
ಚಿತ್ರದುರ್ಗ: ನಗರದ ಮುರುಘರಾಜೇಂದ್ರ ಕ್ರೀಡಾಂಗಣದಲ್ಲಿ ನ. 12ರಿಂದ ನಡೆಯಲಿರುವ ಸ್ವದೇಶಿ ಮೇಳದ ಅಂಗವಾಗಿ ಶನಿವಾರ ಮನೆಮನೆಗೆ ಕರಪತ್ರ ಹಂಚುವ, ಜಾಥಾ ನಡೆಸುವ ಮೂಲಕ ಪ್ರಚಾರಾಂದೋಲನಕ್ಕೆ ಚಾಲನೆ ನೀಡಲಾಯಿತು.
ಸ್ವದೇಶಿ ಜಾಗರಣ ಮಂಚ್ ವತಿಯಿಂದ ಮೇಳ ನಡೆಯಲಿದ್ದು ನಗರದ ನೀಲಕಂಠೇಶ್ವರ ದೇವಾಲಯದಿಂದ ಜಿಲ್ಲಾಧಿಕಾರಿಗಳ ಕಚೇರಿ ವೃತದವರೆಗೆ ಜಾಥಾ ನಡೆಸುವ ಮೂಲಕ ಪ್ರಚಾರಕ್ಕೆ ಚಾಲನೆ ನೀಡಲಾಯಿತು. ಮೇಳ ಸಂಪೂರ್ಣವಾಗಿ ಪ್ಲಾಸ್ಟಿಕ್ ಮುಕ್ತವಾಗಿದ್ದು, ಕಾರ್ಯಕರ್ತರು ಮನೆಮನೆಗೆ ಭೇಟಿ ನೀಡಿ ಕರಪತ್ರಗಳನ್ನು ಹಂಚಿಕೆ ಮಾಡಿ ಮೇಳಕ್ಕೆ ಬರುವಂತೆ ಸಾರ್ವಜನಿಕರಿಗೆ ಸ್ವಾಗತ ಕೋರಿದರು.
ವಿಧಾನ ಪರಿಷತ್ ಸದಸ್ಯ, ಸ್ವದೇಶಿ ಮೇಳದ ಸಂಚಾಲಕ ಕೆ.ಎಸ್. ನವೀನ್ ಮಾತನಾಡಿ ‘5 ದಿನ ನಡೆಯಲಿರುವ ಸ್ವದೇಶಿ ಮೇಳಕ್ಕೆ ರಾಜ್ಯ, ಹೊರರಾಜ್ಯಗಳಿಂದಲೂ ಸಾವಿರಾರು ಜನರು ಬರುತ್ತಿದ್ದಾರೆ. ಸ್ವಾವಲಂಬನೆ ಪರಿಕಲ್ಪನೆ ಅಡಿಯಲ್ಲಿ ದೇಶೀಯ ಸಂಸ್ಕೃತಿ, ಆಹಾರ, ಉತ್ಪನ್ನಗಳನ್ನು ಪ್ರದರ್ಶನ ಮಾಡಲಾಗುವುದು. 200ಕ್ಕೂ ಹೆಚ್ಚು ಮಳಿಗೆಗಳು ಸಿದ್ಧಗೊಂಡಿದ್ದು ಕೋಟೆನಾಡಿನ ಜನರು ಸಕ್ರಿಯವಾಗಿ ಪಾಲ್ಗೊಳ್ಳಬೇಕು’ ಎಂದು ಹೇಳಿದರು.
‘ಸ್ವದೇಶಿ ಗೋತಳಿ ಪ್ರದರ್ಶನ, ದೇಸಿ ಆಹಾರಗಳ ತಯಾರಿಕೆ ಮತ್ತು ಮಾರಾಟವೂ ಇರಲಿದೆ. ಪ್ರತಿದಿನ ಸಂಜೆ ರಾಷ್ಟ್ರ, ರಾಜ್ಯ ಮಟ್ಟದ ಹಾಗೂ ಸ್ಥಳೀಯ ಕಲಾವಿದರಿಂದ ಸಂಗೀತ, ನಾಟಕ, ಯಕ್ಷಗಾನ, ತೊಗಲು ಗೊಂಬೆಯಾಟ ನಡೆಯಲಿದೆ. ವಿವಿಧ ಆರೋಗ್ಯ ಸಮಸ್ಯೆಗಳಿಂದ ಬಳಲುವವರಿಗೆ ಆಯುರ್ವೇದ, ಪ್ರಕೃತಿ ಚಿಕಿತ್ಸೆಯ ಮಾಹಿತಿಯನ್ನೂ ನೀಡಲಾಗುತ್ತಿದೆ’ ಎಂದರು.
