ADVERTISEMENT

ಚಿಕ್ಕಜಾಜೂರು: ಮುಕ್ಕಾಲು ಇಂಚು ಕೊಳವೆ ಬಾವಿ ನೀರಿನಲ್ಲಿ ಸಮೃದ್ಧ ತರಕಾರಿ

ಗುಂಜಿಗನೂರು: ಟೊಮೆಟೊ, ಬದನೆ ಬೆಳೆದು ಮಾದರಿಯಾದ ಯುವ ರೈತ ಪ್ರವೀಣ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2022, 2:10 IST
Last Updated 23 ಫೆಬ್ರುವರಿ 2022, 2:10 IST
ಚಿಕ್ಕಜಾಜೂರು ಸಮೀಪದ ಗುಂಜಿಗನೂರು ಗ್ರಾಮದ ರೈತ ಮಹಿಳೆ ವಸಂತಮ್ಮ ತಮ್ಮ ಜಮೀನಿನಲ್ಲಿ ಬೆಳೆದಿರುವ ಟೊಮೊಟೊ ಹಾಗೂ ಬದನೆ ಗಿಡಗಳಲ್ಲಿ ಸಮೃದ್ಧವಾಗಿ ಕಾಯಿ ಬಿಟ್ಟಿರುವುದು.
ಚಿಕ್ಕಜಾಜೂರು ಸಮೀಪದ ಗುಂಜಿಗನೂರು ಗ್ರಾಮದ ರೈತ ಮಹಿಳೆ ವಸಂತಮ್ಮ ತಮ್ಮ ಜಮೀನಿನಲ್ಲಿ ಬೆಳೆದಿರುವ ಟೊಮೊಟೊ ಹಾಗೂ ಬದನೆ ಗಿಡಗಳಲ್ಲಿ ಸಮೃದ್ಧವಾಗಿ ಕಾಯಿ ಬಿಟ್ಟಿರುವುದು.   

ಚಿಕ್ಕಜಾಜೂರು: ಕೇವಲ ಮುಕ್ಕಾಲು ಇಂಚು ನೀರಿನಿಂದ ಏನು ಮಾಡಲು ಸಾಧ್ಯ ಎಂದು ಮೂಗು ಮುರಿಯುವ ಈ ಕಾಲದಲ್ಲಿ ರೈತ ಕುಟುಂಬವೊಂದು ಸಮೃದ್ಧವಾಗಿ ತರಕಾರಿ ಬೆಳೆ ಬೆಳೆದು, ಉತ್ತಮ ಇಳುವರಿ ಪಡೆಯುತ್ತಿರುವುದು ಇತರ ರೈತರಿಗೆ ಮಾದರಿಯಾಗಿದೆ.

ಸಮೀಪದ ಗುಂಜಿಗನೂರು ಗ್ರಾಮದ ರೈತ ಪ್ರವೀಣ ತಾಯಿ ವಸಂತಮ್ಮ ಹಾಗೂ ತಂದೆ ಮಂಜಪ್ಪ ಅವರ ನೆರವಿನಿಂದ ತಮ್ಮ ಒಂದು ಕಾಲು ಎಕರೆ ಭೂಮಿಯಲ್ಲಿ ಟೊಮೊಟೊ ಹಾಗೂ ಬದನೆ ಸಸಿಗಳನ್ನು ನಾಟಿ ಮಾಡಿ, ಉತ್ತಮ ಇಳುವರಿಯನ್ನು ಪಡೆಯುತ್ತಿದಿದ್ದಾರೆ.

‘ಕಳೆದ ನವೆಂಬರ್‌ ತಿಂಗಳ ಕೊನೆಯಲ್ಲಿ ನಮ್ಮ ಒಂದು ಕಾಲು ಎಕರೆ ಪ್ರದೇಶದಲ್ಲಿ 1500 ಟೊಮೆಟೊ ಹಾಗೂ 2000 ಬದನೆ ಸಸಿಗಳನ್ನು ತಂದು ನಾಟಿ ಮಾಡಿದ್ದು, ಜನವರಿ ತಿಂಗಳಿಂದ ಟೊಮೊಟೊವನ್ನು ಕೊಯಿಲು ಮಾಡುತ್ತಿದ್ದೇವೆ. ಫೆಬ್ರುವರಿಯಿಂದ ಬದನೆ ಕಾಯಿಯನ್ನು ಕೊಯಿಲು ಮಾಡುತ್ತಿದ್ದೇವೆ. ಬೇಸಾಯ, ಸಸಿ ತಂದದ್ದು, ನಾಟಿ ಮಾಡಲು, ತಳಗೊಬ್ಬರ, ಮೇಲುಗೊಬ್ಬರ, ಸಸಿಗಳಿಗೆ ಆಸರೆಯಾಗಿ ಗೂಟಗಳನ್ನು ನೆಟ್ಟಿದ್ದು, ಟೊಮೊಟೊ ಹಾಗೂ ಬದನೆ ಕೊಯಿಲು ಹಾಗೂ ಔಷಧಕ್ಕಾಗಿ ಈವರೆಗೆ ₹ 12,000 ದಿಂದ ₹ 15,000 ಖರ್ಚು ಮಾಡಿದ್ದೇವೆ’ ಎನ್ನುತ್ತಾರೆ ಪ್ರವೀಣ.

