ADVERTISEMENT

ತೆರೆದ ದೇಗುಲಗಳು: ಭಕ್ತರ ಸಂಖ್ಯೆ ಕ್ಷೀಣ

* ಕೋಟೆ ನೋಡಲು ಬಂದ ಕೆಲವರಿಗೆ ನಿರಾಸೆ * ಮೊದಲಿನಂತೆ ಹೋಟೆಲ್‌ಗಳಲ್ಲಿ ಹೆಚ್ಚಾಗಿ ಕಾಣದ ಗ್ರಾಹಕರು

ಕೆ.ಎಸ್.ಪ್ರಣವಕುಮಾರ್
Published 8 ಜೂನ್ 2020, 15:05 IST
Last Updated 8 ಜೂನ್ 2020, 15:05 IST
ಚಿತ್ರದುರ್ಗದ ಕೋಟೆಯೊಳಗಿನ ಸಂಪಿಗೆ ಸಿದ್ದೇಶ್ವರ ಸ್ವಾಮಿ ದರ್ಶನಕ್ಕಾಗಿ ಸೋಮವಾರ ದೇಗುಲಕ್ಕೆ ಹೊರಟಿದ್ದ ಭಕ್ತರೊಬ್ಬರನ್ನು ಥರ್ಮಲ್ ಸ್ಕ್ರೀನಿಂಗ್ ಮಾಡುತ್ತಿರುವ ಸಿಬ್ಬಂದಿ. ಚಿತ್ರ: ಭವಾನಿ ಮಂಜು.
ಚಿತ್ರದುರ್ಗದ ಕೋಟೆಯೊಳಗಿನ ಸಂಪಿಗೆ ಸಿದ್ದೇಶ್ವರ ಸ್ವಾಮಿ ದರ್ಶನಕ್ಕಾಗಿ ಸೋಮವಾರ ದೇಗುಲಕ್ಕೆ ಹೊರಟಿದ್ದ ಭಕ್ತರೊಬ್ಬರನ್ನು ಥರ್ಮಲ್ ಸ್ಕ್ರೀನಿಂಗ್ ಮಾಡುತ್ತಿರುವ ಸಿಬ್ಬಂದಿ. ಚಿತ್ರ: ಭವಾನಿ ಮಂಜು.   

ಚಿತ್ರದುರ್ಗ: ಲಾಕ್‌ಡೌನ್‌ನಿಂದ ಮುಚ್ಚಿ, ಪುನಾ ಬಾಗಿಲು ತೆರೆದು ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಿದ ಮೊದಲ ದಿನ ಸೋಮವಾರ ದೇಗುಲಗಳಿಗೆ ಹೆಚ್ಚಿನ ಸಂಖ್ಯೆಯ ಭಕ್ತರು ಭೇಟಿ ನೀಡಿಲ್ಲ. ಶಿವನ ವಾರವಾದ್ದರಿಂದ ಶಿವ ದೇಗುಲಗಳಲ್ಲಿ ಆಗಿಂದಾಗ್ಗೆ ಒಂದಿಷ್ಟು ಭಕ್ತರು ಕಂಡು ಬಂದರು. ಆದರೆ, ಜಿಲ್ಲೆಯ ಯಾವುದೇ ಐತಿಹಾಸಿಕ, ಪ್ರೇಕ್ಷಣೀಯ ಸ್ಥಳಗಳು ತೆರೆದಿಲ್ಲ.

ಲಾಕ್‌ಡೌನ್ ಸಡಿಲಗೊಳಿಸಿ ಹಂತ ಹಂತವಾಗಿ ಅನ್‌ಲಾಕ್‌ನತ್ತ ಹೆಜ್ಜೆ ಇಟ್ಟಿರುವ ಸರ್ಕಾರ ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಯ ದೇಗುಲಗಳಿಗಷ್ಟೇ ಅನುಮತಿ ನೀಡಿದೆ. ಆದರೂ ವ್ಯಾಪ್ತಿಗೆ ಒಳಪಡದ ವಿಶಾಲವಾಗಿರುವ ಕೆಲ ದೇಗುಲಗಳು ತೆರೆದಿದ್ದವು. ಸೂರ್ಯೋದಯಕ್ಕೂ ಮುನ್ನ ಕೆಲ ದೇಗುಲಗಳಲ್ಲಿ ಪ್ರಥಮ ಪೂಜೆ ನೆರವೇರಿತು. ಆನಂತರ ಭಕ್ತರು ಪ್ರವೇಶಿಸಲು ಮುಂದಾದರು.

