ADVERTISEMENT

ಆನ್‌ಲೈನ್‌ ಪರೀಕ್ಷೆಗೆ ವಿದ್ಯಾರ್ಥಿಗಳ ವಿರೋಧ

ಡಿಜಿಇಟಿ ನಿರ್ಧಾರ ವಿರೋಧಿಸಿ ಎಐಡಿವೈಒ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 10 ಜನವರಿ 2020, 13:49 IST
Last Updated 10 ಜನವರಿ 2020, 13:49 IST
ಐಟಿಐ ವಿದ್ಯಾರ್ಥಿಗಳಿಗೆ ಅನುಷ್ಠಾನಗೊಳಿಸಿದ ಆನ್‌ಲೈನ್‌ ಪರೀಕ್ಷಾ ಪದ್ಧತಿಯನ್ನು ಕೈಬಿಡುವಂತೆ ಒತ್ತಾಯಿಸಿ ಎಐಡಿವೈಒ ನೇತೃತ್ವದಲ್ಲಿ ಚಿತ್ರದುರ್ಗದಲ್ಲಿ ಶುಕ್ರವಾರ ಪ್ರತಿಭಟನೆ ನಡೆಯಿತು.
ಐಟಿಐ ವಿದ್ಯಾರ್ಥಿಗಳಿಗೆ ಅನುಷ್ಠಾನಗೊಳಿಸಿದ ಆನ್‌ಲೈನ್‌ ಪರೀಕ್ಷಾ ಪದ್ಧತಿಯನ್ನು ಕೈಬಿಡುವಂತೆ ಒತ್ತಾಯಿಸಿ ಎಐಡಿವೈಒ ನೇತೃತ್ವದಲ್ಲಿ ಚಿತ್ರದುರ್ಗದಲ್ಲಿ ಶುಕ್ರವಾರ ಪ್ರತಿಭಟನೆ ನಡೆಯಿತು.   

ಚಿತ್ರದುರ್ಗ: ಐಟಿಐ ವಿದ್ಯಾರ್ಥಿಗಳಿಗೆ ಆನ್‍ಲೈನ್ ಪರೀಕ್ಷೆ ಜಾರಿಗೆ ತರಲು ಹೊರಟಿರುವ ತಾಂತ್ರಿಕ ಶಿಕ್ಷಣ ಇಲಾಖೆಯ ನಿರ್ಧಾರವನ್ನು ವಿರೋಧಿಸಿ ಆಲ್‌ ಇಂಡಿಯಾ ಡೆಮಾಕ್ರಟಿಕ್‌ ಯೂಥ್‌ ಆರ್ಗನೈಸೇಷನ್‌ (ಎಐಡಿವೈಓ) ನೇತೃತ್ವದಲ್ಲಿ ನೂರಾರು ವಿದ್ಯಾರ್ಥಿಗಳು ಶುಕ್ರವಾರ ಪ್ರತಿಭಟನೆ ನಡೆಸಿದರು.

ಇಲ್ಲಿನ ಒನಕೆ ಓಬವ್ವ ವೃತ್ತದಲ್ಲಿ ಜಮಾಯಿಸಿದ ವಿದ್ಯಾರ್ಥಿಗಳು ತಾಂತ್ರಿಕ ಶಿಕ್ಷಣ ಇಲಾಖೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಜಿಲ್ಲಾಧಿಕಾರಿ ಕಚೇರಿಯ ಮೂಲಕ ತಾಂತ್ರಿಕ ಶಿಕ್ಷಣ ಇಲಾಖೆ ನಿರ್ದೇಶಕರಿಗೆ ಮನವಿ ರವಾನಿಸಿದರು.

