ಮೊಳಕಾಲ್ಮುರು: ಕಳೆದೊಂದು ತಿಂಗಳಿಂದ ಮೋಡಮುಚ್ಚಿದ ವಾತಾವರಣ ಹಾಗೂ ಮಳೆ ಸುರಿಯುತ್ತಿರುವುದರಿಂದ ಟೊಮೆಟೊ ಬೆಳೆಗೆ ಶಿಲೀಂಧ್ರ ರೋಗ (ಮಚ್ಚೆ ರೋಗ) ಕಾಡುತ್ತಿದ್ದು, ಇಳುವರಿ ಕುಸಿಯಲು ಕಾರಣವಾಗಿದೆ. ಹೀಗಾಗಿ ಟೊಮೆಟೊ ದರ ಏರಿಕೆ ಮುಂದುವರಿಯುವ ಸಾಧ್ಯತೆ ಇದೆ.
ಇನ್ನೂ ಕೆಲ ಕಾಲ ಮಳೆ ಮುಂದುವರಿದರೆ ಗಿಡಗಳಲ್ಲಿ ಕಾಯಿ ಬಿಡುವುದಿಲ್ಲ. ತೇವಾಂಶ ಹೆಚ್ಚಿರುವುದು ಹೂವು ಹಾಳಾಗಲು ಎಡೆ ಮಾಡಿಕೊಟ್ಟಿದೆ. 10 ತಿಂಗಳ ಕಾಲ ತೀವ್ರ ದರ ಕುಸಿತ ಎದುರಿಸಿದ್ದ ಟೊಮೆಟೊ ಬೆಳೆಗಾರರಿಗೆ ಜೂನ್ ಅಂತ್ಯದಿಂದ ದರ ಹೆಚ್ಚಿರುವುದು ಸಮಾಧಾನ ತಂದಿದೆ. ಈ ಅವಧಿಯಲ್ಲಿ ಚಿತ್ರದುರ್ಗ ಜಿಲ್ಲೆಯಲ್ಲಿ ಅದರಲ್ಲೂ ಮೊಳಕಾಲ್ಮುರು, ಚಳ್ಳಕೆರೆ ಹಾಗೂ ಹಿರಿಯೂರು ಜಿಲ್ಲೆಯ ಧರ್ಮಪುರ ಹೋಬಳಿಯಲ್ಲಿ ಹೆಚ್ಚಾಗಿ ಟೊಮೆಟೊ ನಾಟಿ ನಡೆಯುವುದು ವಾಡಿಕೆ.
ಬೆಳೆಗೆ ರೋಗ ಕಾಡುತ್ತಿರುವ ಕಾರಣ ಅದರ ಪರಿಣಾಮ ಹಣ್ಣುಗಳನ್ನೂ ಕಾಡುತ್ತಿದೆ. ಹೀಗಾಗಿ ಮಾರುಕಟ್ಟೆಗೆ ಟೊಮೆಟೊ ಪೂರೈಕೆ ಕಡಿಮೆಯಾಗಿ ಬೆಲೆ ಏರುತ್ತಿದೆ ಎಂದು ವ್ಯಾಪಾರಸ್ಥರು ‘ಪ್ರಜಾವಾಣಿ’ಗೆ ತಿಳಿಸಿದರು.
‘ಮುಂಗಾರಿನಲ್ಲಿ ಹೆಚ್ಚಾಗಿ ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣದಲ್ಲಿ ಟೊಮೆಟೊ ಬೆಳೆಲಾಗುತ್ತದೆ. ನಮ್ಮಲ್ಲಿ ‘ಗೂಟ ಮಾದರಿʼ ಕೃಷಿ ಮಾಡುವ ಕಾರಣ ರಪ್ತು ಗುಣಮಟ್ಟದ ಹಣ್ಣು ಸಿಗುತ್ತಿದೆ. ಈ ಬಾರಿ ಬಾಂಗ್ಲಾಕ್ಕೆ ರಪ್ತು ಅವಕಾಶವಿದ್ದು ಜಿಲ್ಲೆಯ ಹಣ್ಣು ರಫ್ತಿಗೆ ಆಯ್ಕೆಯಾಗುತ್ತಿದೆ. ಸದ್ಯ ಪ್ರತಿ 15 ಕೆ.ಜಿ ಹಣ್ಣಿನ ದರ ₹ 450-700 ಇದೆ. ರಪ್ತು ಗುಣಮಟ್ಟದ ಹಣ್ಣು ಪ್ರತಿ ಬಾಕ್ಸ್‌ಗೆ ₹ 700 ಇದೆ’ ಎಂದು ಹಿರಿಯ ಬೆಳೆಗಾರ ಕೆ.ಟಿ. ಶಿವಕುಮಾರ್ ಹೇಳಿದರು.
‘ಈಗ ಮಹಾರಾಷ್ಟ್ರದ ಮಾರುಕಟ್ಟೆಗಳಿಗೆ ಅಲ್ಲಿನ ಹಣ್ಣು ಬರಲು ಆರಂಭವಾಗುತ್ತಿದೆ, ಅಲ್ಲಿಯೂ ಮಳೆ ತೀವ್ರವಾಗಿದ್ದು ಮಳೆ ಹೆಚ್ಚಾದಲ್ಲಿ ಗುಣಮಟ್ಟದ ಹಣ್ಣಿನ ಆವಕ ಕುಸಿತವಾಗಲಿದೆ. ಇದು ನಮ್ಮ ಬೆಳೆಗಾರರಿಗೆ ಹೆಚ್ಚಿನ ದರ ಸಿಗಲು ಅನುವು ಮಾಡಿಕೊಡಲಿದೆ. ತಿಂಗಳ ಕೊನೆಗೆ ಟೊಮೆಟೊ ದರ ಯಾವ ಹಾದಿಯಲ್ಲಿ ಸಾಗಬಹುದು. ಮಳೆ ಹೆಚ್ಚಾದಲ್ಲಿ ಮುಂದಿನ 3 ತಿಂಗಳು ಕುಸಿಯುವ ಸಾಧ್ಯತೆ ತೀರಾ ಕಡಿಮೆ’ ಎನ್ನುತ್ತಾರೆ ರೈತರು.
