ADVERTISEMENT

ಅಂಬೇಡ್ಕರ್‌ ದೃಷ್ಟಿಕೋನಕ್ಕೆ ಜೀವಕೊಟ್ಟ ‘ಪ್ರಜಾವಾಣಿ’: ಕೆ.ವಿ.ಪ್ರಭಾಕರ್‌

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2025, 18:27 IST
Last Updated 30 ಆಗಸ್ಟ್ 2025, 18:27 IST
ಚಿತ್ರದುರ್ಗದಲ್ಲಿ ಶನಿವಾರ ನಡೆದ ‘ಮಾಧ್ಯಮದಲ್ಲಿ ಅಂಬೇಡ್ಕರ್‌ ದೃಷ್ಟಿಕೋನ‘ ವಿಚಾರ ಸಂಕಿರಣದಲ್ಲಿ ಮುಖ್ಯಮಂತ್ರಿಯವರ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್‌, ವಿಧಾನ ಪರಿಷತ್ ಸದಸ್ಯ ಕೆ.ಎಸ್‌.ನವೀನ್‌, ಮಾಧ್ಯಮ ಅಕಾಡೆಮಿ ಅಧ್ಯಕ್ಷೆ ಆಯೆಷಾ ಖಾನುಂ ಮತ್ತಿತರರು ಇದ್ದರು
ಚಿತ್ರದುರ್ಗದಲ್ಲಿ ಶನಿವಾರ ನಡೆದ ‘ಮಾಧ್ಯಮದಲ್ಲಿ ಅಂಬೇಡ್ಕರ್‌ ದೃಷ್ಟಿಕೋನ‘ ವಿಚಾರ ಸಂಕಿರಣದಲ್ಲಿ ಮುಖ್ಯಮಂತ್ರಿಯವರ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್‌, ವಿಧಾನ ಪರಿಷತ್ ಸದಸ್ಯ ಕೆ.ಎಸ್‌.ನವೀನ್‌, ಮಾಧ್ಯಮ ಅಕಾಡೆಮಿ ಅಧ್ಯಕ್ಷೆ ಆಯೆಷಾ ಖಾನುಂ ಮತ್ತಿತರರು ಇದ್ದರು   

ಚಿತ್ರದುರ್ಗ: ‘2012ರಲ್ಲಿ ಅಂಬೇಡ್ಕರ್ ಜಯಂತಿಯಂದು ‘ಪ್ರಜಾವಾಣಿ’ ಪತ್ರಿಕೆ ದೇವನೂರ ಮಹದೇವ ಅವರ ಅತಿಥಿ ಸಂಪಾದಕತ್ವದಲ್ಲಿ ಸಂಚಿಕೆಯನ್ನು ಹೊರ ತಂದಿತ್ತು. ಅಂಬೇಡ್ಕರ್ ದೃಷ್ಟಿಕೋನಕ್ಕೆ ಅಂದಿನ ಸಂಚಿಕೆ ಮರುಜೀವ ಕೊಡುವ ಅದ್ಭುತ ಪ್ರಯತ್ನ ಮಾಡಿತ್ತು’ ಎಂದು ಮುಖ್ಯಮಂತ್ರಿಯವರ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್‌ ಸ್ಮರಿಸಿದರು.

ಕರ್ನಾಟಕ ಮಾಧ್ಯಮ ಅಕಾಡೆಮಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಎಸ್‌ಸಿ– ಎಸ್‌ಟಿ ಪತ್ರಿಕಾ ಸಂಪಾದಕರ ಸಂಘ, ಜಿಲ್ಲಾ ಪತ್ರಕರ್ತರ ಸಂಘದ ವತಿಯಿಂದ ನಗರದಲ್ಲಿ ಶನಿವಾರ ನಡೆದ ‘ಮಾಧ್ಯಮದಲ್ಲಿ ಅಂಬೇಡ್ಕರ್‌ ದೃಷ್ಟಿಕೋನ‘ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

‘ಸಮಾನತೆಯ ಕನಸನ್ನು ಮತ್ತೆ ಕಾಣುತ್ತಾ’ ಶೀರ್ಷಿಕೆಯಡಿ ದೇವನೂರ ಮಹಾದೇವ ಅವರು ಸಂಪಾದಕೀಯ ಬರೆದಿದ್ದರು. ಸಂಪಾದಕರಾಗಿದ್ದ ಕೆ.ಎನ್‌. ಶಾಂತಕುಮಾರ್‌ ಅವರು ‘ಕಾಳಜಿಗಳ ಮರು ಶೋಧ’ ಎನ್ನುವ ಇನ್ನೊಂದು ಸಂಪಾದಕೀಯ ಬರೆದಿದ್ದರು. ಇವೆರಡು ಬರಹಗಳು  ಸಮಾಜದ ಕನ್ನಡಿಯಾಗಿದ್ದವು. ಆ ಸಂಚಿಕೆಯನ್ನು ಇವತ್ತಿಗೂ ನಾನು ಜೋಪಾನವಾಗಿಟ್ಟಿದ್ದೇನೆ’ ಎಂದ ಅವರು ‘ಪ್ರಜಾವಾಣಿ’ಯ ಆ ಸಂಚಿಕೆಯನ್ನು ಪ್ರದರ್ಶಿಸಿದರು.

