ನಾಯಿ ಕಡಿತದ ಪ್ರಕರಣಗಳು ಹೆಚ್ಚಾಗುತ್ತಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ಸಾರ್ವಜನಿಕರು ಒಬ್ಬಂಟಿಯಾಗಿ ಓಡಾಡಲು ಭಯಪಡುವ ವಾತಾವರಣ ನಿರ್ಮಾಣವಾಗಿದೆ.

ಹೋಬಳಿಯಾದ್ಯಂತ ಅಕ್ಟೋಬರ್ ತಿಂಗಳಲ್ಲಿ 62, ನವೆಂಬರ್‌ನಲ್ಲಿ 56, ಡಿಸೆಂಬರ್‌ನಲ್ಲಿ 51, ಜನವರಿ ಮೊದಲವಾರ 12 ಜನರಿಗೆ ನಾಯಿಗಳು ಕಚ್ಚಿದ ಪ್ರಕರಣಗಳು ದಾಖಲಾಗಿವೆ. ಎಲ್ಲ ವಯೋಮಾನದವರೂ ನಾಯಿಗಳ ದಾಳಿಗೆ ತುತ್ತಾಗಿದ್ದಾರೆ.

ನಾಯಕನಹಟ್ಟಿ ಹೋಬಳಿಯ 48 ಗ್ರಾಮಗಳಲ್ಲಿ ಈ ಹಿಂದಿನ ವರ್ಷಗಳಲ್ಲಿ ನಾಯಿ ಕಡಿತದ 100ರಿಂದ 120 ಪ್ರಕರಣಗಳು ಕಂಡುಬರುತ್ತಿದ್ದವು. ಆದರೆ, ಕಳೆದ 3 ತಿಂಗಳಲ್ಲಿ ಹೆಚ್ಚು ಪ್ರಕರಣಗಳು ದಾಖಲಾಗಿವೆ. ದಿನದಿಂದ ದಿನಕ್ಕೆ ಬೀದಿನಾಯಿಗಳ ಸಂಖ್ಯೆಯೂ ಹೆಚ್ಚುತ್ತಿದ್ದು, ನಾಯಕನಹಟ್ಟಿ ಪಟ್ಟಣದಲ್ಲೂ ಆರು ತಿಂಗಳಲ್ಲಿ ನಾಯಿಗಳ ಸಂಖ್ಯೆ ದ್ವಿಗುಣವಾಗಿದೆ.

ADVERTISEMENT

ನಾಯಕನಹಟ್ಟಿ ಪಟ್ಟಣದ ಪಾದಗಟ್ಟೆ, ತೇರುಬೀದಿ, ಜೆ.ಸಿ. ರಸ್ತೆ, ಕೆನರಾ ಬ್ಯಾಂಕ್ ಮುಂಭಾಗದಲ್ಲಿ ಆರು ತಿಂಗಳಿನಿಂದ ಬೀದಿನಾಯಿಗಳ ಹಾವಳಿ ಹೆಚ್ಚಾಗಿದ್ದು, ಮಹಿಳೆಯರು, ಮಕ್ಕಳು, ವಾಹನ ಸವಾರರು ಜೀವಭಯದಲ್ಲಿ ಸಂಚರಿಸುವ ಸ್ಥಿತಿ ಎದುರಾಗಿದೆ. ಬೇಕರಿಗಳು, ಕೋಳಿ, ಚಿಕನ್ ಅಂಗಡಿಗಳ ಬಳಿ ಜಮಾಯಿಸಿ ಬ್ಯಾಗ್‌ಗಳಲ್ಲಿರುವ ಸಾಮಗ್ರಿಗಳನ್ನು ಕವರ್ ಸಮೇತ ಎಳೆದು ತಿನ್ನುತ್ತವೆ. ಇವುಗಳ ಉಪಟಳದಿಂದ ಸಾರ್ವಜನಿಕರು ಹೈರಾಣಾಗಿದ್ದಾರೆ.

