
ಚಿತ್ರದುರ್ಗ: ಇದೇ ಮೊದಲ ಬಾರಿಗೆ ದೇಸಿ ಸಂಸ್ಕೃತಿ, ದೇಸಿ ಆಟ, ಆಹಾರ, ಕ್ರೀಡೆ, ಸಾವಯವ ಕೃಷಿ, ಆಯುರ್ವೇದ ಚಿಕಿತ್ಸೆ, ದೇಸಿ ಉತ್ಪನ್ನಗಳ ಮಾರಾಟ ಹಾಗೂ ಪ್ರದರ್ಶನವನ್ನೊಳಗೊಂಡ ‘ಸ್ವದೇಶಿ ಮೇಳ’ಕ್ಕೆ ಕೋಟೆನಗರಿ ಸಿದ್ಧಗೊಳ್ಳುತ್ತಿದೆ. ನ. 12ರಿಂದ 16ರವರೆಗೆ ಮುರುಘರಾಜೇಂದ್ರ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೇಳವನ್ನು ಸ್ವದೇಶಿ ಜಾಗರಣ ಮಂಚ್ ಆಯೋಜಿಸಿದೆ.
ಸ್ವಾವಲಂಬನೆ ಪರಿಕಲ್ಪನೆಯಡಿ ಸಿದ್ಧಗೊಳ್ಳುತ್ತಿರುವ ಮೇಳದಲ್ಲಿ ದೇಶದ ವಿವಿಧೆಡೆಯಿಂದ ಸ್ವದೇಶಿ ಉತ್ಪನ್ನಗಳನ್ನು ತಯಾರಿಸುವ ಕರಕುಶಲಕರ್ಮಿಗಳು ಭಾಗವಹಿಸಲಿದ್ದಾರೆ. ಸ್ಥಳೀಯರಿಗೆ ತರಬೇತಿ, ಪ್ರಾತ್ಯಕ್ಷಿಕೆ ನಡೆಸಿಕೊಡಲಿದ್ದಾರೆ. ಅದಕ್ಕಾಗಿ ಕ್ರೀಡಾಂಗಣದಲ್ಲಿ 200ಕ್ಕೂ ಹೆಚ್ಚು ಮಳಿಗೆಗಳನ್ನು ಸ್ಥಾಪಿಸಲಾಗುತ್ತಿದೆ. ಜಿಲ್ಲೆಯ ಮಕ್ಕಳು, ಮಹಿಳೆಯರು, ವಿದ್ಯಾರ್ಥಿಗಳು, ಯುವಜನರು, ರೈತರು, ಯುವ ಉದ್ಯಮಿಗಳಿಗೆ ವಿವಿಧ ರೀತಿಯ ಚಟುವಟಿಕೆ ಆಯೋಜಿಸಲಾಗಿದೆ.
ಹಲವು ರೀತಿಯ ಸ್ವದೇಶಿ ಗೋತಳಿ ಪ್ರದರ್ಶನ, ದೇಸಿ ಆಹಾರಗಳ ತಯಾರಿಕೆ ಮತ್ತು ಮಾರಾಟವೂ ಇರಲಿದೆ. ಪ್ರತಿದಿನ ಸಂಜೆ ರಾಷ್ಟ್ರ, ರಾಜ್ಯ ಮಟ್ಟದ ಹಾಗೂ ಸ್ಥಳೀಯ ಕಲಾವಿದರಿಂದ ಸಂಗೀತ, ನಾಟಕ, ಯಕ್ಷಗಾನ, ತೊಗಲು ಗೊಂಬೆಯಾಟ ನಡೆಯಲಿದೆ. ವಿವಿಧ ಆರೋಗ್ಯ ಸಮಸ್ಯೆಗಳಿಂದ ಬಳಲುವವರಿಗೆ ಆಯುರ್ವೇದ, ಪ್ರಕೃತಿ ಚಿಕಿತ್ಸೆಯ ಮಾಹಿತಿಯನ್ನೂ ನೀಡಲಾಗುತ್ತಿದೆ.
ನ.12ರಂದು ವಿಧ್ಯುಕ್ತವಾಗಿ ಮೇಳಕ್ಕೆ ಚಾಲನೆ ದೊರೆಯಲಿದೆ. ಅಂದು ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ದೇಸಿ ಕ್ರೀಡಾ ಸ್ಪರ್ಧೆಗಳು ನಡೆಯಲಿವೆ. ಸಂಜೆ ಜಾನಪದ ಕಲಾವೈಭವದಲ್ಲಿ ಅಜಿತ್ ಬಸಾಪುರ ಹಾಗೂ ತಂಡದಿಂದ ಜನಪದ ಗೀತಾ ಗಾಯನವಿದೆ. ನ.13ಕ್ಕೆ ಸಾರ್ವಜನಿಕರಿಗೆ ನಿತ್ಯ ಬಳಸುವ ವಸ್ತುಗಳ ತಯಾರಿಕಾ ಶಿಬಿರ ನಡೆಯಲಿದೆ. ನಂತರ ಮಹಿಳಾ ಸಮಾವೇಶ ನಡೆಯಲಿದ್ದು ಮಹಿಳಾ ಉದ್ಯಮಿಗಳು ಮಹಿಳೆಯರು ಉದ್ಯಮ ನಡೆಸಲು ಇರುವ ಅವಕಾಶಗಳ ಬಗ್ಗೆ ಮಾಹಿತಿ ನೀಡಲಿದ್ದಾರೆ. ಸಂಜೆ ‘ಶ್ವೇತಕುಮಾರ ಚರಿತ್ರೆ’ ಯಕ್ಷಗಾನ ಪ್ರಸಂಗ ನಡೆಯಲಿದೆ.