ADVERTISEMENT

ಉತ್ತಮ ಇಳುವರಿ:

‘ಆರಂಭದಿಂದಲೂ ಟೊಮೊಟೊ ಉತ್ತಮ ಇಳುವರಿ ಬರುತ್ತಿದೆ. ಕೊಯಿಲಿನ ಆರಂಭದಲ್ಲಿ ಒಂದು ಬಾಕ್ಸ್‌ ಟೊಮೊಟೊಗೆ ₹ 450ರಿಂದ ₹480ಗಳಿಗೆ ಮಾರಾಟ ಮಾಡಿದ್ದೆವು. ನಂತರದಲ್ಲಿ ಬೆಲೆ ಇಳಿಮುಖವಾಗುತ್ತಾ ಸಾಗಿತು. ಈಗಲೂ ಎರಡು ದಿನಗಳಿಗೊಮ್ಮೆ 20 ಬಾಕ್ಸ್‌ನಷ್ಟು ಟೊಮೊಟೊ ಕೊಯಿಲು ಮಾಡುತ್ತಿದ್ದೇವೆ. ಚಿಕ್ಕಜಾಜೂರಿನ ಸ್ಥಳೀಯ ವ್ಯಾಪಾರಿಗಳಿಗೆ ಹಾಗೂ ದಾವಣಗೆರೆ ಮಾರುಕಟ್ಟೆಗೆ ಕೊಂಡೊಯ್ದು ಮಾರಾಟ ಮಾಡಿದ್ದೇವೆ. ₹25,000 ಲಾಭ ಗಳಿಸಿದ್ದೇವೆ. ಇನ್ನೂ ಇಳುವರಿ ಬರುತ್ತಿದ್ದು, ಸುಮಾರು ₹ 10 ಸಾವಿರದಿಂದ ರಿಂದ 15,000 ಆದಾಯ ಬರುವ ನಿರೀಕ್ಷೆ ಇದೆ’ ಎಂದು ಹೇಳುತ್ತಾರೆ.

‘ಕೊಯಿಲು, ಕಳೆ ತೆಗೆಯಲು ಕೂಲಿಯವರ ಜತೆ, ಮನೆಯವರೂ ಕೆಲಸ ಮಾಡುವುದರಿಂದ ಖರ್ಚು ಕಡಿಮೆಯಾಯಿತು. ಅಲ್ಲದೇ ಮನೆಯ ಕೊಟ್ಟಿಗೆ ಗೊಬ್ಬರವನ್ನು ಹಾಕಿರುವುದರಿಂದ ಉತ್ತಮ ಇಳುವರಿ ಬರುತ್ತಿದೆ. ತಂದೆ ಮಂಜಪ್ಪ ಹಾಗೂ ತಾಯಿ ವಸಂತಮ್ಮ ನಿತ್ಯ ನನಗೆ ಜಮೀನಿನಲ್ಲಿ ನೆರವು ನೀಡುತ್ತಿದ್ದಾರೆ’ ಎಂದು ಪ್ರವೀಣ ಹೇಳುತ್ತಾರೆ.

‘ಟೊಮೊಟೊ ಜತೆ, ಈಗ ಬದನೆ ಕಾಯಿಯ ಇಳುವರಿ ಆರಂಭವಾಗಿದೆ. ಜನವರಿ ತಿಂಗಳಿನಿಂದ ಎರಡು ದಿನಗಳಿಗೊಮ್ಮೆ 60 ಕೆ.ಜಿ. ತೂಕದ 4 ಚೀಲಗಳಷ್ಟು ಬದನೆ ಕಾಯಿ ಸಿಗುತ್ತಿದೆ. ಮಾರುಕಟ್ಟೆಯಲ್ಲಿ 25 ಕೆ.ಜಿ. ತೂಕಕ್ಕೆ ₹ 200ರಂತೆ ಮಾರಾಟ ಮಾಡುತ್ತಿದ್ದೇವೆ. ಸರಿಯಾದ ಸಮಯಕ್ಕೆ ನೀರನ್ನು ಹಾಯಿಸುತ್ತಿದ್ದರೆ ಇನ್ನೂ ಸುಮಾರು ಐದಾರು ತಿಂಗಳು ಬದನೆ ಕಾಯಿಯನ್ನು ಕೊಯ್ಯಬಹುದು. ಕೊಳವೆ ಬಾವಿಯಲ್ಲಿ ಮುಕ್ಕಾಲು ಇಂಚಿನಷ್ಟು ಮಾತ್ರ ಬರುತ್ತಿದೆ. ಇದರಿಂದಾಗಿ ನಿಯಮಿತವಾಗಿ ನೀರನ್ನು ಹಾಯಿಸುತ್ತಿದ್ದೇವೆ. ಬದನೆಯಿಂದ ಕನಿಷ್ಠವೆಂದರೂ ಸುಮಾರು ₹ 25,000 ದಿಂದ ₹30,000 ಆದಾಯ ಸಿಗುವ ಸಾಧ್ಯತೆ ಇದೆ’ ಎಂದು ರೈತ ಪ್ರವೀಣ ಪ್ರಜಾವಾಣಿಗೆ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.