ADVERTISEMENT

ಇಂಗಳದಾಳ್‌ ಗಣಿ ಪುನಶ್ಚೇತನಕ್ಕೆ ಒಲವು: ಸಚಿವ ಮುರುಗೇಶ ನಿರಾಣಿ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2021, 2:16 IST
Last Updated 5 ಫೆಬ್ರುವರಿ 2021, 2:16 IST
ಮುರುಗೇಶ ನಿರಾಣಿ
ಮುರುಗೇಶ ನಿರಾಣಿ   

ಚಿತ್ರದುರ್ಗ: ಹಟ್ಟಿ ಚಿನ್ನದ ಗಣಿ ವ್ಯಾಪ್ತಿಯಲ್ಲಿರುವ ತಾಲ್ಲೂಕಿನ ಇಂಗಳದಾಳ್‌ ತಾಮ್ರ ಗಣಿ ಸೇರಿದಂತೆ ಇತರ ಗಣಿಗಳ ಪುನಶ್ಚೇತನಕ್ಕೆ ಪ್ರಯತ್ನಿಸಲು ಸರ್ಕಾರ ಮುಂದಾಗಿದೆ ಎಂದು ಗಣಿ ಮತ್ತು ಭೂವಿಜ್ಞಾನ ಸಚಿವ ಮುರುಗೇಶ ನಿರಾಣಿ ತಿಳಿಸಿದರು.

ಹಿರಿಯೂರು ತಾಲ್ಲೂಕಿನ ಐಮಂಗಲದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ‘ರೋಗಗ್ರಸ್ತ ಕಾರ್ಖಾನೆಗಳನ್ನು ಪುನಶ್ಚೇತನ ಮಾಡುವಲ್ಲಿ ಅನುಭವ ಇದೆ. ಪ್ರಾಥಮಿಕ ವರದಿ ನೀಡಲು ಹೇಳಿದ್ದೇವೆ. ಯಾವ ರೀತಿ ಸುಧಾರಣೆ ಮಾಡಬೇಕು ಎಂಬುದನ್ನು ಆಲೋಚಿಸುತ್ತೇವೆ. ಹಟ್ಟಿ ಚಿನ್ನದ ಗಣಿಯ ಅಭಿವೃದ್ಧಿಗೆ ಚಿಂತನೆ ನಡೆದಿದೆ’ ಎಂದು ಹೇಳಿದರು.

‘ಗಣಿಗಾರಿಕೆ, ಸ್ಫೋಟಕ್ಕೆ ಸಂಬಂಧಿಸಿದಂತೆ ವೈಜ್ಞಾನಿಕ ತರಬೇತಿಗಳು ನಡೆದಿಲ್ಲ. ಗಣಿಯಲ್ಲಿ ತೊಡಗಿದ ಬಹುತೇಕರಿಗೆ ಸೂಕ್ತ ಶಿಕ್ಷಣವಿಲ್ಲ. ಅವರಿಗೆ ತರಬೇತಿ ನೀಡುವುದಕ್ಕೆ ಸಂಬಂಧಿಸಿದಂತೆ ಸರ್ಕಾರ ಚಿಂತನೆ ನಡೆಸುತ್ತಿದೆ. ಗಣಿ ವಿಶ್ವವಿದ್ಯಾಲಯ ಸ್ಥಾಪನೆಗೆ ಒಲವು ತೋರಿದೆ’ ಎಂದು ಹೇಳಿದರು.

ADVERTISEMENT

‘ಗಣಿ ಪರವಾನಗಿಗೆ ಜಿಲ್ಲಾ ಕೇಂದ್ರ ಹಾಗೂ ಬೆಂಗಳೂರಿಗೆ ಅಲೆಯಬೇಕಿತ್ತು. ಈ ಸಮಸ್ಯೆ ನಿವಾರಣೆಗೆ ನಾಲ್ಕು ಕಂದಾಯ ವಿಭಾಗ ಹಾಗೂ ಕರಾವಳಿ ಭಾಗದಲ್ಲಿ ಗಣಿ ಅದಾಲತ್‌ ನಡೆಸಲಾಗುವುದು. ಜಲ್ಲಿ, ಮರಳು ತೊಂದರೆ ಆಗದಂತೆ ನೋಡಿಕೊಳ್ಳಲಾಗುವುದು’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.