
ಹಿರಿಯೂರು: ನಗರದಲ್ಲಿರುವ ತೇರುಮಲ್ಲೇಶ್ವರ ಸ್ವಾಮಿಯ ಜಾತ್ರಾ ಮಹೋತ್ಸವದ ಎಂದರೆ ಅಲ್ಲಿ ಭಕ್ತಿರಸಕ್ಕೆ ಮಾತ್ರವಲ್ಲದೆ, ಮನರಂಜನೆಗೆ ಕೊರತೆಯೇ ಇರುವುದಿಲ್ಲ. ಕರ್ಪೂರದಾರತಿ ಬೆಳಗುವ ಮೈನವಿರೇಳಿಸುವ ಕಾರ್ಯಕ್ರಮ ಒಂದೆಡೆಯಾದರೆ, ಕ್ರೀಡೆಗೂ ಆದ್ಯತೆ ಇರುತ್ತದೆ.
ಇಲ್ಲಿ ನಡೆಯುವ ವಾರ್ಷಿಕ ಕುಸ್ತಿ ಪಂದ್ಯಾವಳಿಗಾಗಿ ಪೈಲ್ವಾನರು ಕಾದು ಕುಳಿತಿರುತ್ತಾರಲ್ಲದೆ, ಭಾರಿ ಆಸಕ್ತಿಯಿಂದ ಪಾಲ್ಗೊಂಡು ಕುಸ್ತಿ ಪ್ರತಿಯರನ್ನು ರಂಜಿಸುತ್ತಾರೆ.
ಜಾತ್ರೆಯ ಅಂಗವಾಗಿ ಮದಕರಿ ಯುವಕ ಸಂಘದ ನೇತೃತ್ವದಲ್ಲಿ ನಡೆಯುವ ಜಂಗೀ ಕುಸ್ತಿ ಪಂದ್ಯಾವಳಿಯು ಈ ಬಾರಿ ಫೆ. 4ರಂದು ಮಧ್ಯಾಹ್ನ 3 ಗಂಟೆಗೆ ನಡೆಯಲಿದೆ ಎಂದು ತಹಶೀಲ್ದಾರ್ ಎಂ. ಸಿದ್ದೇಶ್ ತಿಳಿಸಿದ್ದಾರೆ.
ಪಾಳೆಯಗಾರರ ವಂಶಸ್ಥ ರಾಜಾಕೆಂಚಪ್ಪ ನಾಯಕ 1446ರಲ್ಲಿ ತೇರುಮಲ್ಲೇಶ್ವರ ಸ್ವಾಮಿ ದೇಗುಲ ನಿರ್ಮಿಸಿದ್ದು, ಪಾಳೇಗಾರರ ಆಳ್ವಿಕೆ ಕಾಲದಲ್ಲಿ ಈ ಭಾಗದಲ್ಲಿ ಕುಸ್ತಿ ಅತ್ಯಂತ ಜನಪ್ರಿಯತೆ ಪಡೆದಿತ್ತು. ಚಿತ್ರದುರ್ಗದಲ್ಲಿ ಈಗಲೂ ಗರಡಿ ಮನೆಗಳನ್ನು ಕಾಣಬಹುದಾಗಿದೆ. ಪಾಳೆಯಗಾರರ ದೊರೆ ಮದಕರಿ ನಾಯಕ ಖ್ಯಾತ ಕುಸ್ತಿಪಟುವಾಗಿದ್ದ ಎಂಬ ಮಾತುಗಳಿವೆ.
ಪ್ರಾಚೀನ ಕಾಲದಿಂದಲೂ ನಡೆದು ಬಂದಿರುವ ಕುಸ್ತಿ ಆಟಯನ್ನು ಮುಂದುವರಿಸಿಕೊಂಡು ಹೋಗಬೇಕು ಎಂಬ ಕಾರಣದಿಂದ ತೇರುಮಲ್ಲೇಶ್ವರ ಸ್ವಾಮಿ ರಥೋತ್ಸವ ನಡೆದ ಮಾರನೇ ದಿನ ಹಿರಿಯೂರಿನಲ್ಲಿ ಕುಸ್ತಿ ಆಯೋಜಿಸುತ್ತ ಬರಲಾಗಿದೆ ಎಂದು ಅವರು ಹೇಳಿದ್ದಾರೆ.
ಜಂಗೀ ಕುಸ್ತಿ ಪಂದ್ಯಾವಳಿಗೆ ದಾವಣಗೆರೆ, ಹಾವೇರಿ, ಹುಬ್ಬಳ್ಳಿ, ಚಿತ್ರದುರ್ಗ, ಶಿವಮೊಗ್ಗ, ತುಮಕೂರು, ಕಲಬುರಗಿ ಭಾಗಗಳಿಂದಲೂ ಕುಸ್ತಿಪಟುಗಳು ಬರುತ್ತಾರೆ. ಬ್ರಹ್ಮರಥೋತ್ಸವ, ಕರ್ಪೂರದಾರತಿಷ್ಟೇ ಜಾತ್ರೆಯ ಬಹುದೊಡ್ಡ ಆಕರ್ಷಣೆಯಾಗಿ ಜಂಗೀ ಕುಸ್ತಿ ಪಂದ್ಯಾವಳಿ ನಡೆಯುತ್ತದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.