ADVERTISEMENT

‘ಮಾಧ್ಯಮಗಳಿಗೆ ವಾಕ್‌ ಸ್ವಾತಂತ್ರ್ಯ, ಸಾಮಾಜಿಕ ನ್ಯಾಯ ಹಾಗೂ ಜಾತ್ಯತೀತ ತತ್ವಗಳು ಆತ್ಮವಾಗಬೇಕು. ಅಂಬೇಡ್ಕರ್‌ ಅವರ ದೃಷ್ಟಿಕೋನವೂ ಇದೇ ಆಗಿತ್ತು. ಆದರೆ ಇಂದಿನ ಪರಿಸ್ಥಿತಿಯಲ್ಲಿ ಜಾತ್ಯತೀತ ತತ್ವವನ್ನು ಕೊಲ್ಲುವ ಪ್ರಯತ್ನಗಳು ನಡೆಯುತ್ತಿವೆ’ ಎಂದರು.

‘ಮಾಧ್ಯಮಗಳಲ್ಲಿ ದಲಿತ ಸಮುದಾಯದ ಪ್ರಾತಿನಿಧ್ಯವೇ ಇಲ್ಲ, ನಿರ್ಣಾಯಕ ಸ್ಥಾನಗಳಲ್ಲಿ ಮಹಿಳೆಯರಿಗೆ, ದಲಿತರಿಗೆ ಸುದ್ದಿ ಸಂಸ್ಥೆಗಳು ನಿಷೇಧ ಹೇರಿವೆ ಎಂದು ಅಧ್ಯಯನ ವರದಿಗಳು ತಿಳಿಸಿವೆ. ಸುದ್ದಿ ಮಾಧ್ಯಮಗಳಲ್ಲಿ ನಾಪತ್ತೆಯಾಗಿರುವ ಕಾಳಜಿಗಳ ಮರು ಶೋಧನೆಯಾಗಬೇಕು, ಅಂಬೇಡ್ಕರ್ ದೃಷ್ಟಿಕೋನದ ಮರುಸ್ಥಾಪನೆಯಾಗಬೇಕು’ ಎಂದರು.

‘ಅಂಬೇಡ್ಕರ್‌ ಅವರು ವಿದೇಶಿ ವಿ.ವಿ.ಗಳಲ್ಲಿ ಅತ್ಯುನ್ನತ ಪದವಿ ಪಡೆದಿದ್ದರು. ಅಲ್ಲಿಯೇ ಅವರು ವಾಸವಾಗಬಹುದಿತ್ತು. ಆದರೆ ಅವರು ದೇಶಕ್ಕೆ ಹಿಂದಿರುಗಿ ತಾವು ಕಂಡುಂಡ ಘಟನೆ, ಅನುಭವಿದ ಅವಮಾನಗಳ ಆಧಾರದ ಮೇಲೆ ಸಂವಿಧಾನ ನೀಡಿದರು’ ಎಂದು ವಿಧಾನ ಪರಿಷತ್‌ ಸದಸ್ಯ ಕೆ.ಎಸ್‌.ನವೀನ್‌ ಹೇಳಿದರು.

ಹಿರಿಯ ಪತ್ರಕರ್ತ ಡಿ.ಉಮಾಪತಿ ದಿಕ್ಸೂಚಿ ಭಾಷಣ ಮಾಡಿದರು. ಮಾಧ್ಯಮ ಅಕಾಡೆಮಿ ಅಧ್ಯಕ್ಷೆ ಆಯೆಷಾ ಖಾನುಂ, ಕಾರ್ಯದರ್ಶಿ ಸಹನಾ ಭಟ್, ಸದಸ್ಯರಾದ ಅಹೋಬಳಪತಿ, ಎಸ್‌ಸಿ, ಎಸ್‌ಟಿ ಸಂಪಾದಕರ ಸಂಘದ ಅಧ್ಯಕ್ಷ ಚಲುವರಾಜ್‌ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.