ADVERTISEMENT

ಶೌಚಾಲಯ ಬಳಕೆ ನಿತ್ಯ, ನಿರಂತರವಾಗಿರಲಿ: ಜಯಲಕ್ಷ್ಮಿ

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2025, 6:53 IST
Last Updated 22 ನವೆಂಬರ್ 2025, 6:53 IST
ತಮಟಕಲ್ಲು ಗ್ರಾಮದಲ್ಲಿ  ವಿಶ್ವ ಶೌಚಾಲಯ ದಿನಾಚರಣೆ ಪ್ರಯುಕ್ತ ನಡೆದ ‘ನಮ್ಮ ಶೌಚಾಲಯ-ನಮ್ಮ ಭವಿಷ್ಯ’ ಅಭಿಯಾನಕ್ಕೆ ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕರಾದ ಜಯಲಕ್ಷ್ಮಿ ಚಾಲನೆ ನೀಡಿದರು
ತಮಟಕಲ್ಲು ಗ್ರಾಮದಲ್ಲಿ  ವಿಶ್ವ ಶೌಚಾಲಯ ದಿನಾಚರಣೆ ಪ್ರಯುಕ್ತ ನಡೆದ ‘ನಮ್ಮ ಶೌಚಾಲಯ-ನಮ್ಮ ಭವಿಷ್ಯ’ ಅಭಿಯಾನಕ್ಕೆ ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕರಾದ ಜಯಲಕ್ಷ್ಮಿ ಚಾಲನೆ ನೀಡಿದರು    

ಚಿತ್ರದುರ್ಗ: ‘ಗ್ರಾಮೀಣ ಭಾಗದ ಪ್ರತಿಯೊಬ್ಬರೂ ಶೌಚಾಲಯ ಬಳಸಿ, ನೈರ್ಮಲ್ಯಕ್ಕೆ ಆದ್ಯತೆ ನೀಡಬೇಕು. ಬಯಲು ಬಹಿರ್ದೆಸೆ ಮುಕ್ತಗೊಳಿಸಲು ಪ್ರತಿಯೊಬ್ಬರೂ ಸಹಕಾರ ನೀಡಬೇಕು’ ಎಂದು ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕರಾದ ಜಯಲಕ್ಷ್ಮಿ ಹೇಳಿದರು.

ತಾಲ್ಲೂಕಿನ ಗುಡ್ಡದರಂಗವ್ವನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಮಟಕಲ್ಲು ಗ್ರಾಮದಲ್ಲಿ ಶುಕ್ರವಾರ ವಿಶ್ವ ಶೌಚಾಲಯ ದಿನಾಚರಣೆ ಪ್ರಯುಕ್ತ ನಡೆದ ‘ನಮ್ಮ ಶೌಚಾಲಯ-ನಮ್ಮ ಭವಿಷ್ಯ’ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ಗ್ರಾಮೀಣ ಸಮುದಾಯದಲ್ಲಿ ಸುರಕ್ಷಿತ ನೈರ್ಮಲ್ಯ, ಶುಚಿತ್ವ ಕುರಿತು ಜಾಗೃತಿ ಮೂಡಿಸಿ, ಶೌಚಾಲಯಗಳನ್ನು ನಿರಂತರವಾಗಿ ಬಳಸುವಂತೆ ಪ್ರೇರೇಪಿಸುವ ಉದ್ದೇಶದೊಂದಿಗೆ ಪ್ರತಿ ವರ್ಷ ವಿಶ್ವ ಶೌಚಾಲಯ ದಿನವನ್ನಾಗಿ ಆಚರಿಸಲಾಗುತ್ತಿದೆ. ಈ ದಿನಾಚರಣೆಯು ಬಯಲು ಬಹಿರ್ದೆಸೆ ಮುಕ್ತ ಸ್ಥಿತಿಯ ಸ್ಥಾನವನ್ನು ಉಳಿಸಿಕೊಳ್ಳುವಲ್ಲಿ ಪ್ರಮುಖ ಪಾತ್ರವಹಿಸಲಿದೆ. ಅಭಿಯಾನ ಈಗಾಗಲೇ ನವೆಂಬರ್‌ನಲ್ಲಿ ಪ್ರಾರಂಭವಾಗಿದ್ದು, ಡಿ.10ರವರೆಗೆ ಜಿಲ್ಲೆಯ ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ನಡೆಯಲಿದೆ’ ಎಂದರು.

