ADVERTISEMENT

ಜನಪ್ರತಿನಿಧಿಗಳ ದಿಕ್ಕುತಪ್ಪಿಸುತ್ತಿರುವ ಶ್ರೀರಾಮುಲು: ತಿಪ್ಪೇಸ್ವಾಮಿ ಆರೋಪ

ಮಾಜಿ ಶಾಸಕ ಎಸ್. ತಿಪ್ಪೇಸ್ವಾಮಿ ಆರೋಪ

​ಪ್ರಜಾವಾಣಿ ವಾರ್ತೆ
Published 23 ಜೂನ್ 2022, 2:57 IST
Last Updated 23 ಜೂನ್ 2022, 2:57 IST
ಎಸ್.ತಿಪ್ಪೇಸ್ವಾಮಿ
ಎಸ್.ತಿಪ್ಪೇಸ್ವಾಮಿ   

ನಾಯಕನಹಟ್ಟಿ: ‘ಮೊಳಕಾಲ್ಮುರು ವಿಧಾನಸಭಾ ಕ್ಷೇತ್ರದ ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳಿಗೆ ತಪ್ಪು ಮಾಹಿತಿ ನೀಡುವ ಮೂಲಕ ಅವರನ್ನು ದಿಕ್ಕುತಪ್ಪಿಸುವ ಕಾರ್ಯವನ್ನು ಕ್ಷೇತ್ರದ ಶಾಸಕ ಹಾಗೂ ಸಾರಿಗೆ ಸಚಿವ ಬಿ. ಶ್ರೀರಾಮುಲು ಮಾಡುತ್ತಿದ್ದಾರೆ’ ಎಂದು ಮಾಜಿ ಶಾಸಕ ಎಸ್. ತಿಪ್ಪೇಸ್ವಾಮಿ ಆರೋಪಿಸಿದರು.

ಪಟ್ಟಣದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮೊಳಕಾಲ್ಮುರು ಕ್ಷೇತ್ರ ಸೇರಿದಂತೆ ಕೂಡ್ಲಿಗೆ, ಚಳ್ಳಕೆರೆ, ಪಾವಗಡ ಕ್ಷೇತ್ರಗಳಿಗೆ ಕುಡಿಯುವ ನೀರನ್ನು ಸರಬರಾಜು ಮಾಡಲು ತುಂಗಭದ್ರಾ ಹಿನ್ನೀರು ಯೋಜನೆ ಜಾರಿಗೆ ತರಲಾಗಿದೆ. ಈಬೃಹತ್ ಯೋಜನೆಗೆ 2017–18ನೇ ಸಾಲಿನಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ₹ 2,248 ಕೋಟಿ ಅನುದಾನ ಮಂಜೂರಾತಿಗೆ ಒಪ್ಪಿಗೆ ನೀಡಿತ್ತು. ಈ ಯೋಜನೆಯ ಅನುಷ್ಠಾನದಲ್ಲಿ ನನ್ನ ಪಾತ್ರ ಅಪಾರವಾಗಿದೆ’ ಎಂದುಹೇಳಿದರು.

‘ಆದರೆ ಕ್ಷೇತ್ರದ ಶಾಸಕರಾಗಿರುವ ಬಿ. ಶ್ರೀರಾಮುಲು ಅವರು ತುಂಗಭದ್ರಾ ಹಿನ್ನೀರು ಯೋಜನೆಯು ತಮ್ಮ ಅವಧಿಯಲ್ಲಿ ಮಂಜೂರಾತಿ ಪಡೆದಿದೆ. ತಾನೇ ಈ ಬೃಹತ್ ಯೋಜನೆಯನ್ನು ಜಾರಿಗೆ ತಂದಿದ್ದು ಎಂದು ಸುಳ್ಳು ಹೇಳುತ್ತಿದ್ದಾರೆ. ಒಂದು ವೇಳೆ ಅವರೇ ಈ ಯೋಜನೆಯ ಜಾರಿಗೆಕಾರಣರಾಗಿದ್ದರೆ ದಾಖಲೆಗಳನ್ನು ನೀಡಲಿ. ಜೊತೆಗೆ ಈ ಬೃಹತ್ ಯೋಜನೆಯನ್ನು ಅವಧಿಗೂ ಮುನ್ನವೇ ಮುಕ್ತಾಯಗೊಳಿಸುತ್ತೇವೆ ಎಂದು ಹೇಳಿಕೊಂಡು ಮೊಳಕಾಲ್ಮುರು ಕ್ಷೇತ್ರದ ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳೊಂದಿಗೆ ಕಾಮಗಾರಿ ವೀಕ್ಷಣೆಯನ್ನು ಮಾಡುವ ನಾಟಕ ಮಾಡುತ್ತಿದ್ದಾರೆ’ ಎಂದು ಆರೋಪಿಸಿದರು.

ADVERTISEMENT

ಮಂಗಳವಾರ ಕ್ಷೇತ್ರದ ಎಲ್ಲ ಗ್ರಾಮ ಪಂಚಾಯಿತಿ ಮತ್ತು ಮೊಳಕಾಲ್ಮುರು ಪಟ್ಟಣ ಪಂಚಾಯಿತಿಯ ಜನಪ್ರತಿನಿಧಿಗಳನ್ನು ಸರ್ಕಾರಿ ಕಾರ್ಯಕ್ರಮವೆಂದು ಬಿಂಬಿಸಿ ಕೂಡ್ಲಿಗಿ ತಾಲ್ಲೂಕಿನ ವೆಂಕಟಾಪುರ ಬಳಿ ಕಾಮಗಾರಿ ವೀಕ್ಷಣೆ ನಡೆಸಿ ಜನಪ್ರನಿಧಿಗಳಿಗೆ ಸುಳ್ಳು ಮಾಹಿತಿ ನೀಡಿ ಅವರನ್ನು ತಪ್ಪುದಾರಿಗೆ ಎಳೆಯುತ್ತಿದ್ದಾರೆ. ಮುಂಬರುವ ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆಯಲ್ಲಿ ಅವರ ವೈಯಕ್ತಿಕ ವರ್ಚಸ್ಸನ್ನು ಹೆಚ್ಚಿಸಿಕೊಳ್ಳಲು ಸರ್ಕಾರಿ ಅಧಿಕಾರಿಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಜೊತೆಗೆ ಕಾಮಗಾರಿ ವೀಕ್ಷಣೆಯ ನೆಪದಲ್ಲಿ ಜನಪ್ರತಿನಿಧಿಗಳ ಪ್ರವಾಸಕ್ಕಾಗಿ ಗ್ರಾಮ ಪಂಚಾಯಿತಿಯ ಆರ್ಥಿಕ ದುಂದುವೆಚ್ಚಕ್ಕೆ ನೇರವಾಗಿ ಕಾರಣರಾಗಿದ್ದಾರೆ’ ಎಂದು ಕಿಡಿ ಕಾರಿದರು.

‘ಶ್ರೀರಾಮುಲು ಅವರು ಕ್ಷೇತ್ರದ ಶಾಸಕರಾದ ದಿನದಿಂದಇಲ್ಲಿಯವರೆಗೂ ಅವರದ್ದೇ ಅನುದಾನ, ಸರ್ಕಾರಿ
ವಿಶೇಷ ಅನುದಾನದಲ್ಲಿ ಮೊಳಕಾಲ್ಮುರು ಕ್ಷೇತ್ರದಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ಕ್ಷೇತ್ರದ ಜನತೆಯ ಮುಂದೆ ಶ್ವೇತಪತ್ರ ಹೊರಡಿಸಲಿ’ಎಂದು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.