ADVERTISEMENT

ಚಿತ್ರದುರ್ಗ: 'ದೇಶೀಯ ಕ್ರೀಡೆಗಳಿಗೆ ಮರುಜೀವ ಸಿಗಲಿ'

ಅಂತರ ಕಾಲೇಜು ನೆಟ್‌ಬಾಲ್‌ ಟೂರ್ನಿ; ಹೆಚ್ಚುವರಿ ಜಿಲ್ಲಾಧಿಕಾರಿ ಕುಮಾರಸ್ವಾಮಿ ಅಭಿಮತ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2025, 6:47 IST
Last Updated 19 ನವೆಂಬರ್ 2025, 6:47 IST
ದಾವಣಗೆರೆ ವಿವಿ ಅಂತರ ಕಾಲೇಜು ನೆಟ್ ಬಾಲ್ ಟೂರ್ನಿ ಮಹಿಳಾ ವಿಭಾಗದಲ್ಲಿ ಪ್ರಥಮ ಬಹುಮಾನ ಪಡೆದ  ಹೊನ್ನಾಳಿಯ ಮೃತ್ಯುಂಜಯ ಶಿವಾಚಾರ್ಯ (ಎಸ್‍ಎಂಎಸ್) ಪ್ರಥಮ ದರ್ಜೆ ಕಾಲೇಜು ತಂಡಕ್ಕೆ ಟ್ರೋಫಿ ವಿತರಿಸಲಾಯಿತು
ದಾವಣಗೆರೆ ವಿವಿ ಅಂತರ ಕಾಲೇಜು ನೆಟ್ ಬಾಲ್ ಟೂರ್ನಿ ಮಹಿಳಾ ವಿಭಾಗದಲ್ಲಿ ಪ್ರಥಮ ಬಹುಮಾನ ಪಡೆದ  ಹೊನ್ನಾಳಿಯ ಮೃತ್ಯುಂಜಯ ಶಿವಾಚಾರ್ಯ (ಎಸ್‍ಎಂಎಸ್) ಪ್ರಥಮ ದರ್ಜೆ ಕಾಲೇಜು ತಂಡಕ್ಕೆ ಟ್ರೋಫಿ ವಿತರಿಸಲಾಯಿತು   

ಚಿತ್ರದುರ್ಗ: ‘ಆಧುನಿಕತೆಯ ಭರಾಟೆಯಲ್ಲಿ ದೇಶೀಯ ಕ್ರೀಡೆಗಳು ಕಣ್ಮರೆಯಾಗುತ್ತಿರುವುದು ದುರದೃಷ್ಟಕರ. ದೇಶೀಯ ಕ್ರೀಡೆಗಳನ್ನು ಉಳಿಸಿಕೊಳ್ಳುವುದು ಯುವಜನರ ಜವಾಬ್ದಾರಿಯಾಗಬೇಕು’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಟಿ. ಕುಮಾರಸ್ವಾಮಿ ಹೇಳಿದರು.

ದಾವಣಗೆರೆ ವಿಶ್ವವಿದ್ಯಾಲಯ, ದೈಹಿಕ ಶಿಕ್ಷಣ ನಿರ್ದೇಶಕರ ಸಂಘದ ಆಶ್ರಯದಲ್ಲಿ ನಗರದ ಸರ್ಕಾರಿ ಕಲಾ ಕಾಲೇಜು ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ವಿಶ್ವವಿದ್ಯಾಲಯ ಮಟ್ಟದ ಅಂತರ ಕಾಲೇಜು ನೆಟ್ ಬಾಲ್ ಟೂರ್ನಿ ಉದ್ಘಾಟಿಸಿ ಮಾತನಾಡಿದರು.

‘ಗ್ರಾಮೀಣ ಪರಿಸರದಲ್ಲಿ ಜನರ ಮನರಂಜನೆಯ ಆಟಗಳು ಇಲ್ಲವಾಗಿವೆ. ಮೊಬೈಲ್ ಬಳಕೆ ಹೆಚ್ಚಾಗಿದ್ದು, ನಮ್ಮೆಲ್ಲಿರುವ ಸೃಜನಶೀಲತೆ ನಿಧಾನವಾಗಿ ಕಡಿಮೆಗೊಳ್ಳುತ್ತಿದೆ. ಆಧುನಿಕತೆಯ ಸೆಳೆತಕ್ಕೆ ಸಿಲುಕಿ ಅಧ್ಯಯನದ ನಿರಾಸಕ್ತಿ ಹೆಚ್ಚುತ್ತಿದೆ. ನಾವು ಕ್ರಿಯಾಶೀಲತೆಯಿಂದ ದೂರವಾಗುತ್ತಿದ್ದೇವೆ. ನಾವು ಬದಲಾಗುವ ಮೂಲಕ ಉತ್ತಮ ಜೀವನ ರೂಪಿಸಿಕೊಳ್ಳಲು ಕ್ರೀಡೆಗಳು ಸಹಕಾರಿಯಾಗಿವೆ. ದೇಶೀಯ ಕ್ರೀಡೆಗಳು ಮರುಜೀವ ಪಡೆಯಬೇಕು’ ಎಂದರು.

