ADVERTISEMENT

ತಂತ್ರಜ್ಞಾನ ಮತ್ತು ಕೌಶಲಾಭಿವೃದ್ಧಿ ಕಡೆಗೆ ‘ತರಳಬಾಳು ಹುಣ್ಣಿಮೆ’

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2025, 14:20 IST
Last Updated 6 ಫೆಬ್ರುವರಿ 2025, 14:20 IST
ತರಳಬಾಳು ಹುಣ್ಣಿಮೆಯಲ್ಲಿ ತರಳಬಾಳು ಗ್ರಾಮೀಣ ಅಭಿವೃದ್ಧಿ ಫೌಂಡೇಷನ್‌ ಕಾರ್ಯಕ್ರಮಗಳ ಬಗ್ಗೆ ಎಚ್.ಆರ್. ಬಸವರಾಜಪ್ಪ, ಕೆ.ಪಿ. ಬಸವರಾಜ್‌ ಮಾಹಿತಿ ನೀಡಿದರು
ತರಳಬಾಳು ಹುಣ್ಣಿಮೆಯಲ್ಲಿ ತರಳಬಾಳು ಗ್ರಾಮೀಣ ಅಭಿವೃದ್ಧಿ ಫೌಂಡೇಷನ್‌ ಕಾರ್ಯಕ್ರಮಗಳ ಬಗ್ಗೆ ಎಚ್.ಆರ್. ಬಸವರಾಜಪ್ಪ, ಕೆ.ಪಿ. ಬಸವರಾಜ್‌ ಮಾಹಿತಿ ನೀಡಿದರು   

ಸಿರಿಗೆರೆ: ಶಿಕ್ಷಣ, ಆರೋಗ್ಯ, ತಂತ್ರಜ್ಞಾನ ಮತ್ತು ಕೌಶಲಾಭಿವೃದ್ಧಿ ಕಡೆಗೆ ದಾಪುಗಾಲು ಇಡಲು ತರಳಬಾಳು ಗ್ರಾಮೀಣ ಅಭಿವೃದ್ಧಿ ಫೌಂಡೇಷನ್‌ ಯೋಜನೆ ರೂಪಿಸುತ್ತಿದೆ.

ಸರ್ಕಾರ, ಸಮುದಾಯ ಮತ್ತು ಹಲವು ಖಾಸಗಿ ಉದ್ಯಮ ಸಂಸ್ಥೆಗಳ ಸಹಭಾಗಿತ್ವದಲ್ಲಿ ಈ ಯೋಜನೆಗಳನ್ನು ಸಾಕಾರಗೊಳಿಸಲು ಮುಂದಡಿ ಇಡುತ್ತಿದೆ ಎಂದು ತರಳಬಾಳು ಗ್ರಾಮೀಣಾಭಿವೃದ್ಧಿ ಫೌಂಡೇಷನ್‌ ಕಾರ್ಯದರ್ಶಿ ಕೆ.ಪಿ. ಬಸವರಾಜ್‌ ತಿಳಿಸಿದರು.

ಭರಮಸಾಗರದಲ್ಲಿ ಆಯೋಜಿಸಿರುವ ತರಳಬಾಳು ಹುಣ್ಣಿಮೆಯ ಕಾರ್ಯಕ್ರಮದಲ್ಲಿ ಮಾತನಾಡಿದರು.

ADVERTISEMENT

ತರಳಬಾಳು ಗ್ರಾಮೀಣಾಭಿವೃದ್ಧಿ ಸಂಸ್ಥೆ 1982ರಲ್ಲಿ ಅಸ್ತಿತ್ವಕ್ಕೆ ಬಂದಿದ್ದು, ಆರಂಭದಲ್ಲಿ ಶಾಲಾ ಮಕ್ಕಳಲ್ಲಿ ಕೃಷಿ, ಪರಿಸರ ಸಂರಕ್ಷಣೆ, ಸಸಿ ಸಾಕಣೆ ಮುಂತಾದ ಕಾರ್ಯಕ್ರಮಗಳನ್ನು ಮುಂದಿಟ್ಟುಕೊಂಡು ಕೆಲಸ ಮಾಡಿದೆ. ಸಂಸ್ಥೆಯ ಚಟುವಟಿಕೆಗಳಿಗೆ ಇಂದಿರಾಪ್ರಿಯರ್ಶಿನಿ ಗೌರವ, ರಿಯೋ ಸಮ್ಮೇಳನದ ಪುರಸ್ಕಾರ ಹಾಗೂ ಹಲವು ಪ್ರತಿಷ್ಠಿತ ಗೌರವಗಳು ದೊರಕಿವೆ ಎಂದರು.