ಪಟ್ಟಣದ ಪಾದಗಟ್ಟೆ, ಸಂತೆ ಮೈದಾನ, ಬಸ್‌ ನಿಲ್ದಾಣ, ಕೋಲಮ್ಮನಹಳ್ಳಿ ರಸ್ತೆ, ಜೆ.ಸಿ ರಸ್ತೆ, ಶಾದಿ ಮಹಲ್ ರಸ್ತೆಗಳಲ್ಲಿರುವ ಕೋಳಿ ಮತ್ತು ಮಾಂಸದಂಗಡಿ ಮತ್ತು ಮಾಂಸಾಹಾರದ ಹೋಟೆಲ್ ಸಮೀಪ ನಾಯಿಗಳ ದಂಡು ಬೀಡು ಬಿಟ್ಟಿರುತ್ತದೆ. ಈ ಪ್ರದೇಶಗಳಲ್ಲಿ ಜನ ಓಡಾಡಲು ಭಯ ಪಡುತ್ತಾರೆ. ಸೈಕಲ್ ಮತ್ತು ಬೈಕ್‌ಗಳು ಸಂಚರಿಸುವ ವೇಳೆ ಹಿಂಬಾಲಿಸಿಕೊಂಡು ಬಂದು ದಾಳಿ ನಡೆಸುತ್ತವೆ. ಈ ಘಟನೆಯಲ್ಲಿ ಹಲವು ಮಂದಿ ಬಿದ್ದು ಗಾಯಗೊಂಡಿದ್ದಾರೆ.

ತೊರೆಕೋಲಮ್ಮನಹಳ್ಳಿ ರಸ್ತೆಯಲ್ಲಿರುವ ಕಸದರಾಶಿ ಮತ್ತು ಚಿಕ್ಕಕೆರೆಯ ಸಮೀಪ ಸುರಿಯುವ ಕೋಳಿ, ಮಾಂಸದಂಗಡಿಗಳ ತ್ಯಾಜ್ಯ, ಕಲ್ಯಾಣ ಮಂಟಪಗಳ ಹಿಂಬದಿಯು ನಾಯಿಗಳ ಮತ್ತೊಂದು ಅಡ್ಡೆಯಾಗಿದ್ದು, ತ್ಯಾಜ್ಯದಲ್ಲಿನ ಆಹಾರ ತಿನ್ನಲು ಶ್ವಾನಗಳ ಗುಂಪುಗಳ ನಡುವೆ ಕಾದಾಟ ನಡೆಯುತ್ತಲೇ ಇರುತ್ತದೆ. ರಾತ್ರಿ ವೇಳೆ ನಾಯಿಗಳ ಕೂಗಾಟ, ಚೀರಾಟದಿಂದ ನೆಮ್ಮದಿಯಾಗಿ ನಿದ್ದೆ ಮಾಡಲು ಸಾಧ್ಯವಾಗುವುದಿಲ್ಲ. ನಾಯಿಗಳ ಉಪಟಳಕ್ಕೆ ಕಡಿವಾಣ ಹಾಕಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಬೇರೆ ಊರುಗಳಿಂದ ಬೀದಿನಾಯಿಗಳನ್ನು ಹಿಡಿದು ತಂದು ನಾಯಕನಹಟ್ಟಿ ಪಟ್ಟಣಕ್ಕೆ ಬಿಟ್ಟಿರುವುದರಿಂದ ಸಂಖ್ಯೆ ಹೆಚ್ಚಾಗಿದೆ. ಹಾಗಾಗಿ 6 ತಿಂಗಳಿನಿಂದ ನಾಯಿಗಳ ಕಾಟ ಹೆಚ್ಚಾಗಿದೆ 
ಜೆ.ಆರ್. ರವಿಕುಮಾರ್ ಪ.ಪಂ.ಸದಸ್ಯ 
ಮೊಳಕಾಲ್ಮುರು ಮತ್ತು ನಾಯಕನಹಟ್ಟಿ ಭಾಗದ ಬೀದಿನಾಯಿಗಳಿಗೆ ಎರಡು ಎಕರೆ ಪ್ರದೇಶದಲ್ಲಿ ಶೆಡ್ ನಿರ್ಮಿಸಿ ಅವುಗಳಿಗೆ ಆಹಾರ ನೀಡುವ ಬಗ್ಗೆ ಕ್ರಿಯಾ ಯೋಜನೆ ತಯಾರಿಸಲಾಗಿದೆ. ಶೀಘ್ರ ಬೀದಿನಾಯಿಗಳ ಉಪಟಳಕ್ಕೆ ಮುಕ್ತಿ ದೊರೆಯಲಿದೆ
ಒ.ಶ್ರೀನಿವಾಸ್ ಮುಖ್ಯಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.