ADVERTISEMENT

ಸರ್ಕಾರಿ ಕಲಾ ಕಾಲೇಜಿನ ಪ್ರಾಂಶುಪಾಲ ‌ಜೆ. ಕರಿಯಪ್ಪ ಮಾಳಿಗೆ ಮಾತನಾಡಿ ‘ಯಾವುದೇ ಕ್ಷೇತ್ರದಡಿ ಉತ್ತಮ ಕೆಲಸ ಕಾರ್ಯಗಳಲ್ಲಿ ನಮ್ಮನ್ನು ನಾವು ಸಂಪೂರ್ಣವಾಗಿ ತೊಡಗಿಸಿಕೊಂಡರೆ ಸಾಧನೆಯ ಹಾದಿ ಸುಲಭವಾಗುತ್ತದೆ. ಅದೇ ರೀತಿ ಕ್ರೀಡೆಯು ಸಹ ನಮ್ಮೆಲ್ಲರ ಸರ್ವತೋಮುಖ ಬೆಳವಣಿಗೆಯಲ್ಲಿ ತಾಯಿಯ ಪಾತ್ರ ವಹಿಸುತ್ತದೆ. ಕ್ರೀಡೆ ಎಲ್ಲರಿಗೂ ಅಗತ್ಯವೆನಿಸಿದೆ. ಏಕೆಂದರೆ ಕ್ರೀಡೆ ಸೌಹಾರ್ದತೆಯ ಹಾಗೂ ಸಾಮರಸ್ಯದ ಸಂಕೇತವಾಗಿದೆ’ ಎಂದು ತಿಳಿಸಿದರು.

‘ಕ್ರೀಡಾ ಚಟುವಟಿಕೆಗಳಿಂದ ನಾವೆಲ್ಲರೂ ಒಂದೇ ಎನ್ನುವ ಭಾವನೆ ಮೂಡುತ್ತದೆ. ಭಾವೈಕ್ಯತೆ, ಸೃಜನಶೀಲತೆ, ಪ್ರೀತಿ, ಕ್ರೀಯಾಶೀಲತೆಗೂ ದಾರಿಯಾಗಿದೆ. ಮಾನವ ಪ್ರೀತಿಯನ್ನು ಸ್ಥಾಪನೆ ಮಾಡಲು ಕ್ರೀಡಾ ಚಟುವಟಿಕೆಗಳು ಸಹಾಯಕವಾಗುತ್ತವೆ. ಕ್ರೀಡೆಗಳು ಅಂತರರಾಷ್ಟ್ರೀಯ, ರಾಷ್ಟ್ರೀಯ ಹಾಗೂ ರಾಜ್ಯ, ಜಿಲ್ಲೆಗಳ ಮಧ್ಯೆ ಜನರೊಂದಿಗೆ ಸಂಬಂಧಗಳನ್ನು ಬೆಸೆಯುತ್ತಿವೆ. ಸೋಲಿನಲ್ಲಿ ಕುಗ್ಗದೆ, ಗೆಲುವಿನಲ್ಲಿ ಹಿಗ್ಗದೆ ಮಾನವ ಪ್ರೀತಿ ಗಳಿಸಿಕೊಳ್ಳಬೇಕು’ ಎಂದರು.

‘ಕ್ರೀಡೆಯಿಂದ ದೂರವಾದವರು ಹಲವಾರು ಸಮಸ್ಯೆಗಳಿಗೆ ತುತ್ತಾಗುತ್ತಾರೆ. ದೈಹಿಕ ನ್ಯೂನತೆಗಳು ಕಾಡುತ್ತವೆ. ಯುವಜನ ದೈಹಿಕ ಮಾನಸಿಕ ಸದೃಢತೆಗಾಗಿ ಕ್ರೀಡಾ ಚಟುವಟಿಕೆಯನ್ನು ಮೈಗೂಡಿಸಿಕೊಳ್ಳಬೇಕು. ಸಮ ಸಮಾಜದಲ್ಲಿ ನಮ್ಮ ನಡೆ–ನುಡಿ ಹಾಗೂ ಆಲೋಚನೆಗಳು ನಮ್ಮನ್ನು ಪ್ರತಿಬಿಂಬಿಸುತ್ತವೆ. ಅದಕ್ಕೆ ಆಟೋಟ ಚಟುವಟಿಕೆ ಸಹಕಾರಿಯಾಗುತ್ತದೆ’ ಎಂದರು.