ಜಿಲ್ಲೆಯಲ್ಲಿನ ಮುಜರಾಯಿ ಇಲಾಖೆಯ ‘ಎ’, ‘ಬಿ’, ದರ್ಜೆಯ ದೇಗುಲಗಳಲ್ಲಿ ತ್ರಿಕಾಲ ಪೂಜೆಗಳು ನೆರವೇರಿದವು. ದೇಗುಲಗಳಿಗೆ ಭೇಟಿ ನೀಡಿದ ಭಕ್ತರ ಸಂಖ್ಯೆ ಕಡಿಮೆ ಇದ್ದ ಕಾರಣ ಸರತಿಯಲ್ಲಿ ನಿಲ್ಲುವುದಕ್ಕಾಗಿ ನಿರ್ಮಿಸಿದ್ದ ಬಾಕ್ಸ್‌ಗಳ ಅಗತ್ಯತೆ ಮೊದಲ ದಿನ ಹೆಚ್ಚಾಗಿ ಕಂಡು ಬರಲಿಲ್ಲ. ನಾಯಕನಹಟ್ಟಿಯ ಗುರು ತಿಪ್ಪೇರುದ್ರಸ್ವಾಮಿ ಸೇರಿ ಕೆಲವೆಡೆ ಥರ್ಮಲ್ ಸ್ಕ್ರೀನಿಂಗ್‌ ಮಾಡಿದ ನಂತರವೇ ಒಳಗೆ ಹೋಗಲು ಅವಕಾಶ ಕಲ್ಪಿಸಲಾಯಿತು.

ADVERTISEMENT

ಸ್ಯಾನಿಟೈಸರ್ ಬಳಕೆಯೂ ನಡೆಯಿತು. ಆದರೆ, ಮಾಸ್ಕ್ ಇದ್ದರೂ ಹಾಕಿಕೊಳ್ಳದೇ ಇರುವ ಕೆಲವರಿಗೆ ದೇಗುಲದ ಸಿಬ್ಬಂದಿ, ಅರ್ಚಕರು ಮಾಸ್ಕ್ ಕಡ್ಡಾಯವಾಗಿ ಧರಿಸುವಂತೆ ಸೂಚನೆ ನೀಡುತ್ತಿದ್ದರು. ಅಂತರ ಕಾಯ್ದುಕೊಂಡೆ ದೇವರ ದರ್ಶನ ಪಡೆಯಲು ಮುಂದಾದರು. ಕೆಲವರು ಮಾತ್ರ ದೂರದಿಂದಲೇ ಮಂಗಳಾರತಿ ಪಡೆದರು. ತೀರ್ಥ, ಪ್ರಸಾದ ವಿತರಿಸಿಲ್ಲ. ಅನ್ನಸಂತರ್ಪಣೆ ನಡೆದಿಲ್ಲ. ಈ ಮೂಲಕ ದೇಗುಲಗಳ ಆಡಳಿತ ಮಂಡಳಿ ಸರ್ಕಾರದ ನಿಯಮ ಕಡ್ಡಾಯವಾಗಿ ಪಾಲಿಸಲು ಮುಂದಾಗಿವೆ.

