ADVERTISEMENT

ಪರಿಶಿಷ್ಟರ ಆಕ್ರೋಶಕ್ಕೆ ಕಾರಣವಾದ ‘ಬೇಡ ಜಂಗಮ’ ಸಂಘದ ಆ ಪ್ರಕಟಣೆ!

ಎಸ್‌ಸಿ ಸಮುದಾಯಗಳ ಹಕ್ಕು ಕಸಿಯಲು ಯತ್ನ ಆರೋಪ, ಆಯೋಗಕ್ಕೆ ದೂರು ನೀಡಲು ನಿರ್ಧಾರ

ಎಂ.ಎನ್.ಯೋಗೇಶ್‌
Published 10 ಮೇ 2025, 1:08 IST
Last Updated 10 ಮೇ 2025, 1:08 IST
<div class="paragraphs"><p>ಒಳ ಮೀಸಲಾತಿ (ಪ್ರಾತಿನಿಧಿಕ ಚಿತ್ರ)</p></div>

ಒಳ ಮೀಸಲಾತಿ (ಪ್ರಾತಿನಿಧಿಕ ಚಿತ್ರ)

   

ಚಿತ್ರದುರ್ಗ: ಒಳಮೀಸಲಾತಿ ಕಲ್ಪಿಸುವ ಸಂಬಂಧ ಸಮೀಕ್ಷಾದಾರರು ದತ್ತಾಂಶ ಸಂಗ್ರಹಿಸಲು ಮನೆಮನೆಗೆ ಬಂದಾಗ ನೀಡಬೇಕಾದ ಮಾಹಿತಿ ಕುರಿತು ಚಿತ್ರದುರ್ಗ ಜಿಲ್ಲಾ ಬೇಡ ಜಂಗಮ ಸಮಾಜ ಸಂಸ್ಥೆ ಹೊರಡಿಸಿರುವ ಪ್ರಕಟಣೆ  ಆಕ್ರೋಶಕ್ಕೆ ಗುರಿಯಾಗಿದೆ.

‘ವೀರಶೈವ ಲಿಂಗಾಯತರು ‘ಜಂಗಮ’ ಹೆಸರಿನ ನೆಪದಲ್ಲಿ ನಮ್ಮ ಸಮುದಾಯಗಳ ಹಕ್ಕು ಕಬಳಿಸಲು ಯತ್ನಿಸುತ್ತಿದ್ದಾರೆ’ ಎಂದು ಪರಿಶಿಷ್ಟ ವರ್ಗದ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ADVERTISEMENT

ಪರಿಶಿಷ್ಟ ಜಾತಿ ಪಟ್ಟಿಯಲ್ಲಿರುವ ಬೇಡ ಜಂಗಮ/ ಬುಡ್ಗ ಜಂಗಮ ಹೆಸರಿನಲ್ಲಿ ವೀರಶೈವ ಲಿಂಗಾಯತ ಜಂಗಮ ಪಂಗಡದವರು ಪರಿಶಿಷ್ಟ ಜಾತಿ ದೃಢೀಕರಣ ಪತ್ರ ಪಡೆದಿದ್ದಾರೆ ಎಂಬ ವಿಷಯ ಹಲವು ವರ್ಷಗಳಿಂದಲೂ ಚರ್ಚೆಯಲ್ಲಿದೆ. ಪ್ರಕರಣದ ವಿಚಾರಣೆ  ನ್ಯಾಯಾಲಯಗಳಲ್ಲಿದೆ. ಈಗ ದತ್ತಾಂಶ ಸಂಗ್ರಹ ಸಂದರ್ಭದಲ್ಲಿ ಬೇಡ ಜಂಗಮ ಸಮಾಜ ಸಂಸ್ಥೆ ಹೊರಡಿಸಿರುವ ಪ್ರಕಟಣೆ ಈ ಚರ್ಚೆಯನ್ನು ಮತ್ತೆ ಮುನ್ನೆಲೆಗೆ ತಂದಿದೆ.

‘ಜಂಗಮ ಬಂಧುಗಳಲ್ಲಿ ಮನವಿ’ ಎಂಬ ಶೀರ್ಷಿಕೆಯಲ್ಲಿ ಆರಂಭವಾಗುವ ಪ್ರಕಟಣೆ 7 ಪ್ರಶ್ನೆಗಳನ್ನು ನೀಡಿ ಅದಕ್ಕೆ ಉತ್ತರಗಳನ್ನೂ ನೀಡಿದೆ. ನೀವು ಪರಿಶಿಷ್ಟ ಜಾತಿಯವರೇ ಎಂದು ಕೇಳಿದಾಗ ಹೌದು ಎನ್ನಬೇಕು, ಮೂಲ ಜಾತಿ ಕಾಲಂನಲ್ಲಿ ‘ಬೇಡ ಜಂಗಮ’ ಎಂದು ಬರೆಸಬೇಕು. ಕಸುಬು; ‘ಧಾರ್ಮಿಕ ಭಿಕ್ಷುಗಳು’ ಎಂದು ಬರೆಸಬೇಕು ಎಂದು ಸೂಚಿಸಿದೆ.

