ADVERTISEMENT

ಟಿಪ್ಪು ಜಯಂತಿಗೆ ಪೊಲೀಸ್‌ ಸರ್ಪಗಾವಲು

ಮೆರವಣಿಗೆಗೆ ಸಿಗದ ಅವಕಾಶ, ವಾಹನ ತಪಾಸಣೆ

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2018, 13:49 IST
Last Updated 9 ನವೆಂಬರ್ 2018, 13:49 IST

ಚಿತ್ರದುರ್ಗ: ಬಿಜೆಪಿಯ ವಿರೋಧದ ನಡುವೆಯೂ ಟಿಪ್ಪು ಜಯಂತಿ ನಡೆಸಲು ಮುಂದಾಗಿರುವ ಜಿಲ್ಲಾಡಳಿತ, ಶುಕ್ರವಾರ ನಸುಕಿನಿಂದ ಜಿಲ್ಲೆಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿದೆ. ಪೊಲೀಸರ ಸರ್ಪಗಾವಲಿನಲ್ಲಿ ತರಾಸು ರಂಗಮಂದಿರದಲ್ಲಿ ಜಯಂತಿ ಆಚರಣೆಗೆ ಸಿದ್ಧತೆ ನಡೆಸಿದೆ.

ಭದ್ರತೆಯನ್ನು ಬಿಗಿಗೊಳಿಸಿರುವ ಪೊಲೀಸರು ಆಯಕಟ್ಟಿನ ಸ್ಥಳ, ಸೂಕ್ಷ್ಮ ಪ್ರದೇಶಗಳಿಗೆ ಸಿಬ್ಬಂದಿಯನ್ನು ನಿಯೋಜಿಸಿದ್ದಾರೆ. ನಿಷೇಧಾಜ್ಞೆ ಜಾರಿಯಲ್ಲಿರುವುದರಿಂದ ಐದು ಅಥವಾ ಅದಕ್ಕಿಂತ ಹೆಚ್ಚು ಜನ ಗುಂಪು ಸೇರದಂತೆ ನೋಡಿಕೊಳ್ಳುತ್ತಿದ್ದಾರೆ. ಜಾಥಾ, ಪ್ರತಿಭಟನೆ, ಕಾರ್ಯಕ್ರಮಗಳಿಗೂ ಅವಕಾಶ ನೀಡಿಲ್ಲ.

ಟಿಪ್ಪು ಜಯಂತಿ ಅಂಗವಾಗಿ ಮೆರವಣಿಗೆ ನಡೆಸಲು ಜಿಲ್ಲಾಡಳಿತ ಅನುಮತಿ ನಿರಾಕರಿಸಿದೆ. ಟಿಪ್ಪು ಸುಲ್ತಾನ್‌ ಅಭಿಮಾನಿಗಳು ಇಟ್ಟಿದ್ದ ಪ್ರಸ್ತಾವವನ್ನು ಜಿಲ್ಲಾಡಳಿತ ತಿರಸ್ಕರಿಸಿದೆ. ತರಾಸು ರಂಗಮಂದಿರದಲ್ಲಿ ಶನಿವಾರ ಬೆಳಿಗ್ಗೆ 11ಕ್ಕೆ ಜಯಂತಿ ಆರಂಭವಾಗಲಿದೆ. ಜಿಲ್ಲಾ ಉಸ್ತುವಾರಿ ಸಚಿವ ವೆಂಕಟರಮಣಪ್ಪ ಜಯಂತಿ ಉದ್ಘಾಟಿಸಲಿದ್ದಾರೆ.

ADVERTISEMENT

ಮದಕರಿ ನಾಯಕ ವೃತ್ತ, ಐತಿಹಾಸಿಕ ಕೋಟೆ, ಸಂಗೊಳ್ಳಿ ರಾಯಣ್ಣ ವೃತ್ತ, ಮಸೀದಿ ಹಾಗೂ ಮಾರುಕಟ್ಟೆ ಬಳಿ ಹೆಚ್ಚುವರಿ ಪೊಲೀಸ್‌ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಅನುಮಾನಸ್ಪದವಾಗಿ ತಿರುಗಾಡುವ ವ್ಯಕ್ತಿಗಳ ಮೇಲೆ ಪೊಲೀಸರು ನಿಗಾ ಇಟ್ಟಿದ್ದಾರೆ. ಸೂಕ್ಷ್ಮ ಪ್ರದೇಶಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ. ಪಥಸಂಚಲನ ನಡೆಸಿ ಪೊಲೀಸರು ರಕ್ಷಣೆಯ ಸಂದೇಶ ರವಾನಿಸಿದ್ದಾರೆ.

ಕ್ಷಿಪ್ರ ಕಾರ್ಯಪಡೆಯ (ಆರ್‌ಎಎಫ್‌) 120, ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯ (ಸಿಐಎಸ್‌ಎಫ್‌) 120 ಸಿಬ್ಬಂದಿ, ಕರ್ನಾಟಕ ರಾಜ್ಯ ಮೀಸಲು ಪೊಲೀಸ್‌ ಪಡೆಯ 9 ತುಕಡಿ, ಐವರು ಡಿವೈಎಸ್‌ಪಿ, 12 ಸಿಪಿಐ ಹಾಗೂ 30 ಪಿಎಸ್‌ಐ ಸೇರಿ ಸಾವಿರಕ್ಕೂ ಹೆಚ್ಚು ಪೊಲೀಸರನ್ನು ಚಿತ್ರದುರ್ಗ ನಗರದ ಭದ್ರತೆಗೆ ನಿಯೋಜಿಸಲಾಗಿದೆ.

ನಗರ ವ್ಯಾಪ್ತಿಯಲ್ಲಿ ಏಳು ಚೆಕ್‌ಪೋಸ್ಟ್‌ಗಳನ್ನು ತೆರೆಯಲಾಗಿದೆ. ಚಳ್ಳಕೆರೆ, ತುರುವನೂರು, ಹೊಸಪೇಟೆ, ದಾವಣಗೆರೆ, ಹೊಳಲ್ಕೆರೆ ಹಾಗೂ ಹಿರಿಯೂರು ಮಾರ್ಗದಿಂದ ಸಂಪರ್ಕ ಕಲ್ಪಿಸುವ ರಸ್ತೆಗಳಲ್ಲಿ ಪೊಲೀಸರು ವಾಹನ ತಪಾಸಣೆ ಮಾಡುತ್ತಿದ್ದಾರೆ. ಅಹಿತಕರ ಘಟನೆಗಳನ್ನು ಜರುಗದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.