ADVERTISEMENT

ಚಳ್ಳಕೆರೆ | 'ಕೊರೊನಾ ಸೋಂಕಿನಿಂದ ಪಾರಾದೆವು ಆದರೆ ತುಂಬಾ ನೋವು, ಅವಮಾನದಿಂದ ಅಲ್ಲ'

ಚಳ್ಳಕೆರೆ: ವಿದೇಶಗಳಿಂದ ಬಂದು, ಪರೀಕ್ಷೆಯ ನಂತರ ಸೋಂಕು ಇಲ್ಲದೇ ಇರುವವರ ಅಳಲು

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2020, 18:22 IST
Last Updated 23 ಮಾರ್ಚ್ 2020, 18:22 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಚಳ್ಳಕೆರೆ: ‘ಮಾಹಿತಿಯನ್ನು ಗೋಪ್ಯವಾಗಿ ಇಡುತ್ತೇವೆ ಎಂದು ಹೇಳಿ ಹೆಸರು, ವಿಳಾಸ, ಮೊಬೈಲ್ ನಂಬರ್, ಪ್ರಯಾಣದ ದಿನಾಂಕ, ಹೋಮ್‍ ಕ್ವಾರಂಟೈನ್, ರಕ್ತಪರೀಕ್ಷೆ ಹಾಗೂ ಭಾವಚಿತ್ರ ಮುಂತಾದ ಸ್ವವಿವರವನ್ನು ಆರೋಗ್ಯ ಇಲಾಖೆ ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳು ಸಂಗ್ರಹಿಸಿದ್ದರು. ಇವೆಲ್ಲವೂ ಸಾಮಾಜಿಕ ಜಾಲತಾಣದಲ್ಲಿ ಸೋರಿಕೆಯಾಗಿದೆ.ಇದರಿಂದ ತುಂಬಾ ನೋವು ಹಾಗೂ ಅವಮಾನವಾಗಿದೆ’ ಎಂದು ವಿದೇಶದಿಂದ ಬಂದ ಸ್ವದೇಶಿಗರಿಬ್ಬರು ‘ಪ್ರಜಾವಾಣಿ’ ಜೊತೆ ತಮ್ಮ ಅಳಲನ್ನು ತೋಡಿಕೊಂಡರು.

‘ಮಾಹಿತಿ ಬಹಿರಂಗ ಪಡಿಸಿರುವ ಕಾರಣ ಕೊರೊನಾ ವೈರಸ್ ಶಂಕೆ ಕುರಿತು ಎಲ್ಲಿದ್ದೀರಿ, ಹೇಗಿದ್ದೀರಿ, ಆರೋಗ್ಯ ತಪಾಸಣೆ ಮಾಡಿಸಿದ್ದೀರಾ ಎಂದು ಜನರು ಪ್ರತಿದಿನ ದೂರವಾಣಿಯ ಮೂಲಕ ಕೇಳುವ ಪ್ರಶ್ನೆಗಳಿಗೆ ಉತ್ತರಿಸಲು ಆಗುತ್ತಿಲ್ಲ.ಕೊರೊನಾ ಸೋಂಕು ಇಲ್ಲ ಎಂದು ಆರೋಗ್ಯ ಇಲಾಖೆ ದೃಢಪಡಿಸಿದ್ದರೂ ನಮ್ಮನ್ನು ಅನುಮಾನಿಸಿ ಪ್ರತ್ಯೇಕ ಕೊಠಡಿಯಲ್ಲಿ ಇರಿಸಿದ್ದಾರೆ. ಇದರಿಂದ ಆತ್ಮಸ್ಥೈರ್ಯ ಕಳೆದುಕೊಂಡು ಮಾನಸಿಕ ನೋವಿನಿಂದ ಕುಗ್ಗಿ ಹೋಗಿದ್ದೇವೆ’ ಎಂದು ಕತಾರ್‌ನಿಂದ ಬಂದ ತಾಲ್ಲೂಕಿನ ವ್ಯಕ್ತಿಯೊಬ್ಬರು ಬೇಸರ ವ್ಯಕ್ತಪಡಿಸಿದರು.

‘ಜಿಲ್ಲಾಧಿಕಾರಿ ವಿಚಾರಿಸಿದ್ದಾರೆ ಎಂದ ಕಾರಣಕ್ಕೆ ಆರೋಗ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆಯವರಿಗೆ ವಿದೇಶಿ ಪ್ರಯಾಣದ ಮಾಹಿತಿ ನೀಡಿದ್ದೆ. ಈ ಮಾಹಿತಿಯನ್ನು ಇಲಾಖೆಯವರು ಬಹಿರಂಗಪಡಿಸಿದ್ದಾರೆ. ಮೊದಲೇ ಇದು ಗೊತ್ತಿದ್ದರೆ ವಿಮಾನ ನಿಲ್ದಾಣದ ಅಧಿಕಾರಿಗಳನ್ನು ವಿಚಾರಿಸಿಕೊಳ್ಳಿ ಎಂದು ಉತ್ತರಿಸುತ್ತಿದ್ದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ADVERTISEMENT

‘7-8 ತಿಂಗಳಿಗೊಮ್ಮೆ ತಂದೆ, ತಾಯಿ ಯೋಗಕ್ಷೇಮ ವಿಚಾರಿಸಲು ಆಗಿಂದಾಗ್ಗೆ ನನ್ನೂರಿಗೆ ಬರುತ್ತಿದ್ದೆ. ಹೊರದೇಶದಿಂದ ಬರುವಾಗಿ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಕೊರೊನಾ ತಪಾಸಣೆ ನಡೆಸಿ ಸೋಂಕಿನ ಯಾವುದೇ ಲಕ್ಷಣಗಳು ಇಲ್ಲ ಎಂದು ದೃಢಪಟ್ಟ ಮೇಲೆ ಚಳ್ಳಕೆರೆಗೆ ಬಂದೆ’ ಎಂದು ಸ್ಪಷ್ಟಪಡಿಸಿದರು.

