ADVERTISEMENT

ರಾಜ್ಯದಲ್ಲಿ ಸದ್ಯಕ್ಕಿಲ್ಲ ದಾಸೋಹ ಸೇವೆ

ಧಾರ್ಮಿಕ ದತ್ತಿ ಇಲಾಖೆ ಆಯುಕ್ತ ಕೆ.ಎ.ದಯಾನಂದ ಸ್ಪಷ್ಟನೆ

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2020, 4:21 IST
Last Updated 31 ಅಕ್ಟೋಬರ್ 2020, 4:21 IST
ನಾಯಕನಹಟ್ಟಿ ಪಟ್ಟಣದ ಗುರುತಿಪ್ಪೇರುದ್ರಸ್ವಾಮಿ ದೇವಾಲಯಕ್ಕೆ ಶುಕ್ರವಾರ ಹಿಂದೂ ಧಾರ್ಮಿಕ ದತ್ತಿ ಇಲಾಖೆ ಆಯುಕ್ತ ಕೆ.ಎ.ದಯಾನಂದ ಭೇಟಿ ನೀಡಿದರು
ನಾಯಕನಹಟ್ಟಿ ಪಟ್ಟಣದ ಗುರುತಿಪ್ಪೇರುದ್ರಸ್ವಾಮಿ ದೇವಾಲಯಕ್ಕೆ ಶುಕ್ರವಾರ ಹಿಂದೂ ಧಾರ್ಮಿಕ ದತ್ತಿ ಇಲಾಖೆ ಆಯುಕ್ತ ಕೆ.ಎ.ದಯಾನಂದ ಭೇಟಿ ನೀಡಿದರು   

ನಾಯಕನಹಟ್ಟಿ: ರಾಜ್ಯದಲ್ಲಿ ಕೊರೊನಾ ಸೋಂಕು ತೀವ್ರತೆ ಹೆಚ್ಚಿರುವುದರಿಂದ ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಯಲ್ಲಿರುವ ದೇವಾಲಯಗಳಲ್ಲಿ ನಡೆಯುತ್ತಿದ್ದ ಅನ್ನ ದಾಸೋಹ ಸೇವೆಯನ್ನು ಆರಂಭಿಸುವುದಿಲ್ಲ ಎಂದುಹಿಂದೂ ಧಾರ್ಮಿಕ ದತ್ತಿ ಇಲಾಖೆ ಆಯುಕ್ತ ಕೆ.ಎ.ದಯಾನಂದ ಹೇಳಿದರು.

ಪಟ್ಟಣದ ಗುರುತಿಪ್ಪೇರುದ್ರಸ್ವಾಮಿ ದೇವಾಲಯಕ್ಕೆ ಶುಕ್ರವಾರ ಭೇಟಿ ನೀಡಿ ಅವರು ಮಾತನಾಡಿದರು.

‘ರಾಜ್ಯದಲ್ಲಿ ಕೊರೊನಾ ಸೋಂಕು ತೀವ್ರವಾಗಿ ಹರಡುತ್ತಿರುವ ಕಾರಣ ಅನ್ನ ದಾಸೋಹ ಸೇವೆ ಆರಂಭಿಸಲು ಸಾಧ್ಯವಿಲ್ಲ. ಮುಂದಿನ ದಿನಗಳಲ್ಲಿ ಕೊರೊನಾ ಹರಡುವ ಪ್ರಮಾಣ ತಗ್ಗುತ್ತಿದ್ದಂತೆ ಆಯಾ ಜಿಲ್ಲೆಗಳ ಜಿಲ್ಲಾಡಳಿತಗಳು ದಾಸೋಹ ಆರಂಭಿಸಲಿಕ್ಕೆ ತೀರ್ಮಾನ ಕೈಗೊಳ್ಳಲಿವೆ. ಜತೆಗೆ ಸಾಮೂಹಿಕ ಅನ್ನದಾಸೋಹ ಪ್ರಸಾದ ಸೇವೆಯನ್ನು ಆರಂಭಿಸುವ ಬಗ್ಗೆ ಸರ್ಕಾರ ವಿಶೇಷ ನಿಯಮಾವಳಿಗಳನ್ನು ರೂಪಿಸಿ ತೀರ್ಮಾನ ಕೈಗೊಳ್ಳಲಿದೆ’ ಎಂದು ಹೇಳಿದರು.