ಆಡುಮಲ್ಲೇಶ್ವರ ಬಂಧ ಮುಕ್ತ: ಇನ್ನೂ ಇಲ್ಲಿನ ಪ್ರಸಿದ್ಧ ಆಡುಮಲ್ಲೇಶ್ವರ ಕಿರುಮೃಗಾಲಯದ ದ್ವಾರ ಬಂಧ ಮುಕ್ತವಾಗಿದೆ. ಸಾರ್ವಜನಿಕರು ಭೇಟಿ ನೀಡುತ್ತಿದ್ದಾರೆ. ಬೆಳಿಗ್ಗೆ, ಸಂಜೆ ಸೇರಿ 50ಕ್ಕೂ ಹೆಚ್ಚು ಜನ ವೀಕ್ಷಣೆ ಮಾಡಿದ್ದಾರೆ. ಲಾಕ್‌ಡೌನ್‌ ನಂತರ ಎರಡು ತಿಂಗಳು ಮನೆಯಲ್ಲೇ ಇದ್ದ ಕೆಲವರು ಬೇಸರ ಕಳೆಯಲು ಮಕ್ಕಳೊಂದಿಗೆ ಬಂದಿದ್ದರು. ಅರಣ್ಯ ಇಲಾಖೆ ಸಿಬ್ಬಂದಿ ಥರ್ಮಲ್ ಸ್ಕ್ರೀನಿಂಗ್ ಮಾಡಿ, ಧರಿಸಿದ್ದ ಬಟ್ಟೆಗಳಿಗೆ ಸ್ಯಾನಿಟೈಸರ್ ಸ್ಪ್ರೇ ಮಾಡಿಯೇ ಒಳಗೆ ಹೋಗಲು ಅವಕಾಶ ಕಲ್ಪಿಸುತ್ತಿದ್ದರು.

‘ಕಿರುಮೃಗಾಲಯದ ಒಳಗೆ ಆಹಾರ ಪದಾರ್ಥಗಳನ್ನು ತೆಗೆದುಕೊಂಡು ಹೋಗುವಂತಿಲ್ಲ. ಆದರೆ, ನೀರಿನ ಬಾಟಲಿ ಒಯ್ಯಲು ಅವಕಾಶ ಕಲ್ಪಿಸಲಾಗಿದೆ. ಒಳಭಾಗದಲ್ಲಿ ಎಲ್ಲಿಯೂ ಗಲೀಜು ಮಾಡುವಂತಿಲ್ಲ. ಕೊರೊನಾ ಹಿನ್ನೆಲೆಯಲ್ಲಿ ಇಲ್ಲಿಯೂ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ’ ಎಂದು ವಲಯ ಅರಣ್ಯಾಧಿಕಾರಿ ವಸಂತ್‌ಕುಮಾರ್ ತಿಳಿಸಿದ್ದಾರೆ.

ಎಂದಿನಂತೆ ಒಳಗೆ ಕೂತು ತಿಂಡಿ, ಊಟ ಸೇವಿಸಲು ಹೋಟೆಲ್‌ಗಳಿಗೂ ಸರ್ಕಾರ ಅವಕಾಶ ನೀಡಿದೆ. ಆದರೆ, ಮಾಲೀಕರ ನಿರೀಕ್ಷೆಯಂತೆ ವಿವಿಧ ಖಾದ್ಯಗಳನ್ನು ಸವಿಯುವವರ ಸಂಖ್ಯೆ ಮೊದಲಿನಂತೆ ಇರಲಿಲ್ಲ. ಒಳಾಂಗಣದಲ್ಲಿ ಅರ್ಧಕ್ಕಿಂತಲೂ ಹೆಚ್ಚು ಕುರ್ಚಿಗಳು ಖಾಲಿ ಖಾಲಿ ಇದ್ದವು. ಆಗೊಮ್ಮೆ, ಈಗೊಮ್ಮೆ ಗ್ರಾಹಕರು ಬಂದು ಹೋಗುತ್ತಿದ್ದರು.

ಅನೇಕ ಹೋಟೆಲ್‌ಗಳಲ್ಲಿ ಸಿಬ್ಬಂದಿ ಮಾಸ್ಕ್‌, ಕೈಗವಸು, ತಲೆಗವಸು ಧರಿಸಿ ಮುಂಜಾಗ್ರತಾ ಕ್ರಮ ಕೈಗೊಂಡಿದ್ದರಾದರೂ ಹೋಟೆಲ್‌ ಪ್ರವೇಶಿಸಿದವರಲ್ಲಿ ಕೆಲಸ ನಿಮಿತ್ತ ನಗರಕ್ಕೆ ಬಂದವರೇ ಆಗಿದ್ದರು. ಸ್ಥಳೀಯರ ಸಂಖ್ಯೆ ಕಡಿಮೆ ಇತ್ತು.

