ಮೊಳಕಾಲ್ಮುರು: ಹಿಂದಿನ ವರ್ಷಗಳಿಗೆ ಹೋಲಿಸಿದರೆ ಜಿಲ್ಲೆಯಲ್ಲಿ ಈ ಬಾರಿ ಮುಂಗಾರು ಹಂಗಾಮಿನಲ್ಲಿ ಟೊಮೆಟೊ ನಾಟಿ ಪ್ರದೇಶ ಅಲ್ಪ ಕುಸಿತವಾಗಿದ್ದು, ದರ ಹೆಚ್ಚಳವಾಗುವ ಸಾಧ್ಯತೆಯಿದೆ.
ಜಿಲ್ಲೆಯಲ್ಲಿ ಮೇ ಅಂತ್ಯದಿಂದ ಜೂನ್‌ವರೆಗೆ ಸಾಮಾನ್ಯವಾಗಿ ಟೊಮೆಟೊ ನಾಟಿ ಮಾಡಲಾಗುತ್ತದೆ. ಪ್ರತಿ ವರ್ಷ 7,500ರಿಂದ 8,000 ಹೆಕ್ಟೇರ್‌ನಲ್ಲಿ ನಾಟಿ ಮಾಡಲಾಗುತ್ತಿತ್ತು. ಆದರೆ ಈ ಬಾರಿ ಈವರೆಗೆ ಅಂದಾಜು 6,000 ಹೆಕ್ಟೇರ್‌ನಲ್ಲಷ್ಟೇ ನಾಟಿಯಾಗಿದೆ. ಚಳ್ಳಕೆರೆ, ಮೊಳಕಾಲ್ಮುರು ತಾಲ್ಲೂಕಿನಲ್ಲಿ ಹೆಚ್ಚು ಗುರಿ ಸಾಧನೆಯಾಗಿದೆ. ಮೇ ತಿಂಗಳಲ್ಲಿ ಅಕಾಲಿಕ ಮಳೆ ಬಿದ್ದಿದ್ದರಿಂದ ಉಳಿದ ರೈತರು ನಾಟಿಗೆ ಸಿದ್ಧತೆ ಮಾಡಿಕೊಂಡಿಲ್ಲ. ನಾಟಿ ಪ್ರದೇಶ ಕುಸಿತಕ್ಕೆ ಇದು ಕಾರಣ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಹೋದ ಡಿಸೆಂಬರ್‌ನಲ್ಲಿ ಕುಸಿತವಾದ ಟೊಮೆಟೊ ದರ ಮತ್ತೆ ದೊಡ್ಡ ಪ್ರಮಾಣದಲ್ಲಿ ಏರಿಕೆ ಕಂಡಿಲ್ಲ. 15 ದಿನಗಳಿಂದ ಸಣ್ಣ ಪ್ರಮಾಣದಲ್ಲಿ ಹೆಚ್ಚುತ್ತಿದ್ದು, ಇದಕ್ಕೆ ಮುಂಗಾರು ಪೂರ್ವ ಮಳೆಯಿಂದ ಆಗಿರುವ ಹಾನಿಯೇ ಕಾರಣ ಎನ್ನಲಾಗಿದೆ. ದರ ಏರಿಕೆ ಆಗದಿರುವುದು, ಕಾರ್ಮಿಕರ ಸಮಸ್ಯೆ, ಹೆಚ್ಚಿದ ಕೂಲಿ, ಔಷಧಿ ಬೆಲೆ, ಸ್ಥಳೀಯವಾಗಿ ಮಾರುಕಟ್ಟೆ ಇಲ್ಲದಿರುವುದು ಹೀಗೆ ಹಲವು ಅಂಶಗಳು ಇತರ ರೈತರು ಈ ಬೆಳೆಯಿಂದ ವಿಮುಖರಾಗಲು ಕಾರಣವಾಗಿವೆ. ಶೇ 25ರಿಂದ ಶೇ 30ರಷ್ಟು ನಾಟಿ ಪ್ರದೇಶ ಕುಸಿದಿರಬಹುದು ಎಂದು ಅಧಿಕಾರಿಗಳು ಹೇಳುತ್ತಾರೆ.
ಚಳ್ಳಕೆರೆ, ರಾಯದುರ್ಗ, ಮೊಳಕಾಲ್ಮುರು ಸೇರಿದಂತೆ ವಿವಿಧೆಡೆ ನರ್ಸರಿಗಳಲ್ಲಿ ಬೆಳೆಸಿದ್ದ ಅವಧಿ ಮೀರಿದ ಲಕ್ಷಾಂತರ ಟೊಮೆಟೊ ಸಸಿಗಳನ್ನು ಬಿಸಾಡಿದ್ದು, ಮಾಲೀಕರಿಗೆ ಅಪಾರ ನಷ್ಟವಾಗಿದೆ. ಈಗಲೂ ನಿರೀಕ್ಷಿತ ಬೇಡಿಕೆ ಇಲ್ಲ. ಸಸಿ ಮಾರಾಟ ಪ್ರಮಾಣ ಶೇ 25ರಿಂದ ಶೇ 30ರಷ್ಟು ಕುಸಿದಿದೆ ಎಂದು ಚಳ್ಳಕೆರೆಯ ಭಜರಂಗಿ ನರ್ಸರಿ ಮಾಲೀಕರು ಹೇಳುತ್ತಾರೆ.