ADVERTISEMENT

‘ಅಭಿಯಾನವು ಆರೋಗ್ಯ, ಘನತೆ ಮತ್ತು ಸಾಮಾಜಿಕ ಸಮೃದ್ಧಿಗಾಗಿ ನೈರ್ಮಲ್ಯ ಮತ್ತು ಸ್ವಚ್ಛತೆಗೆ ಆದ್ಯತೆ ನೀಡುತ್ತದೆ. ವೈಯಕ್ತಿಕ ಮನೆ ಶೌಚಾಲಯಗಳು ಮತ್ತು ಸಮುದಾಯದ ನೈರ್ಮಲ್ಯ ಸಂಕೀರ್ಣಗಳು ಎರಡಕ್ಕೂ ಸಂಬಂಧಿಸಿದಂತೆ ಕಾರ್ಯಕ್ಷಮತೆಯ ಮೌಲ್ಯಮಾಪನ ಮಾಡಲಾಗುತ್ತಿದೆ. ಜಿಲ್ಲೆಯಲ್ಲಿ ಪ್ರಸ್ತುತ ಸಮುದಾಯ ಶೌಚಾಲಯಗಳಿಗೆ ಚಾಲ್ತಿಯಲ್ಲಿರುವ ಕಾರ್ಯಾಚರಣೆ ಮತ್ತು ನಿರ್ವಹಣೆ ವ್ಯವಸ್ಥೆಯ ಮೌಲ್ಯಮಾಪನ ಮತ್ತು ಬಲಪಡಿಸುವ ಕಾರ್ಯಕ್ರಮ ಆಯೋಜಿಸಲಾಗಿದೆ’ ಎಂದರು.

‘ವೈಯಕ್ತಿಕ ಗೃಹ ಶೌಚಾಲಯ, ಸಮುದಾಯ ಸಂಕೀರ್ಣ ಘಟಕಗಳು ಎರಡಕ್ಕೂ ಬಣ್ಣ ಬಳಿಯುವುದು ಕೂಡ ಅಭಿಯಾನದ ಉದ್ದೇಶವಾಗಿದೆ. ಸಮುದಾಯದಲ್ಲಿ ಮತ್ತು ವಿಶೇಷವಾಗಿ ಶಾಲೆಗಳಲ್ಲಿ ವೈಯಕ್ತಿಕ ಶೌಚಾಲಯಗಳ ಸ್ವಚ್ಛತೆಯ ಜಾಗೃತಿ ಮೂಡಿಸಲಾಗುತ್ತಿದೆ. ನೈರ್ಮಲ್ಯ ಮತ್ತು ಸ್ವಚ್ಛತೆಯ ಪ್ರಾಮುಖ್ಯತೆ ಕುರಿತು ಜಾಗೃತಿ ಮೂಡಿಸಲಾಗುವುದು. ಸಮುದಾಯದ ಮಲ ತ್ಯಾಜ್ಯದ ಸುರಕ್ಷಿತ ನಿರ್ವಹಣೆ ಕುರಿತು ಅರಿವು ಮೂಡಿಸಲಾಗುತ್ತಿದೆ. ಗ್ರಾಮ ಪಂಚಾಯಿತಿ ಹಂತದಲ್ಲಿ ಸ್ವಚ್ಛ, ಸುಂದರ ವೈಯಕ್ತಿಕ ಗೃಹ ಶೌಚಾಲಯ (ಉತ್ತಮ ಶೌಚಾಲಯ) ಸ್ಪರ್ಧೆ ಆಯೋಜಿಸಲಾಗುವುದು’ ಎಂದರು.

ಇದೇ ಸಂದರ್ಭದಲ್ಲಿ ತಾಲ್ಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಜಯಸಿಂಹ ಸ್ವಚ್ಛತಾ ಪ್ರತಿಜ್ಞಾವಿಧಿ ಬೋಧಿಸಿದರು. ಅಭಿಯಾನದಲ್ಲಿ ಜಿಲ್ಲಾ ಪಂಚಾಯಿತಿ ಸಹಾಯಕ ಯೋಜನಾಧಿಕಾರಿ ಸುಮಾ, ಜಿಲ್ಲಾ ಸಮಾಲೋಚಕರಾದ ಬಿ.ಸಿ.ನಾಗರಾಜ್, ಪ್ರಮೀಳಾ, ವಿನಯ್, ಶಶಿಧರ್, ತಾಲ್ಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಎಚ್.ಯರಿಸ್ವಾಮಿ, ಗುಡ್ಡದ ರಂಗವ್ವನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರುದ್ರಮ್ಮ, ಸದ್ಯಸ್ಯರಾದ ಸಣ್ಣ ಹನುಮಂತಪ್ಪ, ಸುರೇಶ್, ಸಾಕಮ್ಮ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.