‘ಪ್ರತ್ಯೇಕ ಕೊಠಡಿಯಲ್ಲಿ ಇಲ್ಲ. ಸಾಮಾನ್ಯ ಜನರಂತೆ ಇದ್ದೇನೆ. ಬಂದು 15 ದಿನ ಕಳೆದರೂ ಜನ ನನ್ನನ್ನು ಅನುಮಾನಿಸಿ ನೋಡುತ್ತಿದ್ದಾರೆ’ ಎಂದು ಅಳಲು ತೋಡಿಕೊಂಡರು.

‘ಉನ್ನತ ವಿದ್ಯಾಭ್ಯಾಸಕ್ಕೆಂದು ಇಟಲಿಗೆ ಹೋಗಿದ್ದೆ. ಕೊರೊನಾ ವೈರಸ್ ಸೋಂಕು ಹರಡುವಿಕೆಯ ಮಾಹಿತಿ ತಿಳಿದು ಭಯದಿಂದ ಸ್ವದೇಶಕ್ಕೆ ಮರಳಿದೆ. ನಾನು ಹಿಂದಿರುಗುವಾಗ ಕೊರೊನಾ ವೈರಸ್ ಸೋಂಕಿನ ಹರಡುವಿಕೆ ಇಟಲಿಯಲ್ಲಿ ಇರಲಿಲ್ಲ’ ಎಂದು ತಿಳಿಸಿದರು.

‘ಹೊರದೇಶದಿಂದ ಬಂದ ನನ್ನನ್ನು ಬೆಂಗಳೂರು ವಿಮಾನ ನಿಲ್ದಾಣದಲ್ಲಿ ತಪಾಸಣೆ ನಡೆಸಿದರು. ಸೋಂಕಿನ ಲಕ್ಷಣಗಳು ಇಲ್ಲ ಎಂದು ಖಚಿತಪಡಿಸಿದ ಮೇಲೆ ಊರಿಗೆ ಬಂದೆ. ಈಗಲೂ ಆರೋಗ್ಯದಿಂದಿದ್ದೇನೆ’ ಎಂದು ಇಟಲಿಯಿಂದ ಬಂದವರೊಬ್ಬರು ತಿಳಿಸಿದರು.

‘ಅಧಿಕಾರಿಗಳು ನಮ್ಮ ತಾಯಿ-ತಂದೆಗೆ ಎಚ್ಚರಿಕೆ ನೀಡಿರುವ ಕಾರಣ ಮನೆಯ ಪ್ರತ್ಯೇಕ ಕೊಠಡಿಯಲ್ಲಿ ಉಳಿಯುವಂತಾಗಿದೆ. ಒಂಟಿತನದಿಂದ ಕೊರಗುವ ಪರಿಸ್ಥಿತಿ ಬಂದಿದೆ.ಸದ್ಯಕ್ಕೆ ಮೊಬೈಲ್, ಪುಸ್ತಕಗಳು ನನ್ನ ಜೊತೆ ಇವೆ. ಎಷ್ಟು ಹೊತ್ತು ಇವುಗಳ ಜೊತೆ ಕಾಲ ಕಳೆಯಲಿ? ಬಿಟ್ಟರೆ ಸಾಕು ಮನುಷ್ಯರೇ ಇಲ್ಲದ ಕಡೆಗೆ ಹೋಗಿ ಬದುಕಬೇಕು ಅನಿಸುತ್ತಿದೆ. ಹಿಂಸೆ ಸಾರ್.. ಬಹಳ ಹಿಂಸೆ ಸಾರ್’ ಎಂದು ನೋವು ತೋಡಿಕೊಂಡರು.

ಇಲ್ಲಿಗೆ ಬರುವ ಬದಲು ಅಲ್ಲಿಯೇ ಉಳಿದಿದ್ದರೆ 14 ದಿನ ಊಟ, ವಸತಿ ಹಾಗೂ ಎಲ್ಲಾ ಸೌಲಭ್ಯಗಳ ಜೊತೆಗೆ ಚಿಕಿತ್ಸೆ ನೀಡುತ್ತಿದ್ದರು. ಈ ರೀತಿಯ ಹಿಂಸೆ ಅನುಭವಿಸುತ್ತಿರಲಿಲ್ಲ ಎಂದು ನೊಂದು ನುಡಿದರು.

‘ಕೊರೊನಾ ವೈರಸ್ ಸೋಂಕು ಇಲ್ಲ ಎಂದು ಪ್ರಯೋಗಾಲಯದಿಂದ ವರದಿ ಬಂದಿದ್ದರೂ ಮತ್ತೆ 28 ದಿನ ಪ್ರತ್ಯೇಕ ಕೊಠಡಿಯಲ್ಲಿ ಇರಿಸಬೇಕು. ಎಲ್ಲಿಗಾದರೂ ಹೊರಗಡೆ ಕಳುಹಿಸಿದರೆ 3-4 ವರ್ಷ ಜೈಲಿಗೆ ಕಳುಹಿಸುವುದಾಗಿ ಪೊಲೀಸರು ನನ್ನ ತಂದೆಗೆ ಬೆದರಿಕೆ ಒಡ್ಡಿದ್ದಾರೆ’ ಎಂದು ಕಣ್ಣೀರಿಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.