
ಹಿರಿಯೂರು: ಕಲಿಕೆಯಲ್ಲಿ ಆಸಕ್ತಿ, ಶ್ರದ್ಧೆ, ಸತತ ಪರಿಶ್ರಮ, ಗುರುಗಳ ಮಾರ್ಗದರ್ಶನ, ಪೋಷಕರ ಹಿತವಚನ ಪಾಲಿಸಿದಲ್ಲಿ ಗುರಿ ತಲುಪುವುದು ಸುಲಭ ಎಂದು ಹಿನ್ನೆಲೆ ಗಾಯಕಿ ಸುಪ್ರಿಯಾ ರಾಮ್ ಹೇಳಿದರು.
ನಗರದ ಗಂಗಾ ಸಮೂಹ ವಿದ್ಯಾ ಸಂಸ್ಥೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿದರು.
ಅಗತ್ಯ ಇರುವಷ್ಟು ಮೊಬೈಲ್ ಬಳಕೆ ಮಾಡುವುದು ದೈಹಿಕ, ಮಾನಸಿಕ ಆರೋಗ್ಯಕ್ಕೆ ಒಳ್ಳೆಯದು. ಸಾಧಿಸಲು ಆಗುವಂತಹ ಗುರಿಯನ್ನು ವಿದ್ಯಾರ್ಥಿಗಳು ಇಟ್ಟುಕೊಂಡು ಆ ನಿಟ್ಟಿನಲ್ಲಿ ಪ್ರಯತ್ನ ಮುಂದುವರಿಸಬೇಕು. ಅಂತಹ ಪ್ರಯತ್ನಗಳು ಪ್ರಾಮಾಣಿಕವಾಗಿರಬೇಕು ಎಂದು ಅವರು ಸಲಹೆ ನೀಡಿದರು.
ಜ್ಞಾನ ಗಂಗಾ-3 ಹೆಸರಿನ ವಿಶೇಷ ಸಂಚಿಕೆಯನ್ನು ಲೋಕಾರ್ಪಣೆ ಮಾಡಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎಂ. ತಿಪ್ಪೇಸ್ವಾಮಿ, ‘ಅನುದಾನರಹಿತ ಶಾಲೆಗಳು ವಿದ್ಯಾರ್ಥಿಗಳ ಹಕ್ಕುಗಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಿರುವುದನ್ನು ಈಚಿನ ವರ್ಷಗಳಲ್ಲಿ ಕಾಣುತ್ತಿದ್ದೇವೆ. ಗಂಗಾ ಸೆಂಟ್ರಲ್ ಶಾಲೆ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಒತ್ತುಕೊಡುವ ಮೂಲಕ ಮಕ್ಕಳಿಗೆ ಪರಿಪೂರ್ಣ ಶಿಕ್ಷಣ ನೀಡುತ್ತಿರುವುದು ಸಂತಸದ ಸಂಗತಿ’ ಎಂದರು.
‘ಬೆಳಿಗ್ಗೆ ಎದ್ದ ಮೊದಲ 7 ನಿಮಿಷಗಳನ್ನು ಮಕ್ಕಳು ಸ್ಕ್ರೀನ್ ವೀಕ್ಷಿಸಲು ಬಳಸಬಾರದು. ಸಂಜೆ ಶಾಲೆಯಿಂದ ಬಂದ ನಂತರ ಪೋಷಕರು ಏಳು ನಿಮಿಷ ಮಕ್ಕಳೊಂದಿಗೆ ಶಾಲೆಯ ಚಟುವಟಿಕೆಗಳ ಬಗ್ಗೆ ಮಾತನಾಡಬೇಕು. ರಾತ್ರಿ ಮಲಗುವ ಮುನ್ನ ಮತ್ತೆ ಏಳು ನಿಮಿಷ ಮಕ್ಕಳೊಂದಿಗೆ ಅವರ ದೈನಂದಿನ ಚಟುವಟಿಕೆಗಳ ಬಗ್ಗೆ ಆರೋಗ್ಯಕರ ಸಂವಾದ ಮಾಡಬೇಕು. ‘777 ಮಾರ್ಗ’ ಅನುಸರಿಸಿದಲ್ಲಿ ಮಕ್ಕಳ ಮತ್ತು ಪೋಷಕರ ನಡುವೆ ಒಳ್ಳೆಯ ಅನುಬಂಧ ಬೆಳೆಯುತ್ತದೆ ಎಂದರು.
‘ಬಾಲ್ಯದಲ್ಲಿ ಶಿಕ್ಷಣ ಪಡೆಯಲು ಅನುಭವಿಸಿದ ಕಷ್ಟಗಳೇ ಇಂತಹ ಶಿಕ್ಷಣ ಸಂಸ್ಥೆ ಕಟ್ಟಲು ಪ್ರೇರಣೆ. ಯಾವ ಮಕ್ಕಳೂ ಶಿಕ್ಷಣ ಪಡೆಯುವುದರಿಂದ ವಂಚಿತರಾಗಬಾರದು ಎಂಬ ಉದ್ದೇಶ ನಮ್ಮದು. ಹಿರಿಯರ ಅನುಭವದ ಮಾತುಗಳು ನಮ್ಮ ಬದುಕಿನ ದಿಕ್ಕನ್ನೇ ಬದಲಾಯಿಸಿರುವ ನಿದರ್ಶನಗಳಿವೆ’ ಎಂದು ಸಂಸ್ಥೆಯ ಮುಖ್ಯಸ್ಥ ಓಬಯ್ಯ ತಿಳಿಸಿದರು.
ಸಂಸ್ಥೆಯ ಅಧ್ಯಕ್ಷೆ ಸಿದ್ದಗಂಗಮ್ಮ, ಕಾರ್ಯದರ್ಶಿ ಮನು, ಸದಸ್ಯರಾದ ಲಕ್ಷ್ಮಿ, ಪ್ರಶಾಂತ್, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ, ಪೋಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.