ನ.14ರಂದು ಆಯುರ್ವೇದ ಶಿಬಿರ ನಡೆಯಲಿದ್ದು ವಿವಿಧೆಡೆಯಿಂದ ಬರುವ ಆಯುರ್ವೇದ ವೈದ್ಯರು ಪಂಚಕರ್ಮ ಚಿಕಿತ್ಸೆ ಬಗ್ಗೆ ಮಾಹಿತಿನೀಡುವರು. ಮಧ್ಯಾಹ್ನ ಯುವ ಸಮಾವೇಶ ನಡೆಯಲಿದ್ದು ನಿರುದ್ಯೋಗ ಸಮಸ್ಯೆ, ಪರಿಹಾರಗಳ ಬಗ್ಗೆ ತಜ್ಞರು ಉಪನ್ಯಾಸ ನೀಡುವರು. ಸಂಜೆ ಪಂ.ಪ್ರಕಾಶ್ ಹೆಗಡೆ ಕಲ್ಲಾರೆ ಮನೆ, ಪಂ.ವಿಜಯ್ ಗೋನಾಳ್,ಪಂ.ಮಹೇಶ್ ರಾಜ್ ಸಾಲೊಂಕೆ ಅವರಿಂದ ಕೊಳಲು– ಸಿತಾರ್ ಜುಗಲ್‌ಬಂದಿ ಕಾರ್ಯಕ್ರಮವಿದೆ.
ನ.15ರಂದು ತಾರಸಿ ತೋಟ ರೂಪಿಸುವ ತರಬೇತಿ ನಡೆಯಲಿದೆ. ನಂತರ ರೈತರೊಂದಿಗೆ ಸಂವಾದ ನಡೆಯಲಿದ್ದು ಸಾವಯಕ ಕೃಷಿ, ಬಹುಬೆಳೆ ಪದ್ಧತಿ, ಮಾರುಕಟ್ಟೆ, ಸಹಕಾರ ವ್ಯವಸ್ಥೆ ಬಗ್ಗೆ ಚರ್ಚೆ ನಡೆಯಲಿದೆ. ಸಂಜೆಯ ‘ಲಯ ಲಾವಣ್ಯ’ ಕಾರ್ಯಕ್ರಮ ನಡೆಯಲಿದ್ದು ವಿದ್ವಾನ್ ಆನೂನು ಅನಂತಕೃಷ್ಣ ಶರ್ಮ ಅವರ ತಾಳವಾದ್ಯ ಕಚೇರಿ ಇದೆ.
ನ.16ರಂದು ಬೆಳಿಗ್ಗೆ ರಂಗೋಲಿ ಸ್ಪರ್ಧೆ ಇದೆ. ಮಧ್ಯಾಹ್ನ ಪಂಚಗವ್ಯ ಚಿಕಿತ್ಸಾ ಶಿಬಿರ ನಡೆಯಲಿದೆ. ಸಂಜೆ ಶ್ರೀಕೃಷ್ಣ ಪಾರಿಜಾತ ಸೂತ್ರ ಸಲಾಕೆ ಗೊಂಬೆಯಾಟ ನಡೆಯಲಿದೆ. ಎಲ್ಲಾ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಸಾರ್ವಜನಿಕರಿಗೆ ಉಚಿತ ಅವಕಾಶ ಇದೆ.
ಸ್ವಾವಲಂಬನೆ ಕಲ್ಪನೆಯ ಸ್ವದೇಶಿ ಮೇಳವನ್ನು ಪ್ಲಾಸ್ಟಿಕ್ ಮುಕ್ತವಾಗಿ ನಡೆಯುತ್ತಿರುವುದು ವಿಶೇಷವಾಗಿದೆ. ಒಂದೇ ವೇದಿಕೆಯಲ್ಲಿ ಮಕ್ಕಳು ಮಹಿಳೆಯರು ಯುವಕರು ಹಿರಿಯರು ರೈತರು ಪಾಲ್ಗೊಳ್ಳಿದ್ದಾರೆಕೆ.ಎಸ್.ನವೀನ್ ಸ್ವದೇಶಿ ಮೇಳದ ಸಂಯೋಜಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.