ADVERTISEMENT

ಮುರುಘಾ ಮಠಕ್ಕಿದೆ ಭವ್ಯ ಪರಂಪರೆ

ಒಂಟಿಕಂಬದ ಮಠದಲ್ಲಿ ಮಲ್ಲಿಕಾರ್ಜುನ ಸ್ವಾಮೀಜಿ ಸ್ಮರಣೋತ್ಸವದಲ್ಲಿ ಮುರುಘಾ ಶರಣರು

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2021, 3:50 IST
Last Updated 18 ಅಕ್ಟೋಬರ್ 2021, 3:50 IST
ಹೊಳಲ್ಕೆರೆಯ ಒಂಟಿಕಂಬದ ಮಠದಲ್ಲಿ ಭಾನುವಾರ ನಡೆದ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಅವರ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಶಿವಮೂರ್ತಿ ಮುರುಘಾ ಶರಣರು, ಶಿವಲಿಂಗಾನಂದ ಸ್ವಾಮೀಜಿ ಭಾಗವಹಿಸಿದ್ದರು.
ಹೊಳಲ್ಕೆರೆಯ ಒಂಟಿಕಂಬದ ಮಠದಲ್ಲಿ ಭಾನುವಾರ ನಡೆದ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಅವರ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಶಿವಮೂರ್ತಿ ಮುರುಘಾ ಶರಣರು, ಶಿವಲಿಂಗಾನಂದ ಸ್ವಾಮೀಜಿ ಭಾಗವಹಿಸಿದ್ದರು.   

ಹೊಳಲ್ಕೆರೆ: ಚಿತ್ರದುರ್ಗದ ಮುರುಘಾ ಮಠಕ್ಕೆ ಭವ್ಯ ಪರಂಪರೆ ಇದೆ ಎಂದು ಶಿವಮೂರ್ತಿ ಮುರುಘಾ ಶರಣರು ಅಭಿಪ್ರಾಯಪಟ್ಟರು.

ಪಟ್ಟಣದ ಒಂಟಿಕಂಬದ ಮಠದಲ್ಲಿ ಭಾನುವಾರ ನಡೆದ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಮುರುಘಾಮಠಕ್ಕೆ ತನ್ನದೇ ಆದ ಇತಿಹಾಸವಿದ್ದು, ಸುಮಾರು 600 ಶಾಖಾ ಮಠಗಳಿದ್ದವು ಎಂದು ದಾಖಲೆಗಳು ಹೇಳುತ್ತವೆ. ಮಠವು ಸಮಾಜಕ್ಕೆ ಅನೇಕ ಯೋಗಿಗಳನ್ನು, ಸಂತರನ್ನು ನೀಡಿದೆ. ಮಠದೊಂದಿಗೆ ಸಾಗುವುದು ಜೀವನದ ಧನ್ಯತೆ ಎಂದು ಭಾವಿಸುತ್ತೇನೆ. ಮುರುಘಾ ಮಠ ಇಲ್ಲದಿದ್ದರೆ ಸಮಾಜ ಬಡವಾಗುತ್ತಿತ್ತು. ಮಲ್ಲಿಕಾರ್ಜುನ ಸ್ವಾಮೀಜಿ ನಾಡಿನಾದ್ಯಂತ ಶಿಕ್ಷಣ ಸಂಸ್ಥೆಗಳನ್ನು ತೆರೆಯುವ ಮೂಲಕ ಜ್ಞಾನದೀವಿಗೆಯಾದರು. ಅವರ ಮಾರ್ಗದರ್ಶನ, ಆಶೀರ್ವಾದಗಳೇ ನನಗೆ ಪ್ರೇರಣೆ. ಅವರ ಆಸೆಯಂತೆ ಮುರುಘಾಮಠವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ದಿದ್ದೇನೆ’ ಎಂದರು.

