ADVERTISEMENT

ಸ್ವಾತಂತ್ರ್ಯಾನಂತರವೂ ಸುಧಾರಿಸದ ಕೆಳ ಸಮುದಾಯದ ಬದುಕು: ಸಂಸದ ನಾರಾಯಣಸ್ವಾಮಿ ವಿಷಾದ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2020, 13:28 IST
Last Updated 19 ಡಿಸೆಂಬರ್ 2020, 13:28 IST
ಹಿರಿಯೂರಿನ ರೋಟರಿ ಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಎಂ. ಜಯಣ್ಣ ಅವರ ಶ್ರದ್ಧಾಂಜಲಿ ಸಭೆಯನ್ನು ಸಂಸದ ಎ. ನಾರಾಯಣಸ್ವಾಮಿ ಉದ್ಘಾಟಿಸಿದರು.
ಹಿರಿಯೂರಿನ ರೋಟರಿ ಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಎಂ. ಜಯಣ್ಣ ಅವರ ಶ್ರದ್ಧಾಂಜಲಿ ಸಭೆಯನ್ನು ಸಂಸದ ಎ. ನಾರಾಯಣಸ್ವಾಮಿ ಉದ್ಘಾಟಿಸಿದರು.   

ಹಿರಿಯೂರು: ಸ್ವಾತಂತ್ರ್ಯ ಬಂದು 7 ದಶಕ ಕಳೆದರೂ ಕೆಳಸ್ತರದ ಸಮುದಾಯದವರು ಅನ್ನಕ್ಕಾಗಿ, ವಸತಿ–ವಸ್ತ್ರಕ್ಕಾಗಿ, ಶಿಕ್ಷಣಕ್ಕಾಗಿ ಸಂಕಷ್ಟ ಅನುಭವಿಸುತ್ತಿರುವುದು ತಪ್ಪಿಲ್ಲ ಎಂದು ಸಂಸದ ಎ. ನಾರಾಯಣಸ್ವಾಮಿ ವಿಷಾದ ವ್ಯಕ್ತಪಡಿಸಿದರು.

ನಗರದ ರೋಟರಿ ಭವನದಲ್ಲಿ ಶನಿವಾರ ಎಂ. ಜಯಣ್ಣ ಅಭಿಮಾನಿಗಳ ಬಳಗದಿಂದ ಹಮ್ಮಿಕೊಂಡಿದ್ದ ಶ್ರದ್ಧಾಂಜಲಿ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.

‘ಭದ್ರಾ ಮೇಲ್ದಂಡೆ ಯೋಜನೆಯನ್ನು ಸಾಕಾರಗೊಳಿಸಬೇಕೆಂಬ ಹೋರಾಟದ ನೇತೃತ್ವ ವಹಿಸಿಕೊಂಡಿದ್ದ ಜಯಣ್ಣ ನಿಧನರಾಗುವ ಮೊದಲು ಯೋಜನೆಯ ನೀರು ವಾಣಿವಿಲಾಸಕ್ಕೆ ಬಂದುದನ್ನು ನೋಡಿ ಸಂತಸಗೊಂಡಿದ್ದರು. ಪ್ರಸ್ತುತ ಭದ್ರಾ ಯೋಜನೆ ರಾಷ್ಟ್ರೀಯ ಯೋಜನೆ ಆಗುತ್ತಿರುವ ಕಾರಣಕ್ಕೆ ಜಿಲ್ಲೆಯ ದಲಿತರೂ ಸೇರಿ ಯಾವ ರೈತರೂ ಎಷ್ಟೇ ಬೆಲೆಗೆ ಕೇಳಿದರೂ ಭೂಮಿಯನ್ನು ಮಾರಿಕೊಳ್ಳಬೇಡಿ’ ಎಂದು ಮನವಿ ಮಾಡಿದರು.