ಐತಿಹಾಸಿಕ ಸ್ಥಳಗಳಿಗಿಲ್ಲ ಅವಕಾಶ:

ಚಿತ್ರದುರ್ಗದ ಐತಿಹಾಸಿಕ ಏಳುಸುತ್ತಿನ ಕಲ್ಲಿನಕೋಟೆ, ಚಂದ್ರವಳ್ಳಿ ಸೇರಿ ಕೇಂದ್ರ ಪುರಾತತ್ವ ಸರ್ವೇಕ್ಷಣಾ ಇಲಾಖೆ ವ್ಯಾಪ್ತಿಯ ಯಾವ ಐತಿಹಾಸಿಕ ಸ್ಥಳಗಳ ಭೇಟಿಗೆ ಹೊರ ರಾಜ್ಯ, ಹೊರ ಜಿಲ್ಲೆಗಳ ಪ್ರವಾಸಿಗರಿಗೆ ಅವಕಾಶ ಕಲ್ಪಿಸಿಲ್ಲ. ಕೇಂದ್ರ ಸರ್ಕಾರದಿಂದ ಆದೇಶ ಬಂದಿರದ ಕಾರಣ ನಿಷೇಧ ಮುಂದುವರಿಸಲಾಗಿದೆ. ಕೋಟೆ ನೋಡಲು ಬೇರೆ ಜಿಲ್ಲೆಯಿಂದ ಬಂದಿದ್ದ ಕೆಲವರು ಇದೇ ವೇಳೆ ನಿರಾಸೆಯಿಂದ ಹಿಂದಿರುಗಿದರು.

ಕೋಟೆಯೊಳಗಿನ ಸಂಪಿಗೆ ಸಿದ್ದೇಶ್ವರ, ಹಿಡಂಭೇಶ್ವರ ಸ್ವಾಮಿ ದರ್ಶನಕ್ಕೆ ಸೋಮವಾರ ಹಾಗೂ ದುರ್ಗದ ಅಧಿದೇವತೆ ಏಕನಾಥೇಶ್ವರಿ, ಬೆಟ್ಟದ ಗಣಪತಿ, ಬನಶಂಕರಿ ದೇವಿ ದರ್ಶನ ಪಡೆಯಲು ಮಂಗಳವಾರ ಮತ್ತು ಶುಕ್ರವಾರ ಸ್ಥಳೀಯರಿಗೆ ಮಾತ್ರ ನಿಯಮಾನುಸಾರ ಅವಕಾಶ ಮಾಡಿಕೊಡಲಾಗಿದೆ. ಕೆಲ ದೇಗುಲಗಳ ಮುಂಭಾಗದಲ್ಲಿ ಅಂತರ ಕಾಯ್ದುಕೊಳ್ಳಲು ಬಾಕ್ಸ್‌ ನಿರ್ಮಿಸಲಾಗಿದೆ ಎಂದು ಇಲಾಖೆ ತಿಳಿಸಿದೆ.

ನಿಯಮ ಉಲ್ಲಂಘಿಸಿದಲ್ಲಿ ಪ್ರಕರಣ

‘ಜಿಲ್ಲೆಯಲ್ಲಿ ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿ ದೇಗುಲ ಪ್ರಸಿದ್ಧವಾಗಿದ್ದು, ಅಲ್ಲಿ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗುವುದು. ಜನ ಹೆಚ್ಚಾಗಿ ಹೋಗುವ ಮುಜರಾಯಿ ವ್ಯಾಪ್ತಿಯ ನಾಲ್ಕೈದು ದೇಗುಲಗಳಿಗೆ ಮಾತ್ರ ಸಿಬ್ಬಂದಿ ನಿಯೋಜಿಸಲು ಸಾಧ್ಯ. ಉಳಿದಂತೆ ಆಯಾ ದೇಗುಲದವರೇ ನಿಯಮ ಪಾಲಿಸಬೇಕು. ಉಲ್ಲಂಘನೆಯಾದಲ್ಲಿ ಪ್ರಕರಣ ದಾಖಲಿಸಲು ಅವಕಾಶವಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ. ರಾಧಿಕಾ ಎಚ್ಚರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.