ನಾಯಕನಹಟ್ಟಿ: ಓದಿದ ಸರ್ಕಾರಿ ಶಾಲೆಯನ್ನು ಸ್ವಯಂ ಪ್ರೇರಣೆಯಿಂದ ದತ್ತು ಪಡೆದು ಶಾಲೆಯ ಭೌತಿಕ ಪರಿಸರವನ್ನು ಬದಲಾಯಿಸುವ ಪಣ ತೊಟ್ಟಿದ್ದಾರೆ ಜಾಗನೂರಹಟ್ಟಿ ಗ್ರಾಮದ ಪಿ.ಎಚ್‌ಡಿ ವಿದ್ಯಾರ್ಥಿ ಜಿ.ಎಂ.ಉಮೇಶ್.
ಗ್ರಾಮದ ಯುವಕ ಜಿ.ಎಂ.ಉಮೇಶ್ ಜಾಗನೂರಹಟ್ಟಿ ಗ್ರಾಮದವರಾಗಿದ್ದು, ಗ್ರಾಮದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿಯೇ ಒಂದರಿಂದ ಏಳನೇ ತರಗತಿವರೆಗೂ ಅಧ್ಯಯನ ಮಾಡಿದ್ದರು. ನಂತರ ಮೈಸೂರಿನಲ್ಲಿ ಎಂ.ಟೆಕ್, ಮಂಗಳೂರಿನಲ್ಲಿ ಎಂಜಿನಿಯರಿಂಗ್ ಪದವಿ ಪಡೆದು, ಪ್ರಸ್ತುತ ಜಲಂಧರ್ ನಗರದಲ್ಲಿರುವ ವಿಶ್ವವಿದ್ಯಾಲಯದಲ್ಲಿ ಪಿ.ಎಚ್‌ಡಿ ಸಂಶೋಧನೆಯಲ್ಲಿ ತೊಡಗಿದ್ದಾರೆ.
ಈ ಬಗ್ಗೆ ಉಮೇಶ್ ಮಾತನಾಡಿ, ‘ನಾನು ಓದಿದ ಶಾಲೆಯಲ್ಲಿ ಮೂಲಸೌಕರ್ಯಗಳ ಕೊರತೆ ಇತ್ತು. ನಂತರ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಮೈಸೂರು, ಮಂಗಳೂರಿಗೆ ತೆರಳಿದಾಗ ಅಲ್ಲಿನ ಶಾಲಾ–ಕಾಲೇಜುಗಳ ಸ್ಥಿತಿಗತಿ ಅರ್ಥವಾಯಿತು. ನಮ್ಮ ಗ್ರಾಮದ ಮಕ್ಕಳಿಗೂ ಶಾಲೆಯಲ್ಲಿ ಹೈಟೆಕ್ ಶೌಚಾಲಯ, ಶುದ್ಧ ಕುಡಿಯುವ ನೀರಿನ ಘಟಕ, ಗ್ರಂಥಾಲಯ, ಕಂಪ್ಯೂಟರ್ ಮತ್ತು ಉಚಿತ ವೈ-ಫೈ ವ್ಯವಸ್ಥೆ, ಪ್ರಥಮ ಚಿಕಿತ್ಸೆ ಘಟಕ, ಶಾಲಾ ಕಟ್ಟಡಕ್ಕೆ ಬಣ್ಣ ಬಳಿಸುವುದು, ಗ್ರೀನ್‌ಬೋರ್ಡ್, ಶಾಲಾ ಆವರಣದಲ್ಲಿ ಸಸಿ ನೆಡುಸುವುದು, ಯೋಗ ಶಿಬಿರ ಸೇರಿದಂತೆ ಹಲವು ಸೌಲಭ್ಯಗಳು ದೊರೆಯಬೇಕು ಎಂಬ ಉದ್ದೇಶದಿಂದ ಶಾಲೆಯನ್ನು ದತ್ತು ಪಡೆದಿದ್ದೇನೆ’ ಎಂದು ಹೇಳಿದರು.
‘ಜಾಗನೂರಹಟ್ಟಿ ಶಾಲೆಯಲ್ಲಿ ಹಲವು ಮೂಲಸೌಕರ್ಯಗಳ ಕೊರತೆ ಇತ್ತು. ಕೊರತೆಗಳನ್ನು ಬಗೆಹರಿಸಲು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿತ್ತು. ಆದರೆ, ಗ್ರಾಮದ ಯುವಕ ಜಿ.ಎಂ.ಉಮೇಶ್ ವರ್ಷದ ಅವಧಿಗೆ ಶಾಲೆಯನ್ನು ದತ್ತು ಪಡೆದಿರುವುದು ಸಂತಸ ತಂದಿದೆ. ಈ ಕಾರ್ಯ ಇತರೆ ಯುವಕರಿಗೂ ಮಾದರಿಯಾಗಿದೆ’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್.ಸುರೇಶ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.