ADVERTISEMENT

ಚಿತ್ರದುರ್ಗ | ಕ್ಷಯ ರೋಗಕ್ಕೆ ಸಕಾಲಕ್ಕೆ ಚಿಕಿತ್ಸೆ ಪಡೆಯಿರಿ: ಡಾ.ಬಿ.ವಿ.ಗಿರೀಶ್‌

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2025, 5:54 IST
Last Updated 11 ಸೆಪ್ಟೆಂಬರ್ 2025, 5:54 IST
ಚಿತ್ರದುರ್ಗದ ನೆಹರೂ ನಗರದ ಉರ್ದು ಶಾಲೆಯಲ್ಲಿ ಆಯೋಜಿಸಿದ್ದ ಕ್ಷಯರೋಗ ಪತ್ತೆ ಹಚ್ಚುವ ಕುರಿತ ಕಾರ್ಯಕ್ರಮದಲ್ಲಿ ತಾಲ್ಲೂಕು ವೈದ್ಯಾಧಿಕಾರಿ ಡಾ.ಬಿ.ವಿ.ಗಿರೀಶ್‌ ಮಾತನಾಡಿದರು
ಚಿತ್ರದುರ್ಗದ ನೆಹರೂ ನಗರದ ಉರ್ದು ಶಾಲೆಯಲ್ಲಿ ಆಯೋಜಿಸಿದ್ದ ಕ್ಷಯರೋಗ ಪತ್ತೆ ಹಚ್ಚುವ ಕುರಿತ ಕಾರ್ಯಕ್ರಮದಲ್ಲಿ ತಾಲ್ಲೂಕು ವೈದ್ಯಾಧಿಕಾರಿ ಡಾ.ಬಿ.ವಿ.ಗಿರೀಶ್‌ ಮಾತನಾಡಿದರು   

ಚಿತ್ರದುರ್ಗ: ‘ಕ್ಷಯರೋಗ ಎಲ್ಲಿದ್ದರೂ ಅದು ಎಲ್ಲೆಡೆ ಇದ್ದಂತೆ. ಆದ್ದರಿಂದ ಸಕಾಲಕ್ಕೆ ಸೂಕ್ತ ಚಿಕಿತ್ಸೆ ಪಡೆಯಬೇಕು’ ಎಂದು ತಾಲ್ಲೂಕು ವೈದ್ಯಾಧಿಕಾರಿ ಡಾ.ಬಿ.ವಿ.ಗಿರೀಶ್‌ ಹೇಳಿದರು.

ಇಲ್ಲಿನ ನೆಹರೂ ನಗರದ ಉರ್ದು ಶಾಲೆಯಲ್ಲಿ ಬುಧವಾರ ಆಯೋಜಿಸಿದ್ದ ಕ್ಷಯರೋಗ ಪತ್ತೆ ಕುರಿತ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಕ್ಷಯ ಮುಕ್ತಗೊಳಿಸುವ ಗುರಿ ಸರ್ಕಾರದ್ದಾಗಿದೆ. ಆದ್ದರಿಂದ ಜನರ ಸಹಕಾರ ಬಹು ಮುಖ್ಯ’ ಎಂದರು.

‘ಎರಡು ವಾರಕ್ಕಿಂತ ಹೆಚ್ಚು ಕೆಮ್ಮು, ಕಫ, ಕಫದಲ್ಲಿ ರಕ್ತ ಬರುವುದು, ತೂಕ ಕಡಿಮೆಯಾಗುವುದು, ಹಸಿವಾಗದೆ ಇರುವುದು, ಇಂತಹ ಲಕ್ಷಣಗಳಿದ್ದರೆ ಸರ್ಕಾರಿ ಆಸ್ಪತ್ರೆಗಳಲ್ಲಿ ತಪ್ಪದೇ ಪರೀಕ್ಷೆ ಮಾಡಿಸಬೇಕು. ರೋಗ ದೃಢಪಟ್ಟರೆ ಮನೆ ಬಾಗಿಲಿಗೆ ಉಚಿತವಾಗಿ ಔಷಧಿ ತಲುಪಿಸಲಾಗುತ್ತದೆ. ರೋಗ ನಿರ್ಮೂಲನೆಗೆ ಸಹಕರಿಸಬೇಕು’ ಎಂದು ತಿಳಿಸಿದರು.

ADVERTISEMENT

‘ಪೌಷ್ಟಿಕ ಆಹಾರಕ್ಕಾಗಿ ಕ್ಷಯರೋಗಿಯ ಬ್ಯಾಂಕ್‌ ಖಾತೆಗೆ ನೇರವಾಗಿ ₹1,000 ಗಳನ್ನು ಸರ್ಕಾರ ನೀಡುತ್ತಿದೆ. ಇದರ ಸದುಪಯೋಗಪಡಿಸಿಕೊಂಡು ಮುಂಜಾಗ್ರತಾ ಕ್ರಮಗಳನ್ನು ಪಾಲಿಸಿ ಆರೋಗ್ಯ ಕಾಪಾಡಿಕೊಳ್ಳಬೇಕು’ ಎಂದು ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಕೃಷ್ಣನಾಯಕ್‌ ಸಲಹೆ ನೀಡಿದರು.

‘ಕ್ಷಯಕ್ಕೆ ಭಯಬೇಡ ನಿಗದಿತ ಚಿಕಿತ್ಸೆ ಲಭ್ಯವಿದೆ. ರೋಗಿಯ ಮನೆಯಲ್ಲಿ ಇರುವ ಸಂಪರ್ಕಿತರು ತಪ್ಪದೇ ವೈದ್ಯರಲ್ಲಿ ಪರೀಕ್ಷೆ ಮಾಡಿಸಿಕೊಂಡು ಮುಂಜಾಗ್ರತಾ ಕ್ರಮ ಪಾಲಿಸಬೇಕು. ವೈಯಕ್ತಿಕ ಸ್ವಚ್ಛತೆಗೆ ಆದ್ಯತೆ ನೀಡಬೇಕು’ ಎಂದು ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಬಿ.ಮೂಗಪ್ಪ ತಿಳಿಸಿದರು.

ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಹನುಮಂತಪ್ಪ, ಪ್ರವೀಣ್‌ ಕುಮಾರ್‌, ರೇಖಾ, ಪ್ರಾಥಮಿಕ ಆರೋಗ್ಯ ಸುರಕ್ಷತಾಧಿಕಾರಿ ಮೀನಾಕ್ಷಿ, ಆಶಾ ಕಾರ್ಯಕರ್ತೆಯರಾದ ಜಯಲಕ್ಷ್ಮಿ, ನೇತ್ರಾವತಿ, ಭಾಗ್ಯ, ಕೆಂಚಮ್ಮ, ಮೀನಾಕ್ಷಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.