ಹಿರಿಯೂರು: 1971– 72ರಲ್ಲಿ ಆರಂಭಗೊಂಡು 2002ರಲ್ಲಿ ಸಮಾಪನಗೊಂಡಿರುವ ಚಿತ್ರದುರ್ಗ ಜಿಲ್ಲೆಯ ಏಕೈಕ ಸಹಕಾರಿ ಸಕ್ಕರೆ ಕಾರ್ಖಾನೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ವಾಣಿವಿಲಾಸ ಸಕ್ಕರೆ ಕಾರ್ಖಾನೆಯನ್ನು ಮರಳಿ ಆರಂಭಿಸುವವರೆಗೆ ಕರ್ನಾಟಕ ರಕ್ಷಣಾ ವೇದಿಕೆ ಹೋರಾಟ ನಡೆಸಲಿದೆ ಎಂದು ವೇದಿಕೆಯ ತಾಲ್ಲೂಕು ಘಟಕದ ಅಧ್ಯಕ್ಷ ರಾಮಕೃಷ್ಣಪ್ಪ ಎಚ್ಚರಿಸಿದರು.
ಸಕ್ಕರೆ ಕಾರ್ಖಾನೆ ಪುನರಾರಂಭಿಸುವಂತೆ ಒತ್ತಾಯಿಸಿ ಶುಕ್ರವಾರ ಕರ್ನಾಟಕ ರಕ್ಷಣಾ ವೇದಿಕೆ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
‘ತಾಲ್ಲೂಕಿನ ವಾಣಿ ವಿಲಾಸ ಜಲಾಶಯಕ್ಕೆ ಆರು ವರ್ಷಗಳಿಂದ ಭದ್ರೆಯ ನೀರು ಹರಿದು ಬರುತ್ತಿರುವ ಕಾರಣ, ರಾಷ್ಟ್ರೀಯ ಹೆದ್ದಾರಿ ನಾಲ್ಕು ಹಾಗೂ ಬೀದರ್– ಶ್ರೀರಂಗಪಟ್ಟಣ ಹೆದ್ದಾರಿಗೆ ಹೊಂದಿಕೊಂಡು 165 ಎಕರೆ ವಿಸ್ತೀರ್ಣದಲ್ಲಿರುವ ಸಕ್ಕರೆ ಕಾರ್ಖಾನೆ ಪುನರಾರಂಭಗೊಂಡಲ್ಲಿ ಜಿಲ್ಲೆಯಲ್ಲಿ ಆರ್ಥಿಕ ಚಟುವಟಿಕೆಗಳು ಮತ್ತೆ ಗರಿಗೆದರಲು ಸಹಾಯವಾಗುತ್ತದೆ. ಮುಳ್ಳುಕೊಂಪೆಗಳಿಂದ ಮುಚ್ಚಿಹೋಗಿರುವ ಸಕ್ಕರೆ ಕಾರ್ಖಾನೆಗೆ ಮರುಜೀವ ನೀಡಿ ಸೈರನ್ ಮೊಳಗುವಂತೆ ಮಾಡುವ ಬದ್ಧತೆಯನ್ನು ರಾಜ್ಯ ಸರ್ಕಾರ ತೋರಿಸಬೇಕಿದೆ’ ಎಂದು ಆಗ್ರಹಿಸಿದರು.
‘1971– 72ರಲ್ಲಿ ಆರಂಭಗೊಂಡಿದ್ದ ಸಕ್ಕರೆ ಕಾರ್ಖಾನೆ 400ಕ್ಕೂ ಹೆಚ್ಚು ಕಾರ್ಮಿಕ ಕುಟುಂಬಗಳಿಗೆ ನೇರವಾಗಿ, ಪರೋಕ್ಷವಾಗಿ ಸಾವಿರಾರು ಕುಟುಂಬಗಳಿಗೆ ಆಧಾರ ಸ್ತಂಭವಾಗಿತ್ತು. ಕಾರ್ಖಾನೆ ನಿತ್ಯ 1,250 ಟನ್ ಕಬ್ಬು ಅರೆಯುವ ಸಾಮರ್ಥ್ಯ ಹೊಂದಿತ್ತು. 1979–80ರಲ್ಲಿ ಡಿಸ್ಟಿಲರಿಯನ್ನೂ ಮಂಜೂರು ಮಾಡಲಾಗಿದೆ. ಮಳೆ ಕೊರತೆಯ ಕಾರಣಕ್ಕೆ ಕಬ್ಬು ಬೆಳೆಯಲಾಗದೆ 1985ರಲ್ಲಿ ಕಾರ್ಖಾನೆಗೆ ಬೀಗಮುದ್ರೆ ಹಾಕಲಾಗಿತ್ತು’ ಎಂದು ಸ್ಮರಿಸಿದರು.
