ADVERTISEMENT

ಭರವಸೆಯಾಗಿಯೇ ಉಳಿದ ಸರ್ಕಾರಿ ಬಸ್‌ಗಳ ಪಟ್ಟಣ ಪ್ರವೇಶ

ಸರ್ಕಾರಿ ಬಸ್ ಸೇವೆಯಲ್ಲಿ ತೀವ್ರ ಹಿಂದುಳಿದ ಸಾರಿಗೆ ಸಚಿವರ ಕ್ಷೇತ್ರ

ಕೊಂಡ್ಲಹಳ್ಳಿ ಜಯಪ್ರಕಾಶ
Published 15 ಆಗಸ್ಟ್ 2021, 6:57 IST
Last Updated 15 ಆಗಸ್ಟ್ 2021, 6:57 IST
ಮೊಳಕಾಲ್ಮುರಿನ ಖಾಸಗಿ ಬಸ್ ನಿಲ್ದಾಣ
ಮೊಳಕಾಲ್ಮುರಿನ ಖಾಸಗಿ ಬಸ್ ನಿಲ್ದಾಣ   

ಮೊಳಕಾಲ್ಮುರು: ತಾಲ್ಲೂಕು ಸಾರಿಗೆ ವ್ಯವಸ್ಥೆಯಲ್ಲಿ ಅದರಲ್ಲೂ ಸರ್ಕಾರಿ ಬಸ್ ಸೇವೆಯಲ್ಲಿ ತೀವ್ರ ಹಿಂದುಳಿದಿದೆ. ಕ್ಷೇತ್ರದ ಶಾಸಕ ಬಿ. ಶ್ರೀರಾಮುಲು ಪ್ರಸ್ತುತ ಸಾರಿಗೆ ಸಚಿವರಾಗಿರುವ ಕಾರಣ ಅಗತ್ಯ ಸೇವೆ ಈಗಲಾದರೂ ದೊರೆಯುವುದೇ ಎಂಬ ನಿರೀಕ್ಷೆ ಜನರಲ್ಲಿ ಮೂಡಿದೆ.

ತಾಲ್ಲೂಕಿನಲ್ಲಿ ದೇವಸಮುದ್ರ ಮತ್ತು ಮೊಳಕಾಲ್ಮುರು ಕಸಬಾ ಹೋಬಳಿಗಳಿವೆ. ಕಸಬಾಕ್ಕೆ ಹೋಲಿಕೆ ಮಾಡಿದಲ್ಲಿ ದೇವಸಮದ್ರ ಹೋಬಳಿ ಬಹಳಷ್ಟು ಸಾರಿಗೆ ಸಮಸ್ಯೆ ಎದುರಿಸುತ್ತಿದೆ. ಹೋಬಳಿಯಲ್ಲಿ ಬಸ್ ಕಾಣದ ಸುಮಾರು 40 ಗ್ರಾಮಗಳಿವೆ. ಇಲ್ಲಿಯವರೆಲ್ಲರೂ ರಾಂಪುರಕ್ಕೆ ಬಂದು ಮುಂದಿನ ಪ್ರಯಾಣ ಬೆಳೆಸಬೇಕಾಗಿದೆ. ಪ್ರಚಾರಕ್ಕಾಗಿ ಜನಪ್ರತಿನಿಧಿಗಳು ಹೋಬಳಿ ಗ್ರಾಮಕ್ಕೆ ಬಸ್‌ಗಳನ್ನು ಬಿಡಿಸಿದರೂ 1-2 ತಿಂಗಳು ಸಂಚರಿಸಿ ಸ್ಥಗಿತಗೊಂಡಿವೆ.

ಮೊಳಕಾಲ್ಮುರು ಪಟ್ಟಣದಲ್ಲಿ ಕೆಎಸ್ಆರ್‌ಟಿಸಿ ಬಸ್ ನಿಲ್ದಾಣವಿಲ್ಲ. ಡಿಪೊ ವ್ಯವಸ್ಥೆಯೂ ಇಲ್ಲ. 5 ಕಿ.ಮೀ. ದೂರದ ಹಾನಗಲ್ ಮೂಲಕ ಹಾದು ಹೋಗಿರುವ ಬೆಂಗಳೂರು–ಬಳ್ಳಾರಿ ಹೆದ್ದಾರಿಯಲ್ಲಿ ನಿತ್ಯ ನೂರಾರು ಸಾರಿಗೆ ಬಸ್‌ಗಳು ಓಡಾಡುತ್ತಿದ್ದರೂ ಯಾವುದೇ ಬಸ್‌ ಪಟ್ಟಣಕ್ಕೆ ಬರುವುದಿಲ್ಲ. ಬರಲು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ನಡೆದ ಪ್ರತಿಭಟನೆ, ಮನವಿಗಳಿಗೆ ಲೆಕ್ಕವಿಲ್ಲ.