ನಿರ್ವಹಣೆ ವೆಚ್ಚ ದುಪ್ಪಟ್ಟಾಗಿದೆ. ಪ್ರತಿ ಎಕರೆಯಲ್ಲಿ ತಾಂತ್ರಿಕ ಪದ್ಧತಿಯಡಿ ಟೊಮೆಟೊ ಬೆಳೆಯಲು ₹2 ಲಕ್ಷಕ್ಕೂ ಹೆಚ್ಚು ಖರ್ಚಾಗುತ್ತದೆ. ₹350 ದರದಲ್ಲಿ 1,500 ಬಾಕ್ಸ್ ಮಾರಾಟವಾದರೆ ಮಾತ್ರ ಲಾಭ ಕಾಣಬಹುದು. ಮಳೆ ಹಾನಿ ಆಧಾರದ ಮೇಲೆ ಈಗ ನಾಟಿ ಮಾಡಿರುವ ಟೊಮೆಟೊ ಭವಿಷ್ಯ ನಿರ್ಧಾರವಾಗಲಿದೆ. 2 ವರ್ಷದ ಹಿಂದೆ ದುಬಾರಿ ದರ ಕಂಡಿದ್ದ ಬೆಳೆಗಾರರ ಟೊಮೆಟೊ ಮೋಹ ಕಡಿಮೆಯಾಗಿದ್ದು, ಮೆಕ್ಕೆಜೋಳ, ಹತ್ತಿಯತ್ತ ವಾಲಿದ್ದಾರೆ ಎಂದರು.
ಈ ಭಾಗದ ರೈತರ ಹಣ್ಣು ಸದ್ಯದಲ್ಲೇ ಮಾರುಕಟ್ಟೆಗೆ ಬರಲಿದ್ದು, ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಚಿಕ್ಕಮ್ಮನಹಳ್ಳಿಯ ಖಾಸಗಿ ಮಾರುಕಟ್ಟೆಯ ಸಗಟು ವ್ಯಾಪಾರಿ ಮೋಹನ್ ತಿಳಿಸಿದ್ದಾರೆ.
ಸಂತೆಗಳಲ್ಲಿ ದರ ಹೆಚ್ಚಿದ ತಕ್ಷಣ ವ್ಯಾಪಾರಿಗಳು ಹೆಚ್ಚು ಹಣ ತೆಗೆದುಕೊಳ್ಳುತ್ತಾರೆ. ಆದರೆ ದರ ಕಡಿಮೆಯಾದಲ್ಲಿ ಸುಲಭವಾಗಿ ಕಡಿಮೆ ಮಾಡುವುದಿಲ್ಲ. ಗ್ರಾಹಕರ ನೆರವಿಗೆ ರೈತಸಂಘಗಳು ಬರಬೇಕು-ನಾಗರಾಜಪ್ಪ ಗ್ರಾಹಕ ಮೊಳಕಾಲ್ಮುರು
ದರ ತುಸು ಹೆಚ್ಚಳ ಮುಂಗಾರು ಆರಂಭವಾಗಿದ್ದು ಮಹಾರಾಷ್ಟ್ರ ದೆಹಲಿ ಕೇರಳ ಸೇರಿ ಕೆಲವೆಡೆ ಬೆಳೆ ನಷ್ಟವಾಗಿದೆ. ಅಲ್ಲಿಂದ ಬೇಡಿಕೆ ಬರುತ್ತಿದ್ದು ದರ ತುಸು ಏರುತ್ತಿದೆ. ₹150 ಆಸುಪಾಸಿನಲ್ಲಿದ್ದ ಬಾಕ್ಸ್ ಟೊಮೆಟೊ ದರ ₹250ರಿಂದ ₹400ಕ್ಕೆ ಏರಿಕೆಯಾಗಿದೆ. ಆಗಸ್ಟ್‌ವರೆಗೂ ಈ ದರ ಸಿಗುವ ನಿರೀಕ್ಷೆಯಿದೆ ಎಂದು ಬೆಳೆಗಾರ ಕೆ.ಟಿ. ಶಿವಕುಮಾರ್ ತಿಳಿಸಿದರು. ಚಿತ್ರದುರ್ಗ ಜಿಲ್ಲೆ ಆಂಧ್ರ ಗಡಿಯಲ್ಲಿ ಟೊಮೆಟೊ ನಾಟಿ ಉತ್ತಮವಾಗಿದೆ. ಮಾರುಕಟ್ಟೆಗೆ ಹೆಚ್ಚು ಆವಕವಾಗುವ ನಿರೀಕ್ಷೆಯಿದೆ. ದರ ₹500ಕ್ಕೆ ಏರಿಕೆಯಾಗಬಹುದು. ದರ ಕುಸಿಯುವ ಸಾಧ್ಯತೆ ಕಡಿಮೆ ಎಂದು ಸಗಟು ಮಾರಾಟಗಾರ ಚಂದ್ರಣ್ಣ ಹೇಳುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.