1993ರಲ್ಲಿ ವಾಣಿ ವಿಲಾಸ ಜಲಾಶಯಕ್ಕೆ ಅದೃಷ್ಟವೋ ಎಂಬಂತೆ 108 ಅಡಿ ನೀರು ಬಂದಿದ್ದರಿಂದ ರೈತರ ಒತ್ತಾಯದ ಮೇರೆಗೆ ಸಕ್ಕರೆ ಕಾರ್ಖಾನೆ ಪುನಾರಂಭಗೊಂಡಿತು. ಆದರೆ, ವರ್ಷದಿಂದ ವರ್ಷಕ್ಕೆ ಮಳೆ ಕಡಿಮೆಯಾಗಿ ಜಲಾಶಯದಲ್ಲಿ ನೀರು ಇಲ್ಲವಾದ ಕಾರಣ 2002ರಲ್ಲಿ ಕಾರ್ಖಾನೆ ಮತ್ತೆ ಸ್ಥಗಿತಗೊಂಡು, 2004ರಲ್ಲಿ ಸಮಾಪನ ಆದೇಶ ಹೊರಬಿದ್ದಿದೆ. ಪ್ರಸ್ತುತ ಜಲಾಶಯದಲ್ಲಿ ನೀರಿಗೆ ಕೊರತೆ ಇಲ್ಲ. ಮುಳ್ಳುಕಂಟಿಗಳಿಂದ ಸ್ಮಶಾನದಂತಾಗಿರುವ ಕಾರ್ಖಾನೆಯನ್ನು ಸರ್ಕಾರ ಮತ್ತೆ ಆರಂಭಿಸಬೇಕೆಂಬುದು ಕ್ಷೇತ್ರದ ಜನರ ಬಯಕೆ. ಜನರ ಆಶೋತ್ತರಗಳಿಗೆ ಸ್ಪಂದಿಸುವುದು ರಕ್ಷಣಾ ವೇದಿಕೆ ಜವಾಬ್ದಾರಿ. ಅದಕ್ಕಾಗಿ ಹೋರಾಟ’ ಎಂದು ರಾಮಕೃಷ್ಣಪ್ಪ ಸ್ಪಷ್ಟಪಡಿಸಿದರು.
ಪ್ರತಿಭಟನೆಯಲ್ಲಿ ಮುಖಂಡರಾದ ತಿಪ್ಪೇಸ್ವಾಮಿ, ಗೋ. ಬಸವರಾಜ್, ಡಿ.ಕೆ.ಎಸ್. ದಾದಾಪೀರ್, ಮೊಹಮ್ಮದ್ ಜಾಕಿರ್, ಜಾಫರ್, ಗಿರೀಶ್, ನೂರುಲ್ಲ, ಸತೀಶ್, ಮೊಹಮ್ಮದ್ ಸುಹೇಲ್, ಸೋಮ, ಮಹಾಂತೇಶ್, ಸುಭಾನ್, ದಾದಾಪೀರ್, ಮುತ್ತುರಾಜ್, ರಾಜಣ್ಣ, ಪಿ.ಆಸಿಫ್, ಲೋಹಿತ್, ಪಾತಲಿಂಗಪ್ಪ, ವಿಶ್ವ, ಕಿರಣ್, ಪೂಜಾ, ರಾಜಪ್ಪ, ಶಿವರಾಜು, ರಫೀಕ್, ತೌಸೀಫ್, ಅಸ್ಮತ್, ಅಫ್ರಿದಿ, ಖಲಂದರ್, ನೂರುಲ್ಲಾ, ಮುದ್ದುರಾಜ್ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.