ತರಳಬಾಳು ಗ್ರಾಮೀಣ ಅಭಿವೃದ್ಧಿ ಸಂಸ್ಥೆಯು ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯ ಮೂಲಕ ಕೇಂದ್ರ ಮತ್ತು ರಾಜ್ಯ ಸರ್ಕಾರಗಳೊಂದಿಗೆ ಕೈಜೋಡಿಸಿ ಸಾರ್ವಜನಿಕ ನೀತಿಗಳು ಮತ್ತು ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿದೆ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅವರ ಆಶಯದಂತೆ ಸಹಯೋಗ ಆಡಳಿತ ಪದ್ಧತಿಯಲ್ಲಿ ಹಲವು ಚಟುವಟಿಕೆಗಳನ್ನು ರಾಜ್ಯದಾದ್ಯಂತ ವಿಸ್ತರಿಸಿದೆ. ಅದರ ಅಂಗವಾಗಿ ಚಿತ್ರದುರ್ಗ, ದಾವಣಗೆರೆ ಮತ್ತು ಹಾವೇರಿ ಜಿಲ್ಲೆಗಳಲ್ಲಿ 17 ರೈತ ಉತ್ಪಾದಕ ಸಂಸ್ಥೆಗಳನ್ನು ಆರಂಭಿಸಿದೆ. ರೈತರೇ ತಯಾರಿಸುವ ಸಿದ್ಧ ಆಹಾರ ಮತ್ತು ತಿನಿಸುಗಳಿಗೆ ಮಾರುಕಟ್ಟೆ ಒದಗಿಸುವುದು ಸೇರಿದಂತೆ ಚಟುವಟಿಕೆಯನ್ನು ವಿಸ್ತಾರಗೊಳಿಸುತ್ತಿದೆ ಎಂದು ತಿಳಿಸಿದರು.

ಸರ್ಕಾರ ಮತ್ತು ಸಮುದಾಯದ ಸಹಭಾಗಿತ್ವದಲ್ಲಿ ಕೆರೆಗಳನ್ನು ತುಂಬಿಸುವ ಯೋಜನೆಗಳು ಸಫಲವಾಗಿವೆ. ಇದೀಗ ಆರೋಗ್ಯ, ಶಿಕ್ಷಣ, ತಂತ್ರಜ್ಞಾನ ಮತ್ತು ಕೌಶಲಾಭಿವೃದ್ದಿಗೆ ಹೊಸ ಚಿಂತನೆಗಳು ನಡೆಯುತ್ತಿವೆ. ಗ್ರಾಮಾಂತರ ಜನರಿಗೆ ಟೆಲಿ ಮೆಡಿಷನ್‌ ಸೌಲಭ್ಯ ಒದಗಿಸುವುದೂ ಈ ಯೋಜನೆಯ ಭಾಗವಾಗಲಿದೆ ಎಂದರು.

‘ತರಳಬಾಳು ಸಂಸ್ಥೆಯು ಕೃಷಿ ಮತ್ತು ಶಿಕ್ಷಣಕ್ಕೆ ಹಲವು ದಶಕಗಳ ಹಿಂದೆಯೇ ಒತ್ತು ನೀಡಿದೆ. ಅವುಗಳನ್ನು ಮತ್ತಷ್ಟು ಅಭಿವೃದ್ಧಿಪಡಿಸುವುದು ತರಳಬಾಳು ಜಗದ್ಗುರು ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅವರ ಆಶಯವಾಗಿದೆ. ರೈತರಲ್ಲಿ ಕೃಷಿ, ಶಿಕ್ಷಣ, ಆರೋಗ್ಯ, ತಂತ್ರಜ್ಞಾನ ಮತ್ತು ಕೌಶಲ್ಯಾಭಿವೃದ್ಧಿ ವಿಚಾರದಲ್ಲಿ ಹಿರಿಯ ಶ್ರೀಗಳು ಅಡಿಪಾಯ ಒದಗಿಸಿದ್ದರು’ ಎಂದು ರಾಜ್ಯ ರೈತ ಸಂಘ ಹಾಗೂ ಸಾಧು ವೀರಶೈವ ಸಂಘದ ಅಧ್ಯಕ್ಷ ಎಚ್.ಆರ್. ಬಸವರಾಜಪ್ಪ ವಿವರಿಸಿದರು.

ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಬಸವನಗೌಡ, ಚೌಲಿಹಳ್ಳಿ ಶಶಿ ಪಾಟೀಲ್‌ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.