‘ದತ್ತಾಂಶ ಸಂಗ್ರಾಹಕರು ಜಾತಿ ಪ್ರಮಾಣಪತ್ರ ಕೇಳಿದರೆ ಏನು ಮಾಡಬೇಕು?’ ಎಂಬ ಪ್ರಶ್ನೆಗೆ, ‘ಗಣತಿಗೆ ಜಾತಿ ಪ್ರಮಾಣಪತ್ರ ಕಡ್ಡಾಯವಲ್ಲ ಎಂದೇ ಉತ್ತರ ಕೊಡಬೇಕು. ಮಾಹಿತಿ ಪರಿಗಣಿಸದಿದ್ದರೆ ಒಪ್ಪಿಗೆ ಸೂಚಿಸಿ ಸಹಿ ಮಾಡಬೇಡಿ’ ಎಂಬ ವಿವರ ಗೊಂದಲ ಮೂಡಿಸುವಂತಿದೆ. 

ಕಡೆಯಲ್ಲಿ, ‘ದತ್ತಾಂಶ ಸಂಗ್ರಾಹಕರ ಗುರುತಿನ ಚೀಟಿ ಪಡೆದುಕೊಳ್ಳಿ, ಗಣತಿದಾರರ ಫೋಟೊ ತೆಗೆದುಕೊಳ್ಳಿ, ಅವರ ಸಂಪರ್ಕ ಸಂಖ್ಯೆಯನ್ನೂ ಪಡೆಯಿರಿ’ ಎಂದು ಸೂಚಿಸಿರುವುದು ಅನುಮಾನಾಸ್ಪದವಾಗಿದೆ. ಇದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಪರಿಶಿಷ್ಟ ಸಮುದಾಯಗಳ ಮುಖಂಡರು, ‘ಅನಧಿಕೃತ ಸಂಘವು ಜಂಗಮ ಸಮುದಾಯದ ಜನರನ್ನು ಬೆದರಿಸುತ್ತಿದೆ. ಆ ಮೂಲಕ ಪರಿಶಿಷ್ಟ ಜಾತಿ ಸೌಲಭ್ಯಗಳನ್ನು ಪಡೆಯಲು ಷ್ಯಡ್ಯಂತ್ರ ಮಾಡುತ್ತಿದೆ’ ಎಂದು ಆರೋಪಿಸಿದ್ದಾರೆ.

‘ಪ್ರಾಣಿ ಬೇಟೆಯಾಡಿ ತಿನ್ನುವ ಬೇಡ ಜಂಗಮ/ ಬುಡ್ಗ ಜಂಗಮ ಸಮುದಾಯದ 150 ಕುಟುಂಬಗಳಷ್ಟೇ ಕಲ್ಯಾಣ ಕರ್ನಾಟಕ ಭಾಗದಲ್ಲಿ ಇರಬಹುದು. ಆದರೆ, ವೀರಶೈವ ಲಿಂಗಾಯತರು ತಮ್ಮ ಪಂಗಡದಲ್ಲಿರುವ ಜಂಗಮ ಪದವನ್ನು ಬಳಸಿಕೊಂಡು ಪರಿಶಿಷ್ಟ ಜಾತಿ ಸಮುದಾಯಗಳ ಹಕ್ಕು ಕಸಿಯುವ ಯತ್ನಿಸುತ್ತಿದ್ದಾರೆ. ಇದಕ್ಕೆ ನಾವು ಅವಕಾಶ ಕೊಡುವುದಿಲ್ಲ. ಈ ಕುರಿತು ನ್ಯಾ.ಎಚ್‌.ಎನ್‌. ನಾಗಮೋಹನದಾಸ್‌ ಆಯೋಗಕ್ಕೆ ದೂರು ನೀಡುತ್ತಿದ್ದೇವೆ’ ಎಂದು ಮಾದಿಗ ಸಮುದಾಯದ ಮುಖಂಡ, ಕೆಪಿಸಿಸಿ ಉಪಾಧ್ಯಕ್ಷ ಎಚ್‌.ಆಂಜನೇಯ ಹೇಳಿದ್ದಾರೆ.

‘ಕರ್ನಾಟಕ ರಾಜ್ಯ ಬೇಡ ಜಂಗಮ ಸಂಸ್ಥೆಗಳ ಒಕ್ಕೂಟದ ಸೂಚನೆಯಂತೆ ನಾವು ನಮ್ಮ ಜನರಿಗೆ ಪ್ರಕಟಣೆಯ ಮೂಲಕ ಸೂಚನೆ ನೀಡಿದ್ದೇವೆ. ಇದು ರಾಜ್ಯದ ಎಲ್ಲಾ ಜಿಲ್ಲೆಗಳ ಬೇಡ ಜಂಗಮರು ಪ್ರಕಟಣೆಯ ಮೂಲಕ ಜಾಗೃತಿ ಮೂಡಿಸುತ್ತಿದ್ದಾರೆ. ಇದರಲ್ಲಿ ತಪ್ಪು ಹುಡುಕುವುದು ಬೇಡ. ನಾವೇ ಬೇಡ ಜಂಗಮರು ಎಂದು ಸುಪ್ರೀಂ ಕೋರ್ಟ್‌ ಕೂಡ ಖಾತ್ರಿ ಪಡಿಸಿದೆ. ಜಾತಿ ಸಮೀಕ್ಷೆಗೆ ಮಾಹಿತಿ ನೀಡಲು ಜಾತಿ ಪ್ರಮಾಣಪತ್ರ ಬೇಕಾಗಿಲ್ಲ. ಆಧಾರ್‌ ಕಾರ್ಡ್‌ ಇದ್ದರೆ ಸಾಕು’ ಎಂದು ಜಿಲ್ಲಾ ಬೇಡ ಜಂಗಮ ಸಮಾಜ ಸಂಸ್ಥೆ ಕಾರ್ಯದರ್ಶಿ ಎಸ್‌.ಷಡಾಕ್ಷರಯ್ಯ ಸ್ಪಷ್ಟಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.