ADVERTISEMENT

ಪ್ರತಿಭಟನೆ ನಡೆದಾಗ ಸ್ಥಳಕ್ಕೆ ಬರುವ ಸಾರಿಗೆ ಅಧಿಕಾರಿಗಳು ಪಟ್ಟಣದಲ್ಲಿ ಸಂಸ್ಥೆಯ ಬಸ್ ನಿಲ್ದಾಣವಿಲ್ಲದ ಕಾರಣ ಬಸ್‌ಗಳು ಬಂದು ಹೋಗುತ್ತಿಲ್ಲ ಎಂದು ಸಬೂಬು ನೀಡಿ ಹೋಗುತ್ತಾರೆ. ಬಸ್‌ಗಳು ಪಟ್ಟಣದ ಒಳಗೆ ಬಂದು ಹೋದರೆ ದೂರದ ಊರುಗಳಿಗೆ ಪ್ರಯಾಣಿಸುವ ಪ್ರಯಾಣಿಕರು ಗಲಾಟೆ ಮಾಡುತ್ತಾರೆ. ಅದಕ್ಕೆ ಬರುತ್ತಿಲ್ಲ ಎಂದು ಜನಪ್ರತಿನಿಧಿಗಳು ಹೇಳುತ್ತಾರೆ. ಮೊಳಕಾಲ್ಮುರು ನೆರೆ ಸೀಮಾಂಧ್ರದ ಹೆಬ್ಬಾಗಿಲು. ಇಲ್ಲಿ ಸಾರಿಗೆ ವ್ಯವಸ್ಥೆ ಸುಧಾರಿಸಿದಲ್ಲಿ ಅಂತರರಾಜ್ಯ ಪ್ರಯಾಣಕ್ಕೆ ಸಹಕಾರವಾಗಲಿದೆ ಎಂದು ಗೊತ್ತಿದ್ದರೂ ಕ್ರಮ ಕೈಗೊಳ್ಳುತ್ತಿಲ್ಲ ಎನ್ನುತ್ತಾರೆ ಜನಸಂಸ್ಥಾನ ಸಂಸ್ಥೆಯ ಕಾರ್ಯದರ್ಶಿ ವಿರೂಪಾಕ್ಷಪ್ಪ.

ತಾಲ್ಲೂಕಿನಲ್ಲಿ ಕೆಎಸ್ಆರ್‌ಟಿಸಿ ಡಿಪೊ ಸ್ಥಾಪಿಸಿ ಎಂಬುದು ವರ್ಷಗಳ ಕೂಗು. ಕೊನೆಯ ಪಕ್ಷ ಡಿಪೊ ಆದಲ್ಲಿ ಒಂದಷ್ಟು ಬಸ್‌ಗಳು ಮಂಜೂರಾಗಿ ಸ್ಥಳೀಯ ಸೇವೆ ಆದರೂ ಸಿಗಲಿದೆ ಎಂಬ ಆಗ್ರಹಕ್ಕೆ ಎರಡು ದಶಕಗಳಾಗಿವೆ. ಇದುವರೆಗೆ ತಾಲ್ಲೂಕು ಆಡಳಿತಕ್ಕೆ ಸ್ಥಳ ಸೂಚಿಸಲು ಸಾಧ್ಯವಾಗಿಲ್ಲ. ಸಂಸ್ಥೆ ಸ್ಥಳ ನೀಡಿದಲ್ಲಿ ತಕ್ಷಣ ನಿರ್ಮಿಸಲಾಗುವುದು ಎಂದು ಹೇಳುತ್ತಿದೆ. ಬಸ್ ನಿಲ್ದಾಣಕ್ಕೆ ಸ್ಥಳ ತೋರಿಸಲು ಸಹ ಈವರೆಗೆ ಪಟ್ಟಣ ಪಂಚಾಯಿತಿಗೆ ಸಾಧ್ಯವಾಗಿಲ್ಲ. ಇದು ಇಚ್ಛಾಶಕ್ತಿಯ ಕೊರತೆಗೆ ಸಾಕ್ಷಿಯಾಗಿದೆ ಎನ್ನುತ್ತಾರೆ ರೈತ ಸಂಘದ ಜಿಲ್ಲಾಧ್ಯಕ್ಷ ಬೆಳಗಲ್ ಈಶ್ವರಯ್ಯಸ್ವಾಮಿ, ಕಾರ್ಯದರ್ಶಿ ರವಿಕುಮಾರ್.