 ‘ಕ್ರೀಡೆಗಳು ನಮ್ಮ ಬದುಕಿಗೆ ಯಶಸ್ಸು ಹಾಗೂ ಬೆಳಕು ತಂದುಕೊಡುತ್ತವೆ. ಇವೆಲ್ಲವನ್ನೂ ತಂದುಕೊಡುವ ಕ್ರೀಡೆಗಳ ಬಗ್ಗೆ ಹೆಚ್ಚಿನ ಆಸಕ್ತಿ ಬೆಳೆಸಿಕೊಳ್ಳಬೇಕು. ಇಂದಿನ ಆಧುನಿಕ ಕಾಲಘಟ್ಟದಲ್ಲೂ ಕ್ರೀಡಾ ಚಟುವಟಿಕೆಗೆ ಪ್ರಮುಖ ಆದ್ಯತೆ ನೀಡಬೇಕು. ಯುವಕರು ಸ್ಪರ್ಧೆಗಳಲ್ಲಿ ಪಾಲ್ಗೊಂಡು ತಮ್ಮ ಕ್ರೀಡಾ ಪ್ರೀತಿ ಮೆರೆಯಬೇಕು’ ಎಂದು ದಾವಣಗೆರೆ ವಿಶ್ವವಿದ್ಯಾಲಯದ ನಿವೃತ್ತ ದೈಹಿಕ ಶಿಕ್ಷಣ ನಿರ್ದೇಶಕ ಹಾಗೂ ಸಿಂಡಿಕೇಟ್ ಸದಸ್ಯ ಎಚ್. ತಿಪ್ಪೆಸ್ವಾಮಿ ತಿಳಿಸಿದರು.

ಸರ್ಕಾರಿ ಕಲಾ ಕಾಲೇಜು ಅಧ್ಯಾಪಕರ ಸಂಘದ ಜಂಟಿ ಕಾರ್ಯದರ್ಶಿ ಪಿ.ಎಸ್. ಮೇಘನಾ, ದೈಹಿಕ ಶಿಕ್ಷಣ ನಿರ್ದೇಶಕ ಡಿ.ಆರ್. ಪ್ರಸನ್ನ ಕುಮಾರ್, ಪ್ರಾಧ್ಯಾಪಕ ಭಾನುಪ್ರಕಾಶ್, ಪತ್ರಾಂಕಿತ ವ್ಯವಸ್ಥಾಪಕ ಮಾರ್ಟಿನ್ ಸ್ಯಾಮುಯೆಲ್ , ಗ್ರಂಥಾಲಯಾಧಿಕಾರಿ ತಿಪ್ಪೇಸ್ವಾಮಿ ಇದ್ದರು.

ಹೊನ್ನಾಳಿ ಎಸ್‍ಎಂಎಸ್ ಕಾಲೇಜು ಪ್ರಥಮ

ನೆಟ್ ಬಾಲ್‌ ಟೂರ್ನಿ ಪುರುಷ ಹಾಗೂ ಮಹಿಳಾ ವಿಭಾಗದಲ್ಲಿ ದಾವಣಗೆರೆ ಜಿಲ್ಲೆ ಹೊನ್ನಾಳಿಯ ಮೃತ್ಯುಂಜಯ ಶಿವಾಚಾರ್ಯ (ಎಸ್‍ಎಂಎಸ್) ಪ್ರಥಮ ದರ್ಜೆ ಕಾಲೇಜು ಪ್ರಥಮ ಸ್ಥಾನ ಪಡೆಯಿತು. ಪುರಷರ ವಿಭಾಗದಲ್ಲಿ ದಾವಣಗೆರೆ ಜಿಎಂಎಸ್ ಅಕಾಡೆಮಿ ದ್ವೀತಿಯ ಸ್ಥಾನ ಚಿತ್ರದುರ್ಗ ಸರ್ಕಾರಿ ವಿಜ್ಞಾನ ಕಾಲೇಜು ತೃತೀಯ ಸ್ಥಾನ ಹಾಗೂ ನ್ಯಾಮತಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು 4ನೇ ಸ್ಥಾನ ಪಡೆದಿವು. ಮಹಿಳಾ ವಿಭಾಗದಲ್ಲಿ ಚಿತ್ರದುರ್ಗ ಸರ್ಕಾರಿ ವಿಜ್ಞಾನ ಕಾಲೇಜು ದ್ವಿತೀಯ ಸ್ಥಾನ ದಾವಣಗೆರೆಯ ಜಿಎಂಎಸ್ ಅಕಾಡೆಮಿ ತೃತೀಯ ಸ್ಥಾನ ಹಾಗೂ ನ್ಯಾಮತಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು 4ನೇ ಸ್ಥಾನ ಪಡೆದಿದೆ. ವಿಜೇತ ತಂಡಗಳಿಗೆ ಉದ್ಯಮಿ ಅರುಣ್ ಬಹುಮಾನ ವಿತರಿಸಿದರು.  ಅತ್ಯುತ್ತಮವಾಗಿ ಪ್ರದರ್ಶನ ನೀಡಿದ ಕ್ರೀಡಾ ಸಾಮಾರ್ಥ್ಯ ಮೆರೆದ ತಂಡಗಳನ್ನು ರಾಜ್ಯಮಟ್ಟಕ್ಕೆ ಆಯ್ಕೆ ಮಾಡಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.