‘ಮೇಳದಲ್ಲಿ ಮಕ್ಕಳು, ಮಹಿಳೆಯರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು. ಅವರಿಗಾಗಿ ವಿಶೇಷ ರೀತಿಯ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ. ತಾರಸಿ ತೋಟ ರೂಪಿಸುವ ತರಬೇತಿ, ರೈತರೊಂದಿಗೆ ಸಂವಾದ, ಸಾವಯಕ ಕೃಷಿ, ಬಹುಬೆಳೆ ಪದ್ಧತಿ, ಮಾರುಕಟ್ಟೆ, ಸಹಕಾರ ವ್ಯವಸ್ಥೆ ಬಗ್ಗೆ ಚರ್ಚೆ ನಡೆಯಲಿದೆ. 5 ದಿನಗಳ ಕಾಲ ನಡೆಯುವ ಮೇಳದಲ್ಲಿ ಪ್ರತಿದಿನ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ಇರಲಿದೆ’ ಎಂದರು.
ಮಾಜಿ ಶಾಸಕ ಎಸ್.ಕೆ. ಬಸವರಾಜನ್ ಮಾತನಾಡಿ ‘ಇಂದು ನಾವುಗಳು ರಾಸಾಯನಿಕ ಆಹಾರವನ್ನು ಸೇವನೆ ಮಾಡುವ ಮೂಲಕ ವಿವಿಧ ರೀತಿಯ ರೋಗಗಳಿಗೆ ಆಹ್ವಾನ ನೀಡುತ್ತಿದ್ದೇವೆ. ಇದರ ಬದಲು ಸಾವಯವ ವಸ್ತುಗಳನ್ನು ಬಳಕೆ ಮಾಡುವುದರ ಮೂಲಕ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕಿದೆ. ಹಿಂದಿನ ಕಾಲದಂತೆ ಉತ್ತಮ ಆರೋಗ್ಯ ಹಾಗೂ ಶಕ್ತಿ ನೀಡುವಂತಹ ಆಹಾರದ ಸೇವನೆ ಕಡಿಮೆಯಾಗುತ್ತಿದೆ, ಬೀದಿ ಬದಿ ಆಹಾರ ಸೇವನೆ ಮಾಡುವ ಮೂಲಕ ಆರೋಗ್ಯ ಕಳೆದುಕೊಳ್ಳುತ್ತಿದ್ದೇವೆ’ ಎಂದರು.
‘ನಮ್ಮ ಪೂರ್ವಜರು ಸಾವಯವ ಗೊಬ್ಬರದಿಂದ ತಯಾರಾದ ವಸ್ತುಗಳನ್ನು ಸೇವನೆ ಮಾಡುವ ಮೂಲಕ 100 ವರ್ಷಗಳವರೆಗೆ ಆರೋಗ್ಯದಿಂದ ಬದುಕುತ್ತಿದ್ದರು. ಇಂದಿನ ಯುವ ಪೀಳಿಗೆಯ ಜನರು ರಾಸಾಯನಿಕಯುಕ್ತ ಆಹಾರ ಸೇವನೆ ಮಾಡುತ್ತಿರುವ ಕಾರಣ ಹೃದಯಾಘಾತ, ಕ್ಯಾನ್ಸರ್‌ನಂತರ ರೋಗಗಳಿಗೆ ಬಲಿಯಾಗುತ್ತಿದ್ದಾರೆ. ದೇಸಿ ಆಹಾರ, ದೇಶೀಯ ಜೀವನ ಶೈಲಿ ರೂಪಿಸಿಕೊಳ್ಳುವ ನಿಟ್ಟಿನಲ್ಲಿ ಸ್ವದೇಶಿ ಮೇಳ ಪ್ರಮುಖ ಪಾತ್ರ ವಹಿಸುತ್ತದೆ. ಜಿಲ್ಲೆಯ ಜನರು ಇದರ ಸದುಪಯೋಗ ಮಾಡಿಕೊಳ್ಳಬೇಕು’ ಎಂದರು.
ಕಾರ್ಯಕ್ರಮದಲ್ಲಿ ಸಂಚಾಲಕರಾದ ಸೌಭಾಗ್ಯ ಬಸವರಾಜನ್, ಸಹ ಸಂಚಾಲಕರಾದ ಸಂಪತ್ ಕುಮಾರ್, ವೆಂಕಟೇಶ್ ಯಾದವ್, ರೇಖಾ, ಶಶಿಕಲಾ ರವಿಶಂಕರ್, ಬಸಮ್ಮ, ನಾಗರಾಜ್ ಸಂಗಂ, ಲಿಂಗರಾಜು,ಶ್ಯಾಮಲಾ ಶಿವಪ್ರಕಾಶ್, ಗುರು, ರವೀಂದ್ರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.