ಹುಡುಕಲಾಗುತ್ತಿದೆ...

ಪಟ್ಟಣದ ತಾಲ್ಲೂಕು ಕಚೇರಿಯು ಹೊಸದಾಗಿ ನಿರ್ಮಿಸುತ್ತಿರುವ ಮಿನಿ ವಿಧಾನಸೌಧಕ್ಕೆ ಸ್ಥಳಾಂತರವಾದ ನಂತರ ತಾಲ್ಲೂಕು ಕಚೇರಿ ಸ್ಥಳದಲ್ಲಿ ಕೆಎಸ್ಆರ್‌ಟಿಸಿ ಬಸ್ ನಿಲ್ದಾಣ ನಿರ್ಮಿಸುವುದು ಜನಪ್ರತಿನಿಧಿಗಳ ನಿರ್ಧಾರವಾಗಿದೆ. ಡಿಪೊಗೆ ಸಾಕಷ್ಟು ಜಾಗ ತೋರಿಸಿದ ನಂತರ ಹಾನಗಲ್ ಕ್ರಾಸ್‌ನಲ್ಲಿರುವ ಸಣ್ಣ ನೀರಾವರಿ ಇಲಾಖೆಗೆ ಸೇರಿದ ವ್ಯರ್ಥ ವಸತಿಗೃಹಗಳ ಸ್ಥಳವನ್ನು ಪಡೆದು ಡಿಪೊ ಸ್ಥಾಪಿಸಬೇಕು ಎಂಬ ಬಗ್ಗೆ ಸರ್ಕಾರ ಹಂತದಲ್ಲಿ ಚರ್ಚೆ ನಡೆಯುತ್ತಿದೆ ಎಂದು ಸಾರಿಗೆ ಇಲಾಖೆ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ನಿತ್ಯ ಬಸ್ ಪ್ರಯಾಣ ದರ ಭರಿಸಲು ಕಷ್ಟ

ತಾಲ್ಲೂಕಿನಲ್ಲಿ ಪಿಯು ನಂತರ ಹೆಚ್ಚಿನ ಶಿಕ್ಷಣ ವ್ಯವಸ್ಥೆ ಸರಿಯಿಲ್ಲ. ವೃತ್ತಿಪರ ಕೋರ್ಸ್‌ಗಳಿಗೆ ಚಿತ್ರದುರ್ಗ, ಬಳ್ಳಾರಿ ಆಶ್ರಯ ಕಡ್ಡಾಯ. ಆರ್ಥಿಕವಾಗಿ ಹಿಂದುಳಿದಿರುವ ಇಲ್ಲಿಯ ವಿದ್ಯಾರ್ಥಿಗಳು ನಿತ್ಯ ಬಸ್ ಟಿಕೆಟ್‌ ಹಣ ನೀಡಿ ಖಾಸಗಿ ಬಸ್‌ಗಳಲ್ಲಿ ಓಡಾಡಲು ಸಾಧ್ಯವಾಗುತ್ತಿಲ್ಲ. ಪಟ್ಟಣ ಸೇರಿದಂತೆ ತಾಲ್ಲೂಕಿನ ಶೇ 80ಕ್ಕೂ ಹೆಚ್ಚು ಗ್ರಾಮಗಳಿಗೆ ಸರ್ಕಾರಿ ಬಸ್‌ ಸೇವೆ ಇಲ್ಲ. ನ್ಯಾಯಾಲಯ ಕಲಾಪಕ್ಕೆ ಬಂದು ಹೋಗುವಂತೆ ಬಸ್ ಒಂದನ್ನು ಬಿಡಿಸಿ ಎಂದು ತಳಕು ಹೋಬಳಿ ಗ್ರಾಮಸ್ಥರು ಪ್ರತಿಭಟನೆ ಮಾಡುವ ಪರಿಸ್ಥಿತಿಯಲ್ಲಿ ಇಲ್ಲಿಯ ಗ್ರಾಮೀಣ ಸಾರಿಗೆ ಸೇವೆಯಿದೆ ಎಂಬ ಆರೋಪ ವ್ಯಕ್ತವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.