ADVERTISEMENT

‘ಜಯಣ್ಣ ಅವರನ್ನು ಒಂದು ಜಾತಿಗೆ, ಪಕ್ಷಕ್ಕೆ ಸೀಮಿತಗೊಳಿಸುವುದು ಸಲ್ಲ. ದಲಿತರು ಇನ್ನು ಮುಂದಾದರೂ ಜಯಣ್ಣ ಅವರ ಹೋರಾಟದ ಹೆಜ್ಜೆ ಗುರುತುಗಳನ್ನು ಅಳವಡಿಸಿಕೊಂಡು ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಬೇಕು. ಜಾತಿಯ ಸೋಂಕು ಅಳಿಸಲು ರಾಜಕೀಯ ಬಿಟ್ಟು ಹೋರಾಟ ನಡೆಸಬೇಕು ಎಂದು ಬಹಳಷ್ಟು ಬಾರಿ ಚಿಂತಿಸಿದ್ದೇನೆ’ ಎಂದು ಅವರು ಹೇಳಿದರು.

ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಎನ್.ಆರ್. ಲಕ್ಷ್ಮೀಕಾಂತ್, ‘ಜಯಣ್ಣ ಅವರ ಅವಿರತ ಶ್ರಮದ ಫಲವನ್ನು ಭದ್ರಾ ಮೇಲ್ದಂಡೆ ಯೋಜನೆಯಲ್ಲಿ ಕಾಣಬಹುದು. ತುಮಕೂರು–ದಾವಣಗೆರೆ ನೇರ ರೈಲು ಮಾರ್ಗ ಅವರ ಕನಸಾಗಿತ್ತು. ಜಯಣ್ಣ ಅವರ ಕುಟುಂಬಕ್ಕೆ ಆರ್ಥಿಕ ಸಂಕಷ್ಟ ಎದುರಾಗಬಾರದು ಎಂಬ ಕಾರಣಕ್ಕೆ ಜಯಣ್ಣ ಅವರಿಗೆ ಕಿರುಕಾಣಿಕೆಯಾಗಿ ₹ 1 ಲಕ್ಷ ನೆರವು ನೀಡುತ್ತಿದ್ದೇನೆ’ ಎಂದು ಹಣವನ್ನು ಸಂಸದರ ಮೂಲಕ ನೀಡಿದರು.

ಮಾಜಿ ಶಾಸಕ ಆರ್. ರಾಮಯ್ಯ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಪ್ರಾಂಶುಪಾಲ ಪ್ರೊ. ಎಚ್. ಲಿಂಗಪ್ಪ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಮೀಸೆ ಮಹಲಿಂಗಪ್ಪ, ವದ್ದೀಕೆರೆ ಕಾಂತರಾಜ್, ದಲಿತ ಮುಖಂಡ ಟಿ.ಡಿ. ರಾಜಗಿರಿ ಮಾತನಾಡಿದರು.

ನಗರಸಭಾಧ್ಯಕ್ಷೆ ಷಂಸುನ್ನೀಸಾ, ಉಪಾಧ್ಯಕ್ಷ ಬಿ.ಎನ್. ಪ್ರಕಾಶ್, ಜಿಲ್ಲಾ ಯೋಜನಾ ಸಮಿತಿ ಮಾಜಿ ಸದಸ್ಯ ಜಿ. ಧನಂಜಯಕುಮಾರ್, ಕೆ.ಎಲ್. ರಾಮಸ್ವಾಮಿ, ಎಂ.ಡಿ. ರವಿ, ಕೆ. ಒಂಕಾರಪ್ಪ, ಹುಚ್ಚವ್ವನಹಳ್ಳಿ ವೆಂಕಟೇಶ್, ಪಿಟ್ಲಾಲಿ ಕರಿಯಪ್ಪ, ಟಿ. ಜಗನ್ನಾಥ್, ಬಬ್ಬೂರು ಪರಮೇಶ್ವರ ಮಾದಿಗ, ವಿ.ಎಚ್. ರಾಜು, ಆರ್. ತಿಪ್ಪೇಸ್ವಾಮಿ ಅವರೂ ಇದ್ದರು.

ಕೆ. ರಾಮಚಂದ್ರಪ್ಪ ಸ್ವಾಗತಿಸಿದರು. ಎಂ. ಲೋಹಿತ್ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.