‘2 ತಿಂಗಳ ಹಿಂದೆ ನಮ್ಮ ಮಾರುಕಟ್ಟೆಗೆ ನಿತ್ಯ 2,000 ಬಾಕ್ಸ್ ಟೊಮೆಟೊ ಬರುತ್ತಿತ್ತು, ಈಗ 7,000ದಿಂದ 8,000 ಬಾಕ್ಸ್‌ಗಳು ಬರುತ್ತವೆ. ₹ 700ವರೆಗೂ ದರ ಸಿಗುತ್ತಿದೆ. ಗುಣಮಟ್ಟದ ಹಣ್ಣು ದೆಹಲಿ ಮೂಲಕ ಬಾಂಗ್ಲಾಕ್ಕೆ ಹೋಗುತ್ತದೆ. ರೋಗಪೀಡಿತ ಹಣ್ಣಿನ ಆವಕ ಹೆಚ್ಚುತ್ತಿದೆ. ಅಂತೆಯೇ ಇನ್ನೂ ಕೆಲಕಾಲ ದರ ಕಡಿಮೆಯಾಗುವ ಸಾಧ್ಯತೆ ಇಲ್ಲ’ ಎಂದು ಸಗಟು ವ್ಯಾಪಾರಿ ಮೋಹನ್ ಹೇಳಿದರು.
‘ಮೊಳಕಾಲ್ಮುರು, ಚಳ್ಳಕೆರೆ ತಾಲ್ಲೂಕುಗಳಲ್ಲಿ ಪ್ರಸ್ತುತ 7,000 ಹೆಕ್ಟೇರ್ ಪ್ರದೇಶದಲ್ಲಿ ಟೊಮಟೊ ನಾಟಿ ಮಾಡಲಾಗಿದೆ. ನೀರಿನ ಲಭ್ಯತೆಯ ಹೆಚ್ಚಳ, ನಿರ್ವಹಣೆ ವೆಚ್ಚ ಕಡಿಮೆ ಎಂಬ ಕಾರಣಕ್ಕಾಗಿ ಅರಧಿಕ ಪ್ರದೇಶದಲ್ಲಿ ನಾಟಿಯಾಗಿದೆ. 3 ತಿಂಗಳ ಹಿಂದಕ್ಕೆ ಹೋಲಿಸಿದಲ್ಲಿ ನಾಟಿ ಪ್ರದೇಶ ದುಪ್ಪಟ್ಟಾಗಿದೆ’ ಎಂದು ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕ ಕುಮಾರ್ ಹೇಳಿದರು.
ಸೋನೆ ಮಳೆ ನಿರಂತರ ಸುರಿಯುತ್ತಿರುವ ಪರಿಣಾಮ ಔಷಧಿ ಸಿಂಪರಣೆ, ಗಿಡಗಳ ನಿರ್ವಹಣೆ ವೆಚ್ಚ ಅಧಿಕವಾಗಿದೆ. ಸ್ಥಳೀಯ ಮಾರುಕಟ್ಟೆ ಇಲ್ಲದಿರುವುದು ಲಾಭ ಕಡಿತವಾಗಲು ಕಾರಣವಾಗಿದೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.
2 ತಿಂಗಳಿನಿಂದ ಟೊಮ್ಯಾಟೊ ಬೆಳೆಗಾರರು ನಿರೀಕ್ಷೆ ಮೀರಿ ಲಾಭ ಕಂಡಿದ್ದಾರೆ. ಸರಾಸರಿ ಪ್ರತಿ ಒಂದು ಎಕರೆಗೆ ₹ 8-9 ಲಕ್ಷ ಸಿಕ್ಕಿದೆ ಎನ್ನಲಾಗಿದೆ. ಕೆಲವರು 10ಕ್ಕೂ ಎಕರೆಯಲ್ಲಿ ನಾಟಿ ಮಾಡಿದ್ದು ₹ 10 ಲಕ್ಷಕ್ಕೂ ಹೆಚ್ಚು ಲಾಭ ಕಂಡಿದ್ದಾರೆ. ಲಾಭದ ಆಸೆಗಾಗಿ ಆಂಧ್ರಪ್ರದೇಶದಿಂದ ದೊಡ್ಡ ರೈತರು ಇಲ್ಲಿ ಬಂದು ಭೂಮಿ ಲೀಸ್‌ಗೆ ಪಡೆದು ವ್ಯಾಪಕವಾಗಿ ಟೊಮೆಟೊ ನಾಟಿ ಮಾಡಿದ್ದಾರೆ. ತಾಲ್ಲೂಕಿಗೆ ಹೊಂದಿಕೊಂಡಿರುವ ಸೀಮಾಂಧ್ರದ ರಾಯದುರ್ಗ ತಾಲ್ಲೂಕಿನ ಗಡಿಯುದ್ದಕ್ಕೂ ಟೊಮೆಟೊ ನಾಟಿ ಮಾಡಲಾಗಿದೆ. ಈ ಹಣ್ಣು ರಾಜ್ಯದ ಮಾರುಕಟ್ಟೆಗೆ ಬರುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.