
ಮೊಳಕಾಲ್ಮುರು: ತಾಲ್ಲೂಕಿನ ಊಡೇವಿನಲ್ಲಿ ಸೋಮವಾರ ಗ್ರಾಮ ದೇವರಾದ ಗುರು ತಿಪ್ಪೇರುದ್ರಸ್ವಾಮಿ ರಥೋತ್ಸವ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವೈಭವದಿಂದ ಜರುಗಿತು.
ಪ್ರತಿವರ್ಷ ಕಾರ್ತಿಕ ಮಾಸದಲ್ಲಿ ಇಲ್ಲಿ ರಥೋತ್ಸವ ನಡೆಯುವುದು ವಾಡಿಕೆಯಾಗಿದೆ. ಅಂಗವಾಗಿ ಭಾನುವಾರ ಸಂಜೆ ಸ್ವಾಮಿಯ ಉತ್ಸವ ಮೂರ್ತಿಯನ್ನು ಮೆರವಣಿಗೆಯಲ್ಲಿ ಗಂಗಾಪೂಜೆಗೆ ಕರೆದೊಯ್ಯಲಾಯಿತು. ಮರಳಿ ಬಂದ ನಂತರ ದೇವಸ್ಥಾನದಲ್ಲಿ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು, ರಾತ್ರಿಯಿಡೀ ಭಜನೆ ನಡೆಯಿತು.
ಸೋಮವಾರ ಬೆಳಿಗ್ಗೆ ದೇವಸ್ಥಾನದಲ್ಲಿ ಸ್ವಾಮಿಗೆ ರುದ್ರಾಭಿಷೇಕ, ರಥದ ಅಲಂಕಾರ, ಮುಕ್ತಿಧ್ವಜ ಆಹ್ವಾನ, ರಥಕ್ಕೆ ಬಲಿ ಅನ್ನ ಸಮರ್ಪಣೆ ನಂತರ ಮಧ್ಯಾಹ್ನ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.
ದೇವಸ್ಥಾನ ಮುಂಭಾಗದಿಂದ ಆರಂಭವಾದ ರಥೋತ್ಸವ ಮುಖ್ಯಬೀದಿಗಳಲ್ಲಿ ಸಂಚರಿಸಿ ಮರಳಿ ದೇವಸ್ಥಾನ ಮುಂಭಾಗಕ್ಕೆ ಬಂದಿತು. ಭಕ್ತರು ದಾರಿಯುದ್ದಕ್ಕೂ ಸೂರುಬೆಲ್ಲ, ಬಾಳೆಹಣ್ಣು, ತೆಂಗಿನಕಾಯಿ ಅರ್ಪಣೆ ಮಾಡಿದರು.
ರಥೋತ್ಸವಕ್ಕೆ ನಂದಿಕೋಲು ಕುಣಿತ, ಡೊಳ್ಳುಕುಣಿತ. ಗೊಂಬೆಗಳ ಕುಣಿತ ಗಮನ ಸೆಳೆದವು.
ಹೂವಿನ ಪಲ್ಲಕ್ಕಿ ಉತ್ಸವ ಇಂದು: ಮಂಗಳವಾರ ಸ್ವಾಮಿಯ ಹೂವಿನ ಪಲ್ಲಕ್ಕಿ ಉತ್ಸವ ನಡೆಸಿದ ದೇವರನ್ನು ಗುಡಿದುಂಬಿಸುವ ಮೂಲಕ ರಥೋತ್ಸವಕ್ಕೆ ತೆರೆ ಬೀಳಲಿದೆ ಎಂದು ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.