ADVERTISEMENT

ಜಾನಪದ ಕಲಾವಿದರ ಜೀವನ ಅತಂತ್ರ: ಬಿ.ಟಿ.ಕುಮಾರಸ್ವಾಮಿ

ವಿಶ್ವ ಜಾನಪದ ದಿನಾಚರಣೆ; ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ವಿಷಾದ

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2025, 7:56 IST
Last Updated 26 ಆಗಸ್ಟ್ 2025, 7:56 IST
ಕರ್ನಾಟಕ ಜಾನಪದ ಪರಿಷತ್‌ ವತಿಯಿಂದ ನಡೆದ ವಿಶ್ವ ಜಾನಪದ ದಿನಾಚರಣೆಯಲ್ಲಿ ಪಾಲ್ಗೊಂಡಿದ್ದ ಗಣ್ಯರ ನಡುವೆ ಕಲಾವಿದರು ತಮ್ಮ ಕಲೆಗಳನ್ನು ಪ್ರಸ್ತುತಪಡಿಸಿದರು
ಕರ್ನಾಟಕ ಜಾನಪದ ಪರಿಷತ್‌ ವತಿಯಿಂದ ನಡೆದ ವಿಶ್ವ ಜಾನಪದ ದಿನಾಚರಣೆಯಲ್ಲಿ ಪಾಲ್ಗೊಂಡಿದ್ದ ಗಣ್ಯರ ನಡುವೆ ಕಲಾವಿದರು ತಮ್ಮ ಕಲೆಗಳನ್ನು ಪ್ರಸ್ತುತಪಡಿಸಿದರು   

ಚಿತ್ರದುರ್ಗ: ‘ಆಧುನಿಕತೆಯ ಭರಾಟೆಯಲ್ಲಿ ಜಾನಪದ ಕಲೆಗಳು ಮರೆಯಾಗುತ್ತಿವೆ. ಜಾನಪದ ಕಲೆಯನ್ನೇ ನಂಬಿ ಬದುಕುತ್ತಿದ್ದ ಕಲಾವಿದರ ಬದುಕು ಅತಂತ್ರವಾಗಿದೆ’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ವಿಷಾದಿಸಿದರು.

ಕರ್ನಾಟಕ ಜಾನಪದ ಪರಿಷತ್‌ ವತಿಯಿಂದ ಸೋಮವಾರ ಪತ್ರಿಕಾ ಭವನದ ಡಾ.ಬಿ.ಆರ್‌.ಅಂಬೇಡ್ಕರ್‌ ಸಭಾಂಗಣದಲ್ಲಿ ನಡೆದ ವಿಶ್ವ ಜಾನಪದ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

‘ಆಧುನಿಕತೆಯ ಭರಾಟೆಯ ನಡುವೆಯೂ ಜಾನಪದ ಕಲೆಗಳು ಉಳಿಯಬೇಕು. ಕಲೆಗಳು ತಮ್ಮ ಭವ್ಯತೆಯನ್ನು ಮರಳಿ ಪಡೆಯಬೇಕು. ಅರಿವಿನ ಸಂಪತ್ತಾದ ಜಾನಪದ ಕಲೆಗಳು ಉಳಿಯಬೇಕು. ನಮ್ಮ ಪೂರ್ವಿಕರ ಅನುಭವಜನ್ಯ ಜಾನಪದ ಸಾಹಿತ್ಯ, ಸಂಸ್ಕೃತಿ ಮತ್ತು ಕಲೆಗಳನ್ನು ಹೆಚ್ಚು ಹೆಚ್ಚು ಪ್ರದರ್ಶನಗೊಳಿಸುವುದರ ಮೂಲಕ ಅವುಗಳನ್ನು ಬೆಳೆಸಬೇಕು’ ಎಂದರು.

ADVERTISEMENT

‘ಹಬ್ಬ, ಜಾತ್ರೆ, ಉತ್ಸವ, ಮೆರವಣಿಗೆ, ಜನ್ಮದಿನ ಮೊದಲಾದ ಸಂಭ್ರಮಾಚರಣೆಗಳಲ್ಲಿ ಡಿ.ಜೆ. ಬಳಸುವುದನ್ನು ಕಡಿಮೆ ಮಾಡಿ ಪರಂಪರೆ ಪ್ರಜ್ಞೆಯ ಸಂಕೇತವಾದ ಜಾನಪದ ಕಲೆಗಳನ್ನು ಪ್ರದರ್ಶನ ಆಯೋಜನೆ ಮಾಡಬೇಕು. ಆ ಮೂಲಕ ಜಾನಪದ ಕಲಾವಿದರಿಗೆ ನೆರವಾಗಿ ನಿಲ್ಲಬೇಕು’ ಎಂದರು.

‘ಜಾನಪದ ಕಲೆಗಳು ಉಳಿಯಬೇಕಾದರೆ ಕಲಾವಿದ ಉಳಿಯಬೇಕು. ಕಲೆ ಮತ್ತು ಕಲಾವಿದರನ್ನು ಉಳಿಸಲು ಪ್ರಸ್ತುತ ಸಂದರ್ಭದಲ್ಲಿ ಹೆಚ್ಚು-ಹೆಚ್ಚು ಅವಕಾಶಗಳನ್ನು ಕಲ್ಪಿಸಿಕೊಡಬೇಕು. ಸಮಾನತೆ, ಸೌಹಾರ್ದ, ಸಾಮರಸ್ಯವನ್ನು ಬಿಂಬಿಸುವ ಪಾರಂಪರಿಕ ಕಲೆಗಳು ಮುಖಾಮುಖಿಯಾಗಬೇಕು’ ಎಂದು ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಸದಸ್ಯರಾದ ಜೆ.ಕರಿಯಪ್ಪ ಮಾಳಿಗೆ ಹೇಳಿದರು.