ಏಕಾಏಕಿ ಪರೀಕ್ಷಾ ವಿಧಾನ ಬದಲಾವಣೆಗೆ ಮುಂದಾಗಿದ್ದು ಸರಿಯಲ್ಲ. ಇದರಿಂದ ವಿದ್ಯಾರ್ಥಿಗಳ ಫಲಿತಾಂಶದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಆನ್‌ಲೈನ್‌ ಪರೀಕ್ಷೆಗೆ ಅಗತ್ಯವಿರುವ ಸಿದ್ಧತೆಗಳು ಯಾವ ಕಾಲೇಜಿನಲ್ಲೂ ಪೂರ್ಣಗೊಂಡಿಲ್ಲ. ಉಪನ್ಯಾಸಕರು ಕೂಡ ಇದಕ್ಕೆ ತಯಾರಾಗಿಲ್ಲ. ಕೂಡಲೇ ಈ ‍ಪ್ರಸ್ತಾವವನ್ನು ಕೈಬಿಡಬೇಕು ಎಂದು ಒತ್ತಾಯಿಸಿದರು.

ADVERTISEMENT

‘ಐಟಿಐ ವಿದ್ಯಾರ್ಥಿಗಳಿಗೆ ಆನ್‌ಲೈನ್‌ ಪರೀಕ್ಷಾ ಪದ್ಧತಿ ಅಳವಡಿಸುವುದರಿಂದ ಶುಲ್ಕ ಹೆಚ್ಚಳವಾಗಿದೆ. ಈ ಹಿಂದೆ ಪರೀಕ್ಷಾ ಶುಲ್ಕವನ್ನು ₹ 250 ನಿಗದಿಪಡಿಸಲಾಗಿತ್ತು. ಈಗ ಪ್ರತಿ ವಿಷಯಕ್ಕೆ ₹ 130 ಶುಲ್ಕ, ₹ 50 ಜಿಎಸ್‌ಟಿ ಹಾಗೂ ₹ 20 ಅರ್ಜಿ ಶುಲ್ಕ ವಿಧಿಸಲಾಗುತ್ತಿದೆ. ಐದು ವಿಷಯಕ್ಕೆ ಪ್ರತಿ ವಿದ್ಯಾರ್ಥಿ ₹ 1,000 ಪರೀಕ್ಷಾ ಶುಲ್ಕ ಪಾವತಿಸಬೇಕಿದೆ. ಬಡ ವಿದ್ಯಾರ್ಥಿಗಳೇ ಹೆಚ್ಚಾಗಿರುವ ಐಟಿಐ ಕಾಲೇಜಿನಲ್ಲಿ ಇದು ಅಸಾಧ್ಯ’ ಎಂದು ಎಐಡಿವೈಓ ಜಿಲ್ಲಾ ಸಮಿತಿ ಸದಸ್ಯ ನಿಂಗರಾಜು ಕಿಡಿಕಾರಿದರು.

ಜಿಲ್ಲಾ ಸಮಿತಿ ಸದಸ್ಯ ಮಂಜುನಾಥ್, ‘ವಿದ್ಯಾರ್ಥಿಗಳಿಗೆ ಕೌಶಲ್ಯ ಪೂರ್ಣವಾದ ಕೈಗಾರಿಕಾ ತರಬೇತಿ ನೀಡಬೇಕೇ ಹೊರತು ತಾಂತ್ರಿಕ ಗೊಂದಲ ಸೃಷ್ಟಿ ಮಾಡಬಾರದು. ಪರೀಕ್ಷೆಯನ್ನೂ ಸರಕಿನಂತೆ ಪರಿಗಣಿಸಿ ಜಿಎಸ್‌ಟಿ ವಿಧಿಸಿರುವುದು ಖಂಡನೀಯ. ಈ ವಿದ್ಯಾರ್ಥಿ ವಿರೋಧಿ ಕ್ರಮವನ್ನು ಈ ಕೂಡಲೇ ಹಿಂಪಡೆಯಬೇಕು’ ಎಂದು ಒತ್ತಾಯಿಸಿದರು.

ಎಐಡಿಎಸ್‍ಓ ಜಿಲ್ಲಾ ಕಾರ್ಯದರ್ಶಿ ಸಂಜಯ್, ಮಲ್ಲಿಕಾರ್ಜುನ್‌, ವಿದ್ಯಾರ್ಥಿಗಳಾದ ಶಶಿಕುಮಾರ್, ಅಭಿಷೇಕ್, ಪ್ರಜ್ವಲ್, ವರುಣ್, ಶ್ವೇತಾ, ಅಂಜುಮ್, ಲಲಿತಾ ಪ್ರತಿಭಟನೆಯ ನೇತೃತ್ವ ವಹಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.