ADVERTISEMENT

ಮಾಜಿ ಸಚಿವ ಎಚ್.ಆಂಜನೇಯ ಮಾತನಾಡಿ, ‘ಮಲ್ಲಿಕಾರ್ಜುನ ಸ್ವಾಮೀಜಿ ಅವರು ದೂರದೃಷ್ಟಿ, ಕ್ರಿಯಾಶೀಲ, ಜನಪರ ಚಿಂತನೆಯುಳ್ಳವರಾಗಿದ್ದು, ಜಿಲ್ಲೆಗೆ ವೈದ್ಯಕೀಯ, ಎಂಜಿನಿಯರಿಂಗ್ ಕಾಲೇಜುಗಳನ್ನು ತಂದು ವಿದ್ಯಾರ್ಥಿಗಳಿಗೆ ನೆರವಾದರು. ಅವರ ಶಿಷ್ಯ ಶಿವಮೂರ್ತಿ ಶರಣರು ಸರಳತೆಗೆ ಹೆಸರಾಗಿದ್ದು, ಜನರಿಗೆ ಜ್ಞಾನದಾಸೋಹ, ಅನ್ನದಾಸೋಹ ನೀಡುತ್ತಿದ್ದಾರೆ. ಮಠದ ಸಾಮೂಹಿಕ ವಿವಾಹ ಕಾರ್ಯಕ್ರಮ ದೊಡ್ಡ ದಾಖಲೆ’ ಎಂದರು.

ಬಿಜೆಪಿ ಮುಖಂಡ ಎಂ.ಸಿ.ರಘುಚಂದನ್ ಮಾತನಾಡಿ, ‘ಮುರುಘಾ ಮಠ ನಮ್ಮ ಜಿಲ್ಲೆಯ ಪ್ರತಿಷ್ಠೆ. ಶಿವಮೂರ್ತಿ ಶ್ರೀಗಳು 30 ವರ್ಷಗಳಿಂದ ಮಠದ ಏಳಿಗೆಗೆ ಶ್ರಮಿಸುತ್ತಿದ್ದಾರೆ. ಕೊರೊನಾ ಸಮಯದಲ್ಲಿ ಬಸವೇಶ್ವರ ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿ ಹಗಲಿರುಳು ನಿಸ್ವಾರ್ಥ ಸೇವೆ ಸಲ್ಲಿಸಿದ್ದಾರೆ. ಗುಜರಾತ್ ಪ್ರಧಾನಿ ನರೇಂದ್ರ ಮೋದಿ ಏಕತಾ ಪ್ರತಿಮೆ ನಿರ್ಮಿಸಿದಂತೆ ನಮ್ಮ ಶಿವಮೂರ್ತಿ ಶರಣರು ಮರುಘಾ ಮಠದಲ್ಲಿ 320 ಅಡಿ ಎತ್ತರದ ಬಸವಣ್ಣನವರ ಪ್ರತಿಮೆ ನಿರ್ಮಿಸುತ್ತಿದ್ದಾರೆ’ ಎಂದರು.

ಕಬೀರಾನಂದ ಮಠದ ಶಿವಲಿಂಗಾನಂದ ಸ್ವಾಮೀಜಿ ಮಾತನಾಡಿ, ‘ಮಲ್ಲಿಕಾರ್ಜುನ ಸ್ವಾಮೀಜಿ ದೇವರ ಪ್ರತಿರೂಪ. ಶಿಕ್ಷಣ ಮತ್ತು ಧಾರ್ಮಿಕ ಕ್ಷೇತ್ರಕ್ಕೆ ಅವರ ಕೊಡುಗೆ ಅಪಾರ’ ಎಂದು ಸ್ಮರಿಸಿದರು.

ಧಾರವಾಡದ ಮುರುಘಾಮಠದ ಮಲ್ಲಿಕಾರ್ಜುನ ಸ್ವಾಮೀಜಿ, ಮಾದಾರ ಚನ್ನಯ್ಯ ಸ್ವಾಮೀಜಿ, ಮಾಜಿ ಶಾಸಕ ಪಿ. ರಮೇಶ್, ಕೆ.ಎಸ್. ನವೀನ್, ಹನುಮಲಿ ಷಣ್ಮುಖಪ್ಪ, ಎಲ್.ಬಿ. ರಾಜಶೇಖರ್, ಪಿ.ಆರ್. ಶಿವಕುಮಾರ್, ಪುರಸಭೆ ಉಪಾಧ್ಯಕ್ಷ ಕೆ.ಸಿ. ರಮೇಶ್, ಮರುಗೇಶ್, ಡಿ.ಸಿ. ಮೋಹನ್, ಎಚ್. ಆನಂದಪ್ಪ, ಎಸ್.ವಿ. ನಾಗರಾಜಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.