‘ಕೂಡು ಸಂಸ್ಕೃತಿಯ ಮೌಲ್ಯವನ್ನು ಬಿಂಬಿಸುವ ಜಾನಪದ ಪರಂಪರೆ ನಮ್ಮ ಬದುಕಿನ ಅವಿಭಾಜ್ಯ ಅಂಗವಾಗಬೇಕು. ಆ ಮೂಲಕ ಕಲಾವಿದರ ಬದುಕನ್ನು ಗಟ್ಟಿಗೊಳಿಸುವ ಚಿಂತನೆಗಳು ನಡೆಯಬೇಕು’ ಎಂದರು.

ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯ ಮಲ್ಲಿಕಾರ್ಜುನ ಕಲಮರಹಳ್ಳಿ ಮಾತನಾಡಿ, ‘ಜಾಗತೀಕರಣದ ದಿನಮಾನಗಳಲ್ಲಿ ಜಾನಪದ ಸಾಹಿತ್ಯ-ಕಲೆ ನಶಿಸಿ ಹೋಗುತ್ತಿದೆ. ಅವುಗಳನ್ನು ಉಳಿಸುವ ಕೆಲಸ ಮಾಡಬೇಕು. ಜಾನಪದ ಕಲೆಗಳು ಉಳಿದರೆ ಮುಂದಿನ ಪೀಳಿಗೆಯ ಯುವಜನರಿಗೆ ಅನುಕೂಲವಾಗುತ್ತದೆ.ಜಾನಪದ ಕಲೆಗಳಿಂದ ಏಕತೆ, ಸಮಗ್ರತೆ, ಭಾವೈಕ್ಯ, ಸೌಹಾರ್ದ ಸಮಾಜ ಸೃಷ್ಟಿಸಬಹುದು’ ಎಂದು ತಿಳಿಸಿದರು.

ಕರ್ನಾಟಕ ಜಾನಪದ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ನಿರಂಜನ ದೇವರ ಮನೆ ಮಾತನಾಡಿ, ‘ಜಾನಪದ ಸಾಹಿತ್ಯ ಮತ್ತು ಕಲೆ ಮಾನವ ಜೀವಿಗೆ ಸಂಸ್ಕಾರ, ಸದ್ಗುಣಗಳನ್ನು ಕಲಿಸುತ್ತವೆ. ಜಾನಪದ ಕಲೆಗಳು ಕಾಲಕ್ಕೆ ತಕ್ಕಂತೆ ಒಗ್ಗಿಕೊಳ್ಳುವ ಗುಣ ಬೆಳೆಸುತ್ತವೆ. ಈ ದಿಸೆಯಲ್ಲಿ ನಮ್ಮ ಜಾನಪದ ಸಾಹಿತ್ಯ ಮತ್ತು ಕಲೆಯನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯುವುದು ಅತ್ಯಂತ ಅವಶ್ಯವಾಗಿದೆ. ಜಾನಪದ ಸಾಹಿತ್ಯ ಮತ್ತು ಕಲೆಗಳಿಗೆ ಹೊಸ ಹೊಸ ಸಾಧ್ಯತೆಗಳನ್ನು ಒದಗಿಸಬೇಕು .ಆಧುನಿಕತೆಯೊಂದಿಗೆ ಸಂಯೋಜನೆಗೊಳಿಸುವುದು ಅತ್ಯಂತ ಮಹತ್ವವಾಗಿದೆ’ ಎಂದರು.

ಕಾರ್ಯಕ್ರಮದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ದಿನೇಶ್ ಗೌಡಗೆರೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಿ.ಎಂ. ಗುರುನಾಥ್, ಕರ್ನಾಟಕ ಮಾಧ್ಯಮ ಆಕಾಡೆಮಿಯ ಸದಸ್ಯ ಆಹೋಬಲಪತಿ, ಕರ್ನಾಟಕ ಜಾನಪದ ಪರಿಷತ್ತಿನ ವಿಜಯನಗರ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಸಿ. ಪರಶುರಾಮ ಹಂಗೂರ್, ಎನ್.ಎಸ್. ಮಹಂತೇಶ, ಜಿಲ್ಲಾ ಸಂಚಾಲಕ ಕೆ.ಸಿ. ರುದ್ರೇಶ್ ಇದ್ದರು.

ಈ ಸಂದರ್ಭದಲ್ಲಿ ಕಲಾವಿದರು ಗೊರವರ ಕುಣಿತ, ವೀರಗಾಸೆ, ಚೌಡಿಕೆ ಮೇಳ, ಕಹಳೆ ವಾದ್ಯ, ಉರುಮೆ ವಾದ್ಯ, ತಮಟೆ ವಾದ್ಯ, ತಂಬೂರಿ ವಾದ್ಯ ಪ್ರಸ್ತುತಪಡಿಸಿದರು.

Highlights - ಜಾನಪದ ಕಲೆಗಳು– ಕಲಾವಿದರು ಉಳಿಯಲಿ ಜಾನಪದ ಕಲಾವಿದರಿಗೆ ಹೆಚ್ಚು ಅವಕಾಶ ಸಿಗಲಿ ಜಾನಪದದಿಂದ ಸೌಹಾರ್ದ, ಸಾಮರಸ್ಯ, ಶಾಂತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.