ADVERTISEMENT

ಸಪ್ತಪದಿ ಸ್ವರೂಪದಲ್ಲಿ ಬದಲಾವಣೆ: ‘ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆ ಕಾರ್ಯಕ್ರಮ ಸಪ್ತಪದಿ. ಈ ಕಾರ್ಯಕ್ರಮಕ್ಕೆ ಕೊರೊನಾದಿಂದ ಹಿನ್ನೆಡೆಯಾದರೂ ಕೆಲವೇ ದಿನಗಳಲ್ಲಿ ಮುಂಜಾಗ್ರತೆ ಕ್ರಮಗಳನ್ನು ಅನುಸರಿಸಿ ಕಾರ್ಯಕ್ಕೆ ಚಾಲನೆ ನೀಡುವ ಬಗ್ಗೆ ನೂತನ ನಿಯಾಮಾವಳಿಗಳನ್ನು ರೂಪಿಸಲಾಗಿದೆ’ ಎಂದರು.

‘ಸಾಮೂಹಿಕ ವಿವಾಹ ಪದ್ಧತಿಯನ್ನು ಕೈಬಿಟ್ಟು ಈಗಾಗಲೇ ವಿವಾಹಕ್ಕೆ ನೋಂದಣಿ ಮಾಡಿಕೊಂಡಿರುವ ವಧು–ವರರು ಮತ್ತು ಅವರ ಪೋಷಕರನ್ನು ಒಳಗೊಂಡು ಹೆಚ್ಚು ಜನಸಂದಣಿ ಇಲ್ಲದೆ ಸರಳವಾಗಿ ಮತ್ತು ಸಂಪ್ರದಾಯ ಬದ್ಧವಾಗಿ ಆಚರಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ವಧು–ವರರಿಗೆ ₹40 ಸಾವಿರ ಮತ್ತು 8 ಗ್ರಾಂ ಚಿನ್ನವನ್ನು ಉಡುಗೊರೆಯಾಗಿ ನೀಡುವ ಸಂಬಂಧ ಹಟ್ಟಿ ಚಿನ್ನದ ಗಣಿ ನಿಗಮದೊಂದಿಗೆ ಮೊದಲ ಸುತ್ತಿನ ಮಾತುಕತೆಯಾಗಿದೆ’ ಎಂದು ಹೇಳಿದರು.

‘ಕೆಲವೇ ದಿನಗಳಲ್ಲಿ ತುರ್ತು ಟೆಂಡರ್ ಕರೆದು ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು. ರಾಜ್ಯದ ಕೆಲವು ದೇವಾಲಯಗಳಲ್ಲಿ ವ್ಯವಸ್ಥಾಪನಾ ಸಮಿತಿಗಳಿಲ್ಲ. ಇದರಿಂದ ದೇವಾಲಯಗಳ ಅಭಿವೃದ್ಧಿ ಕೆಲಸ ಕಾರ್ಯಗಳಿಗೆ ಹಿನ್ನಡೆಯಾಗಿದೆ. ಹಾಗಾಗಿ ವ್ಯವಸ್ಥಾಪನ ಸಮಿತಿ ರಚಿಸಲು ರಾಜ್ಯ ಧಾರ್ಮಿಕ ಪರಿಷತ್ತಿನಲ್ಲಿ ಸಭೆ ನಡೆಸಿ ಅನುಮತಿಯನ್ನು ಪಡೆಯಲಾಗಿದೆ. ಶೀಘ್ರ ನಾಯಕನಹಟ್ಟಿ ದೇವಾಲಯಕ್ಕೆ ವ್ಯವಸ್ಥಾಪನಾ ಸಮಿತಿ ರಚಿಸಲು ಅಧಿಸೂಚನೆ ಹೊರಡಿಸಲಾಗುವುದು’ ಎಂದರು.

ಪಟ್ಟಣ ಪಂಚಾಯಿತಿ ಅಧ್ಯಕ್ಷ ಎನ್.ಮಹಾಂತಣ್ಣ, ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಎಂ.ವೈ.ಟಿ.ಸ್ವಾಮಿ, ಜೆ.ಪಿ.ರವಿಶಂಕರ್, ಕಾರ್ಯನಿರ್ವಹಣಾಧಿಕಾರಿ ಎಸ್‌.ಪಿ.ಬಿ.ಮಹೇಶ್, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಪ್ರಭಾಕರ್, ಗ್ರಾಮಸ್ಥರಾದ ಸುನಿಲ್, ದಳವಾಯಿ ರುದ್ರಮುನಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.